ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಧನೋಪಕರಣಗಳು

ವಿಕಿಸೋರ್ಸ್ದಿಂದ

ಬೋಧನೋಪಕರಣಗಳು - ಬೋಧಿಸುವ ಜ್ಞಾನ, ಕ್ರಿಯೆ ಮುಂತಾದ ಅಂಶಗಳನ್ನು ಸುಲಭವಾಗಿ ಗ್ರಹಿಸಿ ಕಲಿಕೆ ಯಶಸ್ವಿಯಾಗಿಯೂ ಬೋಧನೆ ಪರಿಣಾಮಕಾರಿಯೂ ಆಗುವಂತೆ ಮಾಡಲು ಬಳಸುವ ಸಾಧನಸಾಮಗ್ರಿಗಳು. ಕಲಿಕೆ ಮುಖ್ಯವಾಗಿ ಕಣ್ಣಿನ ಮೂಲಕ ಸಿದ್ಧಿಸುವುದೆಂದೂ ಕಿವಿ ಮತ್ತು ಇತರ ಇಂದ್ರಿಯಗಳು ಈ ಕಾರ್ಯದಲ್ಲಿ ಸಹಾಯಕ ಪಾತ್ರವಹಿಸುವುವೆಂದೂ ಈಚಿನ ಸಂಶೋಧನೆಗಳು ಸೂಚಿಸಿವೆ. ವಾಸ್ತವತೆ ಹೀಗಿದ್ದರೂ ಸಾಮಾನ್ಯಭಾವನೆ ಮಾತ್ರ ಕಲಿಕೆಯಲ್ಲಿ ಕಣ್ಣು ಮತ್ತು ಕಿವಿ ಜ್ಞಾನೇಂದ್ರಿಯಗಳಿಗಿಂತ ಹೆಚ್ಚಿನ ಪಾತ್ರ ವಹಿಸುತ್ತವೆಂದಿದೆ. ಆದ್ದರಿಂದ ಬೋಧನೆ ಯಶಸ್ವಿಯಾಗುವಂತೆ ಮಾಡಲು ಅಧ್ಯಾಪಕರು ಸಾಮಾನ್ಯವಾಗಿ ಬಳಸುವ ಸಾಧನಗಳು ದೃಗುಪಕರಣಗಳು ಇಲ್ಲವೇ ಶ್ರವ್ಯೋಪಕರಣಗಳು ಆಗಿರುತ್ತವೆ. ಅಂಥ ಕೆಲವು ಮುಖ್ಯ ಉಪಕರಣಗಳನ್ನೂ ಅವುಗಳ ಬಳಕೆಯನ್ನೂ ಸೂಕ್ಷ್ಮವಾಗಿ ಮುಂದೆ ಪರಿಶೀಲಿಸಿದೆ.

ದೃಗುಪಕರಣಗಳು : ವಸ್ತು, ಸನ್ನಿವೇಶ, ಕ್ರಿಯೆ ಮುಂತಾದ ಅಂಶಗಳನ್ನು ಹಾಗೂ ಅವುಗಳ ವಿವರಗಳನ್ನು ಚೆನ್ನಾಗಿ ಗ್ರಹಿಸಲು ಅನೇಕ ಉಪಕರಣಗಳು ತರಗತಿಯಲ್ಲಿ ಬಳಕೆಗೆ ಬಂದಿವೆ. ಎಲೆ, ಹೂವು, ಕಾಂಡ ಮುಂತಾದ ಸಸ್ಯಭಾಗಗಳನ್ನೂ ಅವುಗಳ ಸೂಕ್ಷ್ಮ ರಚನೆಯನ್ನೂ ಸುಲಭವಾಗಿ ವೀಕ್ಷಿಸಲು ವಿಸ್ತರಣ ಮಸೂರವನ್ನು ಬಳಸುವರು. ಇನ್ನು ಅವು ಬರಿಯ ಕಣ್ಣಿಗೆ ಕಾಣದ ಸೂಕ್ಷ್ಮ ಕೋಶಗಳೋ ಕಣಗಳೋ ಆಗಿದ್ದರೆ ಅವನ್ನು ಸಾಕಷ್ಟು ಲಂಬಿಸಿ ತೋರಿಸಲು ಸೂಕ್ಷ್ಮದರ್ಶಕ ಬಳಸುತ್ತಾರೆ. ಸೂಕ್ಷ್ಮದರ್ಶಕಕ್ಕೂ ನಿಲುಕದ ಕೆಲವು ಮೈಕ್ರೋಬ್ ವೈರಸ್ ಮುಂತಾದವನ್ನು ದರ್ಶಿಸಲು ಎಲೆಕ್ಟ್ರಾನಿಕ್ ಸೂಕ್ಷ್ಮದರ್ಶಕವನ್ನು ಬಳಸುತ್ತಾರೆ. ಪ್ರಾಣಿ ಅಥವಾ ಸಸ್ಯದ ಅಂಗಕ್ರಿಯೆಗಳು. ಸೂಕ್ಷ್ಮಜೀವಿಗಳ ದೇಹಭಾಗಗಳು ಮುಂತಾದವನ್ನು ವೀಕ್ಷಿಸಲು ಮೈಕ್ರೊಪ್ರೊಜೆಕ್ಟರಿನ (ಸೂಕ್ಷ್ಮ ಪ್ರಕ್ಷೇಪಕ) ಬಳಕೆ ಉಂಟು. ಇದು ಸೂಕ್ಷ್ಮದರ್ಶಕ ಮತ್ತು ಪ್ರಕ್ಷೇಮಣ ಯಂತ್ರಗಳನ್ನು ಅಳವಡಿಸಿಕೊಂಡಿದ್ದು ಅಂಗಭಾಗಗಳಲ್ಲಿ ಜೀವಕ್ರಿಯೆಗಳು ನಡೆಯುವುದನ್ನು ನೋಡಲು ಅವಕಾಶ ಕಲ್ಪಿಸಿದೆ. ರಕ್ತಪರಿಚಲನೆ, ಆಹಾರ ಜೀರ್ಣಕ್ರಿಯೆ, ಸೂಕ್ಷ್ಮ ಜೀವಿಗಳ ದೇಹದಲ್ಲಿ ನಡೆಯುವ ವಿವಿಧ ಜೀವಕ್ರಿಯೆ ಮುಂತಾದವನ್ನು ವಿದ್ಯಾರ್ಥಿಗಳಿಗೆ ಸ್ವಾಭಾವಿಕ ಸ್ವರೂಪದಲ್ಲಿ ಪರಿಚಯಮಾಡಿಕೊಡಲು ಇದು ಉಪಯುಕ್ತ ಉಪಕರಣ. ದೂರದ ವಸ್ತುಗಳನ್ನು ನೋಡಲು ದೂರದರ್ಶಕವನ್ನು ಬಳಸುವರು. ಇವೆಲ್ಲವನ್ನೂ ಬಲುಮಟ್ಟಿಗೆ ಒಬ್ಬೊಬ್ಬರಾಗಿ ಬಳಸಬೇಕಾಗುತ್ತದೆ. ಇಡೀ ತರಗತಿಗೆ ಇದನ್ನು ಪ್ರದರ್ಶಿಸುವುದು ಅಗತ್ಯವೆನಿಸದು. ಈ ಕಾರ್ಯದಲ್ಲಿ ಚಿತ್ರ, ಚಿತ್ರಪಟ, ನಕ್ಷೆ ಮುಂತಾದವನ್ನು ತರಗತಿಯ ಎದುರಿಗೆ ಗೋಡೆಯ ಮೇಲೆ ಅಥವಾ ಪರದೆಯ ಮೇಲೆ ಪ್ರಕ್ಷೇಪಿಸಿ ತೋರಿಸಲು ಮಾಯಾದೀಪ ಪ್ರಚಾರಕ್ಕೆ ಬರುತ್ತಿದೆ. ಇದರಿಂದ ಪ್ರದರ್ಶನಕಾಲ ಮಿಗುವುದಲ್ಲದೆ ವಿಷಯ, ವಸ್ತು, ಸನ್ನಿವೇಶ ಮುಂತಾದವುಗಳ ರಚನಾದಿ ವೈಶಿಷ್ಟ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗ್ರಹಿಸುವಂತೆ ಮಾಡಬಹುದು ಕೂಡ. ಈಚೆಗೆ ಚಿತ್ರ ಅಥವಾ ಚಿತ್ರಪಟಗಳನ್ನು ಬಳಸುವ ಕಾರ್ಯಕ್ರಮ ಜನಪ್ರಿಯವಾಗುತ್ತಿದೆ. ತರಗತಿಯಲ್ಲಿ ತೋರಿಸಲಾಗದ ಸಸ್ಯ ಮತ್ತು ಪ್ರಾಣಿಗಳ ಅಂಗಭಾಗಗಳನ್ನೂ ಐತಿಹಾಸಿಕ ಮತ್ತು ಪುಣ್ಯಕ್ಷೇತ್ರಗಳನ್ನೂ ದರ್ಶಕದ ಕೆಳಗೆ ಇಟ್ಟು ಪರದೆಯ ಮೇಲಕ್ಕೆ ಪ್ರಕ್ಷೇಪಿಸುವುದರ ಮೂಲಕ ಬೋಧನೆ ಸಾಮೂಹಿಕವಾಗಿ ಪರಿಣಾಮಕಾರಿಯಾಗುವಂತೆ ಮಾಡಲಾಗುತ್ತಿದೆ. ನಿಶ್ಚಲ ಚಿತ್ರಗಳಂತೆ ಚಲನಚಿತ್ರಗಳನ್ನೂ ಬೋಧನೆಗೆ ಬಳಸಲಾಗುತ್ತಿದೆ. ಕೆಲವು ಅಂಗಕ್ರಿಯೆಗಳನ್ನು ಚಿತ್ರ ನಿಧಾನವಾಗಿ ಸಾಗುವಂತೆ ಮಾಡಿ ಜೀವಕ್ರಿಯೆಗಳೇ ಮುಂತಾದವನ್ನು ಬೋಧಿಸಲು ಬಳಸಲಾಗುವುದು. ಮೌನ ಚಿತ್ರಗಳಂತೆ ಶಬ್ದಚಿತ್ರಗಳೂ ಬಳಕೆಗೆ ಬಂದಮೇಲೆ ಇವನ್ನು ಬಳಸಿಕೊಂಡು ಇಡೀ ಪಾಠಗಳನ್ನೇ ಬೋಧಿಸುವ ವಿಶಿಷ್ಟ ಬೋಧನ ಕ್ರಮವೂ ಆರಂಭವಾಗಿದೆ. ದೃಷ್ಟಿಮಾಂದ್ಯದವರಿಗೆ ಅನುಕೂಲಿಸುವ ಮಸೂರಗಳೂ ಬೋಧನೋಪಕರಣಗಳ ಜಾತಿಗೆ ಸೇರುತ್ತವೆ.

ಪ್ರಯೋಗ ಪ್ರದರ್ಶನ, ಪ್ರವಾಸ : ವಿಜ್ಞಾನ, ಭೂಗೋಳ ಮುಂತಾದ ವಿಷಯ ಬೋಧನೆಯಲ್ಲಿ ಪ್ರಯೋಗಗಳು ಬೋಧನೆಗೆ ಒಳ್ಳೆಯ ಉಪಕರಣ. ಅಧ್ಯಾಪಕರು ಪ್ರಯೋಗ ನಡೆಸಿ ಇಡೀ ತರಗತಿಗೆ ಪಾಠಬೋಧಿಸಬಹುದು. ಅವಕಾಶವಿದ್ದೆಡೆ ಒಬ್ಬೊಬ್ಬ ವಿದ್ಯಾರ್ಥಿ ಅಧ್ಯಾಪಕರ ನೇತೃತ್ವದಲ್ಲಿ ಪ್ರಯೋಗ ನಡೆಸಿ ಕಲಿಕೆ ಚೆನ್ನಾಗಿ ಸಿದ್ಧಿಸುವಂತೆ ಮಾಡಿಕೊಳ್ಳಬಹುದು. ಹೋಗಿ ನೋಡಲಾಗದ ಮತ್ತು ಶಾಲಾಕಾಲೇಜುಗಳಲ್ಲಿ ಕಾಣಲಾಗದ ವಸ್ತು, ಪ್ರಾಣಿ, ಸಸ್ಯ ಮುಂತಾದವನ್ನು ಸಂಗ್ರಹಿಸಿ ಒಂದೆಡೆ ಬೋಧನೆಗೆ ಬಳಸಿಕೊಳ್ಳಬಹುದು.

ಪಠ್ಯಪುಸ್ತಕ, ಕಪ್ಪುಹಲಗೆ: ಬರವಣಿಗೆ ಬಳಕೆಗೆ ಬಂದ ಮೇಲೆ ಪಠ್ಯಪುಸ್ತಕ ಬಲು ಮುಖ್ಯ ಬೋಧನೋಪಕರಣವಾಗಿ ಬಳಕೆಯಲ್ಲಿದೆ. ವಿಷಯಜ್ಞಾನಕ್ಕೂ ಮುಖ್ಯಾಂಶಗಳ ಕಂಠಪಾಠಕ್ಕೂ ಸಹಕಾರಿಯಾಗುವಂತೆ ಇವು ರಚನೆಯಾಗಿರುತ್ತವೆ. ಬಲುಕಾಲದಿಂದ ಅಧ್ಯಾಪಕರು ಪಾಠಹೇಳಿಕೊಡುವುದೂ ವಿದ್ಯಾರ್ಥಿಗಳು ಕಲಿತು ಒಪ್ಪಿಸುವುದೂ ಪಠ್ಯಪುಸ್ತಕದ ಸಹಾಯದಿಂದಲೇ. ಆದರೆ ಈ ಶತಮಾನದ ಆದಿಯಿಂದ ಪಠ್ಯಪುಸ್ತಕಕ್ಕೆ ಸರಿಸಮವಾಗಿ ಕಪ್ಪುಹಲಗೆ ಬಳಕೆಗೆ ಬಂದಿದೆ. ಶ್ತವಣ ದೌರ್ಬಲ್ಯ ಉಳ್ಳವರಿಗೆ ಹಲಗೆಯ ಮೇಲೆ ಬರೆದುದನ್ನು ನೋಡಿ ತಿಳಿದುಕೊಳ್ಳಲು ಸಾಧ್ಯವಾಗುವುದರಿಂದ ಅವರಿಗೆ ಮೇಲೆ ಇದೊಂದು ವಿಶಿಷ್ಟ ಬೋಧನೋಪಕರಣ.

ಶ್ರವ್ಯ ಬೋಧನೋಪಕರಣಗಳು: ಕಿವಿಯ ಮೂಲಕ ಗ್ರಹಿಸತಕ್ಕ ಅಂಶಗಳು ಬೇಕಾದ ಹಾಗೆ ಇರುವುದರಿಂದ ವಿವಿಧರೂಪದ ಶ್ರವವ್ಯೋಪಕರಣಗಳು. ಬೋಧನೆಗೆ ನೆರವಾಗುತ್ತಿವೆ. ಗ್ರಾಮೋಪೋನ್ ಧ್ವನಿವರ್ಧಕ ಇವು ಸಾಮಾನ್ಯ ಶ್ರವ್ಯೋಪಕರಣಗಳು. ಉಚ್ಚಾರಣೆ ವಿಷಯ ವಿವರಣೆ ಕಂಠಪಾಠ ಮುಂತಾದವುಗಳ ಬೋಧನೆಗೆ ಈ ಉಪಕರಣಗಳನ್ನು ಬಳಸಬಹದು. ಶ್ರವಣದುರ್ಬಲರಿಗೆ ಚೆನ್ನಾಗಿ ಕೇಳಿಸುವಂತೆ ವಿವಿಧ ರೀತಿಯ ಧ್ವನಿವರ್ಧಕಗಳು ಬಳಕೆಗೆ ಬರುತ್ತಿವೆ. ಅನ್ಯಭಾಷಾಬೋಧನೆಗೆ ರಿಕಾರ್ಡುಗಳ ಧ್ವನಿಮುದ್ರಿಕೆಯನ್ನು ಬಳಸಿಕೊಂಡು ಉಚ್ಚಾರಣೆಯೇ ಮುಂತಾದ ಅಂಶಗಳನ್ನು ಚೆನ್ನಾಗಿ ಬೋಧಿಸಲು ಬಳಸಲಾಗುತ್ತಿದೆ. ಇದೇ ಉದ್ದೇಶದಿಂದ ಅನ್ಯಭಾಷಾ ಬೋಧನೆ ಭಾಷಾ ಪ್ರಯೋಗಗಳು ಅಸ್ತಿತ್ವಕೆ ಬರುತ್ತಿವೆ.

ರೇಡಿಯೊ ದೂರದರ್ಶನ ಉಪಕರಣಗಳು ಈಗ ಸರ್ವತ್ರ ಪ್ರಚಾರದಲ್ಲಿದ್ದು ಅತ್ಯಂತ ಪರಿಣಾಮಕಾರಿಯಾದ ಬೋಧನೋಪಕರಣ ಎನ್ನಿಸಿವೆ. (ಜಿ.ಎಸ್.ಕೆ.ಇ.)