ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಮ್ಮರಸ

ವಿಕಿಸೋರ್ಸ್ದಿಂದ

ಬೊಮ್ಮರಸ : -

ಸು. 1450. ವೀರಶ್ಯೆವ ಕವಿ. ಸೌಂದರ ಪುರಾಣ ಎಂಬ ಕಾವ್ಯದ ಕರ್ತೃ. ಇವನ ಗುರು ವಿಶ್ವನಾಥಾಚಾರ್ಯ. ಕವಿ ಡೆಂಕಣಕೋಟೆ ದೊರೆ ತಿಪ್ಪರಸನ ಆಸ್ಥಾನದಲ್ಲಿದ್ದು ಗುಮ್ಮಳಾಪುರವರಾಧೀಶನಾದ ಚಿಕ ವೀರರ್ಣಾರ್ಯನ ಅಪ್ಪಣೆಯ ಮೇರೆಗೆ ಕೃತಿ ರಚನೆ ಮಾಡಿರುವಂತೆ ತಿಳಿದು ಬರುತ್ತದೆ. ಪೂರ್ವಕವಿಗಳಲ್ಲಿ ಭಾರವಿ, ಬಾಣ, ಕಾಳಿದಾಸ, ಹರಿಹರ, ಸೋಮನಾಥ ಮುಂತಾದವರನ್ನು ಸ್ತುತಿಸಿದ್ದಾನೆ. ಅಲ್ಲದೆ ತಾನು ದಿವ್ಯ ಶಿವ ಕವೀಂದ್ರರ ಭೃತ್ಯನೆನಿಪ ಕರ್ಣಾಟಕವಿ ಎಂದು ಹೇಳಿಕೊಂಡಿದ್ದಾನೆ.

ಸೌಂದರ ಪುರಾಣ ವಾರ್ಧಕ ಷಟ್ಟದಿಯಲ್ಲಿ ರಚಿತವಾಗಿದೆ. ಇದರಲ್ಲಿ 19 ಸಂಧಿಗಳೂ 1,205 ಪದ್ಯಗಳೂ ಇವೆ. 63 ಪುರಾತನರ ಪೈಕಿ ಒಬ್ಬನಾದ ಸೌಂದರ ನಂಬಿಯ (ನಂಬಿಯಣ್ಣ) ಕಥೆ ಕಾವ್ಯದ ವಸ್ತು. ಹರಿಹರ ವಿಸ್ತರಿಸಿದ ನಂಬಿಯಣ್ಣನ ಚರಿತ್ರೆಯನ್ನು ವರ್ಣಕದೊಳು ಪೇಳ್ದಪೆಂ ಎಂದು ಕವಿ ಹೇಳಿಕೊಂಡಿದ್ದಾನೆ. ಗ್ರಂಥ ನೀಲಕಂಠನ ಅಂಕಿತದಲ್ಲಿದೆ.

ಕಾವ್ಯದಲ್ಲಿ ಅಷ್ಟಾದಶ ವರ್ಣನೆಗಳಿವೆ. ಶೈಲಿ ಸರಳವಾಗಿವೆ. ಇದೊಂದು ಮಧ್ಯಮ ದರ್ಜೆಯ ಲಕ್ಷಣಯುಕ್ತ ಷಟ್ಟದಿ ಕಾವ್ಯ. (ಜಿ.ಎಸ್.ಎಸ್.)