ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆನ್ಜ್, ಕಾರ್ಲ್
ಬೆನ್ಜ್, ಕಾರ್ಲ್ 1844-1920. ಅಂತರ್ದಹನ ಎಂಜಿನ್ನಿನಿಂದ ಚಾಲಿತವಾಗಿ ಕಾರ್ಯಶೀಲವಾಗುವ ಮೊತ್ತಮೊದಲ ಸ್ವಯಂಚಲಿ ವಾಹನ ತಯಾರಿಸಿದ ಜರ್ಮನ್ ಎಂಜಿನಿಯರ್. ದ್ವಿಘಾತ ಎಂಜಿನ್ ಮಾದರಿಯನ್ನು (ಟೂ ಸ್ಟ್ರೋಕ್ ಎಂಜಿನ ಮಾಡೆಲ್) ಬೆನ್ಜ್ 1879ರಲ್ಲಿ ತಯಾರಿಸಿ ಇದರ ಉತ್ಪಾದನೆಗಾಗಿ ಒಂದು ಕಾರ್ಖಾನೆ ಸ್ಥಾಪಿಸಿದ. ಆದರೆ ಅವನನ್ನು ಬೆಂಬಲಿಸಿದ ವ್ಯಕ್ತಿಗಳು ಚಲುಸುವ ಎಂಜಿನ್ನಿನ ಉತ್ಪಾದಣೆಗೆ ಧನ ಸಹಾಯ ಮಾಡಲು ಒಪ್ಪಲಿಲ್ಲ. ಆಗ ಅವನು ಬೆನ್ಜ್ ಅಂಡ್ ಕಂಪನಿಯನ್ನು ಮಾನ್ಹೀಮ್‍ನಲ್ಲಿ ಪ್ರಾರಂಭಿಸಿದ. ಸ್ವಲ್ಪ ಕಾಲ ಪನ್ಹಾರ್ಡ್ ಅಂಡ್ ಲವಾಸ್ಸಿಯರ್ ಎಂಬ ಉದ್ಯಮವನ್ನು ಸೇರಿದ.
ಅಂದು ಬಳಕೆಯಲ್ಲಿದ್ದ ಕುದುರೆ ಗಾಡಿUಳ ಅಂತರ್ದಹನ ಎಂಜಿನ್ನುಗಳು ವ್ಯಾಪಕವಾಗಿ ಬಳಕೆಗೆ ಬರುವುವೆಂದೂ ಇದರಿಂದ ಪ್ರಪಂಚದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಉಂಟಾಗುವುದೆಂದೂ ಬೆನ್ಜ್ ದೃಢವಾಗಿ ನಂಬಿದ್ದ. ಈ ಬದಲಾವಣೆಗೆ ತನ್ನೆಲ್ಲ ಶಕ್ತಿಯನ್ನು ಮುಡಿಪಾಗಿಟ್ಟ. ಅಂತರ್ದಹನ ಎಂಜಿನ್ನಿನಿಂದ ನಡೆಯುವ ತ್ರಿಚಕ್ರ ವಾಹನವನ್ನು 1885ರಲ್ಲಿ ತಯಾರಿಸಿದ. ಅದು ಮೊದಲ ಕಾರು. ಕರ್ಮಾಗಾರದ ಬದಿಯ ಅಂಗಳದಲ್ಲಿ ಮೊದಲಿಗೆ ಅದನ್ನು ನಡೆಸಿದಾಗ ಅವನ ಹೆಂಡತಿಯೂ ಸಹಾಯಕರೂ ಅದರೊಂದಿಗೆ ಓಡಿದರು. 1887ರ ವ್ಯಾರಿಸ್ ಮಸ್ತು ಪ್ರದರ್ಶನದಲ್ಲಿ ಪ್ರದರ್ಶಿತವಾದ ಬೆನ್ಜ್ ಕಾರ್ ವಿಶೇಷ ಗಮನ ಸೆಳೆಯಲಿಲ್ಲ. ಆದರೆ ಅದು ಮ್ಯೂನಿಕ್ಕಿನ ಬೀದಿಗಳಲ್ಲಿ ಓಡಿದಾಗ ದೊಡ್ಡ ಸುದ್ದಿಯಾಯಿತು. ಬೆನ್ಜ್‍ನ ಹೆಂಡತಿ ಮಕ್ಕಳು ಅದರಲ್ಲಿ 136 ಕಿಮೀ ಸಾಗಿದಾಗ ಅದು ಸ್ವಚಾಲಿತ ವಾಹನ ಕ್ರಮಿಸಿದ ಮೊತ್ತಮೊದಲ ದಾಖಲೆ ದೂರವಾಯಿತು.
ಮುಂದೆ 4 ಚಕ್ರಗಳ ಸ್ವಚಾಲಿತ ವಾಹನ (1893) ಮತ್ತು ಮೊತ್ತಮೊದಲ ಪಂದ್ಯಕಾರು (1899) ತಯಾರಿಯಲ್ಲೂ ಬೆನ್ಜ್ ಯಶಸ್ವಿಯಾದ. ಬೆನ್ಜ್ ಕಂಪನಿ 1926ರಲ್ಲಿ ಡೈಮ್ಲರ್ ಕಂಪನಿಯೊಂದಿಗೆ ವಿಲೀನವಾಗಿ ಡೈಮ್ಲರ್ ಬೆನ್ಜ್ ಕಂಪನಿಯಾಯಿತು. ಮುಂದೆ ಅದನ್ನೂ ಬಿಟ್ಟು ಬೆನ್ಜ್ ತನ್ನ ಮಕ್ಕಳೊಂದಿಗೆ ಕೂಡಿ ಬೇರೆಯೇ ಕಂಪನಿ ಪ್ರಾರಂಭಿಸಿದ. (ಎ.ಕೆ.ಬಿ.)