ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋನಸ್

ವಿಕಿಸೋರ್ಸ್ದಿಂದ

ಬೋನಸ್ ಇಂಗ್ಲೀಷಿನ `ಬೋನಸ್ ಎನ್ನುವ ಪದವು ಲ್ಯಾಟೀನಿನ `ಬೋನಸ್ ಎನ್ನುವ ಪದದಿಂದ ಬಂದಿದೆ. ಲ್ಯಾಟೀನಿನಲ್ಲಿ ಬೋನಸ್ ಎಂದರೆ ಒಳ್ಳೆಯದು (ಗುಡ್) ಎಂದಾಗಿದೆ. 1948 ರಲ್ಲಿ ಈ ಬೋನಸ್ಸು ಕಾರ್ಮಿಕರ ಹಕ್ಕೆಂದು ಭಾರತದ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಆಗ್ಗೆ ಬೋನಸ್ಸನ್ನು ವಿಶೇಷ ಲಾಭಾಂಶವೆಂದು ಕರೆಯುತ್ತಿದ್ದರು. ಒಂದು ಕಂಪನಿಯು ತನ್ನ ಷೇರುದಾರರಿಗೆ ಲಾಭವನ್ನು ಹಂಚುವಂತೆ, ಲಾಭದಲ್ಲಿನ ಒಂದು ಪಾಲನ್ನು ಕಾರ್ಮಿಕರಿಗು ಹಂಚುವ ಪರಿಪಾಠ ಬಂದು ಬೋನಸ್ಸನ್ನು ವಿಶೇಷ ಲಾಭಾಂಶವೆಂದು ಕರೆಯುವ ವಾಡಿಕೆಯಿತ್ತು. ಒಟ್ಟು ಲಾಭದಲ್ಲಿ ಶೇಕಡ 8.33% ರಷ್ಟು ಕನಿಷ್ಠ ಬೋನಸ್ಸನ್ನು ಕೊಡಲೇ ಬೇಕೆಂದು ಕಾನೂನಿನ ನಿಗದಿತ ನಿರ್ಬಂಧವಾಗಿದೆ. ನಂತರ ಈ ಬೋನಸ್ಸು ನೀಡಿಕೆಯು ಲಾಭವನ್ನೇ ಅವಲಂಬಿಸದೆ ವಾರ್ಷಿಕವಾಗಿ ಕನಿಷ್ಠ ಬೋನಸ್ಸು ನೀಡುವುದು ನಿರ್ಬಂಧವಾಯಿತು. ಹೀಗಾಗಿ ಬೋನಸ್ಸು ಪಾವತಿಗೆ ಕಂಪನಿಯು ಲಾಭ ಹೊಂದಿರಲೇ ಬೇಕೆಂಬ ಕಡ್ಡಾಯ ನಿಯಮವಿಲ್ಲ. ಆದರೆ ಈ ಬೋನಸ್ಸು ಪಾವತಿಯು ಎಲ್ಲ ಕಾರ್ಮಿಕರಿಗೂ ಅನ್ವಯವಾಗುವುದಿಲ್ಲ. ಭಾರತದ ಬೋನಸ್ಸು ಪಾವತಿ ಕಾಯಿದೆ, 1965ಯು 25.09.1965 ರಂದು ಅಸ್ತಿತ್ವಕ್ಕೆ ಬಂದಿತು.

ನಿಗದಿತ ಸಂಬಳ ಸಾರಿಗೆಯಲ್ಲದೆ ಕಾರ್ಮಿಕರಿಗೆ ಕೆಲವು ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳೂ ನೀಡುವ ಹೆಚ್ಚುವರಿ ಹಣವೆಂಬುದು ಬೋನಸ್ ಕುರಿತು ಸಾಮಾನ್ಯವಾಗಿ ಇರುವ ವಿವರ. ಆದರೆ ಇಂದು ಬೋನಸ್ ಪರಿಭಾವನೆಯನ್ನು ವಿವಿಧ ಅರ್ಥಗಳಲ್ಲಿ ಬಳಸಲಾಗುತ್ತಿದೆ. ಜೀವವಿಮೆ ಮಾಡಿರುವ ಮೊತ್ತಕ್ಕೆ, ವಿಮಾ ಕಂಪನಿ ತನ್ನ ಲಾಭದ ಆಧಾರದ ಮೇಲೆ ಕೊಡಲಾಗುವ ಹೆಚ್ಚಿನ ಮೊತ್ತವನ್ನು ಬೋನಸ್ ಎಂದು ಕರೆಯುತ್ತಾರೆ. ವಿವಿಧ ಉದ್ಯಮಗಳಲ್ಲಿನ ಕಾರ್ಮಿಕರನ್ನು ಪ್ರೊತ್ಸಾಹಿಸುವುದಕ್ಕೆ ಮತ್ತು ಹೆಚ್ಚಿನ ಉತ್ಪಾದನೆಯೇ ಬೋನಸ್ ನೀಡಿಕೆಯ ಉದ್ದೇಶ. ಅನೇಕ ಉದ್ಯಮಗಳು ತಮ್ಮ ಲಾಭದ ಒಂದಂಶವನ್ನು ಈ ರೀತಿಯ ಬೋನಸ್ ನೀಡಿಕೆಗಾಗಿ ಕಾಯ್ದಿರಿಸುತ್ತವೆ. ವಿಶಾಲ ಅರ್ಥದಲ್ಲಿ ಉದ್ಯಮದ ನಿವ್ವಳ ಲಾಭಾಂಶದಲ್ಲಿ ಕಾರ್ಮಿಕರಿಗೂ ಪಾಲು ನೀಡುವುದೇ ಬೋನಸ್ ಎಂದು ಹೇಳಬಹುದು.

ಭಾರತದಲ್ಲಿ ಬೋನಸ್ ನೀಡಿಕೆ ಮೊದಲನೆಯ ಮಹಾಯುದ್ಧದ ಅವಧಿಯಿಂದ ಜಾರಿಗೆ ಬಂದಿತೆಂದು ಹೇಳಬಹುದು. 1917ಕ್ಕಿಂತ ಮುಂಚೆ ಉದ್ಯಮಗಳ ಮಾಲಿಕರು ಕಾರ್ಮಿಕರಿಗೆ ಭಕ್ಷೀಸ್ ಎಂದು ಹಬ್ಬಗಳ ಸಮಯದಲ್ಲಿ ಸ್ವಲ್ಪ ಹಣಕೊಡುತ್ತಿದ್ದರು ಇದು ಲಾಭದ ಯಾವ ನಿರ್ದಿವ್ಟ ಅಂಶವೂ ಆಗಿರುತ್ತಿರಲಿಲ್ಲ. 1917 ಜಿಲೈ ನಲ್ಲಿ ಮುಂಬಯಿ ಮತ್ತು ಅಹಮದಾಬಾದಿನ ಬಟ್ಟೆಗಿರಣಿ ಮಾಲಿಕರು, ಯುದ್ದ ಅವಧಿಯ ಬೋನಸ್ ನೀಡಿದರು. ಈ ಬೋನಸ್, ಕಾರ್ಮಿಕರ ಮೂಲವೇತನದ ಶೇ10 ರಷ್ಟಾಗಿತ್ತು. 1919ರಲ್ಲಿ ಈ ಶೇಕಡಾಂಶವನ್ನು ಶೇ 35ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಯುದ್ಧ ಮುಗಿದ ತಕ್ಷಣದಲ್ಲಿ, ಈ ರೀತಿಯ ಬೋನಸ್ ನೀಡಿಕೆ ನಿಲ್ಲಿಸಲಾಯಿತು. ಇದರಿಂದಾಗಿ ಬೊಂಬಾಯಿ ಗಿರಣಿ ಕಾರ್ಮಿಕರು ಒಂದು ದೊಡ್ಡ ಹರತಾಳವನ್ನೇ ಆಚರಿಸಿದರು. ಅರಿಣಾಮವಾಗಿ 1924ರಲ್ಲಿ "ಬೋನಸ್ ಡಿಸ್‍ಪ್ಯೂಟ್ ಕಮಿಟಿ" ನೇಮಕಗೊಂಡಿತು. ಈ ಸಮಿತಿ, ಕಾರ್ಮಿಕರು ಬೋನಸನ್ನು ಹಕ್ಕಿನಂತೆ ಪಡೆಯಬಹುದೆಂಬ ಅಂಶವನ್ನು ಎತ್ತಿಹಿಡಿಯಲಿಲ್ಲ. ಸುಮಾರು ಸಮಯದವರೆಗೆ ಬೋನಸ್, ಉದ್ದಿಮೆದಾರರು ನೀಡಬಹುದಾದ, ಯಾವುದೇ ನಿರ್ದಿಷ್ಟ ನಿಯಮದ ಮೊತ್ತವಲ್ಲವಾಗಿಯೇ ಉಳಿದುಕೊಂಡು ಬಂದಿತು. 1948ರಲ್ಲಿ ಮುಂಬಂಯಿಯ ಕೈಗಾರಿಕಾ ಕೋರ್ಟ್ ಬೋನಸ್, ಕಾರ್ಮಿಕರ ಹಕ್ಕೆಂದು ಘೋಷಿಸಿತು.

1961ರಲ್ಲಿ ಭಾರತ ಸರ್ಕಾರ, ಎಂ. ಆರ್. ಮೆಹರ್ ನೇತೃತ್ವದಲ್ಲಿ ಬೋನಸ್ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ 1964ರಲ್ಲಿ ತನ್ನ ವರದಿ ಸಲ್ಲಿಸಿತು. 1965 ಸೆಪ್ಟೆಂಬರ್‍ನಲ್ಲಿ ಸರ್ಕಾರ ಬೋನಸ್ ಬೇಡಿಕೆ ಕಾಯ್ದೆ ಜಾರಿಗೆ ತಂದಿತು. 1969ರ ಮಾರ್ಚ್‍ನಲ್ಲಿ 1965ರ ಮಸೂದೆಗೆ ತಿದ್ದುಪಡಿ ಮಾಡಲಾಯಿತು. 1972ರಲ್ಲಿ ಭಾರತ ಸರ್ಕಾರ ಜಿ.ಕೆ. ಮದನ್ ನೇತೃತ್ವದಲ್ಲಿ "ಬೋನಸ್ ನೀಡಿಕೆ ಕಾಯ್ದೆಯ ಅನ್ವಯವನ್ನು ಸಮೀಕ್ಷಾ ಸಮಿತಿ ರಚಿಸಿತು. 1972 ಸೆಪ್ಟೆಂಬರ್‍ನಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಯಿತು. 1975 ಸೆಪ್ಟೆಂಬರ್‍ನಲ್ಲಿ ಹಣದುಬ್ಬರವನ್ನು ತಡೆಗಟ್ಟುವ ಮುಖ್ಯ ಉದ್ದೇಶದಿಂದ, ಬೋನಸ್ ನೀಡಿಕೆ ತಿದ್ದುಪಡಿಯ ಸುಗ್ರೀವಾಜ್ಞೆ ಜಾರಿಗೆ ತರಲಾಯಿತು. ಬೋನಸ್ ಪಾವತಿ ಕಾಯಿದೆ, 1965 ಯು ಎಲ್ಲ ಕಾರ್ಮಿಕರಿಗೂ, ನೌಕರ ಸಿಬ್ಬಂದಿಗಳಿಗೂ ಕಡ್ಡಾಯವಾಗಿ ಅನ್ವಯವಾಗುವುದಿಲ್ಲ. ಕಾಮಿಕ, ನೌಕರ, ಅಧಿಕಾರಿ ವರ್ಗದ ಎಲ್ಲ ಸಿಬ್ಬಂದಿಗಳು ಬೋನಸ್ಸಿಗೆ ಅರ್ಹರಾದರೂ ನಿರ್ದಿಷ್ಟ ವೇತನದೊಳಗಿರುವವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಕಾಯಿದೆ ಬಂದ ಪ್ರಾರಂಭದಲ್ಲಿ ಪ್ರತಿಯೊಬ್ಬ ಸಿಬ್ಬಂದಿಯೂ ರೂ.2500/- ಮಾಸಿಕ ವೇತನದೊಳಗಿರುವವರು ಮಾತ್ರ ಬೋನಸ್ಸಿನ ಅರ್ಹತಾ ವ್ಯಾಪ್ತಿಯೊಳಗುಳಿಯುತ್ತಾರೆ ಹಾಗು ಉಳಿದವರಿಗೆ ಅನ್ವಯವಾಗುವುದಿಲ್ಲ. ಇತ್ತೀಚೆಗೆ ವೇತನ ಪರಿಷ್ಕರಣ, ವೇತನ ಮತ್ತು ತುಟ್ಟಿಭತ್ಯೆಗಳಲ್ಲಿ ಹೆಚ್ಚಳಗಳಾಗಿರುವುದರಿಂದ ಬೋನಸ್ಸಿನ ವ್ಯಾಪ್ತಿಯಿಂದ ಹೊರಗುಳಿಯುವವರೇ ಹೆಚ್ಚು. ಆದರೆ ಕಾರ್ಖಾನೆ, ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಬಹುತೇಕವಾಗಿ ಬೋನಸ್ಸನ್ನು ಪಡೆಯುತ್ತಾರೆ.

ನಮ್ಮ ದೇಶದಲ್ಲಿ ಬೋನಸ್‍ನ ಕನಿಷ್ಠ ಮಿತಿ ಶೇ.8.33% ಆಗಿದ್ದು, ಗರಿಷ್ಟ ಮಿತಿ ಶೇ.20% ಆಗಿದೆ. 20 ಜನಕ್ಕಿಂತ ಕಡಿಮೆಯಿರುವ ಕಾರ್ಖಾನೆಯು ಬೋನಸ್ಸಿನ ಕಡ್ಡಾಯ ಮಿತಿಯಿಂದ ವಿನಾಯಿತಿ ಹೊಂದಿದೆ. ಹಾಗೂ ಹೊಸದಾಗಿ ಸ್ಥಾಪಿತವಾಗಿರುವ ಸಂಸ್ಥೆಯು ಮೊದಲ ಐದು ವರ್ಷಗಳವರೆಗೆ ಬೋನಸ್ಸಿನ ಕಡ್ಡಾಯ ಪಾವತಿ ನಿರ್ಬಂಧದಿಂದ ವಿನಾಯಿತಿ ಹೊಂದಿದೆ. ಒಟ್ಟಿನಲ್ಲಿ ಬೋನಸ್ಸಿ ಪಾವತಿ ಕಾಯಿದೆ, 1965, ಹಲವಾರು ಸಲ ಅಂದರೆ, 1970-71, 1980, 1985, 1995 ಮೊದಲಾದ ವರ್ಷಗಳಲ್ಲಿ ಕೆಲವು ತಿದ್ದುಪಡಿಗಳಾಗಿವೆ; ಅದರ ನಿಯಮಗಳ ಸಾರಾಂಶವು ಇಂತಿದೆ : (1) ಒಂದು ಉದ್ಯಮದಲ್ಲಿ ಬೋನಸ್‍ಗಾಗಿ ಹಣ ಕಾಯ್ದಿರಿಸಿರಲಿ ಇಲ್ಲದಿರಲಿ ವರ್ಷಕ್ಕೆ ಕಾರ್ಮಿಕರ ವೇತನದ ಶೇ.

   8.33ರ ಕನಿಷ್ಠ ಬೋನಸ್‍ನ್ನು ಅವರಿಗೆ ನೀಡಬೇಕು. 

(2) ಈ ಬೋನಸ್ ಕಾರ್ಮಿಕರ ವೇತನದ ಶೇ 20ರಷ್ಟನ್ನು ಮೀರಬಾರದು. (3) ಕಾರ್ಖಾನೆ ಮಸೂದೆಯ(ಫ್ಯಾಕ್ಟರಿಸ್ ಆಕ್ಟ್) ಅನ್ವಯಕ್ಕೆ ಒಳಪಡುವ ಎಲ್ಲ ಕಾರ್ಖಾನೆಗಳೂ ಬೋನಸ್

   ನೀಡಿಕೆಯ ಮಸೂದೆಯ ವ್ಯಾಪ್ತಿಯೊಳಕ್ಕೆ ಬರುತ್ತವೆ. 

(4) 20ಕ್ಕಿಂತ ಹೆಚ್ಚಿನ ಕಾರ್ಮಿಕರಿರುವ ಉದ್ಯಮಗಳಲ್ಲಿ ಬೋನಸ್ ನೀಡಿಕೆ ಅನ್ವಯಿಸುತ್ತದೆ. (5) ಮಸೂದೆ ಸೂಚಿಸುವ ನಿಯಮಗಳನ್ವಯ ಬರುವ ಸಾರ್ನಜನಿಕ ಉದ್ಯಮಗಳೂ ಬೋನಸ್ ನೀಡಿಕೆ ಕಾಯ್ದೆಯ

   ವಾಪ್ತಿಯೊಳಕ್ಕೆ ಬರುತ್ತವೆ. 

(6) ಉದ್ಯಮಗಳು ಕಾಯ್ದೆ ನಿಗದಿ ಪಡಿಸುವ ರೀತಿಯ ಅನ್ವಯ ಲಾಭವನ್ನು ಲೆಕ್ಕಹಾಕಬೇಕು. (7) ಬೋನಸ್ ಪಾವತಿಯ ಅರ್ಹತೆಗೆ ಸಿಬ್ಬಂದಿಯು ಕನಿಷ್ಟ 30 ದಿನಕ್ಕಿಂತ ಹೆಚ್ಚಿಗೆ ಕೆಲಸಮಾಡಿರಬೇಕು. (8) ಕನಿಷ್ಠ ಬೋನಸ್ ರೂ.100/- ಅಥವಾ ಶೇ 8.33% (ಯಾವುದು ಹೆಚ್ಚೋ ಅದು). (9) ಮಾಸಿಕ ವೇತನ ರೂ.3500/- ಕ್ಕಿಂತ ಹೆಚ್ಚಿಗೆ ಬರುವವರು ಇದರ ವ್ಯಾಪ್ತಿಯ ಹೊರಗುಳಿಯುತ್ತಾರೆ. (10)ವಾರ್ಷಿಕ ಲೆಕ್ಕದ ಮುಕ್ತಾಯದ ದಿನದಿಂದ ಗರಿಷ್ಟ 8 ತಿಂಗಳೊಳಗೆ ಬೋನಸ್ ಪಾವತಿಯಾಗಲೇ ಬೇಕು.

 	ಕೈಗಾರಿಕಾ ಪ್ರಧಾನ ರಾಷ್ಟ್ರಗಳಲ್ಲಿ ಬೋನಸ್ ಮುಖ್ಯವಾಗಿ ಕಾರ್ಮಿಕರಿಗೆ ಉತ್ತೇಜಕ ರೂಪದಲ್ಲಿ ದೊರೆಯುವ ಲಾಭಾಂಶ. ಕೈಗಾರಿಕಾ ಕಾರ್ಮಿಕರ ಉತ್ಪಾದಕತೆ ಮತ್ತು ಲಾಭ ಪ್ರಮಾಣದ ಆಧಾರದ ಮೇಲೆ ಬೋನಸ್ ನಿಗದಿಯಾಗುತ್ತದೆ. ಆದರೆ ಭಾರತದಲ್ಲಿ ವಿಶಿಷ್ಟವಾಗಿ ಉದ್ಯಮಗಳು ಲಾಭ ಮಾಡಲಿ, ಬಿಡಲಿ, ಉದ್ಯೋಗಿ ಉತ್ಪಾದಕತೆಯ ದೃಷ್ಟಿಯಿಂದ ಅನುಕೂಲವಾಗಿರಲಿ, ಇಲ್ಲದಿರಲಿ, ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕರಿಗೂ ಅವರ ವೇತನದ ಶೇಕಡಾ 8.33ರಷ್ಟು ಕನಿಷ್ಠ ಬೋನಸ್ ದೊರೆಯುತ್ತದೆ. ನಷ್ಟವನ್ನು ಅನಿಭವಿಸುತ್ತಿರುವ ಸಾರ್ವಜನಿಕ ಉದ್ಯಮಗಳು ಸಹ ತಮ್ಮ ಉದ್ಯೋಗಿಗಳಿಗೆ ಕನಿಷ್ಠ ಬೋನಸ್ಸನ್ನು ನೀಡುತ್ತವೆ. ಈ ಅರ್ಥದಲ್ಲಿ ಬೋನಸ್ ಹೆಚ್ಚಿನಾಂಶ ವೇತನದ ಒಂದು ಭಾಗವಾಗಿ ಪರಿಗಣಿಸಲ್ಪಡಬಹುದೇ ಹೊರತು, ಉತ್ಪಾದನೆಯ ಉತ್ತೇಜಕವಾಗಿ ಅದು ಪರಿಗಣಿತವಾಗುವುದಿಲ್ಲ. ಬೋನಸ್ ನೀಡಿಕೆಯ ಬಗ್ಗೆ ಪರ_ವಿರುದ್ದವಾದಗಳೂ ಇವೆ. ಆದರೂ ಇದಲ್ಲದೆ ವಿವಿಧ ರೀತಿಯ ಬೋನಸ್ ಕೊಡುವ ವಿಧಾನಗಳೂ ಉಂಟು.

ಗ್ಯಾಂಟ್‍ನ ದುಡಿಮೆ ಸಂಬಂಧಿಕ ಬೋನಸ್ಸು ಯೋಜನೆ. ದುಡಿಮೆಯಲ್ಲಿನ ಉತ್ಕøಷ್ಟ ಸಾಧನೆ, ನಿರ್ವಹಣೆಗಳಿಗನುಗುಣವಾಗಿ ನೀಡುವ ಬೋನಸ್ಸು. ವೇತನಾಮಿತಿಯ ಅನ್ವಯ ಅರ್ಹರಾದ ಎಲ್ಲರಿಗೂ ನೀಡುವ ಬೋನಸ್. ರೋವನ್‍ನ ದುಡಿಮೆಯ (ರೋವನ್ಸ್ ಪ್ಲಾನ್) ಸಾಧನಾನ್ವಯ ಲೆಕ್ಕಾಚಾರ ಮಾಡಿಕೊಡುವ ಬೋನಸ್. ಎಮರ್‍ಸನ್‍ನ ದುಡಿಮೆಯ ಸಾಧನಾನ್ವಯ ಲೆಕ್ಕಾಚಾರ ಹಾಕಿ ಕೊಡುವ ಬೋನಸ್ ಎಮರ್‍ಸನ್ ಪ್ಲಾನ್).

ಇವೆಲ್ಲವೂ ಕಾರ್ಖಾನೆ, ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಉತ್ಪತ್ತಿ, ದುಡಿಮೆಗಳ ಆಧಾರದ ಮೇಲೆ ಕೊಡುವ ಪ್ರೋತ್ಸಾಹಕ ಯೋಜನೆಗಳು. (ಸಿ.ಕೆ.ಆರ್.)