ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಲೆ ವಿಭೇದ

ವಿಕಿಸೋರ್ಸ್ದಿಂದ

ಬೆಲೆ ವಿಭೇದ

ಉತ್ಪಾದಿಸಿದ ಸರಕುಗಳ ಭೌತಲಕ್ಷಣಗಳೆಲ್ಲ ಒಂದೇ ಇದ್ದರೂ ಏಕಸ್ವಾಮ್ಯವುಳ್ಳಾತ ಅವನ್ನು ವಿಭಿನ್ನ ಮಾರುಕಟ್ಟೆಗಳಲ್ಲಿ ವಿಭಿನ್ನ ಬೆಲೆಗಳಿಗೆ ಬಿಕರಿ ಮಾಡಿದರೆ ಆತ ಬೆಲೆಯಲ್ಲಿ ವಿಭೇದ (ಪ್ರೈಸ್ ಡಿಸ್ಕ್ರಿಮಿನೇಷನ್) ಮಾಡಿದಂತಾಗುತ್ತದೆ. ಈ ವಿಭೇದ ಕ್ರಮಕ್ಕೆ ಮಿತಿಯೆಂದರೆ ವ್ಯಾಪಾರದ ಪರಿಸ್ಥಿತಿಗಳೇ. ಬಹಳ ಅನುಕೂಲಕರ ಪರಿಸ್ಥಿತಿಯಲ್ಲಿ ಸರಕಿನ ಪ್ರತಿಯೊಂದು ಘಟಕಕ್ಕೂ (ಏಕಮಾನಕ್ಕೂ) ಬೇರೆ ಬೇರೆ ಬೆಲೆಗಳನ್ನು ಹಾಕುವುದು ಸಾಧ್ಯವಾದೀತು. ಇಂಥ ಸನ್ನಿವೇಶವನ್ನು ಸಂಪೂರ್ಣ ವಿಭೇದನೆಯ ಏಕಸ್ವಾಮ್ಯ ಎನ್ನಬಹುದು. ಆದರೆ ಬಳಕೆದಾರರಿಗೆ ವೈಯಕ್ತಿಕವಾಗಿ ಬೇರೆ ಬೇರೆ ಬೆಲೆಗಳನ್ನು ವಿಧಿಸುವುದು ಸಾಮಾನ್ಯ ಅನುಭವ.

ಪರಿಪೂರ್ಣ ಸ್ಪರ್ಧೆಯ ಸ್ಥಿತಿಯಲ್ಲಿ ಬೆಲೆ ವಿಭೇದನೆ ಅಸಾಧ್ಯ. ಒಂದೇ ಸರಕನ್ನು ಅನೇಕರು ಮಾರುತ್ತಿರುವಾಗ ಯಾರಾದರೊಬ್ಬ ವ್ಯಾಪಾರಿ ಅದನ್ನು ಒಬ್ಬ ಗ್ರಾಹಕನಿಗೆ ರೂ. 2 ಕ್ಕೂ ಮತ್ತೊಬ್ಬ ಗ್ರಾಹಕನಿಗೆ ರೂ 3ಕ್ಕೂ ಮಾರಿದರೆ ರೂ 3 ಪಾವತಿ ಮಾಡಬೇಕಾದ ಗ್ರಾಹಕ ಆ ವ್ಯಾಪಾರಿಯನ್ನು ಬಿಟ್ಟು ರೂ 2ಕ್ಕೆ ಮಾರುತ್ತಿರುವ ವ್ಯಾಪಾರಿಯ ಬಳಿ ಹೋಗುವುದು ಸುಲಭ. ಆದ್ದರಿಂದ ಬೆಲೆಯಲ್ಲಿ ವಿಭೇದ ಮಾಡುವುದು ಸ್ಪರ್ಧೆ ಅಪರಿಪೂರ್ಣವಾಗಿದ್ದಾಗ ಮಾತ್ರ ಸಾಧ್ಯ. ಹೀಗೆಂದರೆ ಅಪರಿಪೂರ್ಣ ಸ್ಪರ್ಧೆ ಇರುವಾಗ ಬೆಲೆ ವಿಭೇದ ನಡೆಯಲೇ ಬೇಕೆಂದೇನೂ ಇಲ್ಲ.

ಬೆಲೆ ವಿಭೇದ ಸಾಧ್ಯವಾಗಬೇಕಾದರೆ ಮುಖ್ಯವಾಗಿ ಒಬ್ಬ ಗ್ರಾಹಕ ತಾನು ಕೊಂಡ ಸರಕನ್ನು ಮತ್ತೊಬ್ಬ ಬಳಕೆದಾರನಿಗೆ ಮಾರಲು ಸಾಧ್ಯವಾಗಬಾರದು. ಅಂಥ ವಿಭೇದ ಕ್ರಮಕ್ಕೆ ಒಳಪಟ್ಟು ಇಬ್ಬರಲ್ಲಿ ಯಾವ ಅಡಚಣೆಯೂ ಇಲ್ಲದೆ ಸರಕು ವಿನಿಮಯ ಸಾಧ್ಯವಿದ್ದರೆ ಬೆಲೆಯಲ್ಲಿ ವಿಭೇದನೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಭೇದ ಮಾಡಲು ಒಬ್ಬ ಏಕಸ್ವಾಮ್ಯದಾರನನ್ನು ಕುರಿತ ಗ್ರಾಹಕರ ವಿವಿಧ ವಲಯಗಳಲ್ಲಿ ಸಂಪರ್ಕ ಇರಬಾರದು ಅಥವಾ ಒಂದು ವೇಳೆ ಇದ್ದರೂ ಅದು ಬಹಳ ಕಷ್ಟತರವಾದ್ದಾಗಿರಬೇಕು.

ಸಾಮಾನ್ಯವಾಗಿ ವಿಭೇದವನ್ನು ಮೂರು ಪರಿಸ್ಥಿತಿಗಳಲ್ಲಿ ಕಾಣಬಹುದು.

1. ಗ್ರಾಹಕರ ವೈಶಿಷ್ಟ್ಯ: (1) ಮಾರುಕಟ್ಟೆಯ ಒಂದು ಭಾಗದಲ್ಲಿ ಇರುವ ಗ್ರಾಹಕರಿಗೆ ಮತ್ತೊಂದು ಭಾಗದಲ್ಲಿ ಅವೇ ವಸ್ತುಗಳು ಕಡಿಮೆ ಬೆಲೆಗೆ ದೊರೆಯುವ ಸಂಗತಿ ತಿಳಿಯದಿರಬಹುದು. (2) ಬಳಕೆದಾರನಿಗೆ ತಾನು ಹೆಚ್ಚಿನ ಬೆಲೆ ಕೊಡುತ್ತಿರುವುದರಿಂದ ಅತ್ಯುತ್ತಮ ಸರಕು ಸಿಗುತ್ತದೆ ಎಂಬ ಅಸ್ವಾಭಾವಿಕ ಭಾವನೆ ಇರಬಹುದು. (3) ಬೆಲೆಯಲ್ಲಿ ವ್ಯತ್ಯಾಸ ಗಮನಾರ್ಹವಲ್ಲದಿರಬಹುದು.

2. ವಸ್ತುಗಳ ಲಕ್ಷಣ: ಒಮ್ಮೆ ಬಿಕರಿಯಾದದ್ದನ್ನು ಮತ್ತೆ ಮಾರಲು ಸಾಧ್ಯವಾಗದ ಸೇವೆಗೆ ಅನ್ವಯಿಸುವ ವ್ಯವಹಾರಗಳಲ್ಲಿ ಬೆಲೆ ವಿಭೇದ ವಿಶೇಷತಃ ಕಂಡು ಬರುತ್ತದೆ. ಉದಾಹರಣೆಗೆ ವೈದ್ಯಚಿಕಿತ್ಸೆಗಾಗಿ ಬಡರೋಗಿಗೆ ಕಡಿಮೆ ಶುಲ್ಕವನ್ನೂ ಶ್ರೀಮಂತರೋಗಿಗೆ ಹೆಚ್ಚಿನ ಶುಲ್ಕವನ್ನೂ ಹಾಕಬಹುದು.

3. ಮಾರುಕಟ್ಟೆ ವಲಯದ ದೂರ ಮತ್ತು ಗಡಿ ಸಮಸ್ಯೆಗಳು: ಗ್ರಾಹಕರಿರುವ ಮಾರುಕಟ್ಟೆಗಳು ಅಥವಾ ಅವುಗಳ ವಲಯಗಳು ಬಹಳ ದೂರವಿದ್ದರೆ ವಿಭೇದ ಸಾಧ್ಯ: ಇಲ್ಲವೇ, ಮಾರುಕಟ್ಟೆಗಳು ಬೇರೆ ಬೇರೆ ರಾಷ್ಟ್ರಗಳ ಗಡಿಗಳೊಳಗಿದ್ದಲ್ಲಿ ಸರಕುಗಳು ಒಂದೆಡೆಯಿಂದ ಮತ್ತೊಂದೆಡೆಗೆ ಬರಲು ಸುಂಕ ತೆರಬೇಕಾಗುವುದರಿಂದ ಹೆಚ್ಚಿನ ಬೆಲೆ ಹಾಕಲು ಸಾಧ್ಯವಾಗುವುದು. ಒಂದು ಸರಕಿನ ಬೆಲೆ ಒಂದು ಪಟ್ಟಣದಲ್ಲಿ ರೂ 50 ಇದ್ದು ಮತ್ತೊಂದು ಪಟ್ಟಣದಲ್ಲಿ ರೂ 52 ಇರಬಹುದು. ಸರಕುಸಾಗಣೆ ವೆಚ್ಚ ರೂ 2 ಕ್ಕಿಂತ ಕಡಿಮೆ ಇಲ್ಲದಿದ್ದಲ್ಲಿ ರೂ 50ಕ್ಕೆ ಒಂದು ಪಟ್ಟಣದಲ್ಲಿ ಕೊಂಡದ್ದನ್ನು ಅದೇ ಬೆಲೆಗೆ ಮತ್ತೊಂದು ಪಟ್ಟಣದಲ್ಲಿ ಮಾರಲು ಶಕ್ಯವಿಲ್ಲ.

ಒಬ್ಬ ಏಕಸ್ವಾಮ್ಯದಾರ ಎರಡು ಪ್ರತ್ಯೇಕ ಮಾರುಕಟ್ಟೆಗಳಲ್ಲಿ (ಸುಂಕಗಳು ಜಾರಿಯಲ್ಲಿರುವ ಸ್ವದೇಶದ ಮಾರುಕಟ್ಟೆ ಮತ್ತು ಸುಂಕಗಳಿಲ್ಲದ ಪ್ರಪಂಚ ಮಾರುಕಟ್ಟೆ) ತನ್ನ ಸರಕನ್ನು ಬಿಕರಿ ಮಾಡುವಾಗ, ಸ್ವದೇಶದಲ್ಲಿ ಸುಂಕಗಳಿರುವ ಸದವಕಾಶವನ್ನು ಬೆಲೆ ಹೆಚ್ಚಿಸಲು ಉಪಯೋಗಿಸಿಕೊಳ್ಳುತ್ತಾನೆ.

ಈ ರೀತಿ ಬೆಲೆ ವಿಭೇದ ಅಂತಿಮವಾಗಿ ಏಕಸ್ವಾಮ್ಯದಾರನ ಶಕ್ತಿಯನ್ನು ಅವಲಂಬಿಸಿದೆ. ಮತ್ತಾರೂ ತಾನು ಮಾರುತ್ತಿರುವ ವಸ್ತುಗಳನ್ನು ತನ್ನ ಬೆಲೆಗಿಂತ ಕಡಿಮೆ ಬೆಲೆಗೆ ಮಾರದಂತೆ ಅವನು ನೋಡಿಕೊಳ್ಳಬೇಕು. ಬಲುಮಟ್ಟಿಗೆ ಕೆಲವು ಗ್ರಾಹಕರು ಆತನಿಂದಲೇ ಕೊಂಡುಕೊಳ್ಳಲು ಇಚ್ಚಿಸುವುದರಿಂದ ಅವರು ಬೇರೆ ಕಡೆಗೆ ಹೋಗದಂತೆ ಏಕಸ್ವಾಮ್ಯ ದಾರ ನೋಡಿಕೊಳ್ಳುತ್ತಾನೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಬೆಲೆ ವಿಭೇದಕ್ಕೆ ಕಾನೂನಿನ ಅನುಮತಿ ದೊರೆಯಬಹುದು. ಉದಾಹರಣೆಗೆ ವಿದ್ಯುತ್ತು ಬಳಕೆದಾರರಿಗೆ ದೀಪಕ್ಕಾಗಿ ಉಪಯೋಗಿಸಲು ಹೆಚ್ಚಿನ ದರವನ್ನೂ ಅಡುಗೆ ಇತ್ಯಾದಿ ಉಪಯೋಗಕ್ಕಾಗಿ ಕಡಿಮೆ ದರವನ್ನೂ ಹಾಕಬಹುದು.

ವಿಭೇದ ನೀತಿಯ ಏಕಸ್ವಾಮ್ಯ ಮತ್ತು ಅತ್ಯಧಿಕ ಲಾಭ: ಒಬ್ಬ ಏಕಸಾಮ್ಯದಾರ ತನ್ನ ಸರಕನ್ನು ವಿಭಿನ್ನ ಬೇಡಿಕೆಗಳ ಅನೇಕ ಮಾರುಕಟ್ಟೆಯಲ್ಲಿ ಮಾರಿದರೆ, ಅಂಥ ಪ್ರತಿಯೊಂದು ಮಾರಕಟ್ಟೆಯಲ್ಲೂ ಅವನ ಬಿಕರಿ ಬೆಲೆ ವಿಭಿನ್ನವಾಗಿದ್ದಲ್ಲಿ ಅವನು ಅತ್ಯಧಿಕ ಲಾಭ ಗಳಿಸಬಹುದು. ಅವನ ಒಟ್ಟು ಉತ್ಪಾದನೆಯ ಸೀಮಾಂತ ವೆಚ್ಚ ಪ್ರತಿಯೊಂದು ಮಾರುಕಟ್ಟೆಯಲ್ಲೂ ದೊರಕುವ ಸೀಮಾಂತ ಆದಾಯಕ್ಕೆ ಸಮವಾಗುವಂತೆ ಬೆಲೆ ನಿಗದಿಗೊಳಿಸುವುದರಿಂದ ಅತ್ಯಧಿಕ ಲಾಭ ಬರುತ್ತದೆ.

ವಿವಿಧ ಮಾರುಕಟ್ಟೆಗಳಲ್ಲಿ ಬೇಡಿಕೆಯ ಪುಟಿತತೆ ವಿಭಿನ್ನವಾಗಿದ್ದಲ್ಲಿ ಬೆಲೆ ವಿಭೇದ ಲಾಭಕರ. ಎರಡು ಅಥವಾ ಹೆಚ್ಚಿಗೆ ಮಾರುಕಟ್ಟೆಗಳಿರುವಾಗ ಬೇಡಿಕೆಯ ಪುಟಿತತೆ ಹೆಚ್ಚಿಗೆ ಇರುವ ಮಾರುಕಟ್ಟೆಗಳಲ್ಲಿ ಅತ್ಯಧಿಕ ಲಾಭ ತರುವ ಬೆಲೆ ಕಡಿಮೆ ಇರುತ್ತದೆ. ಪ್ರಸ್ತುತ ಬೆಲೆಯಲ್ಲಿ ಒಂದು ಸರಕಿನ ಬೇಡಿಕೆಯ ಪುಟಿತತೆ ಆ ಸರಕಿನ ಪ್ರತಿಸ್ಥಾಪನ (ಸಬ್‍ಸ್ಟಿಟ್ಯೂಟ್) ಪೂರೈಕೆಯನ್ನು ಅವಲಂಬಿಸಿದೆ. ಮತ್ತೊಂದು ದೇಶದಿಂದ ಬರುವ ಅದರಂಥದೇ ಸರಕನ್ನು ಸ್ವದೇಶದಲ್ಲಿಯ ಸರಕಿನ ಬದಲು ಉಪಯೋಗಿಸಬಹುದು. ಪ್ರಪಂಚ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪೂರೈಕೆಯಿರುವ ಸರಕಿನ ಬೆಲೆ, ಸುಂಕಗಳ ಮೂಲಕ ಸಂರಕ್ಷಿಸಲಾದ ಸ್ವದೇಶದ ಮಾರುಕಟ್ಟೆಯಲ್ಲಿಯ ಧಾರಣೆಗಿಂತ ಕಡಿಮೆ ಇರುತ್ತದೆ. (ಡಿ.ಎಂ.ಎನ್.)