ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಧನ

ವಿಕಿಸೋರ್ಸ್ದಿಂದ

ಬೋಧನ

ಆಂಧ್ರ ಪ್ರದೇಶದ ವೇಮುಲವಾಡಕ್ಕೆ ಸೇರಿದ ಒಂದು ಗ್ರಾಮ ಜೈನಧರ್ಮದ ಪುರಾತನ ಕೇಂದ್ರವಾಗಿದ್ದು ಎರಡನೆಯ ಅರಿಕೇಸರಿಯ ರಾಜಧಾನಿಯಾಗಿತ್ತು. ಈ ಗ್ರಾಮದ ಉತ್ತರದಿಕ್ಕಿನಲ್ಲಿರುವ ಮಣ್ಣಿನ ಗೋಡೆಯ ಕೋಟೆ ಮೇಲಿನ ಕಂಬವೊಂದರ ಮೇಲೆ ಕನ್ನಡ ಕವಿ ಪಂಪನ ಶಾಸನ ದೊರೆತಿದೆ. ಈ ಪ್ರದೇಶದಲ್ಲಿ ಕನ್ನಡ ಮತ್ತು ಸಂಸ್ಕøತದಲ್ಲಿರುವ ದೇವೇಂದ್ರ ಸಿದ್ಧಾಂತ ಮುನೀಶ್ವರರ ಶಿಷ್ಯ ಶ್ರೀ ಶುಭನಂದಿಯ ಗಂಡವಿಮುಕ್ತ ನಾಗಭಟ್ಟಾರಕ ಮತ್ತು ಚಂದ್ರಪ್ರಭ ಇವರ ಮೂರು ಶಾಸನಗಳು ಇವೆ.

ಈ ಗ್ರಾಮ ಪುರಾತನವಾದುದು. ಮಹಾಭಾರತದಲ್ಲಿ ಬರುವ ಏಕಚಕ್ರ ಪುರವೆಂದರೆ ಇದೆಂದು ಹೇಳಲಾಗುತ್ತಿದೆ. ವೇಮುಲವಾಡ ಶಿಲಾಶಾಸನ ಮತ್ತು ಪರಭರಣಿಯ ತಾಮ್ರಶಾಸನದಲ್ಲಿ ಈ ಗ್ರಾಮವನ್ನು ಪೋದನೇ ಎಂದೂ ಚೆನ್ನೂರ ಶಿಲಾಶಾಸನದಲ್ಲಿ (ಆದಿಲಾಬಾದು ಜಿಲ್ಲೆ) ಪೋದನ ಎಂದೂ ಹೇಳಲಾಗಿದೆ. ಹತ್ತು ಮತ್ತು ಹನ್ನೊಂದನೆಯ ಶತಮಾನದಲ್ಲಿ ಇದು ಪೋದನ, ಬೋಧನ ಹಾಗೂ ಬಹುಧಾನ್ಯ ಎಂಬ ಹೆಸರುಗಳನ್ನು ಹೊಂದಿತ್ತು. ವೈದಿಕ ಸಾಹಿತ್ಯದಲ್ಲಿ ಈ ಗ್ರಾಮಕ್ಕೆ ಬಹುಧಾನ್ಯಪುರ, ಬಹುಧಾನ್ಯಗಿರಿ ಮುಂತಾದ ಹೆಸರಗಳು ಕಂಡು ಬಂದರೆ, ಜೈನ ಸಾಹಿತ್ಯದಲ್ಲಿ ಪೌದನಪುರ ಎಂಬುದಾಗಿ ಕಂಡುಬರುತ್ತದೆ. ಪೌದನಪುರ ಜೈನ ದಿಗಂಬರಶಾಖೆಯವರಿಗೆ ಪವಿತ್ರ ಸ್ಥಳ. ಏಕೆಂದರೆ ಇದು ಪ್ರಥಮ ತೀರ್ಥಕರನಾದ ಆದಿನಾಥನ ಉತ್ರ ಬಾಹುಬಲಿಯ ರಾಜಧಾನಿಯಷ್ಟೇ ಅಲ್ಲ, ಆತ ಜ್ಞಾನಿಯಾದುದರ ಕುರುಹಾಗಿ ಆತನ ಅಣ್ಣ ಭರತ ಚಕ್ರವರ್ತಿ ಸ್ಥಾಪಿಸಿದ ಒಂದು ದೊಡ್ಡ ಶಿಲಾಪ್ರತಿಮೆ ಇದ್ದ ಸ್ಥಳ. ಈ ಪೌದನಪುರದ ವರ್ಣನೆ, ಉಲ್ಲೇಖಗಳು, ಜಿನಸೇನಾಚಾರ್ಯರ ಪೂರ್ವಪುರಾಣದಲ್ಲಿ ಬಂದಿದೆ. (ಕೆ.ಆರ್.ಐ.)