ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಟ್ಟದ ಹರಳು
ಬೆಟ್ಟದ ಹರಳು
ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಕಾಡುಗಿಡ (ಫಿಸಿಕ್ ನಟ್, ಪರ್ಜಿಂಗ್‍ನಟ್). ಚೊಡ್ಡಹರಳು, ಮರಹರಳು, ಕಾಡುಹರಳು ಪರ್ಯಾಯ ನಾಮಗಳು. ಜ್ಯಾಟ್ರಫ ಕರ್ಕಾಸ್ ಇದರ ಸಸ್ಯ ವೈಜ್ಞಾನಿಕ ಹೆಸರು. ಅಮೆರಿಕದ ಉಷ್ಣಪ್ರದೇಶಗಳ ಮೂಲನಿವಾಸಿಯಾದ ಇದು ಭಾರತ ಮತ್ತು ಅಂಡಮಾನುಗಳಲ್ಲಿ ವ್ಯಾಪಕವಾಗಿ ಕಾಡುಗಿಡವಾಗಿ ಬೆಳೆಯುತ್ತದೆ. ಇದನ್ನು ಪೋರ್ಚುಗೀಸರು ಭಾರತಕ್ಕೆ ತಂದು ಬೆಳೆಸಿದರೆನ್ನಲಾಗಿದೆ.
ಭಾರತದಲ್ಲಿ ಹಳ್ಳಿಗಳ ಆಸುಪಾಸಿನಲ್ಲಿ ಇದನ್ನು ನೋಡಬಹುದು. ಬೀಜಗಳ ಮೂಲಕ ಇಲ್ಲವೆ ಕಾಂಡ ತುಂಡುಗಳ ಮೂಲಕ ಇದನ್ನು ವೃದ್ಧಿಸಬಹುದು. ಒಣಹವೆಯಿರುವಂಥ ಪ್ರದೇಶಗಳಲ್ಲೂ ಇದು ಚೆನ್ನಾಗಿ ಬೆಳೆಯ ಬಲ್ಲುದು. ದನಗಳಾಗಲೀ ಮೇಕೆಗಳಾಗಲೀ ಇದನ್ನು ತಿನ್ನುವುದಿಲ್ಲ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಹೂಬಿಡುತ್ತದೆ. ಚಳಿಗಾಲದಲ್ಲಿ ಕಾಯಿಗಳು ಬಲಿಯುವುವು. ಇದರ ಬೀಜಗಳು ಹರಳು (ಔಡಲ) ಬೀಜವನ್ನು ಹೋಲುತ್ತದೆ. ಆದರೆ ಗಾತ್ರದಲ್ಲಿ ಸಣ್ಣ. ಇವುಗಳ ಬಣ್ಣ ಕಗ್ಗಂದು. ಇವುಗಳಿಗೆ ವಿಷ ಹಾಗೂ ರೇಚಕ ಗುಣವುಂಟು. ಇವನ್ನು ಅಪೂರ್ವವಾಗಿ ವಿರೇಚಕವಾಗಿ ಬಳಸುವುದಿದೆಯಾದರೂ ವಿಷಪೂರಿತವಾದ್ದರಿಂದ ಸೇವಿಸಿದಾಗ ಜಠರದಲ್ಲಿ ಉರಿ ಉಂಟು ಮಾಡುವುದರಿಂದ ಹೀಗೆ ಉಪಯೋಗಿಸುವುದು ವಿರಳ. ಆದರೂ ಕೇರಳದಲ್ಲಿ ಬೀಜಗಳನ್ನು ಎಣ್ಣೆಯಲ್ಲಿ ಹುರಿದು, ಪುಡಿಮಾಡಿ, ಕಾಕಂಬಿಯೊಂದಿಗೆ ಸೇರಿಸಿ, ಹೊಟ್ಟೆನೋವು, ವಿಷಪ್ರಾಶನ ಮುಂತಾದ ಸಂದರ್ಭಗಳಲ್ಲಿ ಮದ್ದಾಗಿ ಉಪಯೋಗಿಸುವುದುಂಟು. ಆಫ್ರಿಕದ ಗ್ಯಾಬೋನ್ ಸೀಮೆಯಲ್ಲಿ ತಾಳೆ ಎಣ್ಣೆಯೊಂದಿಗೆ ಮಿಶ್ರಿಸಿ ಇಲಿ ಪಾಷಾಣವಾಗಿ ಬಳಸುವುದಿದೆ. ಬೀಜದ ಪೊಪ್ಪಿನಿಂದ ಪಡೆವ ಕರ್ಕಾಸ್ ಎಣ್ಣೆಯನ್ನು ದೀಪ ಉರಿಸುವುದಕ್ಕೆ, ಸಾಬೂನು ಮೋಂಬತ್ತಿ, ವಾರ್ನಿಷ್ ತಯಾರಿಸುವುದಕ್ಕೆ ಉಪಯೋಗಿಸಲಾಗುತ್ತದೆ. ಬೀಜದ ಹಿಂಡಿ ಒಳ್ಳೆಯ ಗೊಬ್ಬರ. ತೊಗಟೆ ಹಾಗೂ ಎಲೆಗಳಿಂದ ಲಭಿಸುವ ರಂಗನ್ನು ಬಟ್ಟೆಗಳಿಗೆ ಬಣ್ಣಕೊಡಲು ಬಳಸುವುದುಂಟು.
ಎಳೆಯ ರೆಂಬೆಗಳ ರಸ ಹಲ್ಲುನೋವಿಗೆ ಪರಿಣಾಮಕಾರಿ ಮದ್ದು ಎನಿಸಿದೆ. ಅಲ್ಲದೆ ಒಸಡನ್ನು ದೃಢ ಗೊಳಿಸುತ್ತದೆ. ಆದ್ದರಿಂದ ಎಳೆಯ ಕಡ್ಡಿಗಳಿಂದ ಹಲ್ಲುಜ್ಜುವುದಿದೆ. ಎಲೆಗಳನ್ನು ಅಸ್ಸಾಮಿನಲ್ಲಿ ಈರಿ ರೇಷ್ಮೆಹುಳುಗಳಿಗೆ ಉಣಿಸಾಗಿ ಬಳಸುವುದಿದೆ. ಗಿಡದ ರಸವನ್ನು ಕಜ್ಜಿ, ಇಸಬು ಮುಂತಾದ ಚರ್ಮರೋಗಗಳಿಗೂ ಎಲೆ ಮತ್ತು ಬೇರುಗಳ ಕಷಾಯವನ್ನು ಅತಿಸಾರಕ್ಕೂ ಔಷಧಿಯಾಗಿ ಉಪಯೋಗಿಸುವರು. (ಎಂ.ಸಿ.ಆರ್.)