ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಂತಾದೇವಿ

ವಿಕಿಸೋರ್ಸ್ದಿಂದ

ಬೊಂತಾದೇವಿ ಹನ್ನೆರಡನೆಯ ಶತಮಾನದ ಒಬ್ಬ ವಚನಕಾರ್ತಿ. ಇವಳ ಕಥೆ ಕೆಲವು ಪ್ರಾಚೀನ ಕಾವ್ಯಗಳಲ್ಲಿ ಕಂಡುಬರುತ್ತದೆ. ಈಕೆ ಕಾಶ್ಮೀರದ ಮಾಂಡವ್ಯ ಪುರದ ರಾಜಪುತ್ರಿ. ನಿಜದೇವಿ ಎಂಬುದು ಇವಳ ಹೆಸರಾಗಿತ್ತು. ವೈರಾಗ್ಯ ಪರಳಾದ ಈಕೆ ಸಮಸ್ತ ರಾಜಭೋಗಗಳನ್ನೂ ತೊರೆದು ದಿಗಂಬರೆಯಾಗಿ ಬಸವಾದಿ ಪ್ರಮಥರನ್ನು ಕಾಣಲು ಕಲ್ಯಾಣದತ್ತ ನಡೆದಳು. ಪರಮಸುಂದರಿಯಾಗಿದ್ದುದರಿಂದ ಅನೇಕರು ಈಕೆಯನ್ನು ಮದುವೆಯಾಗಲು ಮುಂದೆಬಂದರು. ಕೊನೆಗೆ ಪರಶಿವನೇ ಸುಂದರಯುವಕನಾಗಿ ಬಂದು ತನನ್ನು ಮದುವೆಯಾಗೆಂದು ಕೇಳಿಕೊಂಡರೂ ಈಕೆ ಒಪ್ಪಲಿಲ್ಲ. ಆ ವೇಳೆಗೆ ಈಕೆ ಪರಶಿವನನ್ನು ಗುರುತಿಸಿದಳು. ಪರಶಿವ ಈಕೆಗೆ ಒಂದು ಬೊಂತೆಯನ್ನು ಕೊಟ್ಟು, ಅದನ್ನು ಹೊದ್ದುಕೊಳ್ಳುವಂತೆ ತಿಳಿಸಲು ಈಕೆ ಅದನ್ನು ಹೊದ್ದುಕೊಂಡೇ ಕಲ್ಯಾಣಕ್ಕೆ ಬಂದಳು. ಪರಶಿವ ಕೊಟ್ಟ ಬೊಂತೆಯನ್ನು ಹೊದ್ದುಕೊಂಡದ್ದರಿಂದ ಈಕೆಗೆ ಬೊಂತಾದೇವಿ ಎಂಬ ಹೆಸರು ಬಂತು. ಕಲ್ಯಾಣದಲ್ಲಿ ಈಕೆಯನ್ನು ಯಾರೂ ಗಮನಿಸಲಿಲ್ಲ. ಕೊನೆಗೆ ಅಲ್ಲಮಪ್ರಭುವಿಗೆ ಈಕೆಯ ಮಹತ್ತ್ವದ ಅರಿವಾಗಿ ಗೌರವಿಸಿದ. ಕಲ್ಯಾಣದ ಕ್ರಾಂತಿಯ ಅನಂತರವೂ ಈಕೆ ಅಲ್ಲೇ ಉಳಿದುಕೊಂಡಿದ್ದಳು. ಒಮ್ಮೆ ಈಕೆ ತಿಪ್ಪೆಯಲ್ಲಿ ಮಲಗಿರಲು ಅದನ್ನು ಕಂಡವರು ಹೇಸಿಗೆಪಟ್ಟುಕೊಳ್ಳಲು ತನ್ನ ಬೊಂತೆಯನ್ನು ಕೊಡುವಲು ಅದರಿಂದ ರತ್ನಗಳು ಉದುರಿದುವಂತೆ. ಈಕೆ ತನ್ನ ಬೊಂತೆಯನ್ನು ಆಕಾಶಕ್ಕೆ ಎಸೆದು ಅದರೊಡನೆ ಬಯಲಾದಳೆಂದು ಪ್ರತೀತಿ.

ಇದುವರೆಗೆ ಬೊಂತಾದೇವಿಯ ಐದು ವಚನಗಳು ಮಾತ್ರ ಸಿಕ್ಕಿವೆ. ಬಿಡಾಡಿ ಎಂಬುದು ಈಕೆಯ ವಚನಗಳ ಅಂಕಿತ, ಈಕೆಯ ವಚನಗಳಲ್ಲಿ ಏಕದೈವೋಪಾಸನೆಯ ನಿಷ್ಠೆಯನ್ನು ಕಾಣಬಹುದಾಗಿದೆ. (ಎನ್.ಬಿ.)