ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಲಿವೀಯ

ವಿಕಿಸೋರ್ಸ್ದಿಂದ

ಬೊಲಿವೀಯ ದಕ್ಷಿಣ ಅಮೆರಿಕ ಒಂದು ಗಣರಾಜ್ಯ. ವಿಸ್ತಾರದಲ್ಲಿ ದಕ್ಷಿಣ ಅಮೆರಿಕ ಖಂಡದ ರಾಜ್ಯಗಳಲ್ಲಿ ಐದನೇಯ ಸ್ಥಾನ ಪಡೆದಿರುವ ಈ ರಾಜ್ಯವನ್ನು ಉತ್ತರ ಮತ್ತು ಪೂರ್ವದಲ್ಲಿ ಬ್ರಜಿóಲ್ ದಕ್ಷಿಣದಲ್ಲಿ ಅರ್ಜೆಂಟೀನ ಮತ್ತು ಪರಗ್ವೇ ಪಶ್ಚಿಮದಲ್ಲಿ ಪೆರು ಮತ್ತು ಚಿಲಿದೇಶಗಳು ಸುತ್ತುವರಿದಿವೆ. ಚೂಕಿ ಸಾಕ, ಕಾಚಬಾಂಬ, ಇಲ್ ಬೆನೀ, ಲಾಪಾಜ್, ಆರೋರೋ ಪಾಂಡೊ, ಪೊಟಾಸೀ, ಸಾಂತಕ್ರೂಜ್, ಟರೀಹ ಈ ಒಂಬತ್ತು ವಿಭಾಗಗಳನ್ನು ಒಳಗೊಂಡಿರುವ ಬೊಲಿವೀಯದ ವಿಸ್ತೀರ್ಣ 10,98,581 ಚದರ ಕಿಲೋಮೀಟರ್. ಜನಸಂಖ್ಯೆ 6,373,000 (1980). ಅಧಿಕೃತ ರಾಜಧಾನಿ ಸೂಕ್ರೇ. ಮುಖ್ಯ ಆಡಳಿತ ಕೇಂದ್ರ ನಗರ ಲಾ ಪಾಚ್.

ಮೇಲ್ಮೈ ಲಕ್ಷಣಗಳು: ಬೊಲಿವೀಯ ಅತ್ಯಂತ ಪ್ರಕೃತಿ ವೈಲಕ್ಷಣಗಳಿಂದ ಕೂಡಿದೆ. ದೇಶದ ವಿಸ್ತೀರ್ಣದ ಮೂರರಲ್ಲೊಂದು ಭಾಗ ಪಶ್ಚಿಮದ ಆಂಡೀಸ್ ಪರ್ವತಶ್ರೇಣಿ ಮತ್ತು ಪೀಠಭೂಮಿ ಅಲ್ಲಿ 6,400ಮೀ ಗಿಂತ ಹೆಚ್ಚಿನ ಎತ್ತರದ ಅನೇಕ ಹಿಮಾವೃತ ಶಿಖರಗಳಿವೆ. ಅವುಗಳ ಪೈಕಿ ಈಯಾಂಪೂ (6550 ಮೀ) ಸಹಾಮ (6542 ಮೀ) ಮತ್ತು ಟೊಕಾರ್ಪೂರೀ (6755 ಮೀ) ಉನ್ನತ ಶಿಖರಗಳು. ಪೂರ್ವದಲ್ಲಿರುವ ಅತಿ ತಗ್ಗಿನ ಪ್ರದೇಶ ಸಮುದ್ರ ಮಟ್ಟದಿಂದ 91 ಮೀಗಿಂತ ಎತ್ತರವಾಗಿಲ್ಲ. ಆಂಡೀಸಿನ ಪೂರ್ವ ಪಶ್ಚಿಮ ಕಾರ್ಡಿಲೆರಾಗಳ ನಡುವಣ ಪೀಠಭೂಮಿ 3,660 ರಿಂದ 4,270 ಮೀಟರ್ ಎತ್ತರವಿದೆ. ಇದಕ್ಕೆ ಆಲ್ಟಿಪ್ಲಾನೋ ಎಂದು ಹೆಸರು. ಆಂಡೀಸಿನ ಪೂರ್ವದಿಕ್ಕಿನ ಎಳಿಜಾರು ತಪ್ಪಲನ್ನು ಪರ್ವತ ನದಿಗಳು ಕೊರೆದು ಅಗಾಧ ಕೊಳ್ಳಗಳನ್ನು ನಿರ್ಮಿಸಿವೆ. ಇವುಗಳ ಪೈಕಿ ಲಾ ಪಾಜ್, ಅರೋರೋ ಅಂಥಾ ಕೊಳ್ಳಗಳನ್ನು ನಿರ್ಮಿಸಿವೆ. ಇವುಗಳ ಪೈಕಿ ಲಾ ಪಾಜ್, ಅರೋರೋ ಅಂಥಾ ಕಣಿವೆಗಳು ಜನವಸತಿಗೂ ಕೃಷಿಗೂ ಯೋಗ್ಯವಾಗುವಷ್ಟು ಅಗಲವಾಗಿವೆ. ಬೊಲಿವೀಯದ ಮೂರನೆಯ ಪ್ರಾಕೃತಿಕ ವಿಭಾಗ ಪೂರ್ವದ ತಗ್ಗು ಬಯಲು. ಅದು ದೇಶದ ಮೂರರಲ್ಲೆರಡು ಭಾಗ ವ್ಯಾಪಿಸಿದೆ.

ಪಶ್ಚಿಮ ಗಡಿಯಲ್ಲಿಯ ಟಿಟಿಕಾಕ ದಕ್ಷಿಣ ಅಮೆರಿಕದ ಅತಿದೊಡ್ಡ ಸಿಹಿನೀರಿನ ಸರೋವರ, ಇದು 3810 ಮೀ ಎತ್ತರದಲ್ಲಿದ್ದು 8,446 ಚಕಿಮೀ ವಿಸ್ತಾರವಿದೆ. ಪೆರುವಿಗೂ ಬೊಲಿವೀಯಕ್ಕೂ ಸಮಸಮವಾಗಿ ಇದು ಹಂಚಿಹೋಗಿದೆ. ಕಾಯ್ಟೊಸ್, ಕನ್ಸೆಪ್‍ಷನ್ ಮತ್ತು ಸ್ಯಾನ್‍ಲೂಯಿಸ್ ಇಲ್ಲಿಯ ಇತರ ಸರೋವರಗಳು. ಟಿಟಿಕಾಕ ಸರೋವರದಿಂದ ಹೊರಡುವ ದೇಸಾಗುವಾದೆರೋ ನದಿ ದಕ್ಷಿಣಕ್ಕೆ ಹರಿದು ಪೋಯಪೊ ಎಂಬ ಉಪ್ಪುನೀರಿನ ಸರೋವರ ಸೇರುತ್ತದೆ. ಪೋಯಪೊ ಸರೋವರ 2590 ಚಕಿಮೀ ವಿಸ್ತಾರವಿದೆ. ಇಲ್ಲಿಯ ಪೂರ್ವ ಬಯಲಿನ ನದಿಗಳೆಲ್ಲ ಉತ್ತರಕ್ಕೆ ಹರಿದು ಅಮೆಜಾನ್ ನದಿ ಸೇರುತ್ತವೆ. ಪಿಲಿಕಮಾಯೋ ನದಿ ದಕ್ಷಿಣಕ್ಕೆ ಹರಿದು ಪರಾಗ್ವೆ ಸೇರುತ್ತದೆ. ಮಾಮರೇ, ಸ್ಯಾನ್, ಮಿಗೆಲ್, ಬಿನೀ, ಮಾಡ್ರಿಡೆ ಡೀಯಾಸ್, ಬ್ಲಾಂಕೊ, ಸ್ಯಾನ್ ಮಾರ್ಟಿನ್ ಮತ್ತು ಗ್ರಾಂಡೆ ಇಲ್ಲಿಯ ಕೆಲವು ಮುಖ್ಯ ನದಿಗಳು.

ಹವಾಗುಣ: ಅಖಂಡವಾಗಿ ಉಷ್ಣವಲಯದಲ್ಲೇ ಇದ್ದರೂ ಪರ್ವತಗಳ ಕಡು ಶೀತದಿಂದ ಬಯಲಿನ ಅತ್ಯುಷ್ಣದವರೆಗಿನ ಹವಾ ವೈವಿಧ್ಯ ಇಲ್ಲಿದೆ. ಕಡಿಮೆ ಮಳೆಯ, ಚಳಿಗಾಳಿ ಬೀಸುವ, ಆಲ್ಟಿಪ್ಲಾನೋ, ಪೀಠಭೂಮಿಯಲ್ಲಿಯ ಹವೆ 20(ಅ ನಿಂದ 10(ಅ ವರೆಗೆ ವ್ಯತ್ಯಾಸಗೊಳ್ಳುತ್ತಿದ್ದರೆ ಕೆಲವು ಕಣಿವೆಗಳಲ್ಲಿ 18(ಅ ಹಿತವಾದ ಉಷ್ಣತಾಮಾನ ಇದೆ. ಪೂರ್ವದ ಬಯಲಲ್ಲಿ ಧಾರಾಕಾರ ಮಳೆ ಮತ್ತು ಬೆವರಿಳಿಸುವ ತೇವೋಷ್ಣ ಹವೆಯ ನಡುವೆ ಕಡುಚಳಿಗಾಳಿಯೂ ಇರುತ್ತದೆ. ಈ ತಗ್ಗು ಬಯಲಿನ ಆಗ್ನೇಯದ ಗ್ರಾನ್ ಚಾಕೊ ಪ್ರದೇಶದಲ್ಲಿ ಬೇಸಗೆಯಲ್ಲಿ ಕಡು ಬಿಸಿ ಒಣಹವೆ ಮತ್ತು ಚಳಿಗಾಲದಲ್ಲಿ ನೆರೆಹಾವಳಿಗೆ ತುತ್ತಾಗುವಷ್ಟು ಮಳೆ ಬರುತ್ತದೆ. ಉತ್ತರದಲ್ಲಿ ನವಂಬರ್‍ನಿಂದ ಮಾರ್ಚ್ ತಿಂಗಳತನಕ ಸರಾಸರಿ 180 ಸೆಂಮೀ ಮಳೆ ಸುರಿದರೆ ಮಧ್ಯಪ್ರದೇಶದಲ್ಲಿ 140 ಸೆಂಮೀ ದಕ್ಷಿಣದ ಚಾಕೊ ಪ್ರದೇಶದಲ್ಲಿ 51 ಸೆಂಮೀ ಬೀಳುವುದು. ಇಷ್ಟಾದರೂ ಜುಲೈಯಿಂದ ನವೆಂಬರ್ ತನಕ ಬರಗಾಲ ಪರಿಸ್ಥಿತಿ ಬರುವುದುಂಟು.

ಖನಿಜ ಸಂಪತ್ತಿನಲ್ಲಿ ಬೊಲಿವೀಯ ಇತರ ದೇಶಗಳಿಗಿಂತ ಮೇಲು. ದೇಶದ ಜನಸಂಖ್ಯೆಯ ಮೂರರಲ್ಲೆರಡು ಭಾಗ ವಾಸವಾಗಿರುವ ಆಲ್ಟಿಪ್ಲಾನೋ ಪ್ರದೇಶ ಬೆಳ್ಳಿ, ಬಂಗಾರ, ಸೀಸ, ಸತುವು, ತಾಮ್ರ, ತವರ, ಟಿಂಗ್‍ಸ್ಟನ್, ಗಂಧಕ, ಆಂಟಿಮನಿ ಮೊದಲಾದ ಖನಿಜಗಳನ್ನೊಳಗೊಂಡಿದೆ. ದೇಶದ ಆಗ್ನೇಯಭಾಗದಲ್ಲಿ ಮತ್ತು ಚಾಕೋ ಹಾಗೂ ಸಾಂತಾ ಕ್ರೋಜ್ ಈ ಪ್ರದೇಶಗಳಲ್ಲಿ ಪೆಟ್ರೋಲಿಯಮ್ ದೊರೆಯುತ್ತದೆ.

ಆಲ್ಟಿಪ್ಲಾನೋ ಭಾಗದಲ್ಲಿ ಬಹುತರ ಕುರುಚಲು ಪೊದೆ ಹುಲ್ಲು, ಬೆಳೆಸಿದ ನೀಲಗಿರಿ ತೋಪುಗಳು ಮಾತ್ರ ಕಾಣ ಬರುವುವು. ಈಶಾನ್ಯದ ನದೀತೀರಗಳಲ್ಲಿ ದಟ್ಟ ಉಷ್ಣವಲಯಾರಣ್ಯಗಳಿವೆ. ಈ ಪ್ರದೇಶದಲ್ಲಿ ಮೆಹಗನಿ, ಸಿಡಾರ್ ಇತ್ಯಾದಿ ಗಟ್ಟಿಮರಗಳೂ ಕ್ವೆನೈನ್ ಕೊಡುವ ಕ್ವಿನಾಮರಗಳೂ ತಾಳೆಜಾತಿಯ ವೃಕ್ಷಗಳೂ ಸಮೃಧ್ಧವಾಗಿವೆ. ದೇಶದ ಶೇಕಡಾ 40 ಭಾಗ ಆವರಿಸಿರುವ ಇಲ್ಲಿಯ ಕಾಡುಗಳಲ್ಲಿ 2000 ಜಾತಿಯ ವಿವಿಧ ವೃಕ್ಷಸಂಪತ್ತಿದೆ. ರಬ್ಬರ್ ಇಲ್ಲಿಯ ಅರಣ್ಯೋತ್ಪನ್ನಗಳಲ್ಲಿ ಮುಖ್ಯವಾದದ್ದು. ಅಲ್ಪಾಕಾ, ಲಾಮಾ, ವಿಕುನ ಮೊದಲಾದ ಸ್ಥಳೀಯ ಪ್ರಾಣಿಗಳು ಇಲ್ಲಿಯ ಜನರಿಗೆ ಉಣ್ಣಿ ಮತ್ತು ಮಾಂಸ ಒದಗಿಸುತ್ತಿದ್ದರೂ ಈಚೆಗೆ ದನಕರು, ಆಡುಕುರಿ ಬಯಲುಭಾಗದಲ್ಲಿ ಹಂದಿ ಮೊದಲಾದವುಗಳ ಸಾಕಣೆಯುಂಟು. ಉನ್ನತ ಪರ್ವತಗಳಲ್ಲಿ ಗರುಡ, ಕ್ಯಾಂಡರ್ ಪಕ್ಷಿಗಳೂ ಬಯಲು ಪ್ರದೇಶದಲ್ಲಿ ಮಂಗ ಜ್ವಾಂಗರ್ ಪೂಮಾ ಜಿಂಕೆ ಮೊದಲಾದ ಮೃಗಗಳೂ ಬಗೆಬಗೆಯ ಉರಗಗಳೂ ಬಣ್ಣ ಬಣ್ಣದ ಗಿಳಿ ಪಾರಿವಾಳ ನೀರುಕೋಳಿ ಹಾರಲಾರದ ರಿಯಾ ಪಕ್ಷಿಗಳೂ ಇವೆ.

ಆರ್ಥಿಕ: ಬೊಲಿವೀಯದಲ್ಲಿ ಶೇಕಡಾ 70 ಜನ ಕೃಷಿ ಅವಲಂಬಿತರು. 1952ರ ಕ್ರಾಂತಿಯ ತರುವಾಯ ದೊಡ್ಡ ಹಿಡುವಳಿಗಳನ್ನೆಲ್ಲ ಒಡೆದು ಹಂಚಿದ್ದರೂ ಅನೇಕ ರೈತರ ಹಿಡುವಳಿಗಳು ಆರ್ಥಿಕವಾಗಿ ಲಾಭದಾಯಕವಾಗಿಲ್ಲ. ಟಿಟಿಕಾಕ ಸರೋವರದ ತೀರದಲ್ಲಿ ಮೆಕ್ಕೆಜೋಳ, ಆಲ್ಟಿಪ್ಲಾನೋವಿನ ಇತರ ಭಾಗಗಳಲ್ಲಿ ಬಟಾಟೆ ಕಾಫಿ, ಕೋಕ, ಬಾರ್ಲಿ, ಕಣಿವೆಗಳಲ್ಲಿ ಗೋದಿ, ಬಯಲುನಾಡಿನಲ್ಲಿ ಮುಖ್ಯವಾಗಿ ಬತ್ತ ಬೆಳೆಸುತ್ತಾರೆ. ಕಬ್ಬು, ಹತ್ತಿ, ವಾಣಿಜ್ಯ ಬೆಳೆಗಳು, ಈಚೆಗೆ ಮಾಂಸಕ್ಕಾಗಿ ಬಯಲು ನಾಡಿನಲ್ಲಿ ದನಕರುಗಳನ್ನು ಸಾಕುತ್ತಿರುವುದರಿಂದ ಮಾಂಸಕ್ಕಾಗಿ ಅರ್ಜೆಂಟೇನದ ಅವಲಂಬನೆ ತಪ್ಪಿದೆ. ಕ್ವಿನಾ ಇಂಬ ಧಾನ್ಯ ಮತ್ತು ಆಲೂಗೆಡ್ಡೆ ಇಲ್ಲಿಯ ಮುಖ್ಯ ಆಹಾರ. ಹೆಚ್ಚಿನ ಆಹಾರೋತ್ಪಾದನೆ ಅಂತರಿಕ ಬಳಕೆಗೇ ವಿನಿಯೋಗವಾದರೂ ಜನತೆಯ ತಲಾ ಆಹಾರ ಬಳಕೆ ತೃಪ್ತಿಕರವಾಗಿಲ್ಲ.

ಬೊಲಿವೀಯ ಸರ್ಕಾರ 1952ರಲ್ಲಿ ಕೆಲವು ಮುಖ್ಯ ಗಣಿ ಉದ್ಯಮವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇತ್ತೀಚೆಗೆ ಗಣಿ ಉದ್ಯಮದಲ್ಲಿ ಬೆಳ್ಳಿಯ ಉತ್ಪಾದನೆ ತೀರ ಕುಗ್ಗಿದೆ. ಆದರೆ ತವರದಲ್ಲಿ ಬೊಲೊವೀಯ ಮಲಯದ ಅನಂತರ ಅತಿ ಮುಖ್ಯ ದೇಶವಾಗಿದೆ [ಸುಮಾರು 15000 ಮೆ. ಟನ್. (1975) ಆಂಟಿಮನಿ ತಾಮ್ರ, ಸೀನ ಸತುವು, ಟಂಗ್‍ಸ್ಟನ್. ಚಿನ್ನ ಇತ್ಯಾದಿ ಲೋಹಗಳ ಉತ್ಪಾದನೆ ತಚರದ ಉತ್ಪಾದನೆಯಲ್ಲಿ ಬೊಲಿವೀಯ ಶೇಕಡಾ 13 ಭಾಗವನ್ನು ಉತ್ಪಾದಿಸುತ್ತಿದೆ.

1929ರಲ್ಲಿ ಆಗ್ನೇಯ ಬೊಲಿವೀಯದಲ್ಲಿ ಅಲ್ಪ ಪ್ರಮಾಣದ ತೈಲ ನಿಕ್ಷೇಪವಿರುವುದನ್ನು ಸ್ಟಾಂಡರ್ಡ್ ಆಯಿಲ್ ಕಂಪನಿಯೂ ಅನಂತರ ಹೆಚ್ಚು ಸಮೃದ್ಧವಾದ ತೈಲ ನಿಕ್ಷೇಪವನ್ನು ಸಾಂತಾಕ್ರೋಜ್ ಪ್ರದೇಶದಲ್ಲಿ ಗಲ್ ಕಂಪನಿಯೂ ಪತ್ತೆ ಹಚ್ಚಿದುವು. ಈಗ ತೈಲೋದ್ಯಮವೂ ರಾಷ್ಟ್ರೀಕೃತವಾಗಿದ್ದು ಬೋಲಿವೀಯ ತೈಲನಿರ್ಯಾತ ರಾಷ್ಟ್ರಗಳಸಾಲಿನಲ್ಲಿದೆ. ನೈಸರ್ಗಿಕ ಅನಿಲವನ್ನೂ ಅದು ಅರ್ಜೆಂಟೀನಕ್ಕೆ ಒದಗಿಸುತ್ತಿದೆ.

ಶೇಕಡಾ 43ರಷ್ಟು ಅರಣ್ಯಪ್ರದೇಶವುಳ್ಳ ಈ ದೇಶದಲ್ಲಿ ಬೆಲೆ ಬಾಳುವ ನಾಟಿ ಮರಗಳಿದ್ದರೂ ಆ ಪ್ರದೇಶಗಳು ದುರ್ಗಮವೂ ಬಂದರುಗಳಿಗೆ ಬಲುದೂರವೂ ಆಗಿರುವುದರಿಂದ ಆ ಸಂಪನ್ಮೂಲವನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿಲ್ಲ. ಬೊಲಿವೀಯದ ಒಟ್ಟು ವಿದ್ಯುದುತ್ಪಾದನೆ (1973) 90,30,000 ಕಿಲೊವ್ಯಾಟ್ ಗಂಟೆ. ಇದರಲ್ಲಿ ಶೇಕಡಾ 80ರಷ್ಟು ಜಲ ವಿದ್ಯುತ್. ರಾಜಕೀಯ ಅಸ್ತಿರತೆ, ಬಂಡವಾಳದ ಕೊರತೆ ಬೊಲಿವೀಯದ ಸಂಪದಭಿವೃದ್ಧಿಗೆ ಅಡ್ಡವಾಗಿವೆ. ರಪ್ತು ವ್ಯಾಪಾರದ ಆಭಿವೃದ್ಧಿಗಳು ವೇಗಗೊಂಡಿವೆ. ಆದರೂ ಈ ದೇಶದಲ್ಲಿ ಕಬ್ಬಿಣ, ಉಕ್ಕು ಮತ್ತು ವಿದ್ಯುದಭಾವದಿಂದಾಗಿ ಕೈಗಾರಿಕಾ ಪ್ರಗತಿಯಾಗಿಲ್ಲ. ರಫ್ತಿನಲ್ಲಿ ಶೇಕಡಾ 80 ಭಾಗ ತವರವಿದ್ದು ಶೇಕಡಾ 17 ಭಾಗ ತಾಮ್ರ ಮತ್ತು ಸತುವು ಲೋಹಗಳು. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಗ್ರೇಟ್ ಬ್ರಿಟನ್ ಬೊಲಿವೀಯದ ಮುಖ್ಯ ಸರಬರಾಜು ದೇಶಗಳು. ಬೊಲಿವೀಯ ಹತ್ತಿ, ಆಹಾರ ವಸ್ತುಗಳು ಯಂತ್ರಗಳು ಮೋಟಾರು ವಾಹನಗಳು, ಉಣ್ಣೆ ಮತ್ತು ಮರ ಇವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಅರ್ಧಭಾಗ ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಬರುತ್ತದೆ.

ಬೊಲಿವೀಯದಲ್ಲಿ ಸರಕುಸಾಗಣೆ ಮತ್ತು ಸಂಪರ್ಕ ಒಂದು ದೊಡ್ಡ ಸಮಸ್ಯೆ. ಕಾರಣ ದೇಶದ ಮುಕ್ಕಾಲು ಒರಟಾದ ಆಂಡೀಸ್ ಪರ್ವತ ಸ್ತೋಮಗಳು ಆವರಿಸಿಕೊಂಡಿವೆ. ಸುಮಾರು 11,000 ಕಿಮೀ ಹೆದ್ದಾರಿ ಇದ್ದು 17,700 ಕಿಮೀ ಮಣ್ಣಿನ ಒಳರಸ್ತೆಗಳಿವೆ. ಸುಮಾರು 2740 ಕಿಮೀ ರೈಲು ದಾರಿಯಿದ್ದು ರಾಜ್ಯದ ಮುಖ್ಯ ನಗರಗಳ ಸಂಪರ್ಕದ ಜೊತೆಗೆ ಇವು ಅರ್ಜೆಂಟೀನ, ಚಿಲಿ, ಬ್ರಜಿಲ್ ಮತ್ತು ಪೆರು ದೇಶಗಳ ಬಂದರುಗಳ ಸಂಪರ್ಕವನ್ನೂ ಸಾಧಿಸಿವೆ. ತೀರ ಪ್ರದೇಶವೇ ಇಲ್ಲದ ಈ ದೇಶಕ್ಕೆ ಚಿಲಿಯ ಅರೀಕಾ ಮತ್ತು ಅಂತೋಫಾಗಾಸ್ತಾ ಬಂದರುಗಳಿಗೆ ರೈಲು ಮೂಲಕ ಮುಕ್ತ ಪ್ರವೇಶದ ಹಕ್ಕೂ ಇದೆ. ನದಿಗಳ ಮೂಲಕ ಸುಮಾರು 19,300 ಕಿಮೀ ದೂರದ ಜಲಮಾರ್ಗ ಈ ದೇಶಕ್ಕೆ ಲಭ್ಯವಿದೆ. ರೈಲು, ರಸ್ತೆಯ ಸಂಪರ್ಕಗಳಿಲ್ಲದ ಕಡೆಗಳಿಗೆ ವಿಮಾನ ಸಂಪರ್ಕ ಸಾಕಷ್ಟು ಇದೆ. ಆಕಾಶವಾಣಿ ಕೇಂದ್ರಗಳೂ ಪತ್ರಿಕೆಗಳೂ ಅಂಚೆ, ತಂತಿ, ದೂರವಾಣಿ ಸಂಪರ್ಕ ಸಾಧನಗಳು ಇವೆ.

ಜನಾಂಗ, ಸಂಸ್ಕøತಿ : ಬೊಲಿವೀಯದಲ್ಲಿ ಶೇಕಡಾ 15 ಮಂದಿ ಮಾತ್ರ ಬಿಳಿಯರು. ಅರ್ಧಕ್ಕಿಂತ ಹೆಚ್ಚಿನವರು ಮೂಲನಿವಾಸಿ ಇಂಡಿಯನ್ನರು. ಉಳಿದವರು ಮಿಶ್ರಕುಲದವರು. ಬಹುಸಂಖ್ಯ ಕೆತೋಲಿಕ್ ಕ್ರೈಸ್ತ ಧರ್ಮೀಯರ ಅಧಿಕೃತ ಭಾಷೆ ಸ್ಪ್ಯಾನಿಷ್. ಆದರೆ ಅದನ್ನಾಡುವವರು ಶೇಕಡಾ 30ಕ್ಕಿಂತ ಹೆಚ್ಚಿಲ್ಲ. ಇಂಡಿಯನ್ ಭಾಷೆಗಳಾದ ಐಮರಾ ಮತ್ತು ಕೈಚುವಾವ್ಯವಹಾರದಲ್ಲಿ ಸರ್ವ ವ್ಯಾಪಿಯಾಗಿವೆ.

ಯೂರೋಪಿಯನ್ನರ ಪ್ರದೇಶಕ್ಕೆ ಮೊದಲೇ ಬಲು ಸಂಕೀರ್ಣವಾದ ಬೆಳ್ಳಿ ಬಂಗಾರದ ಕುಸುರಿ ಕೆಲಸದಲ್ಲಿ ಪ್ರವೀಣರಾಗಿದ್ದ ಮೂಲನಿವಾಸಿಗಳು ಇಂದಿಗೂ ಕುಂಭಕಲೆ, ಉಣ್ಣೆ, ನೇಯ್ಗೆ, ತಲೆಯುಡುಗೆ ಮೈಯುಡುಗೆಗಳ ವಿನ್ಯಾಸಗಳಿಂದ ತಮ್ಮ ಕಲಾವಂತಿಕೆಯನ್ನು ಪ್ರದರ್ಶಿಸುತ್ತಾರೆ. ಕ್ರಿಸ್ತಪೂರ್ವದ ತಿಯಾಹುವಾನೋ ಸಂಸ್ಕøತಿಯ ವಾಸ್ತುರಚನೆಗಳು ಇಂದಿನ ಚಿತ್ರಕಲೆಯ ಮೇಲೆ ಪ್ರಭಾವ ಬೀರಿವೆ.

ಬೊಲಿವೀಯದ ಸಾಹಿತ್ಯ (ಸ್ಪಾನಿಷ್) ಕಳೆದ ಒಂದೂವರೆ ಶತಮಾನದ ಬೆಳವಣಿಗೆ. ಅರ್ಥವತ್ತಾದ ಸಾಹಿತ್ಯ ರಚನೆ ಕಳೆದ ಶತಮಾನಾಂತ್ಯದಿಂದ ತಾನೇ ಬರತೊಡಗಿದೆ. ಆಗ ಬರೆತೊಡಗಿದವರಲ್ಲಿ ಫ್ರಾನ್ಸ್ ತಯಾಮೋ ಬೊಲಿವೀಯದ ಅತಿ ಶ್ರೇಷ್ಠ ಕವಿ. ಜೇಮ್ಸ್ ಮಂಡೋಸಾನನ್ನು ಮಹತ್ತ್ವದ ಕಾದಂಬರಿ ಕಾರನೆಂದು ಪರಿಗಣಿಸಲಾಗಿದೆ. ಇಂಥ ಕೆಲವೆ ಪ್ರತಿಭಾಶಾಲಿಗಳನ್ನು ಬಿಟ್ಟರೆ ಬೊಲಿವೀಯನ್ ಸಾಹಿತ್ಯ ಇನ್ನೂ ಬಾಲ್ಯಾವಸ್ಥೆಯಲ್ಲಿದೆ ಎನ್ನಬಹುದು.

ಲಾ ಪಾಜ್ ರಾಜಕೀಯಕ್ಕೆ ಹೇಗೊ ಹಾಗೆಯೆ ಸಂಸ್ಕøತಿಗೂ ಕೇಂದ್ರ. ಅಲ್ಲಿ ಪುರಾತತ್ವ ಸಂಘ, ರಾಷ್ಟ್ರೀಯ ಮ್ಯೂಜಿಯಮ್, ಲಲಿತ ಕಲಾ ಅಕಾಡಮಿ ಮೊದಲಾದ ಸಾಂಸ್ಕøತಿಕ ಸಂಸ್ಥೆಗಳಿವೆ, ಪ್ರಮುಖ ಪಟ್ಟಣಗಳಲ್ಲಿ ಹಲವಾರು ಉತ್ತಮ ಖಾಸಗಿ ಪುರಾತತ್ವ ಹಾಗೂ ಕಲಾವಸ್ತು ಸಂಗ್ರಹಾಲಯಗಳುಂಟು.

ದೇಶದ ಶೇಕಡಾ 30ಕ್ಕೂ ಹೆಚ್ಚು ಜನಸಂಖ್ಯೆ ನಗರಗಳಲ್ಲಿ ಕೇಂದ್ರೀಕೃತವಾಗಿದೆ. ರಾಜಧಾನಿ ಲಾ ಪಾಜ್ ಜಗತ್ತಿನಲ್ಲಿಯೇ ಅತಿ ಎತ್ತರದ ರಾಜಧಾನಿಯಾಗಿದೆ (3,660 ಮೀಟರ್). 7ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಕಾನೂನು ಇದ್ದರೂ ಸಾಕ್ಷರರ ಪ್ರಮಾಣ ಶೇಕಡಾ 39.8 (1975). ಓದು ಬರಹ ಬರದ 21ವರ್ಷದ ಕೆಳಗಿರುವವರೂ ಶಾಲೆಗೆ ಹೋಗಬೇಕೆಂಬ ನಿಯಮವಿದೆ. ಸೂಕ್ರೇಯಲ್ಲಿ 1624ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವಿದೆ. (ಪಿ.ವಿ.ಎ.) ಇತಿಹಾಸ : ಬೊಲಿವೀಯದ ಟಿಟಿಕಾರ ಸರೋವರದ ತೀರದ ಟೀವಾನಾಕೋ ಪ್ರದೇಶದಲ್ಲಿ ದೊರಕಿದ ಏಕಶಿಲಾವಸ್ತು ಇತರ ಪುರಾತತ್ವ ಅವಶೇಷಗಳಿಂದ ಇಲ್ಲಿ ಕ್ರಿಸ್ತಪೂರ್ವದಲ್ಲೇ ನಾಗರಿಕತೆ ಇದ್ದು ಕ್ರಿ.ಶ. 100-600ರ ನಡುವೆ ಅದು ಉನ್ನತ ಶಿಖರಕ್ಕೇರಿದಂತೆ ತಿಳಿದು ಬರುತ್ತದೆ. ಈಗಿನ ಐಮಾರಿ ಜನಾಂಗದ ಪೂರ್ವಜರು ಅದರ ಕರ್ತರಿರಬೇಕೆಂದೂ 13ನೆಯ ಶತಮಾನದಲ್ಲಿ ಉತ್ತರದಿಂದ ಇಂಕಾ ನಾಗರಿಕತೆಯ ಜನರು ದಂಡೆತ್ತಿ ಬುದು ಹಳಬರನ್ನು ಸೋಲಿಸಿ ತಮ್ಮ ಭಾಷೆ, ರಾಜ್ಯಾಡಳಿತ ನೀರಾವರಿ ಪದ್ಧತಿಗಳನ್ನು ತಂದು ಎರಡು ಶತಮಾನಗಳಲ್ಲಿ ನಾಡಿನ ರೂಪವನ್ನೇ ಬದಲಿಸಿದರೆಂದೂ ಹೇಳಲಾಗಿದೆ. ಅವರು ಮೊದಲು ಪ್ರಸ್ಥಭೂಮಿ ಆಕ್ರಮಿಸಿ ಆನಂತರ ಸುತ್ತಲ ಪರ್ವತ ಪ್ರದೇಶಗಳನ್ನು ತಮ್ಮ ವಶಪಡಿಸಿಕೊಂಡರು. 1533 ರಲ್ಲಿ ಫ್ರಾನ್ಸಿಸ್ಕೋ ಪಿಜಾರೋ ನೇತೃತ್ವದಲ್ಲಿ ಸ್ಪಾನಿಶ್ ದಾಳಿಗಾರರು ಪೆರುವಿನ ಇಂಕಾ ಸಾಮ್ರಾಜ್ಯವನ್ನು ನಾಶಮಾಡಿ ಬೊಲಿವೀಯವನ್ನು ಆಕ್ರಮಿಸಿಗೊಂಡರು. ಇಲ್ಲಿಯ ಪರ್ವತ ಪ್ರದೇಶದಲ್ಲಿ ಬೆಳ್ಳಿ ನಿಕ್ಷೇಪವನ್ನು ಕಂಡ ಅವರು ಹತ್ತಿರವೇ ಲಾಪ್ಲಾಜಾ ಎಂಬ ಪಟ್ಟಣ ಸ್ಥಾಪಿಸಿ ಗಣಿ ಪ್ರಾರಂಭಿಸಿದರು. 16ನೆಯ ಶತಮಾನದಲ್ಲಿ ಆಲ್ಪಿಪ್ಲಾನೇ ಪ್ರದೇಶದಲ್ಲಿ ಬೆಳ್ಳಿಯ ಬೆಟ್ಟವನ್ನೇ ಕಂಡು ಅಲ್ಲಿ ಚಟುವಟಿಕೆ ಆರಂಭಿಸಿದರು. ಗಣಿ ಕೆಲಸಕ್ಕೆ ಆಫ್ರಿಕದಿಂದ ಗುಲಾಮರನ್ನು ತಂದರು. ಆಗಿನ ಗಣಿ ಪಟ್ಟಣ ಪೊಟಾಸೀ 1650ರ ಸುಮಾರಿಗೆ ಉಭಯ ಅಮೆರಿಕಗಳಲ್ಲೇ ಅತಿ ದೊಡ್ಡ ಪಟ್ಟಣವಾಗಿತ್ತು. ಇಲ್ಲಿಂದ ಹಡಗುಗಟ್ಟಲೆ ಬೆಳ್ಳಿ ಯೂರೋಪಿಗೆ ಸಾಗಿತು. ಶತಮಾನದ ಕೊನೆಯೊಳಗೆ ಬೆಳ್ಳಿ ಬೆಟ್ಟ ಖಾಲಿಯಾಗುತ್ತ ಜನವಸತಿ, ವಾಣಿಜ್ಯ ಕೇಂದ್ರವಾಗಿದ್ದ ಲಾ ಪ್ಲಾಜ್ ಕಡೆ ಹೊರಳಿತು. ಬೊಲಿವೀಯಕ್ಕೆ ಆಗ ಮೇಲಣ ಪೆರುವೆಂದು ಹೆಸರಿತ್ತು.

ಮೂಲನಿವಾಸಿಗಳನ್ನು ಗಣಿಗಳಲ್ಲಿಯೂ ಜವಳಿ ಗಿರಣಿಗಳಲ್ಲಿಯೂ ಗಿಲಾಮರಂತೆ ದುಡಿಸುತ್ತಿದ್ದ ಸ್ಪಾನಿಷ್ ದಬ್ಬಾಳಿಕೆಗೆ ಬೇಸತ್ತು ಅಲ್ಲಿಯ ಜನ 17-18ನೆಯ ಶತಮಾನಗಳಲ್ಲಿ ಆಗಾಗ್ಗೆ ದಂಗೆಯೇಳುತ್ತಲೇ ಇದ್ದರು. ಆದರೆ ಅವರನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿತ್ತು. ಅನಂತರ ಸ್ಪಾನಿಶ್ ಮೂಲದವರಿಂದಲೇ ಸ್ವಾತಂತ್ರ್ಯ ಸಮರ ಪ್ರಾರಂಭವಾಯಿತು. ಇದಕ್ಕೆ ಸೂಕ್ರೇ ವಿಶ್ವವಿದ್ಯಾಲಯದಿಂದ ಪ್ರೇರಣೆ ಬರುತ್ತಿತ್ತು. 1809ರಲ್ಲಿ ಪೆದ್ರೊ ದೊಮಿಂಗೊ ಮ್ಯುರಿಲೊ ನೇತೃತ್ವದಲ್ಲಿ ನಡೆದ ಆಯಶಸ್ವಿ ಸಶಸ್ತ್ರ ಬಂಡಾಯದ ತರುವಾಯ ಮ್ಯುರಿಲೋನನ್ನು ಹಿಡಿದು ಗಲ್ಲಿಗೇರಿಸಲಾಯಿತು.

ಇಷ್ಟು ಹೊತ್ತಿಗೆ ದಕ್ಷಿಣ ಅಮೆರಿಕದ ಹೆಚ್ಚುಭಾಗ ಸ್ಪಾನಿಷ್ ನೊಗದಿಂದ ಮುಕ್ತವಾಗಿತ್ತು. ಕೊನೆಗೆ ವೆನಿಜೆóೀಲದ ಬೊಲಿವರ್ ಸೈಮನ್ ಮತ್ತು ಮುಕ್ತಗೊಳಿಸಿದುವು (1824). ಇವರಿಬ್ಬರ ನೆನಪಿಗಾಗಿ ದೇಶಕ್ಕೆ ಬೊಲಿವೀಯ ಎಂದೂ ರಾಜಧಾನಿಗೆ ಸೂಕ್ರೇ ಎಂದೂ ಪುನರ್ನಾಮಕರಣ ಮಾಡಲಾಯಿತು.

ಬೊಲಿವೀಯಕ್ಕೊಂದು ಸಂವಿಧಾನವನ್ನು ಬೊಲಿವರ್ ಸೈಮನ್ 1825ರಲ್ಲಿ ರಚಿಸಿಕೊಟ್ಟು ಹೊರಟುಹೋದ. ಜೋಸ್ ಸೂಕ್ರೇಯನ್ನು ಪ್ರಥಮ ಅಧ್ಯಕ್ಷನ್ನಾಗಿ ಆರಿಸಲಾಯಿತು (1826). ಆದರೆ ಅಂದಿನಿಂದಲೂ ಬೊಲಿವೀಯ ರಾಜಕೀಯ ಯುದ್ಧಗಳಿಂದ ಬಳಲುತ್ತ ಬಂದಿದೆ. ಸ್ವಾತಂತ್ರ್ಯವೀರ ಸೂಕ್ರೇಯನ್ನೇ ಅವಧಿ ಮುಗಿಯುವುದರೊಳಗೆ ಪದಚ್ಯುತಗೊಳಿಸಲಾಯಿತು. ಎರಡನೆಯ ಅಧ್ಯಕ್ಷ ಜನರಲ್ ಆಂದ್ರೆಸ್ ಸಾಂತ ಕ್ರೂಚ್ 1828ರಲ್ಲಿ ಅಧ್ಯಕ್ಷನಾದ. ಈತ 10 ವರ್ಷ ಆಳಿದರೂ ನೆರೆಯ ಚಿಲಿಯೊಡನೆ ಮಾಡಿದ ವಿಫಲ ಯುದ್ಧದ ದೆಸೆಯಿಂದ ದೇಶಭ್ರಷ್ಟನಾಗಬೇಕಾಯಿತು. ಅನಂತರ ಅಲ್ಲಿ ಅಧ್ಯಕ್ಷ ಪದಚ್ಯುತಿ, ಪಿತೂರಿಗಳು ಸಾಧಾರಣದ ಮಾತಾದವು. 1864ರ ಯುದ್ಧದ ಅನಂತರ ಬೊಲಿವೀಯದ ಕೆಲ ಪ್ರದೇಶಗಳನ್ನು ಬ್ರಜಿಲ್ ಮತ್ತು ಚಿಲಿ ಕಸಿದುಕೊಂಡವು. 1879ರಲ್ಲಿ ಚಿಲಿಯ ಹಕ್ಕುಗಳನ್ನು ಧಿಕ್ಕರಿಸಿ ಬೊಲಿವೀಯ ಅತಕಾಮಾದ ಸಮೃದ್ದ ನೈಟ್ರೇಟ್ ನಿಕ್ಷೇಪವನ್ನು ವಶಪಡಿಸಿಕೊಳ್ಳುವ ದುಸ್ಸಾಹಸಕ್ಕಿಳಿದ ಪರಿಣಾಮವಾಗಿ ಆ ದೇಶದೊಡನೆ ಏರ್ಪಟ್ಟ ಸಮರದಲ್ಲಿ ತನ್ನ ಇಡೀ ಕರಾವಳಿ ಪ್ರದೇಶವನ್ನೇ ಬಿಟ್ಟು ಕೊಡಬೇಕಾಯಿತು. ಅದನ್ನು ಮರಳಿ ಪಡೆಯುವ ಎಲ್ಲ ಪ್ರಯತ್ನಗಳು ವ್ಯರ್ಥವಾಗಿವೆ. 1903ರಲ್ಲಿ ಈಶಾನ್ಯದ ರಬ್ಬರ್ ಪ್ರದೇಶಗಳನ್ನೂ ಆರು ವರ್ಷಗಳ ವಿನಾಶಕ ಯುದ್ಧಾಂತ್ಯದಲ್ಲಿ ಆಗ್ನೇಯದ ಗ್ರಾನ್ ಚಾಕೋವಿನಲ್ಲಿ ಪರಗ್ವೇ ನದೀ ಪ್ರದೇಶವನ್ನೂ ಅದು ಕಳೆದುಕೊಂಡಿತು. ಇಸ್ಮೇಲ್ ಮಾಂಟೆಸ್ 1904-9 ಮತ್ತು 1913-17ರಲ್ಲಿ ಎರಡು ಬಾರಿ ಅಧ್ಯಕ್ಷನಾಗಿದ್ದ. ಈತನ ಕಾಲದಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾದುವು. ಗಣಿ ಉದ್ಯಮ ಬೆಳೆಯಿತು. ಹೊಸರೈಲು ಮಾರ್ಗಗಳನ್ನು ನಿರ್ಮಿಸಲಾಯಿತು. ಬೊಲಿವೀಯ ಮೊದಲನೆಯ ಮಹಾಯುದ್ಧದಲ್ಲಿ ತಟಸ್ಥವಾಗಿತ್ತು. ಈ ಮಧ್ಯೆ ಗಡಿವಿವಾದದಿಂದಾಗಿ ಪರಗ್ವೇ ಜೊತೆಯಲ್ಲಿ 1932ರಿಂದ 35ರ ತನಕ ಯುದ್ಧ ಮಾಡಿ ಸೋತಿತು. 1938ರಲ್ಲಿ ಆದ ಒಪ್ಪಂದದಿಂದಾಗಿ ಬೊಲಿವೀಯ 23,7800 ಕಿಮಿ. ಭೂ ಪ್ರದೇಶವನ್ನು ಪರಗ್ವೇಗೆ ಬಿಟ್ಟುಕೊಡಬೇಕಾಯಿತು. 1935ರಿಂದ 1952ರ ಮಧ್ಯೆ ಆನೇಕ ಕ್ರಾಂತಿಗಳಾದುವು. ಸರ್ಕಾರಗಳು ಬದಲಾದುವು. ಈ ಮಧ್ಯೆ 1945ರಲ್ಲಿ ಬೊಲಿವೀಯ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು.

ಶತಮಾನದ ಸ್ವಾತಂತ್ರ್ಯಾನಂತರವೂ ಮೂಲನಿವಾಸಿ ಮತ್ತು ಮಿಶ್ರವರ್ಣೀಯ ಬಹು ಸಂಖ್ಯಾತರ ಹಕ್ಕುಗಳನ್ನು ಅಲಕ್ಷಿಸಿದ್ದರಿಂದ ಗಣಿ ಕಾರ್ಮಿಕರು ಸಾರ್ಮತ್ರಿಕ ಮುಷ್ಕರ ಹೂಡಿದ ಫಲವಾಗಿ 1952ರಲ್ಲಿ ಕ್ರಾಂತಿಯಾಯಿತು. ಅದರಲ್ಲಿ ಅಧಿಕಾರಕ್ಕೆ ಬಂದ ಅಧ್ಯಕ್ಷ ಫಾಜ್ ಎಸ್ಟೆನ್‍ಸೊರೋ ಪ್ರತಿಗಾಮಿಗಳ ಕೈಗೊಂಬೆಯಾಗಿದ್ದ. ಸೈನ್ಯದ ಅಧಿಕಾರಗಳನ್ನು ಮೊಟಕುಗೊಳಿಸಿ, ಪ್ರಮುಖ ಗಣಿಗಳನ್ನು ರಾಷ್ಟ್ರೀಕರಿಸಿದ. ದೊಡ್ಡ ಎಸ್ಟೇಟುಗಳನ್ನು ಒಡೆದು ರೈತರು ಹಂಚಿಕೊಂಡರು. ಮೂಲನಿವಾಸಿಗಳಿಗೆ ನಿಜವಾದ ಸ್ವಾತಂತ್ರ್ಯ ಬಂದಂತಾಯಿತು. ಆದರೆ ರಾಜಕೀಯ ಒಳಸಂಚಿನ ಛಾಳಿ ಹೋಗಲಿಲ್ಲ. 1964ರಲ್ಲಿ ಒಂದು ಕ್ರಾಂತಿಕಾರಿ ಗುಂಪು ಫಾಜ್ ಎಸ್ಟೇನ್‍ಸೊರೋವನ್ನು ಪದಚ್ಯುತಗೊಳಿಸಿತು. 1966ರಲ್ಲಿ ಚುನಾವಣೆ ನಡೆದು ಕ್ರಾಂತಿಕಾರಿ ನಾಯಕ ಅಧ್ಯಕ್ಷನಾದ. 1967ರಲ್ಲಿ ಬೋಲಿವೀಯ ಸೈನಿಕರು ಗೆರಿಲ್ಲಾದಳದ ನಾಯಕ ಚೆಗುಪೆರಾನನ್ನು ಕೊಂದಿತು. ಮುಂದೆ ಸೈನಿಕ ಅಧಿಕಾರಿಗಳ ಕ್ರಾಂತಿಯಿಂದಾಗಿ ಸರ್ಕಾರ ಬದಲಾಗುತ್ತ ನಡೆಯಿತು. 1971ರಲ್ಲಿ ಕರ್ನಲ್ ಹ್ಯೂಗೊ ಬ್ಯಾಂಜರ್ ಸಾರೆಜ್ ಅಧ್ಯಕ್ಷನಾದ. ದೇಶದ ಸ್ವಾತಂತ್ರ್ಯ ಬಂದ 146 ವರ್ಷಗಳಲ್ಲಿ ಈತ 58ನೆಯ ಅಧ್ಯಕ್ಷ. 1981ರಲ್ಲಿ ಸೆಲ್ಸೊ ಟಾರಿಲಿಯಾವಿಲ ಅಧ್ಯಕ್ಷನಾದರೂ ಬೊಲಿವೀಯ ಇದುವರೆಗೂ ಒಂದು ಭದ್ರ ರಾಜಕೀಯ ತಳಹದಿ ಕಂಡಿಲ್ಲ. (ಪಿ.ವಿ.ಎ.)