ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಡ್, ಯೋಹನ್ ಏಲರ್ಟ್

ವಿಕಿಸೋರ್ಸ್ದಿಂದ

ಬೋಡ್, ಯೋಹನ್ ಏಲರ್ಟ್ 1747-1826. ಆರ್ಮನಿಯ ಖಗೋಳ ವಿಜ್ಞಾನಿ. ಹ್ಯಾಂಬರ್ಗ್‍ನಲ್ಲಿ ಜನನ (19-1-1747). ಟಿಶಿಯಸ್‍ಬೋಡ್‍ನಿಯಮ ಅಥವಾ ಸರಳವಾಗಿ ಬೋಡ್‍ನ ನಿಯಮ ಎಂಬ ಪರಿಕಲ್ಪನೆಯ ಕಾರಣವಾಗಿ ಖಗೋಳ ವಿಜ್ಞಾನದ ಇತಿಹಾಸದಲ್ಲಿ ಈತನ ಹೆಸರು ಉಳಿದಿದೆ. ಸೂರ್ಯನಿಂದ ಗ್ರಹಗಳಿಗೆ ಇರುವ ದೂರಗಳನ್ನು ಬಂಧಿಸುವ ಸರಳ ಗಣಿತನಿಯಮವನ್ನು ವಿಟ್ಟೆನ್‍ಬರ್ಗಿನ ಟಿಶಿಯಸ್ ಎಂಬಾತ ಶೋಧಿಸಿದ್ದ (1766). ಇದನ್ನು ಬೋಡ್ ಬೆಳಕಿಗೆ ತಂದ. ಇದೊಂದು ಅನುಭವಜನ್ಯ (ಎಂಪಿರಿಕಲ್) ನಿಯಮ. ಇದನ್ನು ಪಡೆಯುವ ಕ್ರಮ : 0, 3, 6, 12, 24, 48, 96, 192, ...... ಎಂಬ ಗುಣೋತ್ತರ ಶ್ರೇಣಿಯನ್ನು ಬರೆಯಬೇಕು. ಇದರ ಪ್ರತಿಯೊಂದು ಪದಕ್ಕೂ 4ನ್ನು ಕೂಡಿಸಿ ಮೊತ್ತವನ್ನು 10ರಿಂದ ಭಾಗಿಸಬೇಕು. ಆಗ 0.4, 0.7, 1, 1.6, 2.8, 5.2, 10, 19.6, .................. ಎಂಬ ಶ್ರೇಣಿ ದೊರೆಯುತ್ತದೆ.

ಸೂರ್ಯ-ಭೂಮಿ ಸರಾಸರಿ ಅಂತರವನ್ನು 1 (ಇದರ ಹೆಸರು ಖಗೋಲಮಾನ) ಎಂದಿಟ್ಟುಕೊಂಡರೆ ಸೂರ್ಯ-ಗ್ರಹ ದೂರಗಳು ಈ ಮುಂದಿನಂತಿವೆ : ಬುಧ 0.387, ಶುಕ್ರ 0.723, ಭೂಮಿ 1, ಕುಜ 1.524, ಗುರು 5.203, ಶನಿ 9.539. (ಆ ದಿನಗಳಲ್ಲಿ ಶನಿಯಿಂದ ಆಚೆಗಿನ ಗ್ರಹಗಳು ಪತ್ತೆ ಆಗಿರಲಿಲ್ಲ.) ಇವೆರಡೂ ಶ್ರೇಣಿಗಳ ಪದಗಳನ್ನು ಹೋಲಿಸಿ ಬರೆದಾಗ ಮುಂದಿನಯಾದಿ ದೊರೆಯುತ್ತದೆ. ಬುಧ ಶುಕ್ರ ಭೂಮಿ ಕುಜ ... ಗುರು ಶನಿ ಟಿಶಿಯಸ್-ಬೋಡ್ ಶ್ರೇಣಿ ಪ್ರಕಾರ 0.4 0.7 1 1.6 2.8 5.4 10 ವಾಸ್ತವ ದೂರ ಪ್ರಕಾರ 0.387 0.723 1 1.5 ... 5.203 9.539

ಭಗವಂತ ಮಹಾಗಣಿತವಿದ, ಆತನ ಗಣಿತ ಧೀಮಂತಿಕೆಯ ಪ್ರಕಟಿತ ರೂಪವೇ ವಿಶ್ವ ಎಂಬುದಾಗಿ ಅನೇಕ ಜನ ವಿಜ್ಞಾನಿಗಳು ಪ್ರಾಮಾಣಿಕವಾಗಿ ನಂಬುತ್ತಿದ್ದ ದಿನಗಳಂದು ಈ ಮೇಲಿನ ಸ್ಥೂಲ ಹೊಂದಾಣಿಕೆ ಅವರ ನಂಬಿಕೆಗೆ ವಿಪುಳಗ್ರಾಸ ಒದಗಿಸಿತು. ಅಂದಮೇಲೆ ಟಿಶಿಯಸ್-ಬೋಡ್ ಶ್ರೇಣಿಯ ಖಾಲಿಸ್ಥಾನ (2.8) ಭರ್ತಿಮಾಡಲು ಒಂದು ಗ್ರಹ ಇರಲೇಬೇಕು, ಅದನ್ನು ತಾವು ಶೋಧಿಸಲೇಬೇಕು ಎಂಬುದಾಗಿ ಖಗೋಳ ವಿಜ್ಞಾನಿಗಳು ಕಣಕ್ಕಿಳಿದರು. ಈ ವ್ಯವಸ್ಥಿತ ಶೋಧನೆಯ ಫಲವೇ ಕ್ಷುದ್ರ ಗ್ರಹಗಳ ಆವಿಷ್ಕಾರ. (ವಿವರಗಳಿಗೆ ನೋಡಿ ಕ್ಷುದ್ರಗ್ರಹಗಳು.)

ಕ್ಷುದ್ರ ಗ್ರಹಗಳ ಶೋಧನೆಗೆ ಟಿಶಿಯಸ್-ಬೋಡ್ ನಿಯಮ ನಿಮಿತ್ತವಾಯಿತು ಎಂಬ ಕಾರಣದಿಂದ ಇಂದು ಅದಕ್ಕೆ ಐತಿಹಾಸಿಕ ಮಹತ್ತ್ವ ಒದಗಿದೆಯೇ ವಿನಾ ವಿಶ್ವದಲ್ಲಿ ಇರಬಹುದಾದ ಯಾವುದೇ ಗಣಿತ ನಿಯಮದಿಂದ ಅಲ್ಲ ಎಂಬುದು ಸ್ಪಷ್ಟ.

ಜರ್ಮನಿಯ ಭೌತವಿಜ್ಞಾನಿ, ಗಣಿತವಿದೆ, ಖಗೋಳ ವಿಜ್ಞಾನಿ ಹಾಗೂ ತತ್ತ್ವ ಚಿಂತಕನೆನಿಸಿದ್ದ ಯೊಹಾನ್ ಹೈನ್ರಿಕ್ ಲ್ಯಾಂಬರ್ಟ್ (1728-77) ಬೋಡ್‍ನನ್ನು ಬರ್ಲಿನ್ ಅಕಾಡಮಿಯ ವೇಧಶಾಲೆಗೆ ಆಹ್ವಾನಿಸಿ ಅಲ್ಲಿ ಅಂಕಗಣಿತವಿದನ ಹುದ್ದೆ ನೀಡಿದ. ಇದರಿಂದ ಕರಾರುವಾಕ್ಕು ಖಗೋಳಕೋಷ್ಟಕಗಳ ಪ್ರಕಟಣೆಗೆ ಅನುಕೂಲವಾಯಿತು. ಪಂಚಾಂಗಗಳನ್ನು ಮಾರಾಟಮಾಡಿದ್ದರಿಂದ ಬಂದ ಹಣವೇ ಆಗ ಅಕಾಡಮಿಯ ವರಮಾನವಾಗಿತ್ತು. ಆತನಕ ಅಲ್ಲಿಯ ಪಂಚಾಂಗಗಳ ಅಲ್ಪಗುಣ ಮಟ್ಟಗಳಿಂದಾಗಿ ಮಾರಾಟ ಅಷ್ಟಕ್ಕಷ್ಟೇ ಇತ್ತು. ಬೋಡ್‍ನ ನಿರ್ದೇಶನದಲ್ಲಿ ರಚಿತವಾದ ಪಂಚಾಂಗಗಳು ಪ್ರಕಟವಾದುವು (1774). ಲೆಕ್ಕಾಚಾರಗಳನ್ನು ಬೋಡ್ ಸ್ವತಃ ಮಾಡುತ್ತಿದ್ದ. ಈತ 1829ನೆಯ ಇಸವಿ ತನಕದ ಲೆಕ್ಕಾಚಾರಗಳನ್ನು ಮೊದಲೇಮಾಡಿ ಮುಗಿಸಿದ್ದ. ಈತನ ಪಂಚಾಂಗಗಳಲ್ಲಿ ಖಗೋಳವಿಜ್ಞಾನದ ಅಂಶಗಳು ಮಾತ್ರವಲ್ಲದೆ ಪ್ರಪಂಚದಲ್ಲಿ ಆಗುತ್ತಿದ್ದ ನವಾವಿಷ್ಕಾರ ವೀಕ್ಷಣೆಗಳ ಬಗ್ಗೆಯೂ ವಿವರ ಇರುತ್ತಿತ್ತು.

ಬೋಡ್‍ನನ್ನು ಆಸ್ಥಾನ ಖಗೋಳವಿಜ್ಞಾನಿಯಾಗಿ ನೇಮಕಮಾಡಲಾಯಿತು (1786.) ವೇಧಶಾಲೆಯ ನಿರ್ದೇಶಕನ ಸ್ಥಾನವೂ ಬರ್ಲಿನ್ ಅಕಾಡೆಮಿಯ ಸದಸ್ಯತ್ವವೂ ಲಭಿಸಿದುವು. ಸುಮಾರು ನಲವತ್ತು ವರ್ಷಪರ್ಯಂತ ಈತ ಈ ಸ್ಥಾನಗಳಲ್ಲಿ ಇದ್ದುಕೊಂಡು ತನ್ನ ಗಣಿತ ಲೆಕ್ಕಾಚಾರಗಳನ್ನೂ ವೀಕ್ಷಣೆಗಳನ್ನೂ ಮುಂದುವರಿಸಿದ. ಈತ ವೇಧಶಾಲೆಯ ಅಭಿವೃದ್ಧಿಗಾಗಿ ಹಲವಾರು ಸಲಹೆಗಳನ್ನು ಸೂಚಿಸಿದ್ಧನಾದರೂ ಅಕಾಡೆಮಿಯ ಕಟ್ಟಡದ ಐದನೆಯ ಅಂತಸ್ತಿನಲ್ಲಿದ್ದ ವೇಧಶಾಲೆ ಪ್ಯಾರಿಸ್ಸಿನ ವೇಧಶಾಲೆಯೊಂದಿಗಾಗಲಿ ಲಂಡನ್ನಿನ ವೇಧಾಶಾಲೆಯೊಂದಿಗಾಗಲಿ ಸ್ಪರ್ಧಿಸುವುದು ಸಾಧ್ಯವಾಗಲಿಲ್ಲ. ಗ್ರಹಗಳು, ಧೂಮಕೇತುಗಳು, ಯಮಳತಾರೆಗಳು ಇತ್ಯಾದಿಗಳನ್ನು ಕುರಿತಂತೆ ಸೀಮಿತ ಪರೀಕ್ಷೆಗಳನ್ನು ನಡೆಸುವಷ್ಟು ಮಾತ್ರ ಆ ವೇಧಶಾಲೆ ಸಜ್ಜುಗೊಂಡಿತ್ತು. ಅಷ್ಟೆ.

ಬೋಡ್ ನಿರ್ಮಿಸಿದ ಖಗೋಳಕೋಷ್ಟಕಗಳು ಮತ್ತು ಖಗೋಳಪಟಗಳು ಬಹಳ ವರ್ಷಗಳ ಕಾಲ ಖಗೋಳವಿಜ್ಞಾನಿಗಳಿಗೆ ಬಲು ಅನಿವಾರ್ಯವೆನಿಸಿದುವು. ಇವುಗಳ ಪೈಕಿ ಒಂದರಲ್ಲಿ 5000ಕ್ಕೂ ಹೆಚ್ಚಿನ ನಕ್ಷತ್ರಗಳನ್ನು ಪಟ್ಟಿಮಾಡಲಾಗಿತ್ತು. ಮತ್ತೊಂದರಲ್ಲಿ 17,000ಕ್ಕೂ ಹೆಚ್ಚಿನ ನಕ್ಷತ್ರಗಳ ಬಗ್ಗೆಯೂ ನೀಹಾರಿಕೆಗಳು, ನಕ್ಷತ್ರಗುಚ್ಛಗಳು, ವಿಲಿಯಮ್ ಹರ್ಷೆಲ್‍ನಿಂದ ಆವಿಷ್ಕಾರಗೊಂಡ ಯಮಳತಾರೆಗಳು ಇವನ್ನು ಕುರಿತಂತೆಯೂ ವಿವರಗಳಿದ್ದುವು.

ಬೋಡ್ 1826 ನವೆಂಬರ್ 23ರಂದು ಜರ್ಮನಿಯಲ್ಲಿ ನಿಧನ ಹೊಂದಿದ. (ಬಿ.ವಿ.ಎಸ್.)