ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಟ್ಟೀಚೆಲ್ಲೀ, ಸಾಂದ್ರೊ

ವಿಕಿಸೋರ್ಸ್ದಿಂದ

ಬೋಟ್ಟೀಚೆಲ್ಲೀ, ಸಾಂದ್ರೊ 1444_1510. ಇಟಲಿಯ ಪುನರುಜ್ಜೀವನ ಕಾಲದ ಪ್ರಸಿದ್ಧ ಚಿತ್ರಕಲಾವಿದರಲ್ಲೊಬ್ಬ. ಹುಟ್ಟಿದ್ದು ಫ್ಲಾರೆನ್ಸ್‍ನಗರದಲ್ಲಿ ಈತನ ನಿಜವಾದ ಹೆಸರು ಅಲಿಸಾಂದ್ರೊ ಡಿ ಮರಿಯಾನೊ ಡೈ ಫಿಲಿಪೇಪಿ. ತಂದೆ ಮರಿಯಾನೊ ಡಿ ವನ್ನಿ ಡೈ ಫಿಲಿಪೇಪಿ ಎಂಬಾತ. ಈತನ ಬಾಲ್ಯಜೀವನದ ಬಗೆಗೆ ಹೆಚ್ಚೇನೂ ತಿಳಿದುಬರುವುದಿಲ್ಲ. 1458-59ರಲ್ಲಿ ಫ್ರಾಪಿಲಿಪ್ಪೊ ಲಿಪ್ಪಿ ಎಂಬಾರನಲ್ಲಿ ಚಿತ್ರಕಲೆ ಅಭ್ಯಸಿಸಿದ; ಆತನ ಚಿತ್ರಶಾಲೆಯಲ್ಲಿ ಸಹಾಯಕನಾಗಿ 1467ರ ತನಕವೂ ಇದ್ದ. ವೆರೊಷಿಯೋನ ಚಿತ್ರಶಾಲೆಯಲ್ಲಿಯೂ ಕೆಲಕಾಲ ಇದ್ದಿರಬೇಕೆಂದು ಊಹಿಸಲಾಗಿದೆ. ಫ್ಲಾರೆನ್ಸ್‍ನಗರದ ಪ್ರತಿಷ್ಠಿತ ಹಾಗೂ ಕಲಾಪೋಷಕ ಮೆಡಿಸಿ ಕುಟುಂಬದ ಆಶ್ರಯ ಪ್ರೋತ್ಸಾಹ ಈತನಿಗೆ ಲಭಿಸಿತ್ತು. ಲಾರೆಂಜೊ ಡಿ ಪಿಯರ್ ಪ್ರಾನ್ಸೆಸ್ಕೊ ಈತನ ಪ್ರಧಾನ ಪೋಷಕ. 1470ರ ವೇಳೆಗೆ ತನ್ನದೇ ಚಿತ್ರಶಾಲೆ ತೆರೆದ. ಈತ ಫ್ಲಾರೆನ್ಸ್‍ನಗರದ ಎಲ್ಲ ಪ್ರಧಾನ ಚರ್ಚುಗಳಲ್ಲಿಯೂ ಚಿತ್ರ ಕೆಲಸ ಮಾಡಿದ. 1481-82ರಲ್ಲಿ ರೋಮ್ ನಗರಕ್ಕೆ ಆಹ್ವಾನಿತನಾಗಿ ಹೋಗಿ ಅಲ್ಲಿಯ ಸಿಸ್ಟೈನ್ ಆರಾಧನಾ ಮಂದಿರದ ಅಲಂಕರಣ ಕಾರ್ಯಗಳಲ್ಲಿ ಭಾಗವಹಿಸಿದ.

ಈತನ ಮೊದಲ ಚಿತ್ರವೆನ್ನಲಾದ ಪೋರ್ಟಿಟ್ಯೂಡ್ ವೆರೋಷಿಯೋ ಶೈಲಿ ಪ್ರಭಾವವನ್ನು ತೋರುತ್ತದೆ. ಈತನ ಚಿತ್ರಗಳಲ್ಲಿ ಬರ್ತ್ ಆಫ್ ದಿ ವೀನಸ್ (1485) ಮತ್ತು ಪ್ರೈಮಾವೆರಾ (1477-78) ಪುನರುಜ್ಜೀವನ ಕಾಲದ ಅಂತಸ್ಸತ್ತ್ವವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿವೆ ಎಂಬುದಾಗಿ ಕೆಲವು ಆಧುನಿಕ ವಿಮರ್ಶಕರು ಭಾವಿಸಿದ್ದಾರೆ. ಕಾರೊನೇಷನ್ ಆಫ್ ದಿ ವರ್ಜಿನ್ ಈತನ ಮತ್ತೊಂದು ಪ್ರಸಿದ್ದ ಚಿತ್ರ. ಡಾಂಟೆಯ ಡಿವೈನ್ ಕಾಮೆಡಿ ಎಂಬ ಕೃತಿಯಲ್ಲಿಯ ಚಿತ್ರಸರಣಿ ಈತ ರಚಿಸಿದುದು. ಮೇರಿಕನ್ಯೆಯ ಹಲವು ಚಿತ್ರಗಳನ್ನು ಈತ ರಚಿಸಿದ್ದ.

ಬೋಟ್ಟೀಚೆಲ್ಲೀಯ ಚಿತ್ರ ಶೈಲಿಯ ಮೇಲೆ ಶಿಲ್ಪಿ ಆಂಡ್ರಿಯಾ ಡೆಲ್ ವರೋಷಿಯೋ ಮತ್ತು ಚಿತ್ರಕಾರ-ಶಿಲ್ಪ ಆಂಟೋನಿಯೊ ಡೆಲ್ ವೊಲೈಯುಲೋರ ಇವರ ಪ್ರಭಾವ ಕಂಡುಬರುತ್ತದೆ. 1490ನೆಯ ದಶಕದ ಕೊನೆಯ ಸಾವೊನರೋಲ್ ಎಂಬಾತನ ಉಪದೇಶಗಳಿಂದ ತುಂಬ ಪ್ರಭಾವಿತನಾಗಿ, ತಾನು ರಚಿಸಿದ್ದ ಹಲವು ಲೌಕಿಕ ಸ್ವರೂಪದ ಚಿತ್ರಗಳನ್ನು ಸಾಂದ್ರೊ ಸುಟ್ಟುಹಾಕಿ ಅಲ್ಲಿಂದ ಮುಂದೆ ಧಾರ್ಮಿಕ ಸ್ವರೂಪದ ಚಿತ್ರಗಳನ್ನು ಮಾತ್ರ ರಚಿಸತೊಡಗಿದ.

ಮ್ಯಾಗ್ನಿಫಿಕೆಟ್ ಎಂಬ ಶೀರ್ಷಿಕೆಯ ಮೇರಿಕನ್ಯೆಯ ಚಿತ್ರ ಮೆಡಿಸಿ ಕುಟುಂಬದ ಸದಸ್ಯನೊಬ್ಬನ ಭಾವಚಿತ್ರ. ಇತರ ಅನೇಕ ಚಿತ್ರಗಳು ಮತ್ತು ಭಿತ್ತಿಚಿತ್ರಗಳು ಫ್ಲಾರೆನ್ಸಿನ ಉಫಿಜಿ ಗ್ಯಾಲರಿಯಲ್ಲಿ, ಅಡೊರೇಷನ್ ಆಫ್ ದಿ ಮಾಗಿ ಚಿತ್ರ ವಾಷಿಂಗ್‍ಟನ್ನಿನ ನ್ಯಾಷನಲ್ ಗ್ಯಾಲರಿಯಲ್ಲಿ, ಲಾಸ್ಟ್ ಕಮ್ಯೂನಿಯನ್ ಆಫ್ ಸೇಂಟ್ ಜೆರೊಮ್ ಚಿತ್ರ ನ್ಯೂಯಾರ್ಕಿನ ಮೆಟ್ರೊಪಾಲಿಟನ್ ಮ್ಯೂಸಿಯಮಿನಲ್ಲಿ ಮತ್ತು ಅಖನ್‍ಡೆನ್ಸ್ ಚಿತ್ರ ಬ್ರಿಟಿಷ್ ಮ್ಯೂಸಿಯಮಿನಲ್ಲಿ ಕಾಣಸಿಗುತ್ತವೆ. ಇನ್ನೂ ಹಲವಾರು ಚಿತ್ರಗಳು ಹಲವು ವಸ್ತುಸಂಗ್ರಹಾಲಯ, ಗ್ಯಾಲರಿ ಇಲ್ಲವೆ ಖಾಸಗಿ ಸಂಗ್ರಹಗಳಲ್ಲಿ ಸೇರಿಹೋಗಿವೆ.

ಸ್ಪಷ್ಟ ಹಾಗೂ ಸಪ್ರಮಾಣ ರೇಖಾವಿನ್ಯಾಸ, ಮೃದುವರ್ಣ ಸಂಯೋಜನೆ, ವಿಪುಲ ಅಲಂಕರಣ, ಕಾವ್ಯಾತ್ಮಕ ಭಾವಾಭಿವ್ಯಕ್ತಿ ಈತನ ಚಿತ್ರಗಳ ವಿಶಿಷ್ಟ ಲಕ್ಷಣಗಳು. ಪ್ರಕೃತಿಯಲ್ಲಾಗಲೀ ವಿಜ್ಞಾನ ಕ್ಷೇತ್ರಗಳಲ್ಲಾಗಲೀ ಅಷ್ಟಾಗಿ ಆಸಕ್ತಿ ಇಲ್ಲದ ಈತನಿಗೆ ಕ್ರೈಸ್ತ ಧರ್ಮದ ಬಗ್ಗೆ ಅಪಾರ ಶ್ರದ್ಧೆ.

1510 ಮೇ 17ರಂದು ಮರಣ ಹೊಂದಿದ. (ಎಚ್.ಎಂ.ಎನ್.ಆರ್.)