ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಸೆತ

ವಿಕಿಸೋರ್ಸ್ದಿಂದ

ಬೆಸೆತ - ವಿಭಿನ್ನ ಲೋಹಗಳ ಮೇಲ್ಮೈಗಳನ್ನು ಅವು ಅರೆವಾಸಿ ಕರಗಿದ್ದಾಗ ಸೇರಿಸುವ ಕ್ರಮ (ವೆಲ್ಡಿಂಗ್).

ಕುಲುಮೆ ಬೆಸೆತ: ಪ್ರಾಚೀನ ಬೆಸುಗೆ ಪದ್ಧತಿ ಇದು. ಇದರಲ್ಲಿ ಬೆಸತಕ್ಕೆ ಒಳಪಡುವ ಮೇಲ್ಮೈಗಳು ರಾಸಾಯನಿಕವಾಗಿಯೂ ಯಾಂತ್ರಿಕವಾಗಿಯೂ ಶುಭ್ರವಾಗಿರಬೇಕು. ಆಕ್ಸೈಡುಗಳು, ದೂಳು ಮತ್ತು ಕೊಳೆ ಇರಬಾರದು. ಉಷ್ಣತೆ ಸರಿಯಾದ ಹದದಲ್ಲಿರಬೇಕು. ಲೋಹವನ್ನು ಲಂಬಕೋನವಾಗಿ ಕತ್ತರಿಸುವುದಕ್ಕಿಂತ ಮೂಲೆಯಲ್ಲಿ ಕತ್ತರಿಸಿದರೆ ಬೆಸುಗೆ ಮೇಲ್ಮೈ ಹೆಚ್ಚಾಗುತ್ತದೆ. ಸುಲಭವಾಗಿ ಕರಗುವುದಕ್ಕಾಗಿ ಲೋಹಗಳೊಡನೆ ಕೆಲವು ವಸ್ತುಗಳನ್ನು ಬೆರೆಸಿದರೆ ರಾಸಾಯನಿಕ ಶುದ್ಧತೆ ಬರುತ್ತದೆ. ಅಚ್ಚ ಕಬ್ಬಿಣ ಕಾಸುವಾಗ ಈ ಅನುಕೂಲತೆಗಾಗಿ ಮರಳನ್ನೂ ಉಕ್ಕು ಕಾಸುವಾಗ ಬೋರ್ಯಾಕ್ಸನ್ನೂ ಬೆರೆಸುತ್ತಾರೆ. ಲೋಹಗಳು ಆಕ್ಸಿಜನ್ನಿನೊಡನೆ ಸಂಯೋಗವಾಗದ ಹಾಗೆ ಉಷ್ಣತೆಯನ್ನು ನಿಯಂತ್ರಿಸಬೇಕು. ಈ ಮಾದರಿಯ ಬೆಸೆತ ಭದ್ರವಾಗಿರುವುದಿಲ್ಲ.

ಥರ್ಮಿಟ್ ಬೆಸೆತ: ಸೂಕ್ಷ್ಮವಾಗಿ ವಿಭಜಿಸಿದ ಅಲ್ಯೂಮಿನಿಯಮ್ ಮತ್ತು ಕಬ್ಬಿಣದ ಆಕ್ಸೈಡಿನ ಮಿಶ್ರಣಕ್ಕೆ ಥರ್ಮಿಟ್, ಎಕೋವೆಲ್ಡ್ ಮುಂತಾದ ವ್ಯಾಪಾರನಾಮಗಳಿವೆ. ಈ ಮಿಶ್ರಣಕ್ಕೆ ಬೆಂಕಿ ಹತ್ತಿಸಿದರೆ 1500 ವರೆಗೂ ಜಡವಾಗಿರುತ್ತದೆ. ಉಷ್ಣತೆಯನ್ನು ಇನ್ನೂ ಹೆಚ್ಚಿಸಿದಾಗ ರಾಸಾಯನಿಕ ಸಂಯೋಗವಾಗಿ 2760 ನಲ್ಲಿ ದ್ರವ ಉಕ್ಕು ಬರುತ್ತದೆ. ಬೆಸುಗೆ ಹಾಕಬೇಕಾದ ಭಾಗಗಳ ಸುತ್ತಲೂ ಇದನ್ನು ಸುರಿದರೆ ಎಲ್ಲವೂ ಕರಗಿ ಏಕರೂಪ ಬೆಸೆತವಾಗುತ್ತದೆ. ಬೆಸೆಯಬೇಕಾದ ಕೊನೆಗಳ ಸುತ್ತಲೂ ಎರಕದ ಅಚ್ಚು ತಯಾರಿಸುತ್ತಾರೆ. ಇದರ ಕೊನೆಗಳನ್ನು ಲೋಹ ಕೆಂಪಾಗಾಗುವವರೆಗೂ ಕಾಸಿ ಥರ್ಮಿಟ್ ಲೋಹವನ್ನು ಶಂಕು ಆಕಾರದ ಮೂಸೆಯಲ್ಲಿಟ್ಟು ಎರಕದ ಅಚ್ಚಿಗೆ ಬೆಂಕಿಯಿಡುತ್ತಾರೆ. ಕೇವಲ ಅರ್ಧ ಮಿನಿಟಿನಲ್ಲಿ ಥರ್ಮಿಟ್ ಪ್ರತಿಕ್ರಿಯೆ ಪೂರ್ಣವಾಗಿ ಕರಗಿದ ಉಕ್ಕನ್ನು ಬೆಸುಗೆ ಮಾಡಲು ಹೊರತೆಗೆಯುತ್ತಾರೆ.

ಅನಿಲ ಬೆಸೆತ: ಅಸೆಟಿಲಿನ್ನನ್ನು ಶುದ್ಧ ಆಕ್ಸಿಜನ್ನಿನ ಇರವಿನಲ್ಲಿ ಉರಿಸುವಾಗ ಒದಗುವ ಉಷ್ಣವನ್ನು ಇಲ್ಲಿ ಬಳಸುತ್ತಾರೆ. 2575 ಉಷ್ಣತೆ ಐರುವ ಆಕ್ಸಿ ಅಸೆಟಿಲೀನ್ ಜ್ವಾಲೆಯಲ್ಲಿ ಯಾವ ಲೋಹವನ್ನು ಬೇಕಾದರೂ ಕರಗಿಸಬಹುದು. ಲೋಹದ ದಪ್ಪ ತುಂಡುಗಳ ಅಂಚುಗಳನ್ನು ವಿ-ಆಕಾರಕ್ಕೆ ಓಟವಾಗಿ ಮಾಡಿ ಬೆಸುಗೆ ಹಾಕುತ್ತಾರೆ. ಬೆಸುಗೆ ಲೋಹವನ್ನು ಆಧಾರಲೋಹದೊಂದಿಗೆ ಕರಗಿಸಿ ಸೇರಿಕೆಯನ್ನು ಸೇರಿಸಿದ ತಗಡುಗಳಿಗಿಂತಲೂ ಬಲಿಷ್ಠವಾಗಿ ಮಾಡುತ್ತಾರೆ.

ವಿದ್ಯುಚ್ಚಾಪ ಬೆಸೆತ: ಇದರಲ್ಲಿರುವ ಹಲವು ವಿಧಗಳ ಪೈಕಿ ಸರಳಿನ ವಿದ್ಯುದ್ಧ್ರುವಗಳಿರುವ ಲೋಹದ ವಿದ್ಯುಚ್ಚಾಪದ ಬೆಸೆತ ಮುಖ್ಯವಾದದ್ದು. ಸರಳಿನ ವಿದ್ಯುದ್ಧ್ರುವಕ್ಕೂ ಬೆಸೆತದ ಭಾಗಗಳಿಗೂ ನಡುವೆ ಒಂದು ವಿದ್ಯುಚ್ಚಾಪ ಉರಿಯುತ್ತಿರುತ್ತದೆ. ಧ್ರುವಕ್ಕೆ ಮಂದವಾದ ಸೆಲ್ಯುಲೋಸ್ ಆಥವಾ ಖನಿಜದ ಹೊದಿಕೆ ಲೇಪಿಸಿರುತ್ತಾರೆ. ಬೆಸೆಯತಕ್ಕ ಭಾಗಗಳನ್ನು ಸರಿಯಾದ ಆಕಾರಕ್ಕೆ ರೂಪಿಸುತ್ತಾರೆ. ಚಾಪದ ಎರಡು ಕೊನೆಗಳಲ್ಲಿಯೂ ಲೋಹ ಕರಗಿ ಇದು ಸೇರಿಕೆಯಲ್ಲಿ ಬಂದು ನಿಲ್ಲುತ್ತದೆ. ಜಡ ಅನಿಲಗಳ ಲೋಹದ ವಿದ್ಯುಚ್ಚಾಪ ಬೆಸೆತದಲ್ಲಿ ಚಾಪ ಮುಚ್ಚಿದ ಜಡವಾದ ಅನಿಲದ ಆವರಣದಲ್ಲಿ ಉರಿಯುವಂತೆ ಮಾಡುತ್ತಾರೆ. ಧ್ರುವಕ್ಕೆ ದೊಡ್ಡ ತಂತಿಯ ಉರುಳೆಯಿಂದ ಕೊಳವೆಯಾಕಾರದ ವಿದ್ಯುತ್ಸಂಬಂಧದ ಮೂಲಕ ಚಾಪದೊಳಕ್ಕೆ ತನ್ನಷ್ಟಕ್ಕೆ ತಾನೇ ವಿದ್ಯುತ್ತು ಸರಬರಾಜಾಗುತ್ತದೆ. ಇಲ್ಲಿ ಉಪಯೋಗಿಸುವ ಅನಿಲಗಳು ಹೀಲಿಯಮ್, ಆರ್ಗನ್ ಮತ್ತು ಇಂಗಾಲಾಮ್ಲ. ಈ ಅನಿಲವನ್ನು ಒದಗಿಸುವ ಬೆಸೆತದ ಉಪಕರಣವನ್ನು ಕೈಯಿಂದ ಇಲ್ಲವೇ ತನ್ನಷ್ಟಕ್ಕೆ ತಾನೇ ಚಲಿಸುವಂತೆ ಮಾಡಬಹುದು. ಆದ್ದರಿಂದ ಈ ಕ್ರಮದಲ್ಲಿ ಬೆಸೆತವನ್ನೇ ಬಹಳ ಚುರುಕಾಗಿ ಮಾಡಬಹುದು. ಈ ವಿಧಾನ ಮೆಗ್ನೀಸಿಯಮ್, ಅಲ್ಯೂಮಿನಿಯಮ್, ತುಕ್ಕು ಹಿಡಿಯದ ಉಕ್ಕು, ನಿಕ್ಕಲ್, ನಕ್ಕಲ್ಲಿನ ಬೆರಕೆ ಲೋಹಗಳು, ಹಿತ್ತಾಳೆ, ಸಿಲಿಕನ್, ಕಂಚು, ಶುದ್ಧ ಬೆಳ್ಳಿ ಮುಂತಾದವನ್ನು ಬೆಸೆಯುವುದರಲ್ಲಿ ಉಪಯೋಗವಾಗುತ್ತದೆ.

ದ್ರವದಲ್ಲಿ ಮುಳುಗಿದ ಬೆಸೆತ: ಇಲ್ಲಿ ತಂತಿಯನ್ನು ದ್ರಾವಕ ವಸ್ತುವಿನ ಒಂದು ಎಣ್ಣೆಯೊಳಕ್ಕೆ ಬಿಡುತ್ತಾರೆ. ಆಗ ಅದರ ಒಂದು ಭಾಗ ಕರಗಿ ಕರಗಿದ ಲೋಹವನ್ನು ಸಂರಕ್ಷಿಸುತ್ತ ಹರಡುತ್ತದೆ. ಸ್ರಾವಕ ವಸ್ತುವನ್ನು ಅವಶ್ಯವಾದರೆ ಅದರಿಂದ ಆಕ್ಸಿಜನ್ನನ್ನು ತೆಗೆಯುವುದಕ್ಕಾಗಿಯೂ ಬೆಸುಗೆ ಲೋಹಕ್ಕೆ ಇತರ ಲೋಹಗಳನ್ನು ಬೆರೆಸುವುದಕ್ಕಾಗಿಯೂ ತಯಾರಿಸುತ್ತಾರೆ. ಉಕ್ಕಿನ ತಗಡುಗಳಲ್ಲಿ ಉದ್ದ ಸೇರುವೆಗಳನ್ನು ಮಾಡುವುದಕ್ಕೆ ಇದು ಮಿತವ್ಯಯದ ದಾರಿ. 22 ಗೇಜಿನ 3 ಅಂಗುಲ ಮಂದದ ಉಕ್ಕಿನ ತಗಡುಗಳನ್ನು ಈ ಕ್ರಮದಿಂದ ಬೆಸೆಯ ಬಹುದು.

ಟಂಗ್‍ಸ್ಟನ್ ಅಥವಾ ಇಂಗಾಲಚಾಪ ಬೆಸೆತ: ಬಹಳ ಹಿಂದಿನಿಂದಲೂ ಲೋಹ ಬೆಸೆತಕ್ಕೆ ಇಂಗಾಲ ಚಾಪದ ಬಳಕೆ ರೂಡಿಯಲ್ಲಿದೆ. ಇಂಗಾಲ ಉಷ್ಣ ನಿರೋಧಕವಾದರೂ ಆಕ್ಸಿಜನ್ನಿನೊಂದಿಗೆ ಸಂಯುಕ್ತವಾಗುತ್ತದೆ. ಬೆಸುಗೆ ತಂತಿಯನ್ನು ಕರಗಿದ ಲೋಹದ ಗುಂಡಿಯೊಳಕ್ಕೆ ಬಿಡುತ್ತಾರೆ. ಬೆರಕೆಯನ್ನು ಹರಳು ಹರಳಾದ ಸ್ರಾವಕ ವಸ್ತುವನ್ನೋ ಜಡವಾದ ಅನಿಲವನ್ನೋ ಉಪಯೋಗಿಸಿ ತಪ್ಪಿಸಬಹುದು. ಹಿಂದೆ ನೋಡಿದ ದ್ರವದಲ್ಲಿ ಮುಳಿಗಿದ ಬೆಸುಗೆ ಇದಕ್ಕಿಂತ ಮೇಲಾದ ಕ್ರಮ. ಟಂಗ್‍ಸ್ಟನ್ ಶೀಘ್ರವಾಗಿ ಆಕ್ಸಿಜನ್ನಿನೊಂದಿಗೆ ಬೆರೆಯುತ್ತದೆ. ಅದಕ್ಕೆ ಬೆಲೆಯೂ ಹೆಚ್ಚು. ಆದರೂ ಜಡವಾದ ಅನಿಲಗಳ ಚಾಪದ ಬೆಸುಗೆಯಲ್ಲಿ ಇಂಗಾಲಕ್ಕಿಂತ ಇದಕ್ಕೆ ಅಧಿಕ ಪ್ರಾಶಸ್ತ್ಯ. ಏಕೆಂದರೆ ಇದು ಉತ್ತಮ ವಿದ್ಯುದ್ವಾಹಕ.

ಹೈಡ್ರೊಜನ್ ಪರಮಾಣುವಿನ ವಿದ್ಯುಚ್ಚಾಪ ಬೆಸೆತ: ಟಂಗ್‍ಸ್ಟನ್ನಿನ ಎರಡು ಧ್ರುವಗಳ ನಡುವೆ ಇರುವ ಚಾಪದ ಮೂಲಕ ಹೈಡ್ರೊಜನ್ನಿನ ಒಂದು ಸಣ್ಣ ಬುಗ್ಗೆಯನ್ನು ಬಲ ಪ್ರಯೋಗಿಸಿ ತೂರುತ್ತಾರೆ. ಚಾಪದ ಶಾಖ ತೀಕ್ಷ್ಣತೆ ಹೈಡ್ರೊಜನ್ನಿನ ಅಣುಗಳನ್ನು ಪರಮಾಣುಗಳಾಗಿ ಒಡೆಯುತ್ತದೆ. ಚಾಪವನ್ನು ಇವು ದಾಟಿದ ಮೇಲೆ ಮತ್ತೆ ಅಣುಗಳಾಗಿ ಸೇರಿಕೊಳ್ಳುತ್ತವೆ. ಚಾಪದಲ್ಲಿ ಬೇರೆಯಾಗಿದ್ದಾಗ ಅವು (ಪರಮಾಣುಗಳು) ಹೀರಿದ್ದ ಶಾಖ ಈಗ ಹೊರಕ್ಕೆ ಬರುತ್ತದೆ. ಜ್ವಾಲೆಯ ಉಷ್ಣತೆ ವಿದ್ಯುಚ್ಚಾಪವೊಂದನ್ನು ಬಿಟ್ಟು ಮಿಕ್ಕ ಎಲ್ಲವುಗಳಿಗಿಂತಲೂ ಜಾಸ್ತಿ. ಜ್ವಾಲೆಯನ್ನು ಆಕ್ಸಿಅಸೆಟಿಲೀನ್ ಜ್ವಾಲೆಯಂತೆ ಬಳಸುತ್ತಾರೆ. ಬೆಸೆಯುವ ತಂತಿಯನ್ನು ಜ್ವಾಲೆಯಲ್ಲಿ ಕರಗಿಸಿ ಸೇರಿಕೆಯಲ್ಲಿ ತುಂಬುತ್ತಾರೆ. ಬೆಸುಗೆಯ ಸುತ್ತಲೂ ಇರುವ ಆಕ್ಸಿಜನ್ನನ್ನು ತೆಗೆದ ಅವರಣದಲ್ಲಿ ಉತ್ಕøಷ್ಟ ಬೆಸೆತ ಸಾಧ್ಯವಾಗುವುದು ಈ ಕ್ರಮದ ಮುಖ್ಯ ಅನುಕೂಲತೆ. ತುಕ್ಕು ಹಿಡಿಯದ ಉಕ್ಕಿನ ಬೆಸೆತದಲ್ಲಿ ಮತ್ತು ತೆಳುವಾದ ಅಂಚು ಮತ್ತು ಮಾಲೆಗಳ ಬೆಸೆತದಲ್ಲಿ ಈ ಕ್ರಮವನ್ನು ಉಪಯೋಗಿಸುತ್ತಾರೆ. ಆದರೆ ಹೈಡ್ರೊಜನ್ನನ್ನು ಹೀರುವುದರಿಂದ ಕೆಡುವ ಲೋಹಗಳಲ್ಲಿ ಇದು ನಿರುಪಯುಕ್ತ.

ನಿರೋಧ ಬೆಸೆತ: ಈ ಕ್ರಮದಲ್ಲಿ ಕೂಡಿಸುವ ಭಾಗಗಳನ್ನು ಸರಿಯಾದ ಆಕಾರಕ್ಕೆ ತಂದು ಅವನ್ನು ಒಟ್ಟಿಗೆ ಒತ್ತಿ ಸೇರಿಕೆಯ ಮೂಲಕ ಹೆಚ್ಚಿನ ಪ್ರಮಾಣದ ವಿದ್ಯುತ್ಪ್ರವಾಹ ಹರಿಸುತ್ತಾರೆ. ಸೇರಿಕೆ ಬೆಸೆತದ ಉಷ್ಣತೆ ಮುಟ್ಟಿದಾಗ ಬೆಸುಗೆಯನ್ನು ಸಂಪೂರ್ಣವಾಗಿ ಮಾಡಲು ಮತ್ತಷ್ಟು ಒತ್ತಡ ಪ್ರಯೋಗಿಸುತ್ತಾರೆ. ಆಗ ಎರಡು ಮೇಲ್ಮೈಗಳೂ ಸಂಧಿಸುವ ಕಡೆ ಹೆಚ್ಚಾದ ನಿರೋಧದ ಸಲುವಾಗಿ ಉತ್ಪನ್ನವಾದ ಮಿತಿಮೀರಿದ ಉಷ್ಣತೆಯಲ್ಲಿ ಬೆಸೆತ ಸಮರ್ಪಕವಾಗುತ್ತದೆ. ವಿವಿಧಾಕಾರದ 200 ಚದರ ಸೆಂ. ಮೀಟರುಗಳಷ್ಟು ದಪ್ಪವಿರುವ ಆಕಾರಗಳನ್ನು ಬೆಸೆಯಲು ಈ ಕ್ರಮವನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.

ಮಿನುಗುವ ಸೇರುವೆ ಬೆಸೆತ: ಬೆಸೆಯುವ ಭಾಗಗಳನ್ನು ಭದ್ರಪಡಿಸಿ ವಿದ್ಯುನ್ಮಂಡಲ ಪೂರ್ಣಗೊಳಿಸಿ ಭಾಗಗಳನ್ನು ನಿಧಾನವಾಗಿ ಹತ್ತಿರ ತರುತ್ತಾರೆ. ಅವುಗಳ ಕೊನೆಗಳು ಒಂದನ್ನೊಂದು ಮುಟ್ಟಿದಾಗ ಕ್ಷಣಿಕ ಪ್ರಕಾಶ ಉದ್ಭವವಾಗಿ ಕೊನೆಗಳು ಬೆಸೆತದ ಉಷ್ಣತೆ ಐದುವ ತನಕವೂ ಪ್ರಕಾಶ ಮುಂದುವರಿಯುತ್ತದೆ. ಆಗ ಒತ್ತಡ ಪ್ರಯೋಗ ಮಾಡಿ ಕೊನೆಗಳನ್ನು ಒಟ್ಟಿಗೆ ಸೇರಿಸಿ ಬೆಸತ ಪೂರೈಸುತ್ತಾರೆ. ಅಂಚುಗಳ ಬೆಸೆತ: ಒಂದರ ಮೇಲೊಂದು ಹೊತ್ತುಕೊಳ್ಳುವ ಲೋಹದ ತಗಡುಗಳ ಅಂಚುಗಳನ್ನು ಎರಡು ಕಿರಿದಾದ ಉರುಳೆಯ ವಿದ್ಯುದ್ಧ್ರುವಗಳ ಮಧ್ಯೆ ಇಟ್ಟು ಅಖಂಡ ಸೇರುವಿಕೆ ಬರುವಂತೆ ವೇಗ, ವೋಲ್ಟೇಜ್ ಮತ್ತು ಒತ್ತಡ ಹೊಂದಿಸುತ್ತಾರೆ. ತೆಳುವಾದ ತಗಡುಗಳನ್ನು ಬೆಸೆಯುವುದಕ್ಕೆ ಮಾತ್ರ ಈ ಕ್ರಮ ಬಳಸುತ್ತಾರೆ. (ಎಚ್.ಎಸ್.ಎನ್.ಆರ್.) ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್