ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಧಾಯನ

ವಿಕಿಸೋರ್ಸ್ದಿಂದ

ಬೋಧಾಯನ ಧರ್ಮಶಾಸ್ತ್ರ ಪ್ರವರ್ತಕರಲ್ಲಿ ಒಬ್ಬ. ಗೌತಮ, ವಸಿಷ್ಠ, ಆಶ್ವಲಾಯನರಂತೆ ಅನುಸರಣೀಯ ಆಚಾರ್ಯಪುರುಷ. ಆಪಸ್ತಂಬ ಸೂತ್ರಕಾರನೆಂದು ಪ್ರಸಿದ್ಧನಾದರೆ ಬೋಧಾಯನ ಪ್ರವಚನಕಾರ. ದೋಷರಹಿತ ವೈದಿಕಾಚರಣೆ ಉಳ್ಳವನಾದ್ದರಿಂದ ಈತನ ದೈನಂದಿನ ಕ್ರಿಯಾಚರಣೆಯೇ ಮುಂದಿನ ಪೀಳಿಗೆಗೆ ಧರ್ಮಶಾಸನವಾಗಿ ಪರಿಣಮಿಸಿತು. ಕೃಷ್ಣಯಜುರ್ವೇದದ ಬೋಧಕನಾದ ಈತ ಕುಲಪತಿಯಾಗಿ ಕಣ್ವಬೋಧಾಯನನೆಂದು ಪ್ರಸಿದ್ಧವಾಗಿದ್ದಾನೆ. ಈತನ ಶಿಷ್ಯಪರಂಪರೆ ಮತತ್ರಯರಲ್ಲಿ ಅವಿಚ್ಛಿನ್ನವಾಗಿ ವಂಶಾವಳಿಗಳಿಂದ ಇಂದಿಗೂ ಬೋಧಾಯನಾದ್ಯಾಚಾರ್ಯೆಭ್ಯೋನಮಃ ಎಂದು ಕರ್ಮಾರಂಭಗಳಲ್ಲಿ ಸ್ಮರಿಸುತ್ತಾರೆ.

ಪ್ರಾಚೀನವಾದ ವೇದಗಳು ಕ್ರಮೇಣ ಸರಳೀಕರಿಸಲ್ಪಟ್ಟವು. ಮಂದಬುದ್ದಿಯುಳ್ಳವರ ಉಪಯೋಗಕ್ಕಾಗಿ ಅಲ್ಪಾಕ್ಷರಗಳಿಂದ ಸಂದೇಹರಹಿತವಾದ ಸಾರವತ್ತಾದ ಸರ್ವಸಮ್ಮತವಾದ ನಿರೂಪಣೆಯುಳ್ಳ ಗ್ರಂಥಗಳು ಸೂತ್ರಗಳು ಎಂಬ ಹೆಸರಿನಿಂದಲೂ ರಚಿಸಲ್ಪಟ್ಟವು. ಸೂತ್ರಗಳಲ್ಲಿಯೂ ಅನೇಕ ವಿಧಗಳಿವೆ: ಬೋಧಾಯನ ಶುಲ್ಬಸೂತ್ರ, ಬೋಧಾಯನ ಕಲ್ಪಸೂತ್ರ, ಬೋಧಾಯನ ಗೃಹ್ಯಸೂತ್ರ, ಬೋಧಾಯನಶ್ರೌತಸೂತ್ರ, ಬೋಧಾಯನ ಧರ್ಮಸೂತ್ರ, ಬೋಧಾಯನ ಸ್ಮøತಿ ಸ್ರೂತ್ರಗಳೆಲ್ಲವೂ ವೈದಿಕ ಪ್ರಕ್ರಿಯೆಗಳಾದ ಯಜ್ಞಯಾಗಗಳ ಉಪಕರಣ ಯಾಗಭೂಮಿ ಹಾಗೂ ತತ್ಸಂಬಂಧಿತ ಪ್ರಯೋಗ ಮತ್ತು ಗೃಹಸ್ಥನ ನಿತ್ಯ ನೈಮಿತ್ತಿಕಗಳ ವಿವರಣೆ, ಶ್ರೌತ ಮತ್ತು ಸ್ಮಾರ್ತಗಳೆಂಬ ಭೇದಗಳಿಂದ ದಿನನಿತ್ಯದಲ್ಲಿ ಆಚರಿಸಲ್ಪಡಬೇಕಾದ ರೀತಿನೀತಿಗಳ ವಿವರಣೆಯೇ ಆಗಿವೆ. ಈ ಗ್ರಂಥಗಳು ಜನನಪೂರ್ವ ಗರ್ಭಾಧಾನಾದಿ ಸಂಸ್ಕಾರಗಳನ್ನೊಳಗೊಂಡು ಮರಣಾನಂತರದ ಔಧ್ರ್ವದೇಹಿಕ ಸಂಸ್ಕಾರ ಪರ್ಯಂತ ವಿಹಿತಕರ್ಮ ಆಚರಿಸದೇ ಇರುವುದು ಮತ್ತು ಪ್ರತಿಷಿದ್ಧಾಚರಣೆಗೆ ಪ್ರಾಯಶ್ಚಿತ್ತ ಇವೇ ಮೊದಲಾದ ವಿಷಯಗಳನ್ನು ಸೂಕ್ಷ್ಮವಾಗಿ ತಿಳಿಸುತ್ತವೆ.

ಬೋಧಾಯನ ಗೋತ್ರ ವಿವರಣೆಯನ್ನು ನೀಡಿದ್ದಾನೆ. ದಾನಮಾಡಬೇಕಾದರೆ ಗೋತ್ರ ಪ್ರವರಗಳನ್ನು ಉಚ್ಚರಿಸಬೇಕೆನ್ನುವರು. ಬೋಧಾಯನ ಧರ್ಮಸೂತ್ರದಲ್ಲಿ ವ್ಯವಹಾರೋಪಯುಕ್ತವಾದ ನಿರೂಪಣೆ ಇದೆ. ನಾಲ್ಕು ಪ್ರಶ್ನೆಗಳಿಂದ ಕೂಡಿರುವ ಈ ಗ್ರಂಥ ಪ್ರಮಾಣಭೂತವಾಗಿದೆ. ಧರ್ಮಗಳ ವಿಭಾಗಗಳನ್ನು ಐದು ವಿಧವಾಗಿ ವಿಂಗಡಿಸಲಾಗಿದೆ. ವರ್ಣಧರ್ಮ, ಆಶ್ರಮಧರ್ಮ, ವರ್ಣಾಶ್ರಮಧರ್ಮ, ಸಾಧಾರಣಧರ್ಮ, ಅಸಾಧಾರಣ ಧರ್ಮಗಳೆಂದು ವಿಭಜಿಸಲಾಗಿದೆ. ಸ್ಥೂಲವಾಗಿ ವಯೋವಸ್ಥಾ ವಿಶೇಷವಾದ ಸಂಸ್ಕಾರಗಳು, ಕರ್ಮಗಳು, ಪುರುಷಾರ್ಥಗಳು, ದಾನ ಶುಭಶೋಭನಾದಿ ಕಾರ್ಯಗಳು, ರಾಜಧರ್ಮ, ನ್ಯಾಯಾಲಯ, ಸ್ತ್ರೀಧರ್ಮ ಹಾಗು ಹಕ್ಕುಬಾದ್ಯತೆಗಳು ವಂಶಪಾರಂಪರ್ಯ ಸೊತ್ತುಗಳು ದಾಯವಿಭಾಗ ಮತ್ತು ಗುರುಕುಲವಾಸ, ಸ್ನಾತಕ ಗೃಹಸ್ಥಾಶ್ರಮ, ವಾನಪ್ರಸ್ಥಧರ್ಮಗಳು, ಧರ್ಮಬಾಹಿರವಾದ ಕರ್ಮಗಳಿಗೆ ಸ್ಥೂಲ ಹಾಗೂ ಸೂಕ್ಷ್ಮರೀತಿಯ ಪ್ರಾಯಶ್ಚಿತ್ತಗಳು ವಿವರಿಸಲ್ಪಟ್ಟಿವೆ.

ಬೋಧಾಯನನ ದೇಶ ಕಾಲಗಳು : ಈತ ದಕ್ಷಿಣ ದೇಶದವ. ಕಾಲ ಕ್ರಿಪೂ.ಸು. 500-200 ಇರಬಹುದೆಂದು ಪಿ.ವಿ. ಕಾಣೆಯವರ ಅಭಿಪ್ರಾಯ. ನಿರ್ದಿಷ್ಟವಾದ ತಿಳಿವಳಿಕೆಗೆ ಆಧಾರವಿಲ್ಲವಾದರೂ ಗೌತಮಧರ್ಮಸೂತ್ರದ ಕೆಲವು ವಾಕ್ಯಗಳು ಬೋಧಾಯನ ಧರ್ಮಸೂತ್ರದಲ್ಲಿ ಸಿಗುತ್ತವೆ ಮತ್ತು ಆಪಸ್ತಂಭ ಧರ್ಮಸೂತ್ರಗಳಲ್ಲೂ ಬೋಧಾಯನ ಧರ್ಮಸ್ರೂತ್ರಗಳ ಉಲ್ಲೇಖವಿದೆ. ಆನೇಕ ಪ್ರಮಾಣಗಳಿಂದ ಗೌತಮ ವಸಿಷ್ಠರಿಗಿಂತ ಅರ್ವಾಚೀನನೂ ಆಪಸ್ತಂಬನಿಗಿಂತ ಪ್ರಾಚೀನನೂ ಎಂಬ ವಾದವೂ ಇದೆ. ಕ್ರಿ.ಶ. 9ನೆಯ ಶತಮಾನದ ಪಲ್ಲವ ವಂಶದ ನಂದಿವರ್ಮ ತನ್ನ ಶಾಸನದಲ್ಲಿ ಬೋಧಾಯನನ ಹೆಸರನ್ನು ಉಲ್ಲೇಖಿಸಿದ್ದಾನೆ. 14ನೆಯ ಶತಮಾನದ ವೇದಭಾಷ್ಯ ಬರೆದ ಸಾಯಣ ಒಬ್ಬ ಬೋಧಾಯನನಾಗಿದ್ದಾನೆ. ಕಣ್ವಬೋಧಾಯನ ಪರಂಪರೆಯಲ್ಲಿ ಬೋಧಾಯನ ಎಂಬ ಹೆಸರಿನಿಂದ ಅನೇಕರು ಗ್ರಂಥ ರಚಿಸಿರಬೇಕೆಂಬುದು ಪಾಶ್ಚಾತ್ಯ ವಿದ್ವಾಂಸರ ಅಭಿಪ್ರಾಯ. ಉದಾಹರಣೆಗೆ ಮನುಸ್ಮøತಿಯನ್ನು ಭೃಗು ಉಳಿದವರಿಗೆ ಉಪದೇಶಿಸಿದಂತೆ ಸುಮಾರು 17ನೆಯ ಶತಮಾನದ ಅನಂತರದ ವೆಂಕಟೇಶಭಟ್ಟ ಎಂಬಾತ ಬೋಧಾಯನೀಯ ವೆಂಕಟೇಶಪ್ರಯೋಗಮಾಲ ಎಂಬ ಗ್ರಂಥವನ್ನು ಬೋಧಾಯನಕಾರಿಕೆಯೊಂದಿಗೆ ಪ್ರಕಟಿಸಿದ್ದಾನೆ. ಆಚಾರ್ಯತ್ರಯರೂ ಬ್ರಹ್ಮಸೂತ್ರ ಭಾಷ್ಯಾರಂಭದಲ್ಲಿ ಬೋಧಾಯನಕೃತ ಬ್ರಹ್ಮಸೂತ್ರ ವೃತ್ತಿಯ ವಿಷಯವಾಗಿ ಪ್ರಸ್ತಾವಿಸುತ್ತಾರೆ. (ಕೆ.ಎಂ.ಬಿ.)