ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಲಿವರ್, ಸೈಮನ್

ವಿಕಿಸೋರ್ಸ್ದಿಂದ

ಬೊಲಿವರ್, ಸೈಮನ್ 1783-1830 ಪ್ರಸಿದ್ದ ಸೈನ್ಯಾಧಿಪತಿ. ದಕ್ಷಿಣ ಅಮೆರಿಕದ ಜಾರ್ಜ್ ವಾಷಿಂಗ್‍ಟನ್ ಎಂದು ಹೆಸರಾಗಿದ್ದಾನೆ. ವೆನಿಜ್ವೇಲದ ಕಾರ್ಕಾಸಿನಲ್ಲಿ 1783 ಜುಲೈ 24ರಂದು ಜನನ.ತಂದೆ ಶ್ರೀಮಂತ. ಬಾಲ್ಯದಲ್ಲಿ ತಂದೆತಾಯಿಗಳನ್ನು ಕಳೆದುಕೊಂಡು ಚಿಕ್ಕಪ್ಪ ಫಲಾಸಿಯನ್ಸನ ಆಶ್ರಮದಲ್ಲಿ ಬೆಳೆದ. ಸೈಮನ್ ಕಾರಿನೋ ಎಂಬ ಅಧ್ಯಾಪಕ ಇವನಿಗೆ 18ನೆಯ ಶತಮಾನದ ಆಕರ್ಷಕ ವಿಚಾರಧಾರೆ ಪರಿಚಯಿಸಿದ. ಲಾಕ್, ಹಾಬ್ಸ್, ಮಾಂಟೆಸ್ಕೋ, ರೂಸೋ, ವಾಲ್ಟೇರ್ ಮುಂತಾದ ವಿಚಾರವಾದಿಗಳ, ದಾರ್ಶನಿಕರ ಕೃತಿಗಳಿಂದ ಪ್ರಭಾವಿತವಾದ. ಇವನ ಮೇಲೆ ಗಾಢವಾಗಿ ಪ್ರಭಾವ ಬೀರಿದ ಘಟನೆ ನೆಪೋಲಿಯನ್ನನ ಕಿರೀಟಧಾರಣೋತ್ಸವ (1804). ತಾನೂ ನೆಪೋಲಿಯನ್ನನಂತೆ ಕೀರ್ತಿಗಳಿಸಬೇಕೆಂಬ ಅಭಿಲಾಷೆ ಇವನಿಗೆ ಹುಟ್ಟಿತು. ಯೌವನಸ್ಥನಾದಾಗ ಯೂರೊಪ್ ಸಂದರ್ಶಿಸಿದ.ಸ್ಟೇನಿನ ವಾಸ್ತವ್ಯದಲ್ಲಿ ಶ್ರೀಮಂತನಮಗಳೊಬ್ಬಳನ್ನು ವಿವಾಹವಾದ, ಆದರೆ ವಿವಾಹವಾದ ಒಂದು ವರ್ಷದಲ್ಲೇ ಪತ್ನಿ ತೀರಿಕೊಂಡಳು. ಪತ್ನಿಯ ದುರಂತ ಸಾವು ಬೊಲಿವರ್‍ನನ್ನು ದುಃಖತಪ್ತನನ್ನಾಗಿ ಮಾಡಿತು.

ವೆನಿಜ್ವೇಲಕ್ಕೆ ಹಿಂತಿರುಗುವಾಗ ರಾಷ್ಟ್ರಪ್ರೇಮಿಗಳ ಗುಂಪು ಸೇರಿದ.ಈ ಗುಂಪು ಕಾರ್ಕಾಸನ್ನು ಮುತ್ತಿ ಅದನ್ನು ಸ್ಪೇನಿನಿಂದ ಸ್ವತಂತ್ರವೆಂದು ಫೋಷಿಸಿತು (1810). ಅನಂತರ ಬೊಲಿವರ್ ಸಹಾಯ ಯಾಚಿಸಿ ಗ್ರೇಟ್ ಬ್ರಿಟನ್ನಿಗೆ ತೆರಳಿದ.ಆದರೆ ತಾನು ತಟಸ್ಥನಾಗಿರುವೆ ಎಂಬ ಆಶ್ವಾಸನೆ ಮಾತ್ರ ಸೈನ್ಯದ ಅಧಿಪತ್ಯ ವಹಿಸಿದ. 1813ರಲ್ಲಿ ಕಾರ್ಕಾಸನ್ನು ಸ್ಪೇನಿನಿಂದ ಪುನಃ ವಶಪಡಿಸಿಕೊಂಡ. ಅನಂತರ ದೇಶದ ಸರ್ವಾಧಿಕಾರಿಯಾದ.

ಅಲ್ಪಕಾಲದಲ್ಲೇ ಸ್ಪೇನಿಷರು ಬೋಲಿವರನನ್ನು ವೆನಿಜ್ವೇಲದಿಂದ ನ್ಯೂಗ್ರನಾಡಕ್ಕೆ (ಈಗ ಕೊಲಂಬಿಯಾ) ಹಿಂದಿರುಗುವಂತೆ ಮಾಡಿದರು. ಕೊಲಂಬಿಯಾ ಸೈನ್ಯದ ಅಧಿಪತ್ಯ ವಹಿಸಿಕೊಂಡು ಅನಂತರ ಬೊಗೋಟಾವನ್ನು ವಶಪಡಿಸಿಕೊಂಡ (1814). ರಾಷ್ಟ್ರಪ್ರೇಮಿಗಳಿಗೆ ಸೈನ್ಯ ಮತ್ತು ಸರಂಜಾಮುಗಳ ಕೊರತೆ ಇತ್ತು. ಇದರಿಂದ ಸೋಲೊಪ್ಪಿಕೊಂಡು ನಮೈಕಕ್ಕೆ ಪಲಾಯನ ಮಾಡಿದ. ಹೈತಿಯಲ್ಲಿ ಪುನಃ ಸೈನ್ಯ ಸಂಗ್ರಹಿಸಿ ವೆನಿಜ್ವೇಲಕ್ಕೆ ಮರಳಿದ (1816). ಅಂಗೆಸ್ಟುರಾವನ್ನು ವಶಪಡಿಸಿಕೊಂಡ.ಅಲ್ಲಿ ಸರ್ವಾಧಿಕಾರಿಯಾದ.

ಬೊಲಿವರ್ ನ್ಯೂಗ್ರನಾಡಕ್ಕೆ ದಿಗ್ವಜಯ ಕೈಗೊಂಡ (1819).ಸ್ಟೇನಾಡರನ್ನು ಬೋಯಕ್ಕದಲ್ಲಿ ಪರಾಭವಗೊಳಿಸಿ (1819), ಕೊಲಂಬಿಯಾ ಪ್ರದೇಶವನ್ನು ವಿಮೋಚನೆಗೊಳಿಸಿದ, ಅಂಗೆಸ್ಯುರಾಕ್ಕೆ ಹಿಂತಿರುಗಿ ಅಲ್ಲಿಯ ಕಾಂಗ್ರೆಸ್ಸಿನ ನಾಯಕತ್ವ ವಹಿಸಿದ. ಅಲ್ಲಿ ಕೊಲಂಬಿಯ ಮೂಲಗಣರಾಜ್ಯ ಸಂಘಟಿಸಿತು (ಈಗ ಎಕ್ವೆಡಾರ್, ಕೊಲಂಬಿಯ, ಪನಾಮ ಮತ್ತು ವೆನಿಜ್ವೆಲ) 1719 ಡಿಸೆಂಬರ್ 17ರಂದು ವೆನಿಜ್ವೇಲದ ಕ್ಯಾರಾಬೂವಿನಲ್ಲಿ ಸ್ಟೇನಿನ ಸೈನ್ಯ ಮಣ್ಣು ಮುಕ್ಕುವಂತೆ ಮಾಡಿದ. ಅನಂತರ ಎಕ್ವಡಾರಿಗೆ ದಂಡಯಾತ್ರೆ ಕೈಗೊಂಡು ಅದನ್ನು ಕೊಲಂಬಿಯ ಗಣರಾಜ್ಯದೊಳಗೆ ಸೇರಿಸಿಕೊಂಡ. 1823ರಲ್ಲಿ ಬೊಲಿವರ್ ಪೆರುವಿನ ಸರ್ವಾಧಿಕಾರಿಯಾದ.

ಬೋಲಿವರ್ ಸೈನ್ಯ ಅಯ್ಯಾಕ್ಕೂವಿನಲ್ಲಿ ಸ್ಪೇನಿಷರನ್ನು ಸೋಲಿಸಿತು(1824). ಇದು ದಕ್ಷಿಣ ಅಮೆರಿಕದಲ್ಲಿ ಸ್ಪೇನಿನ ಆಡಳಿತವನ್ನು ಕೊನೆಗೊಳಿಸಿತು. ಮೇಲಿನ ಪೆರು ಪ್ರತ್ಯೇಕ ಪ್ರಾಂತ್ಯವಾಯಿತಲ್ಲದೆ ಬೊಲಿವರನ ಗೌರವಾರ್ಥವಾಗಿ ಬೊಲಿವೀಯ ಎಂದು ನಾಮಕರಣ ಮಾಡಲಾಯಿತು(1825). ಬೊಲಿವೀಯಕ್ಕಾಗಿ ಇವನು ಘೋಷಿಸಿದ ಸಂವಿಧಾನ ರಾಜಕೀಯವಾಗಿ ಅತ್ಯಂತ ಮಹತ್ತ್ವದ್ದು.

ದಕ್ಷಿಣ ಅಮೆರಿಕ ರಾಜ್ಯಗಳ ಒಕ್ಕೂಟ ರಚಿಸಿ ಅಮೆರಿಕದ ಸಂಯುಕ್ತ ಸಂಸ್ಥಾನಗಳೊಂದಿಗೆ ಸ್ನೇಹ ಸಂಬಂಧ ಇರಿಸಿಕೊಳ್ಳಬೇಕೆಂದು ಈತನ ಇಚ್ಛೆಯಾಗಿತ್ತು. ಆದರೆ ಅದು ಸಫಲವಾಗಲಿಲ್ಲ. ಕೊಲಂಬಿಯ ಒಕ್ಕೂಟದಿಂದ ಒಂದರ ಅನಂತರ ಇನ್ನೊಂದು ಪ್ರಾಂತ್ಯಗಳು ಹೊರಬಿದ್ದವು. 1825ರಲ್ಲಿ ಇಂದಿನ ಕೊಲಂಬಿಯವನ್ನು ಮಾತ್ರ ಬೊಲಿವರ್ ಆಳಿದ.

ಇವನ ಆಡಳಿತದ ವಿರುದ್ಧ ಅತೃಪ್ತಿ ಹೆಚ್ಚಿತು. ಬೊಗೋಟದಲ್ಲಿ ಇವನು ಕೊಲೆಯಾಗುವುದರಲ್ಲಿ ಸ್ವಲ್ಪದರಲ್ಲೇ ಪಾರಾದ 1830ರಲ್ಲಿ ಕೊಲಂಬಿಯದ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ. (ಆರ್.ಜಿ.ಎಸ್.)