ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಟ್ಟಕಣಿಗಲು

ವಿಕಿಸೋರ್ಸ್ದಿಂದ

ಬೆಟ್ಟಕಣಿಗಲು - ಡಿಲ್ಲೆನಿಯೇಸೀ ಕುಟುಂಬಕ್ಕೆ ಸೇರಿದ ಸುಂದರವಾದ ನಿತ್ಯಹರಿದ್ವರ್ಣ ಮರ. ಡಿಲ್ಲೆನಿಯ ಇಂಡಿಕ ಇದರ ವೈಜ್ಞಾನಿಕ ಹೆಸರು. ಇಂಡೊ-ಮಲಯ ಪ್ರದೇಶ ಇದರ ತವರು ಎನ್ನಲಾಗಿದೆ. ಭಾರತದಲ್ಲಿ ಹಿಮಾಲಯದ ತಪ್ಪಲು, ಕುಮಾಂವ್, ಗಢವಾಲ್, ಅಸ್ಸಾಮ್, ಪಶ್ಚಿಮ ಬಂಗಾಳ, ಮಧ್ಯಭಾರತ ಹಾಗೂ ದಕ್ಷಿಣ ಭಾರತಗಳ ತೇವಪೂರಿತ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಬೆಳೆಯುತ್ತದೆ. ಪಶ್ಚಿಮ ಘಟ್ಟ ಪ್ಟದೇಶಗಳಲ್ಲಿ ಡಿಲ್ಲೇನಿಯಾ ಪೆಂಟಾಗೈನಾ ದೊರೆಯುತ್ತದೆ. ಕಾಡಿನ ಝರಿಗಳ ಇಕ್ಕೆಲಗಳಲ್ಲಿ ಬಲು ಸಾಮಾನ್ಯ. ಅಲ್ಲದೆ ಸುಂದರವಾದ ಎಲೆಗಳು ಹಾಗೂ ಆಕರ್ಷಕ ಹೂಗಳಿಂದ ಕೂಡಿರುವುದರಿಂದ ಇದನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುವುದೂ ಉಂಟು.

ಇದು 10-25 ಮೀ ಎತ್ತರ ಬೆಳೆಯುತ್ತದೆ. ದಟ್ಟ ಕೊಂಬೆಗಳಿಂದ ಕೂಡಿದೆ. ಎಲೆಗಳು ಸರಳ, 20-35 ಸೆಂಮೀ ಉದ್ದವೂ 5-10 ಸೆಂಮೀ ಅಗಲವೂ ಇದ್ದು ಗರಗಸ ಮಾದರಿಯ ಅಂಚಿನಿಂದ ಕೂಡಿವೆ. ಪರ್ಯಾಯ ರೀತಿಯ ಜೋಡಣೆ. ಎಲೆಗಳ ಮೇಲ್ಭಾಗದಲ್ಲೂ ನರಗಳ ತಳದಲ್ಲೂ ಸೂಕ್ಷ್ಮ ರೋಮಗಳುಂಟು. ಹೂಗಳು ದೊಡ್ಡಗಾತ್ರದವು. ಒಂಟೊಂಟಿಯಾಗಿ ಎಲೆಗಳ ಕಕ್ಷೆಗಳಲ್ಲಿ ಅರಳುವುವು. ಇವಕ್ಕೆ ಬಿಳಿಯ ಬಣ್ಣವೂ ಮಧುರ ಪರಿಮಳವೂ ಉಂಟು. ಫಲವೂ ದೊಡ್ಡಗಾತ್ರದ್ದೇ. ಒಳಗೆ ಮೃದುವಾದ ತಿರುಳು ಮತ್ತು ಅಸಂಖ್ಯ ಬೀಜಗಳಿವೆ. ತೊಟ್ಟಿನ ಬಳಿ ಐದು ಪುಷ್ಪಪತ್ರಗಳಿರುವುವು.

ಕಾಡಿನಲ್ಲಿ ಮರದ ವೃದ್ಧಿ ಇದರ ಕಾಯಿಗಳನ್ನು ಮೆಚ್ಚಿನಿಂದ ತಿನ್ನುವ ಆನೆಗಳ ಸಹಾಯದಿಂದ ನಡೆಯುತ್ತದೆ ಎನ್ನಲಾಗಿದೆ. ಅಲ್ಲದೆ ವನಝರಿಗಳ ದಡದಲ್ಲಿ ಬೆಳೆಯುವುದÀರಿಂದ ಮಾಗಿದ ಹಣ್ಣುಗಳು ಕಳಚಿ ನೀರಿಗೆ ಬಿದ್ದ ಪ್ರವಾಹದಲ್ಲಿ ದೂರ ಸಾಗಿ ಹರಡುವುವು. ನೆಲದ ಸಂಪರ್ಕಕಕ್ಕೆ ಬಂದಾಗ, ತಿರುಳು ಕೊಳೆತು ಒಳಗಿನ ಬೀಜಗಳು ಮಳೆಗಾಲದಲ್ಲಿ ಮೊಳೆಯುವುವು. ಹಲವೇಳೆ ಸಸಿಗಳೇ ಪ್ರವಾಹದಲ್ಲಿ ದೂರ ದೂರಕ್ಕೆ ಸಾಗುವುದುಂಟು.

ಕೃತಕವಾಗಿ ವೃದ್ಧಿಸುವುದು ಕೂಡ ಬೀಜಗಳಿಂದಲೇ, ಬೀಜಗಳನ್ನು ಒಟ್ಲುಪಾತಿಗಳಲ್ಲಿ ಬಿತ್ತಿ, ಸಸಿಗಳನ್ನು ಪಡೆದು, ಅವು ಸುಮಾರು 1 ವರ್ಷ ವಯಸ್ಸಿನವಾದಾಗ ಇಲ್ಲವೇ 7-10 ಸೆಂಮೀ ಉದ್ದವಾದಾಗ ಬೇರೆಡೆಗೆ ನಾಟಿ ಮಾಡಿ ಬೆಳೆಸುವುದು ಕ್ರಮ.

ಬೆಟ್ಟಕಣಿಗಲಿನ ಚೌಬೀನೆ ಸಾಧಾರಣ ದೃಢತೆ ಹಾಗೂ ತೂಕ ಉಳ್ಳದ್ದು. ನೀರಿನ ಸಂಪರ್ಕದಲ್ಲಿ ಆವೃತ ಸನ್ನಿವೇಶಗಳಲ್ಲಿ ಸಾಮಾನ್ಯ ಬಾಳಿಕೆಯನ್ನು ತೋರುತ್ತದಾದರೂ ಬಿಸಿಲಿಗೆ, ಗಾಳಿಗೆ ಒಡ್ಡಿದಲ್ಲಿ ಬೇಗ ಹಾಳಾಗುತ್ತದೆ. ಗೆದ್ದಲುಗಳಿಗೆ ಬಲಿಯಾಗುವುದೂ ಉಂಟು. ಆದರೆ ಇದನ್ನು ಕೊಯ್ಯುವುದು ಸುಲಭ. ಇವೆಲ್ಲ ಕಾರಣಗಳಿಂದಾಗಿ ಕಟ್ಟಡಗಳ ಒಳಗಿನ ಮರಮುಟ್ಟುಗಳಿಗಾಗಿ ಇದನ್ನು ಬಳಸುವುದೇ ಹೆಚ್ಚು. ಹಲಗೆ, ತೊಲೆ, ಜಂತಿ, ದೋಣಿಗಳ ತಳಭಾಗ ಮುಂತಾದವುಗಳ ತಯಾರಿಕೆಯಲ್ಲಿ ಇದರ ಬಳಕೆ ಇದೆ.

ಬೆಟ್ಟಕಣಿಗಲಿನ ಪುಷ್ಪಪತ್ರಗಳನ್ನು ತರಕಾರಿಯಾಗಿ ಬಳಸುವುದಲ್ಲದೆ ಇವುಗಳಿಂದ ಸಕ್ಕರೆಪಾಕ ತಯಾರಿಸುವುದೂ ಉಂಟು. ಇವುಗಳ ಪಾನೀಯ ತಂಪುಕಾರಕ. ಇವುಗಳಲ್ಲಿ ಮ್ಯಾಲಿಕ್ ಆಮ್ಲ ಇರುವುದರಿಂದ ಇವಕ್ಕೆ ಹುಳಿರುಚಿಯುಂಟು. ಆದ್ದರಿಂದ ಸಾರು ಮುಂತಾದವುಗಳಿಗೆ ರುಚಿಕೊಡಲು ಹುಣಿಸೆಹಣ್ಣಿನ ಬದಲು ಉಪಯೋಗಿಸುವುದಿದೆ. ಹಣ್ಣಿನಲ್ಲಿ ಪುಷ್ಟಿದಾಯಕ ಮತ್ತು ರೇಚಕ ಅಂಶಗಳಿವೆಯಾಗಿ ಹೊಟ್ಟೆನೋವಿನ ಚಿಕಿತ್ಸೆಗೆ ಬಳಸುವುದುಂಟು. ದಂತ ಮತ್ತು ಕೊಂಬುಗಳಿಗೆ ಹೊಳಪು ಕೊಡಲು ಉಜ್ಜುಕಾಗದವಾಗಿ ಇದರ ಒಣ ಎಲೆಗಳನ್ನು ಉಪಯೋಗಿಸುವರು. (ಎಂ.ಎಚ್.ಎಂ.)