ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಕಾಚೀಯೋ, ಜಿಯಾವಾನೀ

ವಿಕಿಸೋರ್ಸ್ದಿಂದ

ಬೋಕಾಚೀಯೋ, ಜಿಯಾವಾನೀ 1313-75. ಇಟಲಿಯ ಪ್ರತಿಭಾವಂತ ಕವಿ, ಗದ್ಯಲೇಖಕ, ಕಥೆಗಾರ. ಪ್ಯಾರಿಸಿನಲ್ಲಿ ಜನನ. ಯೌವನದ ಹೆಚ್ಚಿನ ಕಾಲವನ್ನು ನೇಪಲ್ಸ್‍ನಲ್ಲಿ ಕಳೆದು ಲೋಕಾನುಭವ ಪಡೆದು ಅಂಜೂವಿನ ರಾಜಟ್ರ್ಸ್ ದೊರೆಯ ಆಸ್ಥಾನ ಸೇರಿದ. ಅಲ್ಲಿದ್ದ ಮಾನವತಾದಿಗಳ ಗೋಷ್ಠಿಯಿಂದ ಉತ್ತೇಜಿತನಾಗಿ ವರ್ಜಿಲ್, ಸ್ಟೇಷಿಯಸ್, ಓವಿಡ್ ಕವಿಗಳ ಕೃತಿಗಳನ್ನೂ ಫ್ರೆಂಚ್ ಅದ್ಭುತ ಕತೆಗಳನ್ನೂ ಆಳವಾಗಿ ವ್ಯಾಸಂಗ ಮಾಡಿದ. ರಾಜಕುಮಾರಿ ಮರೆಯಾದ ಆಕ್ವಿನೋ ಎಂಬವಳಲ್ಲಿ ಅನುರಕ್ತನಾಗಿ ಅನಂತರ ಕಾವ್ಯರಚನೆಯಲ್ಲಿ ನಿರತನಾದ. ಇವನನ್ನು ಹಲವುಬಾರಿ ರಾಯಭಾರಿಯಾಗಿ ಪೆಟ್ರಾರ್ಕ್, ಆರನೆಯ ಇನ್ನೊಸೆಂಟ್. ಐದನೆಯ ಅರ್ಬನ್ ಮುಂತಾದ ಮಹಾವ್ಯಕ್ತಿಗಳ ಬಳಿಗೆ ಕಳುಹಿಸಲಾಯಿತು. 1362ರಲ್ಲಿ ಇವನು ಅನಿರೀಕ್ಷಿತ ಮಾನಸಿಕ ಘರ್ಷಣೆಗೆ ಗುರಿಯಾದಾಗ, ಇವನ ಆಂತರಿಕ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳುಂಟಾದವು. ಅಲ್ಲಿಯತನಕ ವಿಷಯಾಸಕ್ತ ಭೋಗಜೀವನ ನಡೆಸುತ್ತಿದ್ದ ಇವನು ಐಹಿಕ ಸುಖಲಾಲಸೆ ತ್ಯಜಿಸಿ ವಿರಕ್ತನಾದ. ಮೂರು ತಿಂಗಳಕಾಲ ವೆನಿಸ್ ನಗರದಲ್ಲಿ ಪೆಟ್ರಾರ್ಕ್ ಕವಿಂiÀi ಅತಿಥಿಯಾಗಿ ಕಳೆದ. 1373ರಲ್ಲಿ ಫ್ಲಾರೆನ್ಸ್‍ನ ಸಾರ್ವಜನಿಕ ಸಭೆಯಲ್ಲಿ ಡಾಂಟೆ ಕವಿಯ ಡಿವೈನ್ ಕಾಮಿಡಿ (ಡಿವಿನ ಕಾಮೆಡಿಯ) ಎಂಬ ಮಹಾಕಾವ್ಯ ಕುರಿತು ವ್ಯಾಖ್ಯಾನ ನಡೆಸಿದ. ಹಲವಾರು ಅಷ್ಟಷಟ್ಪದಿ, ಸಣ್ಣ ಕಥೆಗಳು, ವಿಡಂಬನ ಲೇಖನಗಳು, ವಿಮರ್ಶಾಗ್ರಂಥಗಳನ್ನು ಬರೆದಿದ್ದಾನೆ. ಇವನ ಮುಖ್ಯ ಕೃತಿಗಳ ವಿವರಗಳು ಹೀಗಿವೆ.

ಡಯಾನಾ ದೇವತೆಯ ಬೇಟೆ (ಕಾಚಿಯ ದ ಡಯಾನ): ಇದು ಇಟಾಲಿಯನ್ ಭಾಷೆಯಲ್ಲಿ ಬೇಟೆಯನ್ನು ಕುರಿತು ಬರೆದ ಮೊತ್ತಮೊದಲನೆಯ ಕಾವ್ಯ. ಇದರ ರಚನೆಯ ಕಾಲ 1336-38. ಡಯಾನಾ ದೇವತೆಯ ನೇತೃತ್ವದಲ್ಲಿ ಬೇಟೆಗಾಗಿ ಹೊರಟ ಅರವತ್ತು ಜನ ನೆಯೋಪಾಲಿಟನ್ ಸ್ತ್ರೀಯರು ತಮ್ಮ ತಮ್ಮ ಪೌರುಷವನ್ನು ಹಲವಾರು ಕವನಗಳಲ್ಲಿ ಪ್ರದರ್ಶಿಸುತ್ತಾರೆ. ಇದರಲ್ಲಿ ಮೆಚ್ಚತಕ್ಕ ಕಾವ್ಯಾಂಶಗಳಾವುವೂ ಇಲ್ಲ.

ಫಿಲೊಕೊಲೊ (ಪ್ರೇಮದ ದುಡಿಮೆ) : ಇದು ಗದ್ಯದಲ್ಲಿ ಬರೆದ ಮೊತ್ತಮೊದಲನೆಯ ಅದ್ಭುತ ಕಥೆ. ಇದರ ರಚನೆಯ ಕಾಲ 1337-39. ಇದರಲ್ಲಿ ಬೋಕಾಚೀಯೋವಿನ ಅತ್ಯದ್ಭುತ ಕಥನಕಲೆ ಪ್ರಕಟವಾಗಿದೆ. ಸಾಮಾನ್ಯ ಲಾವಣಿಯ ಸರಳ ಸಂಕ್ಷಿಪ್ತತೆ ಮತ್ತು ಏಕಾಗ್ರತೆ ಸಾಧಿಸಿಕೊಂಡ ಇವನ ಕಥನ ಶೈಲಿ ಭವ್ಯಕಾವ್ಯದ ಮಹೋನ್ನತಿಯನ್ನೂ ನಿಲುಕಬಲ್ಲದು. ಹಾವಿನಂತೆ ಸುತ್ತಿ ಸುತ್ತಿ ಹರಿಯುವ ಈ ಕಥೆಯಲ್ಲಿ ಮಿಂಚಿಮಾಯವಾಗುವ ನೂರಾರು ಘಟನೆಗಳಿವೆ. ಭೂಗೋಳ, ಖಗೋಳವಿಜ್ಞಾನ, ವಾಸ್ತುಶಿಲ್ಪ, ಕನಸುಗಳು, ಪುರಾಣದೇವತೆಗಳು, ಯಕ್ಷಿಣಿ, ಮಂತ್ರ ಮಾಟ, ಕದನಗಳು, ನರಕದ ಸಭೆ, ನೀತಿಶಾಸ್ತ್ರ, ಬೈಬಲ್‍ಕಥೆ ಎಲ್ಲವೂ ಒಂದರಲ್ಲೊಂದು ಹಾಸುಹೊಕ್ಕಾಗಿ ಬೆರೆತಿವೆ. ಪ್ರೇಮವನ್ನು ಕುರಿತ ಹದಿಮೂರು ಪ್ರಶ್ನೆ ಎಂಬ ಭಾಗ ಅತ್ಯಂತ ಸ್ವಾರಸ್ಯವಾಗಿದೆ. ಕಥಾನಾಯಕ ಫಲೊಕೊಲಾ ಮತ್ತು ಅವನ ಸಂಗಡಿಗರು ಬಿರುಗಾಳಿಗೆ ಸಿಕ್ಕಿ ಮುರಿದು ಚೂರಾದ ಹಡಗಿನಿಂದ ಪಾರಾಗಿ ನೇಪಲ್ಸ್ ನಗರದ ಸುಂದರ ಉದ್ಯಾನವನದ ಕಾರಂಜಿಯ ಬಳಿ, ಪ್ರೇಮದ ಸ್ವರೂಪ ಚರ್ಚಿಸಲು ಸಭೆ ಸೇರುತ್ತಾರೆ. ಫಿಯಾಮೆಟಾ ಎಂಬ ಸುಂದರಿ ಈ ಚರ್ಚೆಯ ಅಧ್ಯಕ್ಷತೆವಹಿಸಿ ವಾದ ವಿವಾದಗಳನ್ನು ಅವಲೋಕಿಸಿ ತೀರ್ಪುಕೊಡುತ್ತಾಳೆ. ಇವಳ ತೀರ್ಪನ್ನು ಎಲ್ಲರೂ ಚರ್ಚಿಸಿ ಕಡೆಗೆ ಒಪ್ಪಿಕೊಳ್ಳತ್ತಾರೆ. ಈ ವಾದ ವಿವಾದಗಳೆಲ್ಲವೂ ಬೇರೆ ಬೇರೆ ಆಖ್ಯಾನ ಉಪಾಖ್ಯಾನಗಳ ರೂಪದಲ್ಲಿವೆ. ಕಥೆಯೊಂದಿಗೆ ಸೇರಿ ಇದೊಂದು ಕಥಾಸಾಗರವಾಗಿದೆ. ಬೋಕಾಚೀಯೋ ಆನಂತರ ರಚಿಸಿದ ತನ್ನ ಮೇರುಕೃತಿಯಾದ ಡಕ್ಯಾಮರನ್‍ನಲ್ಲಿ (ಹತ್ತು ದಿನದ ಕಥೆ). ಈ ಗ್ರಂಥದಲ್ಲಿ ಅನುಸರಿಸಿದ ರಚನಾಕ್ರಮ ಮತ್ತಷ್ಟು ಸೊಗಸಾಗಿ ತಿದ್ದಿರುವುದು ಸುಸ್ಪಷ್ಟವಾಗಿದೆ. ಕಥೆಯ ಈ ಚೆಲುವಾದ ಚೌಕಟ್ಟನ್ನು ಟೌಸ್ಸೋ, ಚಾಸರ್, ಮಿಲ್ಡನ್, ಕೀಟ್ಸ್ ಮುಂತಾದ ಉದ್ದಾಮ ಕವಿಗಳು ಅನುಕರಣೆಮಾಡಿರುವುದು ಬೋಕಾಚೀಯೋವಿನ ಅನ್ಯಾದೃಶ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ.

ಫಿಲೊಸ್ಟ್ರಾಟ್ಸ್ (ಪ್ರೇಮಕ್ಕೆ ಸೋತವನ ಕಥೆ): ಇದು ಇಟಾಲಿಯನ್ ಭಾಷೆಯಲ್ಲಿ, ಲಾವಣಿಕಾರನಲ್ಲದವ ರಚಿಸಿದ, ಕಾವ್ಯರೂಪದ ಮೊತ್ತಮೊದಲನೆಯ ಅದ್ಭುತ ಕಥೆ. ಇದರ ರಚನೆಯ ಕಾಲ 1339-40, ರೊಮಾನ್ಸ್ ಆಫ್ ಟ್ರಾಯ್ ಎಂಬ ಜನಪ್ರಿಯ ಕಥೆ ಇದರ ಮೂಲವಸ್ತು. ಇದು ಟ್ರಾಯಲಸ್ ಗ್ರೀಕ್ ವೀರನಿಗೆ ಕ್ರೆಸೀಡ್ ಎಂಬ ಟ್ರಾಯ್‍ಕನ್ಯೆ ಎಸಗುವ ದ್ರೋಹದ ಕಥೆ. ಇದು ಬೋಕಾಚೀಯೋವಿನ ಕೈಯಲ್ಲಿ ಶೃಂಗಾರಾದ್ಭುತ ರಸಗಳಿಂದ ತುಂಬಿದ ಸುಂದರ ಕಥೆಯಾಗಿದೆ. ಟ್ರಾಯಲಸ್ ಮತ್ತು ಕ್ರೆಸೀಡಳ ನಿವ್ರ್ಯಾಜ ಪ್ರೇಮ, ಪಾಂಡರೋವಿನ ಗಾಢಸ್ನೇಹ ಇವೇ ಈ ಕಾವ್ಯದ ತಿರುಳು. ಶೈಲಿ, ವಸ್ತು ಮತ್ತು ಕಥನಕಲೆ ಎಲ್ಲ ದೃಷ್ಟಿಯಿಂದಲೂ ಇದು ಪ್ರೌಢಕಾವ್ಯ. ಈ ಕಥೆಯಲ್ಲಿ ಜೀವಾಳವಿದ್ದುದರಿಂದಲೇ ಇದು ಚಾಸರ್. ಷೇಕ್ಸ್‍ಪಿಯರ್ ಮುಂತಾದ ಮುಂದಿನ ಕವಿಗಳ ಗಮನ ಸೆಳೆಯಿತು.

ಟೆಸೀಡ: ಟಸ್ಕನ್ ಭಾಷೆಯ ಮೊತ್ತಮೊದಲನೆಯ ಭವ್ಯಕಾವ್ಯ, ವೀರರಸದಿಂದ ಕೂಡಿದ ಭವ್ಯ ಶೃಂಗಾರ ಕಥೆ. ಆರ್ಕಿಟೆ ಮತ್ತು ಪಾಲೆಮಾನ್ ಎಂಬ ಗ್ರೀಕ್ ವೀರರ ಅನನ್ಯ ಸ್ನೇಹದ ಕಥೆ. ಚಾಸರನ ಕ್ಯಾಂಟರ್ ಬೆರಿ ಕಥೆಗಳಲ್ಲೊಂದಾದ ಯೋಧನಕಥೆಗೂ (ದಿ ನೈಟ್ಸ್‍ಟೇಲ್) ಷೇಕ್ಸ್‍ಪಿಯರ್ ಕಾಲದ ನಾಟಕಕಾರನಾದ ಫ್ಲೆಚರ್ ಬರೆದ ಇಬ್ಬರು ಶ್ರೀಮಂತ ಬಂಧುಗಳು (ಟೂ ನೋಬಲ್ ಕಿನ್ಸ್‍ಮನ್) ಎಂಬ ನಾಟಕಕ್ಕೂ ಇದೇ ಮೂಲವಸ್ತು.

ಅಮೆತೋ: ಗ್ರಾಮಜೀವನದ ಸರಳ ಆದರ್ಶ ಸುಖ ಸಂತೋಷ ಸೂಚಿಸುವ ಪಾಸ್ಟೊರಲ್ ಅಂಶಗಳುಳ್ಳ ಅದ್ಭುತ ಕಥನಕಾವ್ಯ. ಇದರ ರಚನೆಯ ಕಾಲ 1341-42. ಬೇಟೆಗಾರ ಅಮೆತೋ ಮತ್ತು ಅಪ್ಸರೆ ಲಿಯಾ ವನದಲ್ಲಿ ವಿಹರಿಸುತ್ತಿದ್ದಾಗ ಅವರೊಡನೆ ಬೇರೆ ಆರು ಜನ ಅಪ್ಸರೆಯರು ಬಂದು ಸೇರುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ಜೀವನದಲ್ಲಿ ಸಾಧಿಸಿದ ಪ್ರಣಯ ಸಾಹಸಗಳನ್ನು ಹೇಳಿ ಹಾಡೊಂದನ್ನು ಹಾಡುತ್ತಾರೆ. ಈ ಕಥೆಗಳಲ್ಲಿ ಅನ್ಯಾರ್ಥವೂ ಸೇರಿಕೊಂಡಿದೆ. ಮಾನವನ ಸಹಜ ಪ್ರವೃತ್ತಿಗಳು ಪ್ರೇಮದೊಡನೆ ಸೇರಿ ಪರಿಶುದ್ಧವಾಗುವುದೇ ಈ ಕಥೆಯ ಸಂಕೇತ. ಇಲ್ಲಿ ವರ್ಣಿತವಾಗುವ ಏಳುಜನ ಅಪ್ಸರ ಸ್ತ್ರೀಯರು ಕವಿಗೆ ಚಿರಪರಿಚಿತರಾದ ವಾಸ್ತವಿಕ ವ್ಯಕ್ತಿಗಳ ನೈಜ ಚಿತ್ರಗಳೂ ಹೌದು. ಈ ಕಾವ್ಯದಲ್ಲಿ ಕವಿಯ ವಿಷಯಲೋಲುಪತೆಯೂ ಶೃಂಗಾರವೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮೂಲಸ್ಫೂರ್ತಿ ದೊರೆತುದು ವರ್ಜಿಲ್ ಕವಿಯಿಂದ.

ಅಮೊರೊಸೊ ವಿಸಿಯೋನೆ (ಪ್ರೇಮದರ್ಶನ): ಇದೊಂದು ದಟ್ಟವಾಗಿ ಬೆಳೆದು ತೊಡಕಾಗಿರುವ ಅನ್ಯಾರ್ಥ ಕಾವ್ಯ. ಇದರ ರಚನೆಯ ಕಾಲ 1342. ವಿಷಯಲಂಪಟತೆಯಿಂದ ಕೂಡಿದ ಜೀವನ ಹೇಗೆ ವಿರಕ್ತಿಯನ್ನು ತಳೆಯುವುದೆನ್ನುವುದೇ ಈ ಕಾವ್ಯದ ಅರ್ಥ. ಘನಗಾಂಭೀರ್ಯವುಳ್ಳ ಸುಂದರಿ ಒಬ್ಬ ಮಾರ್ಗದರ್ಶಕಳಾಗಿ ಕವಿಯನ್ನು ಗೋಡೆಯ ಬಳಿ ಕರೆದೊಯ್ಯುತ್ತಾಳೆ. ಗೋಡೆಯಲ್ಲಿ ಕಾಣುವ ಸಣ್ಣ ಬಾಗಿಲು ಶಾಶ್ವತ ಶಾಂತಿಯೆಡೆಗೆ ಕರೆದೊಯ್ಯುತ್ತದೆ. ಕವಿ ದೊಡ್ಡಬಾಗಿಲನ್ನೂ ದಾಟಿ ಅದರಾಚೆ ಇರುವ ಲೌಕಿಕ ಸುಳಿವನ್ನರಸಲು ತವಕಿಸುತ್ತಾನೆ. ಚಚ್ಚೌಕವಾದ ವಿಶಾಲಭವನದ ಗೋಡೆಗಳ ಮೇಲೆ ದರ್ಶನ, ಕಾವ್ಯ, ಐಹಿಕ ವೈಭವ, ಐಶ್ವರ್ಯ, ಪ್ರೇಮಗಳ ಪ್ರತೀಕವಾದ ನೂರಾರು ವ್ಯಕ್ತಿಗಳನ್ನು ಸೂಚಿಸುವ ಭಿತ್ತಿಚಿತ್ರಗಳು, ಬೈಬಲ್, ಪುರಾಣಕಥೆಗಳು, ಮಧ್ಯಯುಗದ ವೀರರು, ಆರ್ಥರ್ ಕಥೆಗಳು, ಪ್ರೇಮಾರಾಧಕರು ಮುಂತಾದವನ್ನು ಬಣ್ಣಿಸುವ ಚಿತ್ರಗಳಿವೆ. ನೃತ್ಯಗಾನಗಳಲ್ಲಿ ತೊಡಗಿದ ಸ್ತ್ರೀಯರಿಂದ ತುಂಬಿದ ಇನ್ನೊಂದು ಕೋಣೆಯೊಳಕ್ಕೆ ಹೋಗಿ ಅನಂತರ ಹಿಂತಿರುಗಿ ಒಂದು ಸಣ್ಣ ಬಾಗಿಲಿನಿಂದಾಚೆಗೆ ತೆರಳಲು ಇಚ್ಛಿಸುತ್ತಾನೆ. ಅಲ್ಲಿಗೆ ಕಾವ್ಯ ಇದ್ದಕ್ಕಿಂದಂತೆ ಮುಕ್ತಾಯವಾಗುತ್ತದೆ. ಕವಿಗೆ ತನ್ನ ಉದ್ದೇಶದಂತೆ ಈ ಕಾವ್ಯವನ್ನು ಸಂಪೂರ್ಣಗೊಳಿಸಲು ಸಾಧ್ಯವಾಗದೆ ಹೋಗಿರಬಹುದು.

ಫಿಯಾಮ್ಮೆಟ್ಟಾ: ಇದು ಇಟಾಲಿಯನ್ ಭಾಷೆಯಲ್ಲಿ ರಚಿತವಾದ ಪ್ರಥಮ ಮನೋವಿಶ್ಲೇಷಣ ಪ್ರಣಯ ಕಥೆ. ಇದರ ರಚನೆಯ ಕಾಲ 1344-46. ಕಥೆಯಲ್ಲಿ ತಿರುಳು ಕಡಿಮೆ, ಫಿಯಾಮ್ಮೆಟ್ಟಾ ಎಂಬ ಸ್ತ್ರೀ ಪ್ಯಾನಿನ್‍ಫಿಲೋ ಎಂಬ ಪ್ರಿಯನಿಂದ ದೂರವಾಗಿ ವಿರಹ ವ್ಯಥೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದಾಗ ಅವಳ ದಾದಿ ಅವಳನ್ನು ರಕ್ಷಿಸುತ್ತಾಳೆ. ಕಥೆಯನ್ನು ಹೇಳುವವಳೂ ಕಥಾನಾಯಕಿಯೇ. ಅವಳ ಮನಸ್ಸಿನ ವಿವಿಧ ಭಂಗಿಗಳನ್ನೂ ಭಾವಗಳನ್ನೂ ಕವಿ ಸುಂದರವಾಗಿ ಚಿತ್ರಿಸಿದ್ದಾನೆ.

ನಿನ್‍ಫಲೆ ಫೈಸೋಲಿನೊ (ಯಮಳನದಿಗಳಕಥೆ) : ಇದು ಮೊತ್ತಮೊದಲನೆಯ ವರ್ಣನಾತ್ಮಕ ಇಟಾಲಿಯನ್ ಜನಪದ ಗೀತೆ. ಫೈಸೋಲ್ ಬಳಿಯ ಪರ್ವತದಿಂದ ಹರಿದು ಬರುವ ಎರಡು ನದಿಗಳು ಭಗ್ನಪ್ರೇಮಿಗಳಿಬ್ಬರ ಕಥೆಯ ಪ್ರತೀಕವಾಗಿರುತ್ತವೆ. ಅದು ಬೋಕಾಚೀಯೋವಿನ ಕಾವ್ಯಗಳಲ್ಲಿ ಅತ್ಯಂತ ಸರಳವೂ ಸುಂದರವೂ ಆದ ಕಾವ್ಯ. ಡಯಾನಾ ದೇವತೆಯ ಪರಿವಾರದಲ್ಲಿ ಶೋಭಿಸುವ ಮೆನ್‍ನೋಲ ಎಂಬ ಅಪ್ಸರೆಯನ್ನು ಕಂಡು ಆಫ್ರಿಕೋ ಎಂಬ ಯುವಕ ಅವಳ ಪ್ರೇಮವನ್ನು ಯಾಚಿಸಿ ನಿರಾಶನಾಗುತ್ತಾನೆ. ವೀನಸ್ ದೇವತೆಯ ವರದಿಂದ ಅವಳನ್ನು ಕಂಡು ಒಲಿಸಿಕೊಳ್ಳುತ್ತಾನೆ. ಪಶ್ಚಾತ್ತಾಪದಿಂದ ಕರಗಿ ಅವಳು ಹಿಂದಿರುಗಿ ಬರುವುದಿಲ್ಲ. ಪ್ರೇಮದಿಂದ ಉನ್ಮಾದಿತನಾದ ಆಫ್ರಿಕೋ ನದಿಯ ತೀರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅನಂತರ ಆ ನದಿಗೆ ಅವನ ಹೆಸರು ನಿಲ್ಲುತ್ತದೆ. ಮೆನಸೋಲಳನ್ನು ಡಯಾನ ದೇವತೆ ಇನ್ನೊಂದು ನದಿಯಾಗಿ ಪರಿವರ್ತಿಸುತ್ತಾಳೆ. ನದಿಯ ಸ್ಫಟಿಕದ ನೀರಿನಂತೆ ತಿಳಿಯಾದ, ಭಾವಗೀತೆಯ ಸುಕುಮಾರತೆಯನ್ನು ಈ ಕಾವ್ಯದಲ್ಲಿ ಕಾಣಬಹುದು. ಕೆಲವು ಪದ್ಯಗಳಲ್ಲಿ ಕಾಣುವ ಅಶ್ಲೀಲತೆ ಬಿಟ್ಟರೆ ಇದೊಂದು ಸುಂದರ ಕಾವ್ಯ.

ಡೆಕ್ಯಾಮರನ್ (ಹತ್ತುದಿನಗಳ ಕಥೆ) : ಬೋಕಾಚೀಯೋನ ಉದ್ದಾಮ ಕೃತಿ. ಈ ಕಥಾಸಂಗ್ರಹದಲ್ಲಿ ನೂರು ಮನಮೋಹಕ ಸಣ್ಣ ಕಥೆಗಳಿವೆ. ಇವು 1348-53ರ ಅವಧಿಯಲ್ಲಿ ಬರೆದವು. ಫ್ಲಾರೆನ್ಸ್ ನಗರದಲ್ಲಿ 1348ರ ಸಮಯದಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಆವರಿಸಿದಾಗ ಏಳುಜನ ತರುಣಿಯರು ಹಾಗೂ ಮೂರು ಜನ ತರುಣರು ಫ್ಲಾರೆನ್ಸ್ ನಗರವನ್ನು ತೊರೆದು ಹತ್ತಿರದ ಊರಿಗೆ ಹೋಗುತ್ತಾರೆ. ಆ ಊರಿನ ಸೌಂದರ್ಯ ಸವಿದ ಆ ಹತ್ತು ಮಂದಿಯೂ ಅಲ್ಲಿ ಹತ್ತುದಿನ ಇರುತ್ತಾರೆ. ಆ ಹತ್ತು ದಿನವೂ ಒಬ್ಬೊಬ್ಬರು ದಿನಕ್ಕೆ ಒಂದೊಂದು ಕಥೆಯಂತೆ ಹೇಳುತ್ತಾರೆ. ಅವೇ ಈ ನೂರು ಕಥೆಗಳು. ಶೃಂಗಾರಮಯವಾದ ಈ ಕಥೆಗಳು ಇಂಗ್ಲಿಷ್ ಸಾಹಿತ್ಯದ ಮೇಲೆ ತುಂಬ ಪ್ರಭಾವ ಬೀರಿವೆ. ಚಾಸರ್ ಕವಿ (1340- 1400) ಈ ಕಥೆಗಳಿಂದ ತುಂಬ ಪ್ರಭಾವಿತನಾಗಿದ್ದಾನೆ. ಪೆಯಿಂಟರ್ ವಿಲಿಯಮ್‍ನ (1540-94) ಪ್ಯಾಲೇಸ್ ಆಫ್ ಪ್ಲೆಷರ್ (1566) ಎಂಬ ಪುಸ್ತಕದಲ್ಲಿ ಡೆಕ್ಯಾಮರನ್‍ನ ಬಹಳಷ್ಟು ಕಥೆಗಳು ಸೇರಿವೆ. ಈ ಮಹಾಗ್ರಂಥ ಪಾಶ್ಚಾತ್ಯ ಪ್ರಪಂಚದ ನಾನಾ ಭಾಷೆಯ ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ. `ಡೆಕ್ಯಾಮರನ್ ಕಥೆಗಳು ಮೌಖಿಕವಾಗಿ ಹಲವು ದೇಶಗಳಿಗೆ ಸಾಗಿ ಹೋಗಿವೆ. ಹಲವಾರು ವ್ಯಕ್ತಿಗಳು ಯಾವುದೋ ಸಂದರ್ಭದಲ್ಲಿ ಒಂದೆಡೆ ಸೇರಿದಾಗ ಒಬ್ಬೊಬ್ಬರು ಒಂದೊಂದು ದಿನ ಒಂದೊಂದು ಕಥೆ ಹೇಳುವ ಚೌಕಟ್ಟನ್ನು ಫಾಸರ್ ಬಳಸಿಕೊಂಡ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು `ನವರಾತ್ರಿ ಕವನದಲ್ಲಿ ಬಳಸಿದ್ದಾರೆ. ಬೋಕಾಚೀಯೋನ ಕಥೆಗಳಲ್ಲಿ ಅಲ್ಲಲ್ಲಿ ಶೃಂಗಾರ ಸಭ್ಯತೆಯ ಗೆರೆಯನ್ನು ದಾಟಬಹುದು. ಆದರೆ ಈ ಕಥೆಗಳಲ್ಲಿ ಲವಲವಿಕೆ ತುಂಬಿದೆ, ಗಂಡು-ಹೆಣ್ಣಿನ ಸಂಬಂಧವನ್ನು ಹಲವು ದೃಷ್ಟಿಗಳಿಂದ ಕಾಣಲಾಗಿದೆ. ಇದು ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಈ ಗ್ರಂಥಗಳಲ್ಲದೆ ಬೋಕಾಚೀಯೋ ತನ್ನ ಅಪ್ರತಿಮ ಪಾಂಡಿತ್ಯದ ಕುರುಹಾಗಿ ಪೌರಾಣಿಕ ವಿಶ್ವಕೋಶವೊಂದನ್ನು ರಚಿಸಿದ್ದಾನೆ. ಈತ ಟ್ಟಾಲ್ಡೋ ಎಂಬಲ್ಲಿ 1375 ಡಿಸೆಂಬರ್ 21ರಂದು ನಿಧನ ಹೊಂದಿದ. (ಎಚ್.ಕೆ.ಆರ್.) ಪರಿಷ್ಕರಣೆ ಎಲ್.ಎಸ್.ಶೇಷಗಿರಿರಾವ್