ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆತ್ತದ ಕೆಲಸ
ಬೆತ್ತದ ಕೆಲಸ ಭಾರತದಲ್ಲಿ ಬೆತ್ತದ ಕೈಗಾರಿಕೆ ಕ್ರಿ.ಪೂ. ಐದನೆಯ ಶತಮಾನದ ವೇಳೆಗೇ ಪ್ರಚಾರದಲ್ಲಿತ್ತೆಂದು ತಿಳಿದುಬರುತ್ತದೆ. ಪ್ರಾದೇಶಿಕವಾಗಿ ದೊರೆಯುವ ಬೆತ್ತದ ವೈಶಿಷ್ಟ್ಯಕ್ಕೆ ಅನುಗುಣವಾಗಿ ಇದು ಬೆಳೆಯುತ್ತ ಬಂದಿದೆ.
ಬೆತ್ತದ ಉಪಯೋಗ ಅನೇಕವಾದುದು. ಸೋಗೆಯ ಮನೆಯ ಮಾಡಿಗೆ ಬಳ್ಳಿ ಮಾಡಿ ಕಟ್ಟಲು, ಬೇಲಿ ಕಟ್ಟಲು, ರಥ ಎಳೆಯಲು, ಕೊಡೆಯ ಹಿಡಿಕೋಲು ತಯಾರಿಸಲು, ಎತ್ತಿನ ಗಾಡಿಗೆ ಕಮಾನು ಮಾಡಲು ಇತ್ಯಾದಿಗಳಿಗೆ ಬೆತ್ತವನ್ನು ಉಪಯೋಗಿಸುವರು. ದಪ್ಪ ಬೆತ್ತವನ್ನು ಕಾಸಿ ಯಾವುದೇ ಆಕೃತಿಯಲ್ಲಿ ಬಗ್ಗಿಸಲು ಸಾಧ್ಯ. ಬೆತ್ತದಲ್ಲಿ ನಾಗಬೆತ್ತ, ಚಡಿ, ಹಚ್ಚೆ, ಬೆತ್ತದ ಬಳ್ಳಿ ಸಣ್ಣಬೆತ್ತ, ಹಾಲುಬೆತ್ತ, ನಾಯಿಬೆತ್ತ, ಹುಲ್ಲುಬೆತ್ತ, ಕುಮರಿಬೆತ್ತ, ಚಿಡ್ಡುಬೆತ್ತ, ಬಲೆಬೆತ್ತ, ಹಚ್ಚಿಮರ, ನಿಮಲ, ಶೀಲ, ಉದ್ದಾಲ, ವೇತನ ಎಂಬ ಬಗೆಗಳಿವೆ. ಕರ್ನಾಟಕ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಮೈಸೂರು, ದೇವಿಮನೆಘಟ್ಟ ಮತ್ತು ಆಗುಂಬೆಯಲ್ಲಿ ಸಾಕಷ್ಟು ಬೆತ್ತ ದೊರೆಯುತ್ತಿದ್ದು ಮತ್ತಿಘಟ್ಟ, ಹೊನ್ನಾವರ, ಸಾಗರ, ಬೆಂಗಳೂರು, ಮಂಗಳೂರು ಮುಂತಾದ ಕಡೆ ಬೆತ್ತದ ಕೈಗಾರಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಮುಖವಾಗಿ ಮೇದರು, ಬುರುದಾಸ, ಕೊರ್ಗಾ ಜಾತಿಯವರು ಬೆತ್ತದ ಕೈಗಾರಿಕೆಯಲ್ಲಿ ಪ್ರವೀಣರು.
ಬೆತ್ತದ ಪ್ರಮುಖ ತಯಾರಿಕೆಗಳೆಂದರೆ ಕುರ್ಚಿ, ಸೋಫಾ, ಟೀಪಾಯ್, ಉಯ್ಯಾಲೆ, ಬುಟ್ಟಿಗಳು, ಕಣಜಗಳು, ಪ್ಲೇಟುಗಳು, ಆಟದ ಸಾಮಾನು, ಮುಚ್ಚಳದ ಪೆಟ್ಟಿಗೆಗಳು, ಕೈಯಲ್ಲಿ ಹಿಡಿಯುವ ಬೆತ್ತ, ಲಾಠಿ, ಪೆಠಾರಿ, ತೊಟ್ಟಿಲುಗಳು, ಟ್ರೇ, ಕಸಹಾಕುವ ಬಾಸ್ಕೆಟ್, ನಾಗಬೆತ್ತ, ದೋಣಿಗಳಿಗೆ, ಪೀಠಾಸನಗಳಿಗೆ ಹಿಡಿಕೆಗಳು-ಇತ್ಯಾದಿ. ಬೆತ್ತದ ತಯಾರಿಕೆಗೆ ಬೇಕಾಗುವ ವಸ್ತುಗಳೆಂದರೆ ಚಾಕು, ಕತ್ತರಿ, ಉಳಿ, ಕೀಸುಳಿ, ಸುತ್ತಗಿ, ತಂತಿ, ಮೊಳೆ, ಕತ್ತಿ, ದಾರ, ವಾಕ್ಸ್‍ಪಾಲಿಶ್, ಫ್ರೆಂಚ್‍ಪಾಲಿಶ್, ತೈಲಬಣ್ಣ, ಬ್ರಶ್, ಉತ್ತಮ ಚರ್ಮ, ಉಜ್ಜುಕಾಗದ (ಸ್ಯಾಂಡ್ ಪೇಪರ್). ಇಕ್ಕಳ, ಡ್ರಿಲ್ ಮಷೀನ್, ಲಾಂಬಿ, ಪಾಳಗಿ ಮುಂತಾದವು.
ಕರ್ನಾಟಕ, ಒರಿಸ್ಸ, ಅಸ್ಸಾಂ, ಮತ್ತು ಬಂಗಾಳಗಳಲ್ಲಿ ತಯಾರಾದ ಬೆತ್ತದ ವಸ್ತುಗಳನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಲು ರಾಷ್ಟ್ರೀಯ ವಾಣಿಜ್ಯ ಸಂಸ್ಥೆ ಮತ್ತು ಕುಶಲ ಕೈಗಾರಿಕಾವಸ್ತು ನಿರ್ಯಾತ ಸಂಸ್ಥೆ ಏರ್ಪಟ್ಟಿದೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವಿವಿಧ ರೀತಿಯ ಸಹಕಾರ ನೀಡಿ ಬೆತ್ತದ ಸರಕನ್ನು ಮಾರಾಟಗಾರನಿಗೆ ಅಥವಾ ಸಂಗ್ರಹಗಾರನಿಗೆ ನೇರವಾಗಿ ಒದಗಿಸುತ್ತದೆ. ಅಖಿಲ ಭಾರತ ಕುಶಲ ಕೈಗಾರಿಕ ಮಂಡಲಿಯು ಬೆತ್ತದ ಕೈಗಾರಿಕೆಯ ಅಭಿವೃದ್ಧಿಗೋಸ್ಕರ ರಾಜ್ಯಗಳಲ್ಲಿ ವಿನ್ಯಾಸ ತರಬೇತಿ ಕೇಂದ್ರಗಳಲ್ನು ಸ್ಥಾಪಿಸಿದೆ; ಕುಶಲಕರ್ಮಿಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಪ್ಲಾಸ್ಟಿಕ್ ವಸ್ತುಗಳೊಡನೆ ತೀವ್ರ ಪೈಪೋಟಿ ಎದುರಿಸಬೇಕಾಗಿ ಬಂದಿದ್ದರೂ ಬೆತ್ತದ ವಸ್ತುಗಳಿಗೆ ವಿಶಿಷ್ಟ ಆಕರ್ಷಣೆ ಇರುವುದರಿಂದ ಈ ಕೈಗಾರಿಕೆ ತನ್ನ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿದೆ. (ಆರ್.ಜಿ.ಆರ್‍ಎ.)