ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಧಿಸತ್ತ್ವ

ವಿಕಿಸೋರ್ಸ್ದಿಂದ

ಬೋಧಿಸತ್ತ್ವ ಪರಿಪೂರ್ಣ ಜ್ಞಾನವನ್ನು ಸತ್ತ್ವವಾಗಿ, ಸ್ವಭಾವವಾಗಿ ಉಳ್ಳವನೇ ಬೋಧಿಸತ್ತ್ವ ಎನ್ನುವುದು ಶಬ್ದಾರ್ಥ. ಪರಿಪೂರ್ಣಜ್ಞಾನದ ಸಾಧನ ಮಾರ್ಗದಲ್ಲಿರುವವ, ಪರಿಪೂರ್ಣ ಜ್ಞಾನವನ್ನೇ ಉದ್ದೇಶವಾಗಿ ಹೊಂದಿರುವವ (ಬೋಧೌ ಸತ್ತ್ವಮಭಿಪ್ರಾಯೋ ಸ್ಯೇತಿ ಬೋಧಿಸತ್ವ್ತಃ) ಮಾನವನ ಉದ್ದಾರಕ್ಕಾಗಿ ಪ್ರಯತ್ನಪಡುವವ ಮುಂತಾದ ಅರ್ಥವಿವರಣೆಗಳಿವೆಯಾದರೂ ಸರ್ವಾಸ್ತಿವಾದಿಗಳ ಅವದಾನದಲ್ಲಿ ನೀಡಿರುವ ಪೂರ್ವನಿರ್ಧಾರಿತ ಬುದ್ಧ ಎನ್ನುವ ವಿವರಣೆ ಹೆಚ್ಚು ಸಮಂಜಸವಾಗಿದೆ ಎಂದರೆ ಬುದ್ಧತ್ವ ಪಡೆಯುವ ಪ್ರಕ್ರಿಯೆಯಲ್ಲಿರುವ. ಆದರೆ ಅದನ್ನಿನ್ನೂ ಪಡೆಯದ ಹಂತದಲ್ಲಿರತಬೋದಿಸತ್ತ್ವ ಎಂದು ಹೇಳಬಹುದು.

ಗೌತಮ ಬುದ್ಧನಿಗೆ ಹಿಂದೆ ಹಲವಾರು ಬುದ್ದರಿದ್ದರೆಂಬುದು ಬೌದ್ಧರ ನಂಬುಗೆ. ದೀಪಂಕರ ಬುದ್ಧನ ಕಾಲದಲ್ಲಿ ಅಮರಾವತಿ ನಗರದಲ್ಲಿ ಜನಿಸಿದ ಸುಮೇಧನೆಂಬಾತ ಸರ್ವಸ್ವವನ್ನೂ ಪರಿತ್ಯಜಿಸಿ ತಪೋನಿರತನಾದ; ರಮ್ಯನಗರದಲ್ಲಿ ದೀಪಂಕರನನ್ನು ಕಂಡ ಆತ ತನ್ನೊಬ್ಬನ ನಿರ್ವಾಣ ಸಿದ್ದಿಗಿಂತ ಇತರರಿಗೆ ನಿರ್ವಾಣ ಮಾರ್ಗ ತೋರಿಸಿ ಬಳಿಕ ನಿರ್ವಾಣ ಹೊಂದಲು ಎಂದರೆ ಬುದ್ಧನಾಗಲು ಸಂಕಲ್ಪ ಮಾಡಿದ. ಅಂತೆಯೇ ಅನೇಕ ಜನ್ಮಗಳನ್ನೆತ್ತಿ ಪ್ರತಿಜನ್ಮದಲ್ಲಿಯೂ ಬುದ್ದನಾಗಲು ಆವಶ್ಯಕವಾದ ಗುಣಶೀಲಗಳನ್ನು ಬೆಳೆಸಿಕೊಳ್ಳುತ್ತ ಲೋಕಕಲ್ಯಾಣಕ್ಕಾಗಿ ಕೆಲಸ ಮಾಡಿದ. ಮುಂದೆ ಗೌತಮ ಬುದ್ಧನಾದುದು ಈ ಸುಮೇಧನೇ. ಬುದ್ದ ಪೂರ್ವ ಜನ್ಮಗಳ ಕಥೆಗಳನ್ನು ಅರ್ಥಾತ್ ಬೋಧಿಸತ್ತ್ವ ಕಥೆಗಳನ್ನು ತನ್ನ ಶಿಷ್ಯರಿಗೆ ಹೇಳಿದನೆಂದು ಮಹಾಯಾನ ಗ್ರಂಥಗಳು ತಿಳಿಸುತ್ತವೆ.

ಬುದ್ಧ ಪೂರ್ವಜನ್ಮದಲ್ಲಿ ಬೋಧಿಸತ್ತ್ವ ದಶಪಾರಮಿತೆಗಳನ್ನು ಶ್ರದ್ಧೆಯಿಂದ ಅನುಸರಿಸಿದ. ಈ ದಶಪಾರಮಿತೆಗಳೆಂದರೆ ದಾನ (ಹಣಕ್ಕಾಗಲ್ಲೀ ಹೆಸರಿಗಾಗಲೀ ಆಸೆಪಡದೆ ದಾನ ನೀಡುವುದು), ಶೀಲ (ಸಾವು ಬಂದರೂ ಕೈಗೊಂಡ ಶೀಲ ಬಿಡದಿರುವುದು), ನೈಷ್ಕ್ರಮ್ಯ (ಸಂನ್ಯಾಸ ಜೀವನ), ಪ್ರಜ್ಞಾ (ಭೇದವೆಣಿಸದೆ ಎಲ್ಲ ಜ್ಞಾನಿಗಳನ್ನೂ ಕೇಳಿ ಜ್ಞಾನ ಸಂಪಾದಿಸುವುದು), ವೀರ್ಯ (ಆಲಸಿಕೆ ಇಲ್ಲದೆ ದೃಢಸಾಮಥ್ರ್ಯದಿಂದ ಕೆಲಸ ಮಾಡುವುದು), ಕ್ಷಾಂತಿ (ಸಹನೆ), ಸತ್ಯ (ಸದಾ ಸತ್ಯವ್ರತಪಾಲನ), ಅಧಿಷ್ಠಾನ (ಅಚಲ ಭಾವದಿಂದ ಸಂಕಲ್ಪವನ್ನು ಕೊನೆತನಕ ಬಿಡದಿರುವುದು), ಮೈತ್ರೀ (ದೊಡ್ಡವರು ಚಿಕ್ಕವರೆಂದು ಭೇದವೆಣಿಸದೆ ಸರ್ವರನ್ನೂ ಸ್ನೇಹಭಾವದಿಂದ ಕಾಣುವುದು) ಹಾಗೂ ಉಪೇಕ್ಷಾ (ಸುಖ ದುಃಖವನ್ನು ಸಮಚಿತ್ತದಿಂದ ಭರಿಸುವುದು). ಬುದ್ಧನಾಗುವುದಕ್ಕೆ ಮೊದಲು ಪೂರೈಸಬೇಕಾದ ಹತ್ತು ಪರಿಪೂರ್ಣಗುಣಗಳಿವು.

ಗೌತಮಬುದ್ಧನಾಗುವ ಮುನ್ನ ಬೋಧಿಸತ್ತ್ವ ಬ್ರಾಹ್ಮಣನಾಗಿ, ಋಷಿಯಾಗಿ ಅರಸನಾಗಿ, ಸಾಮಾನ್ಯ ಕ್ಷತ್ರಿಯನಾಗಿ, ಚಕ್ರವರ್ತಿಯಾಗಿ, ಯಕ್ಷನಾಗಿ ದೇವೇಂದ್ರನಾಗಿ, ಪಶುಪಕ್ಷಿಯಾಗಿ, ಹಲವಾರು ಜನ್ಮತಾಳಿ ತನ್ನ ಸಂಕಲ್ಪದಂತೆ ಈ ದಶಪಾರಿ ಮಿತೆಗಳನ್ನು ಪೂರೈಸಿದ. ಕೊನೆಗೆ ಶಾಕ್ಯರಾಜಕುಮಾರ ಸಿದ್ದಾರ್ಥನಾಗಿ ಜನಿಸಿ ಬುದ್ದನಾದ.

ಬೋಧಸತ್ತ್ವನ ಬದುಕಿಗೆ ಕಥಗಳೇ ಪಾಳೀ ಭಾಷೆಯಲ್ಲಿ ರಚಿತವಾಗಿರುವ ಜಾತಕ ಕಥೆಗಳು. ಬೋಧಿಸತ್ತ್ವ ಆದರ್ಶ ಮಿಂಚುದುದಲ್ಲ; ಬೆಳೆಸಿಕೊಂಡದ್ದು. ಬೌದ್ಧ ನಿಕಾಯಗಳಲ್ಲಿ ಇದರ ಅಂಕುರವನ್ನು ಕಾಣಲು ಸಾದ್ಯ. ವ್ಯಕ್ತಿಗತ ಅದರ್ಶವಾದ ಅರ್ಹತ್ವಕ್ಕಿಂತ ಬೋಧಿಸತ್ತ್ವ ಮತ್ತು ಬುದ್ಧತ್ತ್ವ ಪರಿಕಲ್ಪನೆಗಳು ಉನ್ನತವಾದವು.

ಬೋಧಿಸತ್ತ್ವ ಆರಾಧನೆ ಭಾರತ ಚೀನ, ಜಪಾನ್ ಮತ್ತಿತರ ಕಡೆಗಳಲ್ಲಿ ಪ್ರಚಲಿತವಿತ್ತು. ಕುಷಾಣರ ಕಾಲದ ಅನೇಕ ಶಾಸನಗಳಲ್ಲಿ ಬೋಧಿಸತ್ತ್ವ ಮೂರ್ತಿಯ ಸ್ಥಾಪನೆಯ ಉಲ್ಲೇಖಗಳು ದೊರೆಯುತ್ತವೆ. ಜಾತಕ ಕಥೆಗಳಿಗೆ ಸಂಬಂಧಿಸಿದ ಶಿಲ್ಪಗಳು ಬರ್ಹತ್, ಸಾಂಚಿ (ಕ್ರಿ. ಪೂ. 2-3ನೆಯ ಶತಮಾನ). ಅಮರಾವತಿ, ಅಜಂತ (ಕ್ರಿ. ಪೂ. 2ನೆಯ ಶತಮಾನ), ಜಾವಾದ್ವೀಪದ ಬೊರೊಬುದರ್ (ಕ್ರಿ. ಶ. 9ನೆಯ ಶತಮಾನ), ಬರ್ಮಾದೇಶದ ಪಾಗನ್ (13ನೆಯ ಶತಮಾನ), ಸಯಾಮ್‍ದೇಶದ ಸುಬೋದಯ (ಕ್ರಿ.ಶ. 14ನೆಯ ಶತಮಾನ) ಮುಂತಾದ ಸ್ಥಳಗಳಲ್ಲಿಯ ವಾಸ್ತು ರಚನೆಗಳಲ್ಲಿ ಕಾಣಸಿಗುತ್ತವೆ. ಅಜಂತದಲ್ಲಿಯ ಬೋಧಿಸತ್ತ್ವ ಅವಲೋಕಿತೇಶ್ವರ ವರ್ಣಚಿತ್ರ ಗಮನಾರ್ಹ.

ಬೋಧಿಸತ್ತ್ವ ಪರಿಕಲ್ಪನೆ ಮತ್ತು ಶೂನ್ಯ ಸಿದ್ಧಾಂತ ಮಹಾಯಾನ ಬೌದ್ಧ ಪಂಥದ ಪ್ರಧಾನ ಲಕ್ಷಣಗಳು. ಕೆಲವೊಮ್ಮೆ ಮಹಾಯಾನ ಪಂಥವನ್ನು ಬೋಧಿಸತ್ತ್ವಯಾನ ಎಂದು ಕರೆದಿರುವುದುಂಟು. (ಎಚ್.ಎಂ.ಎನ್.ಆರ್.)