ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊವೆ, ಡೇನಿಯಲ್

ವಿಕಿಸೋರ್ಸ್ದಿಂದ

ಬೊವೆ, ಡೇನಿಯಲ್ 1907. ಸ್ವಿಟ್ಸರ್ಲೆಂಡಿನಲ್ಲಿ ಫ್ರೆಂಚ್ ದಂಪತಿಗಳಿಗೆ ಜನಿಸಿ ಇಟಲಿಯಲ್ಲಿ ನೆಲಸಿದ ಪ್ರಸಿದ್ಧ ಔಷಧಿ ವಿಜ್ಞಾನಿ. ಜಿನಿವಾದಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ ಪ್ಯಾರಿಸಿನ ಪಾಸ್ತರ್ ಸಂಸ್ಥೆಯಲ್ಲಿ ತರಬೇತಿ ಪಡೆದು ಅಲ್ಲಿಯೇ ರೋಗನಿವಾರಣೆಯ ಅಧ್ಯಯನಕ್ಕೆಂದು ಮೀಸಲಾದ ಸಂಸ್ಥೆಯೊಂದರ ಮುಖ್ಯಸ್ಥನಾಗಿ ನೇಮಕಗೊಂಡ (1937). ಹತ್ತು ವರ್ಷಗಳ ತರುವಾಯ ರೋಮಿನ (ಆರೋಗ್ಯಕ್ಕೆ ಸಂಬಂಧಪಟ್ಟ ಉನ್ನತ ದರ್ಜೆಯ ಸಂಸ್ಥೆ) ಔಷಧಿ ವಿಭಾಗದ ಮುಖ್ಯಸ್ಥನಾದ. ಕ್ಯುರಾರೆಯನ್ನು ಕೃತಕವಾಗಿ ಸಂಶ್ಲೇಷಿಸಿದ ಸಾಧನೆಗಾಗಿ ಈತನಿಗೆ 1957ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ದಕ್ಷಿಣ ಅಮೆರಿಕಾದ ಇಂಡಿಯನ್ನರು ಬಾಣಗಳ ಕೊನೆಗೆ ಸವರುವ ವಿಷವಸ್ತುವೇ ಕ್ಯುರಾರೆ. ಮಾಂಸಖಂಡಗಳ ನರವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವ ಈ ರಾಸಾಯನಿಕವನ್ನು ಶಸ್ತ್ರಚಿಕಿತ್ಸೆಯ ವೇಳೆ ಮಾಂಸಖಂಡಗಳು ಸಂಕೋಚಿಸದಂತೆ ಮಾಡಲು ಉಪಯೋಗಿಸಲು ಸಾಧ್ಯವಾಯಿತು.

ಬೊವೆಯ ಮುಖ್ಯ ಸಾಧನೆ ಇರುವುದು ರಾಸಾಯನಿಕ ಔಷಧಿ ಕ್ಷೇತ್ರದಲ್ಲಿ. ಸಲ್ಫಾನಿಲಮೈಡ್, ಆರೈಲ್ ಆಕ್ಸಿ ಈಥೈಲ್ ಅಮೀನ್ ವ್ಯುತ್ಪನ್ನಗಳು ಮತ್ತು ಅನಿಲಿನೊ ಈಥೈಲ್- ಡೈ ಈಥೈಲ್ ಅಮೀನ್ ಇವನ್ನು ಕುರಿತಾದ ಸಂಶೋಧನೆಗಳ ಫಲವಾಗಿ ಪ್ರಮುಖ ಆ್ಯಂಟಿಹಿಸ್ಟಮೀನ್ ಔಷಧಿಗಳನ್ನು ರೂಪಿಸಲು ಸಾಧ್ಯವಾಯಿತು. ಇವುಗಳಲ್ಲಿ ಒಂದಾದ ಮೆಪೈರಮೀನ್ ಸ್ವತಃ ಬೊವೆಯ ಮಹತ್ಕಾಣಿಕೆ. 1947ರಲ್ಲಿ ಈತ ಟ್ಯೂಬರೋ ಕ್ಯುರಾರೆ ಬಗೆ ನಡೆಸಿದ ಸಂಶೋಧನೆಗಳು ಗ್ಯಾಲಮೀನ್ ಟ್ರೈ ಈ ಥಿಯೊಡೈಡಿನ ಆವಿಷ್ಕಾರಕ್ಕೆ ನೆರವಾದುವು. ಅಲ್ಪಕಾಲ ಮಾತ್ರ ಪರಿಣಾಮ ಕಾರಿಯಾದ ಸುಕ್ಸ ಮೆಥೋನಿಯಮ್ ಅಯೊಡೈಡನ್ನು ಈತ 1949ರಲ್ಲಿ ಸಂಶ್ಲೇಷಿಸಿದ. ಈ ಸಂಶೋಧನೆಗಳ ಫಲವಾಗಿ ಶಸ್ತ್ರಚಿಕಿತ್ಸೆಯ ಕಾಲದಲ್ಲಿ ತಾತ್ಕಾಲಿಕವಾಗಿ ಪ್ರಜ್ಞೆ ಅಳಿಸುವ ನಾನಾಬಗೆಯ ಔಷಧಗಳು ದೊರೆತಂತಾಯಿತು. (ಎಚ್.ಎಸ್.ಎಸ್.)