ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಗಾರ
ಬೋಗಾರ - ತಾಂತ್ರಿಕ ಸಾಧನಾಪಂಥಕ್ಕೆ ಸೇರಿದವ. ಈತ ಯಾವ ಸ್ಥಳದವನೆಂಬುದು ಖಚಿತವಾಗಿ ತಿಳಿದುಬಂದಿಲ್ಲ. ಕೆಲವರು ಚೀನಾಮೂಲದವನೆಂದು ಹೇಳಿದರೆ ಮತ್ತೆ ಕೆಲವರು ಭಾರತದವನೆಂದೂ ಚೀನಾಯಾತ್ರೆ ಮಾಡಿದವನೆಂದು ಹೇಳಿದರೆ ಮತ್ತೆ ಕೆಲವರು ಭಾರತದವನೆಂದೂ ಚೀನಾಯಾತ್ರೆ ಮಾಡಿದವನೆಂದೂ ಹೇಳುತ್ತಾರೆ. ಚೀನಾದ ಪ್ರಥಮ, ಚಕ್ರವರ್ತಿ ಎನ್ನಲಾದ ಹಳದೀ ಸಾಮ್ರಾಟ ಎನಿಸಿಕೊಂಡ ಹ್ಯುಯಾಂಗ್ ತಿ (ಕ್ರಿ.ಪೂ. 2700) ಲೈಂಗಿಕ ರಹಸ್ಯಗಳನ್ನು ಸಂಭೋಗದ ಅಧಿದೇವತೆಗಳಾದ ಪಂಚಕನ್ಯೆಯರಿಂದ ಕಲಿತುಕೊಂಡನೆಂದು ತಿಳಿದು ಬರುತ್ತದೆ. ಬೋಗಾರನೂ ಹ್ಯೂಯಾಂಗ್ ತಿ ಪಂಥಕ್ಕೆ ಸೇರಿದವ. ಈತ ಚೀನಾ ದೇಶಕ್ಕೆ ಹೋಗಿ ಲೈಂಗಿಕ ರಹಸ್ಯಗಳನ್ನು ಮತ್ತು ರಸವಿದ್ಯೆಯನ್ನು ಕಲಿತುಕೊಂಡು ಭಾರತಕ್ಕೆ ಹಿಂತಿರುಗಿದನೆಂದೂ ಹಾಗೆ ಬರುವಾಗ ಆ ದೇಶದ ಸಿದ್ಧಪುರುಷ ಪುಲಿಪಾಣಿಯನ್ನು ಭಾರತಕ್ಕೆ ಕರೆದುತಂದು ಇಬ್ಬರೂ ಸೇರಿ ತಾಂತ್ರಿಕ ಸಾಧನಾ ಮಾರ್ಗವನ್ನು ರೂಪಿಸಿ ಜನರಿಗೆ ಬೋಧಿಸತೊಡಗಿದರೆಂದೂ ತಾವೊಯಿಸಮ್ ವಿಧಾನವನ್ನು ತಮ್ಮ ಬೋಧನೆಗೆ ಅಳವಡಿಸಿಕೊಂಡು ಇಂದ್ರಜಾಲ, ರಸವಿದ್ಯೆ, ವೈದ್ಯಶಾಸ್ತ್ರಗಳನ್ನು ಸಹ ಶಿಷ್ಯರಿಗೆ ಕಲಿಸತೊಡಗಿದರೆಂದೂ ಹೇಳಲಾಗಿದೆ. ಸಿದ್ಧ ಸಂಪ್ರದಾಯ, ನಾಥಪಂಥ ಮತ್ತು ರಸವಿದ್ಯೆಗಳಿಗೆ ಇವರೇ ಮೂಲಪುರುಷರು. ಇವರು ಬೋಧಿಸುತ್ತಿದ್ದ ತಾಂತ್ರಿಕ ಸಂಪ್ರದಾಯವನ್ನು ಚೀನಾಚಾರವೆಂದು ಕರೆದರು.
ಈ ಸಂಪ್ರದಾಯದವರು ಬೋಧಿಸತ್ತ್ವ ಅವಲೋಕಿತೇಶ್ವರನನ್ನು ವೇಶ್ಯೆ ಅಥವಾ ನಪುಂಸಕ ರೂಪಿ ಎಂದು ತಿಳಿಯುತ್ತಾರೆ. ಆತನನ್ನು ಕ್ವಾನ್‍ಮಿನ್ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಪಂಥದವರು ಬುದ್ಧನನ್ನೂ ಇಂದ್ರಿಯೋನ್ಮಾದದಲ್ಲಿರುವಂತೆ ಚಿತ್ರಿಸಿದ್ದಾರೆ. ಲೈಂಗಿಕ ಕ್ರಿಯೆ ಸಾಧನೆಯ ಒಂದು ಮಾರ್ಗವೆಂದು ತಿಳಿದ ಈ ಪಂಥಾನುಯಾಯಿಗಳು ಹೆಚ್ಚುಕಡಿಮೆ ವಾಮಾಚಾರಿಗಳು. ಬೋಗಾರ ಕಾಮರೂಪ, ಪಟ್ನಾ, ಗಯಾ ಮುಂತಾದ ಸ್ಥಳಗಳಲ್ಲಿ ಹಿಂತಿರುಗಿ ಪುನಃ ಚೀನಕ್ಕೆ ಹೋದ. ಆತನ ಜೊತೆಯಲ್ಲಿ ಕೆಲವು ತಮಿಳು ಶಿಷ್ಯರೂ ಹೋಗಿ ಕೆಲವು ಕಲೆಗಳನ್ನೂ ವಿಜ್ಞಾನವನ್ನೂ ಕಲಿತುಕೊಂಡು ಹಿಂತಿರುಗಿದರು ಪುಲಿಪಾಣಿ ಮಾತ್ರ ಭಾರತದಲ್ಲೇ ಇದ್ದುಕೊಂಡು, ಬೋಗಾರನ ಸಂಪ್ರದಾಯವನ್ನು ಮುಂದುವರಿಸತೊಡಗಿದ. ಇಂದಿಗೂ ತಮಿಳುನಾಡಿನ 18 ಸಿದ್ಧರ ಪೈಕಿ ಇಬ್ಬರು ಚೀನ ಮೂಲದವರು ಎನ್ನಲಾಗಿದೆ. ಬೋಗಾರ ತನ್ನ ಕೊನೆಯ ವರ್ಷಗಳನ್ನು ಎಲ್ಲಿ, ಹೇಗೆ ಕಳೆದನೆಂಬುದು ಖಚಿತವಾಗಿ ತಿಳಿದಿಲ್ಲ. (ಎಂ.ಆರ್.ಕೆ.ಆರ್.)