ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೈಲಹೊಂಗಲ

ವಿಕಿಸೋರ್ಸ್ದಿಂದ

ಬೈಲಹೊಂಗಲ - ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಆಡಳಿತ ಕೇಂದ್ರ ಪಟ್ಟಣ. ಹಿಂದಿನ ಸಂಪಗಾಂವ ತಾಲ್ಲೂಕು ಈಗ ಈ ಹೆಸರಿನಲ್ಲಿ ಪುನಾ ರಚಿತವಾಗಿದೆ. ಈ ತಾಲ್ಲೂಕನ್ನು ಉತ್ತರದಲ್ಲಿ ಗೋಕಾಕ, ಪೂರ್ವದಲ್ಲಿ ಪರಸಗಡ, ದಕ್ಷಿಣದಲ್ಲಿ ಧಾರವಾಡ, ಪಶ್ಚಿಮದಲ್ಲಿ ಖಾನಾಪುರ ಮತ್ತು ಬೆಳಗಾಂವಿ ತಾಲ್ಲೂಕುಗಳು ಸುತ್ತುವರಿದಿವೆ. 125 ಗ್ರಾಮಗಳಿವೆ. ವಿಸ್ತೀರ್ಣ 1,122.2 ಚಕಿಮೀ. ಜನಸಂಖ್ಯೆ 3,56,435 (2001).

ಬೈಲಹೊಂಗಲ ತಾಲ್ಲೂಕು ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಪೂರ್ವದ ಸೆರಗಿನಲ್ಲಿದ್ದು ಏರು ತಗ್ಗುಗಳಿಂದ ಕೂಡಿದೆ. ತಾಲ್ಲೂಕಿನ ಬಹುಭಾಗ ಕಪ್ಪು ಮತ್ತು ಕೆಂಪು ಮಣ್ಣಿನದು. ಸಮಶೀತೋಷ್ಣ ವಾಯುಗುಣವಿದೆ. ವಾರ್ಷಿಕ ಸರಾಸರಿ ಮಳೆ 694.6 ಮಿ.ಮೀ.

ತಾಲ್ಲೂಕಿನ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಮಲಪ್ರಭಾನದಿ ವೀರಾಪುರದ ಬಳಿ ತಾಲ್ಲೂಕನ್ನು ಪ್ರವೇಶಿಸಿ ಮುಗಟಖಾನ ಹುಬ್ಬಳ್ಳಿ, ಕುರಗುಂದ, ವಕ್ಕುಂದಗಳ ಮೂಲಕ ಹರಿದು ಕರ್ವಿಕೊಪ್ಪ ಗ್ರಾಮದ ಹತ್ತಿರ ಹರಿನಾಲಾಕ್ಕೆ ಒಡ್ಡುಕಟ್ಟಿ ನೀರನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಮಲಪ್ರಭಾ ನದಿಯ ಎರಡೂ ದಂಡೆಗಳಲ್ಲಿ ರೈತರು ವಿದ್ಯುತ್ ಪಂಪು ಇತ್ಯಾದಿಗಳಿಂದ ವ್ಯವಸಾಯಕ್ಕೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ತಾಲ್ಲೂಕು ಬೆಳವಲನಾಡಿನ ಮುತ್ತಿನಂಥ ಜೋಳ, ಹತ್ತಿ, ತೈಲಬೀಜ ಇತ್ಯಾದಿಗಳನ್ನು ಬೆಳೆಸುತ್ತಾರೆ.

ಇಲ್ಲಿ ಕೈಗಾರಿಕಾಪ್ರಗತಿ ಪ್ರಾರಂಭ ದಿಶೆಯಲ್ಲಿದೆ. ಮುಗಟಖಾನ ಹುಬ್ಬಳ್ಳಿಯಲ್ಲಿ ಒಂದು ಸಹಕಾರ ಸಕ್ಕರೆ ಕಾರ್ಖಾನೆ ಇದೆ. ಸೇಂಗಾ ಎಣ್ಣೆ, ಚರ್ಮ ವಸ್ತುಗಳು ಮತ್ತು ಹತ್ತಿ ಈ ತಾಲ್ಲೂಕಿನ ಇತರ ಮುಖ್ಯ ಉತ್ಪನ್ನಗಳು. ಇಲ್ಲಿಯ ವ್ಯವಸಾಯ ವಾಣಿಜ್ಯಾಭಿವೃದ್ದಿಗೆ ಸಹಾಯಕವಾಗಿ ಕೃಷಿ, ಸಹಕಾರ ಮತ್ತು ವಾಣಿಜ್ಯ ಬ್ಯಾಂಕುಗಳಿವೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳೂ ಒಂದು ಕಾಲೇಜೂ ಇವೆ. ಆಸ್ಪತ್ರೆ, ಅಂಚೆ ತಂತಿ, ವಿದ್ಯುತ್ ಮುಂತಾದ ಸೌಲಭ್ಯಗಳುಂಟು.

ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಐತಿಹಾಸಿಕ ಸ್ಥಳಗಳಾದ ಕಿತ್ತೂರು, ದೇಗಾಂವಿ ಮತ್ತು ಸಂಪಗಾಂವ ಪ್ರಸಿದ್ಧವಾದುವು. ಇಂಚಲ ಗ್ರಾಮದಲ್ಲಿ ವೀರಶೈವ ಮಠವಿದ್ದು ಅಲ್ಲಿ ನಿತ್ಯವೂ ಭಜನೆ ಮತ್ತು ಅನ್ನದಾಸೋಹಗಳು ನಡೆಯುತ್ತವೆ. ಬೈಲ ಹೊಂಗಲಕ್ಕೆ ನೈಋತ್ಯದಲ್ಲಿ ಮಲಪ್ರಭಾ ನದಿಯ ಬಲದಂಡೆಯ ಮೇಲಿರುವ ಕಾದರೋಳಿಯಲ್ಲಿ ಗೋವ ಕದಂಬರ ಕಾಲದ ಶಂಕರಲಿಂಗ ಗುಡಿಯಿದೆ. ಇಲ್ಲಿ 1075ರ ಶಿಲಾಶಾಸನಗಳಿವೆ. ಇಲ್ಲಿಯ ಅದೃಶ್ಯಪ್ಪನವರ ಮಠ ಸಹ ಪ್ರಸಿದ್ಧ. ಮಲಪ್ರಭಾ ನದಿಯ ಎಡದಂಡೆಯ ಮೇಲಿರುವ ಬೆಳವಡಿ ಗ್ರಾಮ ಮಲ್ಲವ್ವ ರಾಣಿಯಿಂದಾಗಿ ಪ್ರಸಿದ್ಧ. (ನೋಡಿ- ಬೆಳವಡಿ-ಮಲ್ಲವ್ವ) ಇಲ್ಲಿ ಕಿತ್ತೂರು ದೇಸಾಯಿಗಳ ಕುಲದೇವರಾದ ವೀರಭದ್ರನ ಗುಡಿ ಇದ್ದು, ಪ್ರತಿ ವರ್ಷ ಚೈತ್ರದಲ್ಲಿ ಜಾತ್ರೆ ನಡೆಯುವುದು. ಬೈಲಹೊಂಗಲಕ್ಕೆ ನೈಋತ್ಯಕ್ಕಿರುವ ಮುಗಟಖಾನ್ ಹುಬ್ಬಳ್ಳಿ ಮಲಪ್ರಭಾ ನದಿಗೆ ಹತ್ತಿರದಲ್ಲಿದೆ. ಇಲ್ಲಿ ನರಸಿಂಹಸ್ವಾಮಿ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ವೈಶಾಖಮಾಸದಲ್ಲಿ ನಡೆಯುವ ಜಾತ್ರೆ ಪ್ರಸಿದ್ಧ. ಬೈಲಹೊಂಗಲದ ದಕ್ಷಿಣಕ್ಕೆ ಇರುವ ಹಿರೇನಂದಿಹಳ್ಳಿಯ ಪ್ರಕೃತಿ ಸೌಂದರ್ಯ ಆಕರ್ಷಕ. ಇಲ್ಲಿ ಬಸವೇಶ್ವರ ದೇವಾಲಯವಿದ್ದು ಶ್ರಾವಣ ಮಾಸದಲ್ಲಿ ಜಾತ್ರೆ ಸೇರುವುದು. ಹಣ್ಣಿಕೇರಿ ಗ್ರಾಮದಲ್ಲಿ ಪುರಾತನ ಬ್ರಹ್ಮದೇವನ (ಜೈನ) ಗುಡಿ ಇದೆ. ಬೈಲ ಹೊಂಗಲದ ವಾಯುವ್ಯಕ್ಕಿರುವ ನೇಸರ್ಗಿ ಗ್ರಾಮದಲ್ಲಿ ಹಳೆಯ ಶಿಥಿಲ ಬಸವ ದೇವಾಲಯವೂ ಆಗ್ನೇಯದಲ್ಲಿ ಮಲಪ್ರಭಾ ನದಿಯ ಎಡದಂಡೆಯ ಮೇಲಿರುವ ವಕ್ಕುಂದ ಗ್ರಾಮದಲ್ಲಿ ಚಾಳುಕ್ಯ ಶೈಲಿಯ ತ್ರಿಕೂಟೇಶ್ವರ ದೇವಾಲಯವೂ ಇವೆ.

ಬೈಲಹೊಂಗಲ ಈ ತಾಲ್ಲೂಕಿನ ಮುಖ್ಯ ಪಟ್ಟಣ ಮತ್ತು ಆಡಳಿತ ಕೇಂದ್ರ. ಬೆಳಗಾಂವಿಯ ಆಗ್ನೇಯಕ್ಕೆ 43 ಕಿಮೀ ದೂರದಲ್ಲಿ ಸವದತ್ತಿ ಮಾರ್ಗದಲ್ಲಿದೆ. ಪುರಸಭಾಡಳಿತಕ್ಕೆ ಸೇರಿರುವ ಈ ಪಟ್ಟಣದ ಜನಸಂಖ್ಯೆ 43,215 (2001). ಬೆಳಗಾಂವಿ, ಧಾರವಾಡ, ಸವದತ್ತಿಗಳಿಂದ ಇಲ್ಲಿಗೆ ಉತ್ತಮ ಮಾರ್ಗ ಸಂಪರ್ಕವಿದೆ. ವ್ಯಾಪಾರಕೇಂದ್ರ. ಇಲ್ಲಿ ಹತ್ತಿ ಎಕ್ಕುವ ಮತ್ತು ಎಣ್ಣೆ ತಯಾರಿಸುವ ಕಾರ್ಖಾನೆಗಳೂ ಕೃಷಿ ಸಂಶೋಧನಾ ಕೇಂದ್ರವೂ ಇವೆ. ಶಾಲಾ ಕಾಲೇಜುಗಳು, ಬ್ಯಾಂಕುಗಳು ಸಹಕಾರ ಸಂಘಗಳು, ಆಸ್ಪತ್ರೆ, ಅಂಚೆ ತಂತಿ, ವಿದ್ಯುತ್ ಮುಂತಾದ ಸೌಲಭ್ಯಗಳಿವೆ. ಪಟ್ಟಣದ ಉತ್ತರದಲ್ಲಿ ಬಸವೇಶ್ವರ ದೇವಾಲಯವಿದೆ. ಅದು ಹಿಂದೆ ಜೈನ ಬಸದಿಯಾಗಿತ್ತೆಂದು 12ನೆಯ ಶತಮಾನದ ರಟ್ಟಕಾರ್ತವೀರ್ಯನ ಕಾಲದ ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಚನ್ನಬಸವಣ್ಣ ಸ್ಥಾಪಿಸಿದ್ದೆನ್ನಲಾದ ಮರಡಿ ಬಸವೇಶ್ವರನ ಗುಡಿ ಊರ ಪಶ್ಚಿಮ ಭಾಗದಲ್ಲಿರುವ ಕೆರೆಯ ಹತ್ತಿರ ಇದೆ. ಕಿತ್ತೂರು ರಾಣಿ ಚೆನ್ನಮ್ಮನ ಸಮಾಧಿ ಇಲ್ಲಿದೆ. *