ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಟಸ್, ಡೆರಿಕ್

ವಿಕಿಸೋರ್ಸ್ದಿಂದ

ಬೊಟಸ್, ಡೆರಿಕ್ ನೆದರ್‍ಲ್ಯಾಂಡಿನ ಚಿತ್ರಕಾರ. ವಾನ್‍ಎಯ್ಕಸ್ ಎಂಬಾತನ ಅನುಯಾಯಿ. ಕ್ರಿ.ಶ. 1445ರ ಸುಮಾರಿಗೆ ರೋಜರ್‍ಮನ್‍ಡೆರ್ ವೈಡೆನ್ ಎಂಬಾತನ ಪ್ರಭಾವಕ್ಕೊಳಗಾಗಿ ಬ್ರಸೆಲ್ಸಿನಲ್ಲಿ ಕೆಲಕಾಲ ಈತ ಕೆಲಸ ಮಾಡಿದಂತೆ ಕಾಣುತ್ತದೆ. 1475 ಮೇ 6ರಂದು ತಾವೈನ್‍ನಲ್ಲಿ ಮೃತನಾದ.

ಈತನ ಎರಡು ಅಧಿಕೃತ ಕೃತಿಗಳು ಲಭ್ಯವಾಗಿವೆ. 1464ರಲ್ಲಿ ಲೌವೈನ್‍ನ ಸೇಂಟ್ ಪೀಟರ್ ಚರ್ಚಿಗಾಗಿ ರಚಿಸಿದ ಕೃತಿ ಇವುಗಳಲ್ಲೊಂದು. ಐದು ಪಟ್ಟಿಕೆಗಳಿಂದ ಕೂಡಿದ ಈ ಚಿತ್ರದ ಭಾಗಗಳು ಮ್ಯೂನಿಕ್ ಮತ್ತು ಬರ್ಲಿನ್ ವಸ್ತು ಸಂಗ್ರಹಾಲಯಗಳನ್ನು ಸೇರಿದ್ದವು. ವರ್ಸೆಲ್ಲೆಸ್ ಒಪ್ಪಂದದ ಮೇರೆಗೆ ಬೆಲ್ಜಿಯಮ್ಮಿಗೆ ಹಿಂದಿರುಗಿಸಲ್ಪಟ್ಟ ಈ ಚಿತ್ರ ಸೇಂಟ್ ಪೀಟರ್ ಚರ್ಚಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಸಿಗುತ್ತದೆ. ಮಧ್ಯಫಲಕದಲ್ಲಿ ಕೊನೆಯ ರಾತ್ರಿಯೂಟದ ದೃಶ್ಯವಿದೆ. ಕಲಾವಿದ ಇದರ ಹಿನ್ನೆಲೆಯಲ್ಲಿ ತನ್ನ ಹಾಗೂ ತನ್ನ ಮಕ್ಕಳ ಚಿತ್ರಗಳನ್ನು ಬಿಡಿಸಿರುವಂತೆ ತೋರುತ್ತದೆ. ಪಾಶ್ರ್ವಚಿತ್ರಗಳಲ್ಲಿ ಯೆಹೂದ್ಯರ ಹಬ್ಬ; ಮರುಭೂಮಿಯಲ್ಲಿ ಎಲಿeóÁ ಅಮೃತಾಹಾರದ ಕೂಟ ಮತ್ತು ಎಬ್ರಾಹಮ್ ಹಾಗೂ ಮೆಲ್ಜಿಸೆಡೆಕ್ ಮುಂತಾದ ದೃಶ್ಯಗಳನ್ನು ಬಿಡಿಸಿದೆ.

ಲೌವೈನ್‍ನಲ್ಲಿ ಸ್ಥಳೀಯ ಪುರಭವನಕ್ಕಾಗಿ ಬಿಡಿಸಿದ ಚಿತ್ರಸರಣಿ ಈತನ ಇನ್ನೊಂದು ಕೃತಿ. ಕೇವಲ ಎರಡು ಫಲಕಚಿತ್ರಗಳನ್ನಷ್ಟೇ ಪೂರ್ಣಗೊಳಿಸಲು ಈತನಿಗೆ ಸಾಧ್ಯವಾಯಿತು. ಈ ಚಿತ್ರವೀಗ ಬ್ರಸೆಲ್ಸ್‍ನ ಆರ್ಟ್ ಗ್ಯಾಲರಿಯಲ್ಲಿದೆ. ಮುಮ್ಮಡಿ ಒಟ್ಟೊ ಸಮ್ರಾಟನ ಜೀವನಕ್ಕೆ ಸಂಬಂಧಿಸಿದ ಫಟನೆಗಳನ್ನು ಇವು ನಿರೂಪಿಸುತ್ತವೆ.

ಶೈಲಿಯ ಆಧಾರದ ಮೇಲೆ ಈತನದೆಂದು ಭಾವಿಸಲಾದ ಕೆಲವು ಚಿತ್ರಗಳು ಮಾರ್ಡಿಡ್, ಗ್ರನಾಡಾ, ಲಂಡನ್, ಪ್ಯಾರಿಸ್, ಪೆಟ್ರೊಗ್ರಾಡ್, ಫಿಲಿಡೆಲ್ಫಿಯ, ಮ್ಯೂನಿಕ್, ಲೌವ್ರೆ, ಲಿಲ್ಲೆ ಇತ್ಯಾದಿ ಹಲವು ಸ್ಥಳಗಳಲ್ಲಿರುವ ವಸ್ತುಸಂಗ್ರಹಾಲಯಗಳಲ್ಲಿವೆ. ಬಹುಪಾಲು ಚಿತ್ರಗಳು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಹಲವು ಘಟನೆಗಳನ್ನು ನಿರೂಪಿಸುವಂಥವಾಗಿವೆ. ನ್ಯಾಷನಲ್ ಗ್ಯಾಲರಿಯಲ್ಲಿರುವ 1462ರ ಭಾವಚಿತ್ರ ಈತನದೇ ಎಂದು ಕೆಲವರು ಭಾವಿಸುತ್ತಾರೆ. ಈತ ರಚಿಸಿದನೆನ್ನಲಾದ ಇನ್ನೆರಡು ಭಾವಚಿತ್ರಗಳು ಮೆಟ್ರೊಪಾಲಿಟನ್ ಮತ್ತು ವಾರ್ನ್‍ಕೆ ಸಂಗ್ರಹಗಳಲ್ಲಿವೆ.

ಬೊಟಸ್ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದವನಾಗಿದ್ದ. ವರ್ಣಗಳ ಸಿರಿವಂತ ಮತ್ತು ಸಮರಸ ಸಂಯೋಜನೆ ಈತನ ಶೈಲಿಯ ವೈಶಿಷ್ಟ್ಯ. ಮಾನವ ದೇಹ ಚಿತ್ರಣದಲ್ಲಿ ತುಸು ರೂಕ್ಷತೆ ಕಂಡುಬರುವುದರಿಂದ ಲಾವಣ್ಯಾಂಶ ಮತ್ತು ರಮ್ಯಾಂಶ ಕಡಿಮೆ.

ಬೊಟಸ್‍ನ ಮರಣಾನಂತರ ಆತನ ಇಬ್ಬರು ಮಕ್ಕಳಾದ ಆಲ್ಬರ್ಟ್ ಹಾಗೂ ಡೆರಿಕ್ ತಮ್ಮ ತಂದೆಯ ಕಲಾಪರಂಪರೆಯನ್ನು ಲೌವೈನ್‍ನಲ್ಲಿ ಮುಂದುವರಿಸಿದರು. (ಎಚ್.ಎಂ.ಎನ್.ಆರ್.)