ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಗನ್ವೀಲ್ಯ

ವಿಕಿಸೋರ್ಸ್ದಿಂದ

ಬೋಗನ್ವೀಲ್ಯ

ಬೋಗನ್‍ವೀಲ್ಯ ನಿಕ್ಟ್ಯಾಜಿನೇಸೀ ಕುಟುಂಬಕ್ಕೆ ಸೇರಿದ ಸುಪ್ರಸಿದ್ಧ ಅಲಂಕಾರ ಸಸ್ಯ. ದಕ್ಷಿಣ ಅಮೆರಿಕದ ಬ್ರಜಿóಲ್ ಇದರ ತವರು ಎನ್ನಲಾಗಿದೆ. ಹದಿನೆಂಟನೆಯ ಶತಮಾನದ ಅಂತ್ಯದ ಸುಮಾರಿಗೆ ಲೂಯಿಆಂಟನಿ ಡ ಬೋಗನ್ ವಿಲ್ ಎಂಬ ಫ್ರೆಂಚ್ ನಾವಿಕ ಇದನ್ನು ಪ್ಯಾರಿಸಿಗೆ ತಂದನೆಂದೂ ಅಲ್ಲಿಂದ ಲಂಡನ್ನಿಗೆ ಕೊಂಡೊಯ್ಯಲಾಯಿತೆಂದೂ ಹೇಳಲಾಗಿದೆ. ಭಾರತಕ್ಕೆ ಕ್ರಿ.ಶ. 1890ರ ವೇಳೆಗೆ ಇದನ್ನು ಬೆಳೆಸಲಾಯಿತು.

ಇದು ಪೊದರು, ಹಂಬು ಅಥವಾ ಸಣ್ಣಮರಗಳ ರೂಪದಲ್ಲಿ ಬೆಳೆಯುತ್ತದೆ. ಕಾಂಡದ ಮೇಲೆ ಮುಳ್ಳುಗಳುಂಟು. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಆಕಾರ ಅಂಡದಂತೆ ಇಲ್ಲವೆ ಈಟಿ ಮೊನೆಯಂತೆ. ಎಲೆಗಳ ಅಂಚುನಯ. ಹೂಗಳು ಸಣ್ಣವು. ಅನಾಕರ್ಷಕ, ತಲಾ ಮೂರರ ಗುಂಪುಗಳಲ್ಲಿ ಮೂರು ದೊಡ್ಡ ಪುಷ್ಪಪತ್ರಕಗಳ ಮಧ್ಯೆ ಸ್ಥಿತವಾಗಿರುವುವು. ಈ ಪುಷ್ಪಪತ್ರಕಗಳೇ ಬೋಗನ್‍ವೀಲ್ಯದ ಮುಖ್ಯ ಆಕರ್ಷಣೆ ; ಬಿಳಿ, ಹಳದಿ, ಕೆಂಪು ಮುಂತಾಗಿ ಉಜ್ಜ್ವಲ ಬಣ್ಣಗಳಿಂದ ಕೂಡಿದ ಇವು ಬಲು ಆಕರ್ಷಕವಾಗಿರುವುವು.

ಬೋಗನ್‍ವೀಲ್ಯದಲ್ಲಿ ಎಷ್ಟು ಬಗೆಗಳಿವೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯ ಇದೆಯಾದರೂ ನಾಲ್ಕು ಮುಖ್ಯ ಪ್ರಭೇಧಗಳಿವೆ ಎಂಬುದನ್ನು ತಜ್ಞರು ಒಪ್ಪುತ್ತಾರೆ: ಬೋಗನ್‍ವೀಲ್ಯ ಸ್ಟೆಕ್ಟಾಬಿಲಿಸ್ ಬೋ. ಗ್ಲಾಬ್ರ, ಬೊ, ಬುಟ್ಟಿಯಾನ, ಬೋ. ಪರುವಿಯಾನ. ಅಲ್ಲದೆ ಬೆಳವಣಿಗೆಯಲ್ಲಿ ಎಲೆಗಳ ಆಕಾರದಲ್ಲಿ ಪುಷ್ಟಪತ್ರಕಗಳ ಬಣ್ಣಗಳಲ್ಲಿ, ಹೂ ಬಿಡುವ ಸ್ವಭಾವಗಳಲ್ಲಿ ಅನೇಕಾನೇಕ ವ್ಯತ್ಯಾಸಗಳನ್ನು ತೋರುವ ಅಧಿಕತೆರೆನ ತಳಿಗಳುಂಟು. ಬೋಗನ್‍ವೀಲ್ಯವನ್ನು ಬೆಳೆಸಲೂ ವಿಶೇಷವಾದ ಕೃಷಿ ಕ್ರಮವೇನೂ ಇಲ್ಲ. ಇದು ಅನೇಕ ಬಗೆಯ ಮಣ್ಣುಗಳಲ್ಲಿ, ಹಿಮ ಬೀಳುವ ಪ್ರದೇಶಗಳನ್ನು ಬಿಟ್ಟು ಉಳಿದೆಡೆಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಇದನ್ನು ವೃದ್ಧಿಸುವುದು ಕಾಂಡತುಂಡುಗಳಿಂದ. ಇದಕ್ಕಾಗಿ ಅರ್ಧ ಬಲಿತ ಸುಮಾರು ಹತ್ತರಿಂದ ಹದಿನೈದು ಸೆಂಟಿಮೀಟರ್ ಉದ್ದದ, ತುಂಬ ದಪ್ಪವಲ್ಲದ ಗಿಣ್ಣುಗಳುಳ್ಳ ಕಾಂಡಗಳನ್ನು ತೆಗೆದುಕೊಂಡು ಮರಳುಮಿಶ್ರಿತ ಗೊಬ್ಬರವಿರುವ ಕೋಡುಮಣ್ಣಿನಲ್ಲಿ ಹೂತು ಬೆಳೆಸಬಹುದು. ಕಮಾನು ಕಸಿ ವಿಧಾನದಿಂದ ಕೂಡ ಬೋಗನ್‍ವೀಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದು.

ಬೋಗನ್‍ವೀಲ್ಯಕ್ಕೆ ಕೀಟಗಳ ಮತ್ತು ಶಿಲೀಂಧ್ರ ರೋಗಗಳ ಹಾವಳಿ ಹೆಚ್ಚಾಗಿಲ್ಲ. ಆದರೆ ಲೆಪ್ಟೊಸ್ಟ್ರೋಮ ಬೋಗನ್‍ವೀಲ್ಯ ಎಂಬ ಶಿಲೀಂಧ್ರ ಮತ್ತು ಕೆಲವು ತೆರನ ನಂಜುಕಣಗಳು ರೋಗಗಳನ್ನು ಉಂಟುಮಾಡುತ್ತವೆ. (ಜಿ.ಬಿ.; ಜಿ.ಎಂ.ಆರ್.)