ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಣ್ಣೆ ಮೀನು

ವಿಕಿಸೋರ್ಸ್ದಿಂದ

ಬೆಣ್ಣೆ ಮೀನು ಸ್ಟ್ರೊಮಾಟಿಡೆ ಕುಟುಂಬಕ್ಕೆ ಸೇರಿದ ಸಾಗರವಾಸಿ ಮೀನು (ಬಟರ್ ಫಿಶ್). ಫ್ಲಾರಿಡ, ನೋವ ಸ್ಕೋಷಿಯ, ನ್ಯೂ ಇಂಗ್ಲೆಂಡ್ ಮುಂತಾದ ಪ್ರದೇಶಗಳ ಸಮುದ್ರಗಳಲ್ಲಿವೆ. ಫೋರೊನೋಟಸ್ ಟ್ರಯಕ್ಯಾಂತಸ್ ವೈಜ್ಞಾನಿಕ ಹೆಸರು. ಇತರೆ ಮೀನುಗಳಲ್ಲಿ ಕಾಣದ ಕೆಲವು ಅಂಗರಚನೆ ಈ ಮೀನುಗಳಲ್ಲಿದೆ. ಇವುಗಳ ಅನ್ನನಾಳ ವಿಕಸಿತವಾಗಿದ್ದು ಮಾಂಸಖಂಡಗಳಿಂದಾಗಿದ್ದು ಇದರಲ್ಲಿ ಒರಟಾದ ಪ್ಯಾಪಿಲ್ಲೆಗಳಿಂದ ಹಾಗೂ ಹಲ್ಲುಗಳಿಂದ ಕೂಡಿದೆ.

ಅಂಡಾಕಾರದ ದೇಹ, ಪಾಶ್ರ್ವದಿಂದ ಚಪ್ಪಟೆಯಾಗಿದೆ. ಇವುಗಳಿಗೆ ಭುಜದ ಈಜುರೆಕ್ಕೆಗಳಿರುವುದಿಲ್ಲ. ಸುಮಾರು 300 ಮಿ ಮೀ ಉದ್ದ ಮತ್ತು ಸುಮಾರು 700 ಗ್ರಾಮ್ ಭಾರ ಇರುವ ಇದು ಮಧ್ಯಮ ಗಾತ್ರದ ಮೀನು. ದೇಹದ ಬಣ್ಣ ಬೂದು. ಮೈಮೇಲೆ ಅಲ್ಲಲ್ಲಿ ಸಣ್ಣ ಸಣ್ಣ ಚುಕ್ಕೆಗಳಿರುವುವು. ಸಮುದ್ರದಲ್ಲಿನ ಇತರ ಜಾತಿಯ ಸಣ್ಣ ಗಾತ್ರದ ಮೀನುಗಳು ಇದರ ಆಹಾರ. ವಸಂತ ಋತುವಿನಲ್ಲಿ ಸಂತಾನವೃದ್ಧಿಯಲ್ಲಿ ತೊಡಗುತ್ತದೆ. ಇದು ಖಾದ್ಯಯೋಗ್ಯ ಮೀನು ಎಂದು ಪ್ರಸಿದ್ಧವಾಗಿದೆ.

ಭಾರತದ ಪಶ್ಚಿಮ ಹಾಗೂ ಪೂರ್ವ ಕರಾವಳಿಗಳಲ್ಲೂ ಮಲಯ, ಶ್ರೀಲಂಕಾ, ಬರ್ಮ, ಫಿಲಿಪೀನ್ಸ್ ಸಮುದ್ರ ತೀರಗಳಲ್ಲೂ ಕಾಣಸಿಕ್ಕುವ ಸ್ಕಾಟೊಫೇಗಸ್ ಅರ್ಗಸ್ (ಕುಟುಂಬ: ಸ್ಕಾಟೊಫೇಗಿಡೆ) ಎಂಬ ಶಾಸ್ತ್ರೀಯ ಹೆಸರುಳ್ಳ ಮೀನನ್ನು ಸಹ ಬೆಣ್ಣೆ ಮೀನೆಂದು ಕರೆಯಲಾಗುತ್ತದೆ. ಕೆನ್ನೀಲಿ ಬಣ್ಣದ ಮತ್ತು ಹಸುರು ಮಿಶ್ರಿತ ಕಪ್ಪು ಚುಕ್ಕೆಗಳಿಂದ ಕೂಡಿದ ದೇಹದ ಈ ಮೀನು ಸುಮಾರು 300 ಮಿಮೀ ಉದ್ದ ಬೆಳೆಯುವುದು. ಇದು ಕೂಡ ಖಾದ್ಯಯೋಗ್ಯವಾಗಿದೆ.

  (ಕೆ.ವಿ.ಡಿ.)