ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆರಿಲ್
ಬೆರಿಲ್ ಬೆರಿಲಿಯಮ್ ಅಲ್ಯೂಮಿನಿಯಮ್ ಸಿಲಿಕೇಟ್. ರಾಸಾಯನಿಕ ಪ್ರತೀಕ ಇದು ಆರು ಮುಖಗಳುಳ್ಳ ಹರಳುಗಳಲ್ಲಿ ರೂಪುಗೊಳ್ಳುತ್ತದೆ. ಹರಳುಗಳ ತುದಿಗಳು ಗೋಪುರದಂತೆ ಮಾರ್ಪಡುವುದು ಅಪರೂಪ. ಉದ್ದ ಕೆಲವು ಸೆಂಟಿಮೀಟರುಗಳಿಂದ ಮೀಟರ್‍ವರೆಗೂ ಗಾತ್ರ ಕೆಲವು ಮಿಲಿ ಮೀಟರಿನಿಂದ 1 ಮೀಟರ್ ವರೆಗೂ ಇರಬಹುದು.
ಗಾಜಿನ ಹೊಳಪು ಬೀರುವ, ಎಲೆ ಹಸುರು, ಪಚ್ಚೆ ಹಸುರು, ನೀಲಿಮಿಶ್ರಿತ ಹಸುರು, ಹಳದಿ ಮತ್ತು ಗುಲಾಬಿ ಕೆಂಪಿನ ಬಣ್ಣಗಳಿಂದ ಕೂಡಿ ಪಾರಕತೆ ಇದ್ದು ಸ್ವಚ್ಛವಾಗಿರುವ ಹರಳುಗಳು ಅಮೂಲ್ಯರತ್ನಗಳಾಗುತ್ತವೆ. ಪಚ್ಚೆ ಹಸುರಿರುವುದು ಪಚ್ಚೆ (ಎಮರಾಲ್ಡ್), ನೀಲಿ ಮಿಶ್ರಿತ ಹಸುರಿರುವುದು ಅಕ್ವಾಮೆರೈನ್, ಹಳದಿಯಿರುವುದು ಹಿಲಿಯೊಡೋರ್, ಗುಲಾಬಿ ಕೆಂಪಿರುವುದು ಮೋರ್ಗನೈಟ್ ಎಂದು ಹೆಸರಾಗಿವೆ. ಗೆ ಕಾಸಿದಾಗ ಹಸುರು ಮಿಶ್ರಿತ ಹಳದಿ ಹಸಿರಾಗುತ್ತದೆ. ಗೆ ಕಾಸಿದಾಗ ಎಲೆ ಹಸುರು ನೀಲಿಬಣ್ಣ ತಾಳುತ್ತದೆ. ಆದರೆ ಪಚ್ಚೆ ಮಾತ್ರ ಬಣ್ಣ ಬದಲಾಯಿಸುವುದಿಲ್ಲ.
ಬೆರಿಲ್ಲನ್ನು ಒಡೆದಾಗ ಶಂಕ್ವಾಕೃತಿಯನ್ನು ಅಥವಾ ಅಸಮ ಸೀಳುಗಳನ್ನು ಪ್ರದರ್ಶಿಸುತ್ತದೆ. ಇದರ ಕಾಠಿಣ್ಯಾಂಕ 7.5 ರಿಂದ 8. ಸಾಪೇಕ್ಷ ಸಾಂದ್ರತೆ 2.8 ಗ್ರಾನೈಟ್ ಮತ್ತು ಪೆಗ್ಮಟೈಟ್ ಶಿಲೆಗಳಲ್ಲಿ ಬೆರಿಲ್ ಹಲವೆಡೆಗಳಲ್ಲಿ ದೊರೆಯುತ್ತದೆ. ಹೇರಳವಾಗಿ ಅಭ್ರಕದ ಜೊತೆಯಲ್ಲಿ ಬಿಹಾರ್ ಮತ್ತು ರಾಜಸ್ಥಾನಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ಆಂಧ್ರದ ನೆಲ್ಲೂರು, ಮೈಸೂರಿನ ಹಾಸನ, ಮದ್ರಾಸಿನ ಸೇಲಮ್ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿಯೂ ದೊರೆಯುತ್ತದೆ. ಬ್ರಜಿಲ್, ಈಶಾನ್ಯ, ಆಫ್ರಿಕಾ, ಟ್ರ್ಯಾನ್ಸ್‍ವಾಲ್ ಮತ್ತು ಮಡಗಾಸ್ಕರುಗಳಲ್ಲಿ ಇದನ್ನು ಗಣಿಯಿಂದ ತೆಗೆಯುತ್ತಾರೆ.
ಪಚ್ಚೆಗಳು ರಾಜಸ್ಥಾನದಲ್ಲಿಯೂ ದಕ್ಷಿಣ ಅಮೆರಿಕಾದ ಕೊಲಂಬಿಯಾ ದೇಶದ ಮುಸೋವಿನ ಹತ್ತಿರವೂ ಆಫ್ರಿಕಾದ ಟ್ರಾನ್ಸ್‍ವಾಲಿನಲ್ಲಿಯೂ ಅಕ್ವಾಮೆರಿನ್ ಕೊಯಮತ್ತೂರಿನ ಕಾಂಗಾಯಮ್, ಮೂರಲ್ ಪರ್ವತಗಳಲ್ಲಿರುವ ಮಿಯಾಸ್ಕ ಮತ್ತು ಬ್ರಜಿಲಿನ ಮಿನಾಸ್ ಜಿರಾಸುಗಳಲ್ಲಿಯೂ ಗುಲಾಬಿ ಕೆಂಪಿನ ಮೋರ್ಗನೈಟ್ ಮಡಗಾಸ್ಕರ್ ಮತ್ತು ಬಿಹಾರಿನ ಕೆಲವು ಭಾಗಗಳಲ್ಲಿಯೂ ದೊರೆಯುತ್ತವೆ.
1926ರ ತನಕ ಬೆರಿಲ್ಲನ್ನು ರತ್ನಗಳಾಗಿ ಉಪಯೋಗಿಸುತ್ತಿದ್ದರು. ಇಂದು ಮಿಶ್ರ ಲೋಹಗಳಿಗೆ ಅಗತ್ಯವಾದ ಲಘುಲೋಹ ಬೆರಿಲಿಯಮ್ಮಿನ ಪ್ರಮುಖ ಖನಿಜ ಇದಾಗಿದೆ. ಪರಮಾಣು ಶಕ್ತಿ ಉತ್ಪಾದನೆಯಲ್ಲಿ ಇದರ ಉಪಯೋಗವಿದೆ. (ಸಿ.ಎಸ್.ಎನ್.ಆರ್.)