ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಧಿಧರ್ಮ

ವಿಕಿಸೋರ್ಸ್ದಿಂದ

ಬೋಧಿಧರ್ಮ ಕ್ರಿ.ಶ.450-535. ಜಪಾನಿನ ಜೆನ್ ಬೌದ್ಧ ಸಂಪ್ರದಾಯದ ಸಂಸ್ಥಾಪಕ. ಬೌದ್ಧ ಧರ್ಮದ ಮಹಾಯಾನ ಶಾಖೆಗೆ ಸೇರಿದವ. ಈತನ ಜನ್ಮಸ್ಥಳದ ಬಗ್ಗೆ ಭಿನ್ನರೀತಿಯ ಹೇಳಿಕೆಗಳಿವೆ. ಚೀನೀ ಸಂಪ್ರದಾಯದ ಪ್ರಕಾರ ಈತ ದಕ್ಷಿಣ ಭಾರತದಿಂದ ಚೀನಾದೇಶಕ್ಕೆ ಹೋದನೆಂದೂ ಇನ್ನೊಂದು ಸಂಪ್ರದಾಯದ ಪ್ರಕಾರ ಈತ ಮದ್ರಾಸಿನ ಬಳಿ ಇರುವ ಕಾಂಜೀವರಮಿನಲ್ಲಿ ಹುಟ್ಟಿ ಬೇರೆ ಬೇರೆ ಸ್ಥಳಗಳಲ್ಲಿ ವಿದ್ಯಾಭ್ಯಾಸ ಮಾಡಿದನೆಂದೂ ಹೇಳಲಾಗಿದೆ. ಲೋಯಾಂಗ್ ಚಿಯಾಲಾನ್‍ಚಿ ಎಂಬಾತ ಈತ ಪರ್ಷಿಯಾದಿಂದ ಭಾರತಕ್ಕೆ ಬಂದು ಅನಂತರ ಚೀನಾದೇಶಕ್ಕೆ ಬಂದನೆಂದು ತಿಳಿಸುತ್ತಾನೆ. ಅನೇಕರ ಪ್ರಕಾರ ಈತ ಒಬ್ಬ ಕಾಲ್ಪನಿಕ ವ್ಯಕ್ತಿ. ಹೀಗಾಗಿ ಈತನ ಜನ್ಮಸ್ಧಳದ ಬಗ್ಗೆ ಮಾತ್ರವಲ್ಲ, ಈತನ ಅಸ್ತಿತ್ವದ ಬಗ್ಗೆಯೇ ಸಂದೇಹವಿರುವುದನ್ನು ಕಾಣಬಹುದು. ಅದು ಏನೇ ಇರಲಿ ಈತನ ಹೆಸರಿನಲ್ಲಿ ಬೆಳೆದ ಧ್ಯಾನ ಸಂಪ್ರದಾಯವೊಂದು ವಿಶೇಷವಾಗಿ ಜಪಾನಿನಲ್ಲಿ ಬೆಳೆದು ಜನಪ್ರಿಯವಾಯಿತು.

ಸಂಸ್ಕøತದ ಧ್ಯಾನಪದ ಚೀನೀ ಭಾಷೆಯಲ್ಲಿ ಜಾನ್ ಆಗಿದೆ. ಅದೇ ಜಪಾನೀ ಭಾಷೆಯಲ್ಲಿ ಜೆóನ್ ಆಗುತ್ತದೆ. ಈ ಸಂಪ್ರದಾಯ ಭಾರತದಲ್ಲಿ ಅಷ್ಟು ಪರಿಚಿತವಲ್ಲ. ಇದು ಹೇಗೆ ಪ್ರಾರಂಭವಾಯಿತೆನ್ನುವುದರ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ. ಒಮ್ಮೆ ಬುದ್ಧ ಸುವರ್ಣ ತಾವರೆಯನ್ನು (ಬಣ್ಣದ) ಕೈಯಲ್ಲಿ ಎತ್ತಿ ಹಿಡಿದು ಅದನ್ನೇ ನೋಡುತ್ತ ಮೌನವಾಗಿ ನಿಂತ. ಆತನ ಶಿಷ್ಯನಾದ ಕಾಶ್ಯಪ ಅದನ್ನು ನೋಡಿ ನಸುನಕ್ಕ. ಆ ನಸುನಗೆಯೇ ಧ್ಯಾನ ಸಂಪ್ರದಾಯದ ಉಗಮಕ್ಕೆ ಕಾರಣವಾಯಿತು. ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದ 28 ತಲೆಮಾರುಗಳಲ್ಲಿ ಕಡೆಯವನೇ ಬೋಧಿಧರ್ಮ. ಅಲ್ಲಿಯ ತನಕ ಯಾವ ವ್ಯವಸ್ಥೆಯೂ ಇಲ್ಲದೆ ಇದ್ದ ಧ್ಯಾನ ಸಂಪ್ರದಾಯದ ಕಟ್ಟಡಕ್ಕೆ ಈತ ಭದ್ರ ಬುನಾದಿ ಹಾಕಿ ನಿಯಮಾವಳಿಗಳನ್ನು ರೂಪಿಸಿ ಸರಳ ಆಚಾರಗಳನ್ನು ವಿಧಿಸಿದ.

ಈತನ ಹುಟ್ಟು ಬೆಳೆವಣಿಗೆ ಎಲ್ಲಿಯಾದರೂ ಆಗಿರಲಿ ಈತ ದಕ್ಷಿಣ ಭಾರತದಿಂದ ಚೀನಾದೇಶದ ಕ್ಯಾಂಟನ್ ನಗರಕ್ಕೆ ಹೋದನೆಂಬುದು ಹಲವಾರು ಮೂಲಗಳಿಂದ ತಿಳಿದುಬರುತ್ತದೆ. ಈತನನ್ನು ಚೀನಾಕ್ಕೆ ಬರಮಾಡಿಕೊಂಡ ಚಕ್ರವರ್ತಿ ಲಿಯಾಂಗ್‍ವೂ ತಿ ಬಹಳ ಉತ್ಸಾಹದಿಂದ ತಾನು ಮಾಡುತ್ತಿದ್ದ ಧಾರ್ಮಿಕ ಕಾರ್ಯಗಳನ್ನು ತೋರಿಸಿದ. ಚಕ್ರವರ್ತಿ ಕಟ್ಟಿಸಿದ್ದ ದೇಗುಲಗಳು, ಚೈತ್ಯಗಳು, ವಿಹಾರಗಳು, ಸಂಗ್ರಹಿಸಿದ್ದ ಹಸ್ತಪ್ರತಿಗಳು, ಉಪಕೃತರಾದ ಭಿಕ್ಷುಗಳ ಸಂಖ್ಯೆ ಇವಾವುವೂ ಬೋಧಿಧರ್ಮನ ಮೇಲೆ ಪ್ರಭಾವ ಬೀರಲಿಲ್ಲ. ಅಷ್ಟೇ ಅಲ್ಲದೆ ಆಂಥ ಕಾರ್ಯಗಳು ನಿರರ್ಥಕವೆಂದು ಈತ ಹೇಳಿದ ಕೂಡ. ಇಂಥ ಧಾರ್ಮಿಕ ಆಚರಣೆಗಳು ಮುಕ್ತಿಗೆ ಸಹಾಯಕವಲ್ಲವೆಂದು ಘೋಷಿಸಿದ. ಎಲ್ಲವೂ ಶೂನ್ಯವಾಗಿರುವಾಗ ಪವಿತ್ರವಾದುದು ತಾನೆ ಯಾವುದು ಎಂದು ಪ್ರಶ್ನಿಸಿದ. ಚಕ್ರವರ್ತಿ ಈತನ ಬಗ್ಗೆ ಉದಾಸೀನನಾದಾಗ ಈತ ಲೊಯಾಂಗ್ ಪ್ರಾಂತ್ಯಕ್ಕೆ ಹೋಗಿ ಶವೊಲಿನ್ ವಿಹಾರ ನೋಡಿದ. ಆದರೆ ಈತ ಧಾರ್ಮಿಕ ಚಟುವಟಿಕೆಯ ಹೆಸರಿನಲ್ಲಿ ಯಾವ ಆಶ್ರಮಗಳಿಗೂ ಯಾತ್ರೆ ಹೋಗಲಿಲ್ಲ. ತನ್ನ ಶಿಷ್ಯರಿಗೆ ಲಂಕಾವತಾರ ಸೂತ್ರ ಓದುವಂತೆ ಹೇಳಿ, ಅದರ ಒಂದು ಪ್ರತಿಯನ್ನು ಪಟ್ಟಶಿಷ್ಯನಾದ ಹುಯಿಕಿಗೆ ಕೊಟ್ಟ. ಹುಯಿಕಿಗೆ ಉತ್ತರಾಧಿಕಾರಿಗಳು ತಮ್ಮನ್ನು ಲಂಕಾವತಾರ ಗುರುಗಳೆಂದು ಕರೆದುಕೊಳ್ಳುತ್ತಿದ್ದರು. ಈ ಸೂತ್ರ ಚೀನಿ ಬೌದ್ಧರಿಗೆ ಪ್ರಥಮ ಬಾರಿಗೆ ಸಿಕ್ಕಿದ್ದು ಬೋಧಿಧರ್ಮನಿಂದಲೇ ಎಂದು ತಿಳಿದುಬರುತ್ತದೆ.

ಮನಸ್ಸು ಎಂದರೇನೆಂದು ತಿಳಿಯದೆಯೇ ಶಾಂತಿ ಅಶಾಂತಿಗಳ ಮಾತನ್ನು ಆಡುವವರನ್ನು ಈತ ಟೀಕಿಸುತ್ತಿದ್ದ. ವ್ರತಾಚಾರಗಳನ್ನು ವಿಧಿಸುವ ಪ್ರಾರ್ಥನೆಯ ಅಗತ್ಯ ಪ್ರತಿಪಾದಿಸುವ ಸ್ಥಿತಪ್ರಜ್ಞತ್ವವನ್ನು ಒತ್ತಿಹೇಳುವ ಗ್ರಂಥಗಳನ್ನು ಮನ್ನಿಸುತ್ತಿರಲಿಲ್ಲ. ಈತ ಯಾವಾಗಲೂ ತನ್ನ ಶಿಷ್ಯರಿಗೆ ಗೋಡೆಯ ಕಡೆ ತಿರುಗಿ ಧ್ಯಾನಿಸಿ ಎನ್ನುತ್ತಿದ್ದ. ಮನಸ್ಸನ್ನು ಎಲ್ಲ ಆಲೋಚನೆಗಳಿಂದ ಮುಕ್ತಗೊಳಿಸಿ ನಿರರ್ಥಕವೂ ಉದ್ದೇಶರಹಿತವೂ ಆದ ಕಾರ್ಯಗಳನ್ನು ತ್ಯಜಿಸಿ ಬುದ್ದಪ್ರಜ್ಞೆಯಲ್ಲಿ ಸ್ಥಿರವಾಗಿ ನಿಲ್ಲಬೇಕೆನ್ನುವುದು ಈತನ ಎಲ್ಲ ಬೋಧನೆಗಳ ಸಾರಾಂಶ. ಈತನೇ ಒಮ್ಮೆ ತನ್ನ ಕಾಲುಗಳು ಬಿದ್ದುಹೋಗುವತನಕವೂ ಧ್ಯಾನಾಸಕ್ತನಾಗಿ ನಿಂತಿದ್ದ. ಧ್ಯಾನದಲ್ಲಿದ್ದಾಗ ನಿದ್ರೆಬಂದುದರಿಂದ ಕಣ್ಣಿನ ರೆಪ್ಪೆಗಳನ್ನೇ ಕತ್ತರಿಸಿ ಹಾಕಿದನಂತೆ. ಅವು ನೆಲಕ್ಕೆ ಬಿದ್ದು ಚಹ ಗಿಡಗಳಾಗಿ ಬೆಳೆದವಂತೆ. ಇಂದಿಗೂ ಜೈನ್ ಸಂಪ್ರದಾಯದವರು ಧ್ಯಾನಸಮಯದಲ್ಲಿ ಎಚ್ಚರವಾಗಿರಲು ಚಹ ಕುಡಿಯುವುದು ಧಾರ್ಮಿಕಕ್ರಿಯೆ ಎಂಬಂತೆ ಪಾಲಿಸುತ್ತಾರೆ. ಬೋಧಿಧರ್ಮ ತನ್ನ ಜೀವನದ ಕಡೆಯಲ್ಲಿ ಗೋಡೆಗೆ ಎದುರಾಗಿ ನಿಂತು ಹತ್ತು ವರ್ಷ ಧ್ಯಾನದಲ್ಲಿ ಕಳೆದನಂತೆ.

ಮುರುಮಾಚಿ ವಂಶದವರ ಅಧಿಕಾರಾವಧಿಯಲ್ಲಿ (1334-1573) ಈ ಸಂಪ್ರದಾಯ ಜಪಾನೀ ಸಂಸ್ಕøತಿಯ ಮೇಲೆ ಆಳವಾದ ಪ್ರಭಾವ ಬೀರಿತು. ಜಪಾನಿನ ಚಹ ಅಂಗಡಿಗಳ ಭಿತ್ತಿಚಿತ್ರಗಳಲ್ಲಿ ಸಮುರಾಯ್ ವೀರರ ಖಡ್ಗಗಳ ಹಿಡಿಯಮೇಲೆ ನೀಳಗಡ್ಡದ ಹೊಳೆವಕಣ್ಣಿನ, ಮುರುಟಿದ ಕಾಲುಗಳ ಕಪ್ಪುಬಣ್ಣದ ಬೋಧಿಧರ್ಮವನ್ನು ಕಾಣಬಹುದು. ಆನೆಸಕಿಯವರ ಪ್ರಕಾರ ಈ ಪಂಥ ಪ್ರಭಾವ ಬೀರದ ಯಾವ ಜಪಾನೀ ವಿಚಾರಧಾರೆಯಾಗಲೀ ಸೃಜನಾತ್ಮಕ ಕ್ರಿಯಾಶೀಲತೆಯಾಗಲಿ ಇಲ್ಲ. (ಎಂ.ಆರ್.ಕೆ.ಆರ್.)