ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಯಾರ್ಡೊ

ವಿಕಿಸೋರ್ಸ್ದಿಂದ

ಬೊಯಾರ್ಡೊ 1434-94. ಇಟಲಿಯ ಕವಿ. ಅರ್ಲಾಂಡೋ ಇನ್ನು ಮೆರಾಟೊ ಎಂಬುದು ಈತನ ಶ್ರೇಷ್ಠ ಕಥನ ಕಾವ್ಯ. ಇದರಲ್ಲಿ ಚಾರ್ಲ್‍ಮಾನ್ ಮತ್ತು ಆರ್ಥರ್ ದೊರೆಗೆ ಸಂಬಂಧಿಸಿದ ಕಥೆಗಳನ್ನು ಹೆಣೆಯಲು ಪ್ರಯತ್ನಿಸಲಾಗಿದೆ. ಇದು ಎಂಟು ಸಾಲುಗಳಿಂದ ಕೂಡಿದ್ದು ಓಟಾವೊ ರಿಮ್ ಛಂದಸ್ಸಿನಲ್ಲಿ ರಚಿತವಾಗಿರುವ 69 ಸರ್ಗಗಳುಳ್ಳ ಅಪೂರ್ಣ ಕಾವ್ಯ. ಚಾರ್ಲ್‍ಮಾನ್ ಮತ್ತು ಗ್ರಡಾಸೋ ಅಗ್ರಮಾಂಟೆಯರಿಗೆ ನಡೆಯುವ ಕದನ, ಚಾರ್ಲ್‍ಮಾನ್ ಸೈನಿಕರನ್ನು ಸೆರೆ ಹಿಡಿಯಲು ಬಂದ ಮಾಟಗಾತಿ ಏಂಜಲೀಕಳಲ್ಲಿ ಅರ್ಲಾಂಡೋವಿನ ಪ್ರೇಮ, ರುಜೇರೋ ಮತ್ತು ಬ್ರಾಡಮಾಂಟೆಯರ ಅನುರಾಗ-ಇವೇ ಈ ಕಾವ್ಯದ ಮುಖ್ಯ ಪ್ರಸಂಗಗಳು. ಈ ಕಾವ್ಯದಲ್ಲಿ ಏಂಜಲೀಕಳ ಪಾತ್ರ ಮನಮೋಹಕವಾದ್ದು. ಬರ್ನಿಯ ಈ ಕಾವ್ಯವನ್ನು 16ನೆಯ ಶತಮಾನಕ್ಕೆ ಒಪ್ಪುವ ರೀತಿಯಲ್ಲಿ ಹೊಸಭಾಷೆಯಲ್ಲಿ ಪರಿಷ್ಕರಿಸಿದ್ದರಿಂದ 20ನೆಯ ಶತಮಾನದ ತನಕ ಯಾರಿಗೂ ಬೊಯಾರ್ಡೊವಿನ ಮೂಲಗ್ರಂಥದ ಪರಿಚಯವೇ ಆಗಿರಲಿಲ್ಲ.

ಇದಲ್ಲದೆ ಅಥೆನ್ಸ್‍ನ ತೈಮನ್‍ನನ್ನು ಕುರಿತಂತೆ ಪ್ರಹಸನವೊಂದನ್ನು ಹಲವು ಪ್ರಣಯಗೀತೆಗಳನ್ನೂ ಈತ ರಚಿಸಿದ್ದಾನೆ. (ಎಚ್.ಕೆ.ಆರ್.)