ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಮಾಂಟ್, ವಿಲಿಯಮ್

ವಿಕಿಸೋರ್ಸ್ದಿಂದ

ಬೋಮಾಂಟ್, ವಿಲಿಯಮ್ 1785-1853. ಅಮೆರಿಕ ಸಂಯುಕ್ತ ಸಂಸ್ಥಾನಗಳ ವೈದ್ಯ. ಆಹಾರಪಚನಕ್ಕೆ ಸಂಬಂಧಿಸಿದಂತೆ ಮಾನವಜಠರದಲ್ಲಿ ಜರಗುವ ಚಟುವಟಿಕೆಗಳನ್ನು ಮೊತ್ತಮೊದಲಿಗೆ 19ನೆಯ ಶತಮಾನದ ಪೂರ್ವಾರ್ಧದಲ್ಲಿ ಪ್ರಯೋಗರೀತ್ಯ ವ್ಯಾಸಂಗಿಸಿ ತಾನು ಕಣ್ಣಾರೆ ಕಂಡ ವಿಚಾರಗಳನ್ನು ನಿರ್ದಿಷ್ಟವಾಗಿ ವಿವರಿಸುವ ಅಮೂಲ್ಯ ಗ್ರಂಥವನ್ನು ರಚಿಸಿದವ. ಆಕಸ್ಮಿಕವಾಗಿ ಒದಗಿದ ಒಂದು ಸಂದರ್ಭ ವ್ಯಾಸಂಗಕ್ಕೆ ಯೋಗ್ಯ ಅವಕಾಶವೆಂಬುದನ್ನು ಮನಗಂಡು ಪಟ್ಟು ಹಿಡಿದು ಎಂಟು ವರ್ಷಗಳಷ್ಟು ದೀರ್ಘ ಕಾಲ ಪ್ರಯೋಗಗಳನ್ನು ಮನ ಮಾಡಿ ಇವನು ಅಂದು ವಿಶದಪಡಿಸಿದ ಅನೇಕ ಸಂಗತಿಗಳು ಇಂದಿಗೂ ಉತ್ತಮಗೊಳಿಸಲಾಗದ ವಿವರಗಳಾಗಿವೆ.

ಬೋಮಾಂಟ್ 1785 ನವೆಂಬರ್ 21ರಂದು ಕನೆಕ್ಟಿಕಟ್ ಪ್ರಾಂತ್ಯದ ಲೆಬನಾನ್ ಎಂಬ ಗ್ರಾಮದಲ್ಲಿ ಒಬ್ಬ ಸಣ್ಣ ಕೃಷಿಕ ತಂದೆಯ ಮೂರನೆಯ ಮಗನಾಗಿ ಜನಿಸಿದ. ಗ್ರಾಮದ ಶಾಲೆಯ ವಿದ್ಯಾಭ್ಯಾಸ, ಮನೆಯ ಒಳಗಿನ ಕಠಿಣ ಧಾರ್ಮಿಕ ವಾತಾವರಣ, ಮನೆಯ ಹೊರಗೆ ಬರಡು ಜಮೀನಿನ ಕೃಷಿ ಇವು ಯಾವುವೂ ಇವನಿಗೆ ಸರಿಬೀಳಲಿಲ್ಲ. ವಯಸ್ಸು ಇಪ್ಪತ್ತೊಂದು ತುಂಬುವ ತನಕ ಬಲವಂತವಾಗಿ ಇವುಗಳಿಗೆ ಒಗ್ಗಿಕೊಂಡಿದ್ದು ತಂದೆ ಜೊತೆಯಲ್ಲಿ ಕಾಲ ತಳ್ಳಿದ. ಅನಂತರ ಇವನು ಜೀವ ಇರುವ ತನಕವೂ ದೇವರ ಪೂಜೆ ಮಾಡೆ, ತಂದೆಯಂತೆ ಬರಡು ಜಮೀನಿನ ಕೃಷಿ ಮಾಡಿಕೊಂಡು ಬಾಳಿ, ಹಣೆಬರಹವಿದ್ದಂತೆ ಬದುಕುವೆ ಎಂಬುದಾಗಿ ಶಪಥಹೂಡಿ ಮನೆ ಬಿಟ್ಟು ಉತ್ತರಾಭಿಮುಖವಾಗಿ ಹೊರಟು (1806) ಜೊತೆಯಲ್ಲಿ ಒಯ್ದಿದ್ದ ಸ್ವಂತ ಸಂಪಾದನೆಯ ಹಣ ಮುಗಿಯುವ ತನಕವೂ ಪ್ರಯಾಣ ಮಾಡುತ್ತ ಕೊನೆಗೆ ನ್ಯೂಯಾರ್ಕ್ ಪ್ರಾಂತ್ಯದ ಚಾಂಪ್ಲಿನ್ ಎಂಬ ಪಟ್ಟಣ ಸೇರಿದ. ಅಲ್ಲಿ ಶಾಲಾಧ್ಯಾಪಕನಾಗಿ ಮೂರು ವರ್ಷ ಇದ್ದು ಎರವಲಾಗಿ ಪಡೆದ ವೈದ್ಯಕೀಯ ಗ್ರಂಥಗಳನನ್ನು ಬಿಡುವಿನಲ್ಲಿ ಓದುತ್ತಾ ಕಾಲ ಸದವೆದ್ದಾಯಿತು. ಕೊನೆಗೆ ವೈದ್ಯನೇ ಆಗಬೇಕೆಂದು ನಿರ್ಧರಿಸಿ ಆ ಪ್ರಾಂತ್ಯದಲ್ಲೇ ಪ್ರಸಿದ್ಧನಾಗಿದ್ದು ವರ್ಮಾಂಟಿನಲ್ಲಿದ್ದ ಬೆನ್‍ಜಮಿನ್ ಚಾಂಡ್ಲರ್ ಎಂಬ ವೈದ್ಯನ ಶಿಷ್ಯನಾಗಿ ಸೇರಿದ. ಎರಡು ವರ್ಷಗಳ ತರುವಾಯ ವೃತ್ತಿವೈದ್ಯನಾಗಲು ಪರವಾನಗಿ ಪಡೆದ. ಆದರೆ ಶೀಘ್ರದಲ್ಲೆ (1812) ಯುದ್ಧ ಒದಗಿಬರಲು ಸೇನಾ ವೈದ್ಯನಾಗಿ ಸೇರಿದ. ಯುದ್ಧ ನಿಂತ ಬಳಿಕವೂ ಸೈನ್ಯದಲ್ಲೆ ಇದ್ದ. ಪುನಃ ವೃತ್ತಿ ವೈದ್ಯನಾಗಬಯಸಿ 1815ರಲ್ಲಿ ಸೈನ್ಯಕ್ಕೆ ರಾಜಿನಾಮೆ ಕೊಟ್ಟ. ಆದರೆ ಮತ್ತೆ 1820ರಲ್ಲಿ ಸೇನಾವೈದ್ಯನಾಗಿ ಸೇರಿ ಮಿಚಿಗನ್ ಪ್ರಾಂತ್ಯದ ಮ್ಯಾಕಿನಾಕ್ ಕೋಟೆಯ (ಈಗಿನ ಮ್ಯಾಕಿನಾ ಸಿಟಿ) ವೈದ್ಯನಾಗಿ ನೇಮಿಸಲ್ಪಟ್ಟ. 1839ರ ತನಕ ಬೇರೆ ಬೇರೆ ಕೋಟೆಗಳಲ್ಲಿ (ಸೈನ್ಯದ ಬೀಡು) ಸೇನಾವೈದ್ಯನಾಗಿ ಮುಂದುವರಿದು ಅನಂತರ ರಾಜೀನಾಮೆ ಕೊಟ್ಟು ವೃತ್ತಿವೈದ್ಯನಾಗಿ ಸೇಂಟ್ ಲ್ಯೂಯಿಯಲ್ಲಿ ನೆಲಸಿದ. 1853 ಏಪ್ರಿಲ್ 25ರಂದು ಅಲ್ಲೆ ನಿಧನನಾದ.

1822ರಲ್ಲಿ ಬೋಮಾಂಟ್ ಮ್ಯಾಕಿನಾಕ್ ಕೋಟೆಯಲ್ಲಿ ಇದ್ದಾಗ ಜೂನ್ 6ರಂದು ಗುಂಡು ತಾಕಿದ ವ್ಯಕ್ತಿಯೊಬ್ಬನನ್ನು ಚಿಕಿತ್ಸಿಸಲು ಇವನಿಗೆ ಕರೆ ಬಂತು. ಹತ್ತಿರವೇ ಇದ್ದ ಮಿಚ್ಲಿ ಮ್ಯಾಕಿನ್ಯಾಕ್ ಎಂಬ ವ್ಯಾಪಾರಕೇಂದ್ರದಲ್ಲಿ ಸುಮಾರು 60 ಸೆಂ ಮೀ ಗಳಿಗಿಂತ ಹೆಚ್ಚು ದೂರ ಇರದ ನೆರೆಯವನ ಬಂದೂಕು ಅಕಸ್ಮಾತ್ತಾಗಿ ಸಿಡಿದ ಅಲೆಕ್ಸಿಸ್ ಸೇಂಟ್ ಮಾರ್ಟಿನ್ ಎಂಬ ಕೆನೆಡಿಯನ್ ಮತ್ತು ಫ್ರೆಂಚ್ ಮಿಶ್ರತಳಿಯ 19 ವರ್ಷದ ಯುವಕನಿಗೆ ಎದೆ ಹಾಗೂ ಉದರದಲ್ಲಿ ಗಾಯವಾಯಿತು. ಒಂದಿಷ್ಟು ಉದರದ ಭಿತ್ತಿ ಸುಟ್ಟು ಹೋಗಿ ನಾಶವಾಗಿದ್ದಿತಲ್ಲದೆ ಎರಡು ಪಕ್ಕೆಲುಬುಗಳು ಛಿದ್ರವಾಗಿ ಎಡ ಶ್ವಾಸಕೋಶದ ತಳಭಾಗ ಹೊರಚ್ಚಾಗಿತ್ತು ಮತ್ತು ಜಠರದ ಮುಂಭಿತ್ತಿಯಲ್ಲಿ ಬೆರಳು ಗಾತ್ರದ ರಂಧ್ರವಾಗಿತ್ತು. ಇಷ್ಟು ಮಟ್ಟಿಗೆ ಗಾಯಗೊಂಡಿದ್ದವನಿಗೆ ಶಸ್ತ್ರ್ರಚಿಕಿತ್ಸೆ ಎಸಗಿದಾಗ್ಯೂ ಪ್ರಯೋಜನವಾಗದು, ಅವನು ಮೃತನಾಗುವುದು ಖಾತ್ರಿ ಎನ್ನಿಸಿತು. ಆದರೆ ಅಲೆಕ್ಸಿಸನಿಗೆ ಉತ್ತಮ ದೇಹದಾಢ್ರ್ಯವಿದ್ದು ಆತ ಒರಟು ಜೀವನಕ್ರಮಕ್ಕೆ ಹೊಂದಿಕೊಂಡಿದ್ದವನಾದ್ದರಿಂದ ಬೋಮಾಂಟ್ ಅಗತ್ಯ ಶಸ್ತ್ರಕ್ರಿಯೆಯನ್ನು ಕೈಗೊಂಡ. ಒಂದೆರಡು ದಿನಗಳು ಕಳೆಯುವಾಗ ವ್ಯಕ್ತಿ ಬದುಕಬಹುದು ಎಂದೆನಿಸಿದ್ದರಿಂದ ಚಿಕಿತ್ಸೆಯನ್ನು ಮುಂದುವರಿಸಿದ್ದಾಯಿತು. ಸುಮಾರು ಒಂದು ವರ್ಷ ಕಾಲ ಅನೇಕ ಸಲ ಶಸ್ತ್ರಚಿಕಿತ್ಸೆ ಮಾಡಿದುದರ ಫಲವಾಗಿ ಮಿಕ್ಕ ಗಾಯಗಳೆಲ್ಲ ವಾಸಿ ಆದರೂ ಜಠರ ಭಿತ್ತಿಯ ರಂಧ್ರ ಮಾತ್ರ ಮುಚ್ಚಿಕೊಳ್ಳಲಿಲ್ಲ. ಮೊದಮೊದಲು ಅವನು ಬಾಯಿಂದ ಸೇವಿಸಿದ ಆಹಾರ ಈ ರಂಧ್ರದಿಂದ ಹೊರಬಂದುಬಿಡುವುದನ್ನು ತಪ್ಪಿಸಲು ಅವನು ಅಂಗಾತ ಮಲಗಬೇಕಾಗುತ್ತಿದ್ದರೂ ಕ್ರಮೇಣ ಆ ರಂಧ್ರವನ್ನು ಮುಚ್ಚಿಕೊಳ್ಳುವ ರೀತಿಯಲ್ಲಿ ನೆರೆಯ ಅಂಗಾಂಶಗಳು ಒಂದು ಮುಚ್ಚಳದಂತೆ ಬೆಳೆದುಕೊಂಡವು. ಈ ಮುಚ್ಚಳವನ್ನು ಹೆಬ್ಬೆಟ್ಟಿನಿಂದ ಅವುಕಿದರೆ ಜಠರದ ಒಳಗು ಕಾಣಿಸುವಂತಿತ್ತು. ಒಂದು ವರ್ಷ ಚಿಕಿತ್ಸೆಯ ಬಳಿಕ ಅಲೆಕ್ಸಿಸ್ ಸಶಕ್ತನಾಗದಿದ್ದರೂ ಸುಮಾರಾಗಿ ಓಡಾಡಿಕೊಂಡಿರಬಲ್ಲವನಾದ. ಆದರೆ ಅವನ ಚಿಕಿತ್ಸೆಯ ವೆಚ್ಚವನ್ನು ಸೈನ್ಯವಾಗಲಿ ಮಿಚ್ಲಿ ಮ್ಯಾಕಿನ್ಯಾಕಿನ ಜನವಾಗಲಿ ಭರಿಸಲು ಒಪ್ಪಲಿಲ್ಲವಾದ್ದರಿಂದ ಬೋಮಾಂಟ್ ಅಲೆಕ್ಸಿಸನ್ನು ಪೂರ್ಣವಾಗಿ ಚಿಕಿತ್ಸಿಸಲು ತನ್ನ ನಿವಾಸಕ್ಕೆ ಕರೆದುಕೊಂಡು ಹೋದ. ಇನ್ನೂ ಸುಮಾರು ಒಂದು ವರ್ಷದ ಚಿಕಿತ್ಸೆಯ ತರುವಾಯ ಶಕ್ತಿಯುತನಾದ ಅಲೆಕ್ಸಿಸ್ ಎಲ್ಲರಂತೆ ಉಂಡು ಓಡಾಡಿಕೊಂಡಿರುವಂತಾದ ಮೇಲೆಯೂ ಮುಚ್ಚಳಯುಕ್ತವಾಗಿದ್ದ ಅವನ ಜಠರರಂಧ್ರ ಹಾಗೇ ಇತ್ತು. ಬೇಕೆಂದಾಗ ಮುಚ್ಚಳವನ್ನು ಅವುಕಿ ಹಿಡಿದು ಜಠರದಲ್ಲಿ ಏನಾಗುತ್ತಿದೆ ಎಂದು ನೋಡಬಹುದಿತ್ತು. ಜಠರ ಕ್ರಿಯೆಯನ್ನು ನೇರವಾಗಿ ವ್ಯಾಸಂಗಿಸಬಹುದಿತ್ತು. ಇದು ಇನ್ನೊಮ್ಮೆ ದೊರೆಯದ ಅವಕಾಶ, ಇದನ್ನು ಬಿಡಬಾರದು ಎಂದು ಬೋಮಾಂಟ್‍ನಿಗೆ ತೋರಿ ಅವನು 1825ರಲ್ಲಿ ಅಲೆಕ್ಸಿಸನ ಮೇಲೆ ಪ್ರಯೋಗಗಳನ್ನು ಪ್ರಾರಂಭಿಸಿ 1833ರ ತನಕ ಆಗಾಗ ಮುಂದುವರಿಸಿದ. 1825ರಲ್ಲಿ ವ್ಯಾಸಂಗವನ್ನು ಪ್ರಾರಂಭಿಸಿದ ವಿಚಾರವನ್ನೂ ಆ ತರುಣದಲ್ಲಿ ತಿಳಿದುಬಂದ ವಿಷಯಗಳನ್ನೂ ಅಮೆರಿಕದ ಸರ್ಜನ್ ಜನರಲ್ಲನ ಮುಖಾಂತರ ಫಿಲಡೆಲ್ಫಿಯ ಮೆಡಿಕಲ್ ರಿಕಾರ್ಡಿನಲ್ಲಿ ಪ್ರಕಟಿಸಲಾಯಿತು. ಈ ನಡುವೆ ಬೋಮಾಂಟ್ ಎಲ್ಲೆಲ್ಲಿಗೆ ವರ್ಗವಾದರೂ ಅಲ್ಲಿಗೆ ಅಲೆಕ್ಸಿಸನ್ನು ಸ್ವಂತ ಖರ್ಚಿನಿಂದ ಕರೆದುಕೊಂಡು ಹೋಗಿ ನೋಡಿಕೊಳ್ಳುತ್ತಿದ್ದ. ಪಚನದ ವಿಷಯವಾಗಿ ಪೂರ್ವ ತಿಳಿವಳಿಕೆಯಾಗಲಿ, ಯುಕ್ತ ಸಲಹೆ ಸಲಕರಣೆಗಳಾಗಲಿ ಇಲ್ಲದಿದ್ದರಿಂದ ಬೋಮಾಂಟನಿಗೆ ವ್ಯಾಸಂಗ ಕಷ್ಟವೆನಿಸಿದ್ದೇ ಅಲ್ಲದೆ ಅಲೆಕ್ಸಿಸ್ ಮಧ್ಯೆ ಮಧ್ಯೆ ಕಣ್ಮರೆಯಾಗುತ್ತಿದ್ದುದೂ ತೊಂದರೆ ಕೊಟ್ಟಿತು. ಹೀಗೆ ಒಂದು ಸಲ ಕಣ್ಮರೆ ಆದಾಗ ಅಲೆಕ್ಸಿಸ್ ತನ್ನ ಜನ್ಮಭೂಮಿಯಾದ ಕೆನಡಕ್ಕೆ ಓಡಿಹೋಗಿ ಅಲ್ಲಿ ಮದುವೆ ಆಗಿ ಮಕ್ಕಳನ್ನು ಪಡೆದ. ಆ ಬಳಿಕ ಪ್ರಯೋಗಗಳಿಗಾಗಿ ಅವನನ್ನು ಪುನಃ ಬರುವಂತೆ ಮಾಡಲು ಬೋಮಾಂಟ್ ಅಲೆಕ್ಸಿಸನ ಸಂಸಾರಕ್ಕೆಲ್ಲ ಪ್ರಯಾಣದ ವೆಚ್ಚವನ್ನು ಕೊಡಬೇಕಾಯಿತು.

ಎಷ್ಟೇ ಕಷ್ಟವಾದರೂ ಬರಬರುತ್ತ ಅನುಭವದಿಂದಲೇ ಪ್ರಯೋಗಗಳ ವಿಚಾರದಲ್ಲಿ ಕುರಿತು ಅನೇಕ ಪ್ರಮುಖ ವಿಷಯಗಳನ್ನು ಬೋಮಾಂಟ್ ಹೊರಗೆಡವಿದ. ಪಚನ ಒಂದು ರಾಸಾಯನಿಕ ಕ್ರಿಯೆಯೇ ಆಗಿರಬೇಕು, ಇದು ಜಠರರಸದ ರಾಸಾಯನಿಕ ಘಟಕಗಳಿಂದ ಸಾಧ್ಯವಾಗಿದೆ ಎನ್ನಿಸಿ ಬೋಮಾಂಟ್ ಜಠರರಸವನ್ನು ತೆಗೆದು ರಾಸಾಯನಿಕ ತಪಾಸಣೆಗಾಗಿ ಅನೇಕ ರಸಾಯನಶಾಸ್ತ್ರಜ್ಞರಿಗೆ ಕಳುಹಿಸಿದ. ಎಲ್ಲ ಕಡೆಗಳಿಂದಲೂ ಜಠರರಸದಲ್ಲಿ ಹೈಡ್ರೊಕ್ಲೋರಿಕ್ ಆಮ್ಲ ಇದೆ ಎಂದು ವರದಿ ಬಂತು. ಜಠರರಸದಲ್ಲಿ ಹೈಡ್ರೊಕ್ಲೋರಿಕ್ ಆಮ್ಲವಲ್ಲದೆ ಇನ್ನೂ ಬೇರೆ ಪಾಚಕ ರಾಸಾಯನಿಕಗಳು ಇರಬೇಕೆಂದು ಬೋಮಾಂಟ್ ಮುಂದೆ 1833ರಲ್ಲಿ ಹೇಳಿದ್ದು ಉಂಟು. 1835ರಲ್ಲಿ ಶ್ವಾನ್ ಎಂಬ ವಿಜ್ಞಾನಿ ಈ ರಾಸಾಯನಿಕವನ್ನು ಪ್ರತ್ಯೇಕಿಸಿ ಅದಕ್ಕೆ ಪೆಪ್ಸಿನ್ ಎಂದು ಹೆಸರಿಸಿದ. ಜಠರದಲ್ಲಿ ಮಾಂಸ ಜೀರ್ಣವಾಗುವುದಕ್ಕಿಂತಲೂ ಶಾಕಾಹಾರ ಜೀರ್ಣವಾಗುವುದು ನಿಧಾನ; ಹಾಲು ಜಠರವನ್ನು ತಲುಪಿದೊಡನೆಯೇ ಹೆಪ್ಪ್ಪುಗಟ್ಟಿ ಅನಂತರ ಜೀರ್ಣವಾಗುತ್ತದೆ; ಜಠರರಸವನ್ನು ತಣಿಸಿದರೆ ಅದರ ಪಚನಸಾಮಥ್ರ್ಯ ಸ್ಥಗಿತವಾಗುತ್ತದೆ; ಮದ್ಯಸಾರದಿಂದ ಕೆಳ ಜಠರದ ಒಳಪೂರೆಯ ಊತವುಂಟಾಗಿ ಜೀರ್ಣಶಕ್ತಿ ಕುಂದುತ್ತದೆ ಮುಂತಾಗಿ ಐವತ್ತೊಂದು ಮುಖ್ಯ ತೀರ್ಮಾನಗಳಿಗೆ ಬೋಮಾಂಟ್ ಬಂದ. ಇದಕ್ಕಾಗಿ ಅವನು ಇನ್ನೂರಮೂವತ್ತಕ್ಕೂ ಮೇಲ್ಪಟ್ಟು ಪ್ರಯೋಗಗವನ್ನೂ ಕೈಗೊಳ್ಳಬೇಕಾಯಿತೆಂಬುದು ಗಮನೀಯ. ಎಲ್ಲ ಪ್ರಯೋಗಗಳನ್ನೂ ತೀರ್ಮಾನಗಳನ್ನೂ ಕ್ರೋಢೀಕರಿಸಿ 1833ರಲ್ಲಿ ಬೋಮಾಂಟ್ ಗ್ರ್ರಂಥವನ್ನು ರಚಿಸಿ (ಎಕ್‍ಸ್ಪೆರಿಮೆಂಟ್ಸ್ ಅಂಡ್ ಅಬ್ಸರ್‍ವೇಷನ್ಸ್ ಆನ್ ದಿ ಗ್ಯಾಸ್ಟ್ರಿಕ್ ಜ್ಯೂಸ್ ಅಂಡ್ ದಿ ಫಿಸಿಯಾಲಜಿ ಆಫ್ ಡೈಜೆಶನ್) ಪ್ಲಾಟ್ಸ್‍ಬರ್ಗ್ ಎಂಬಲ್ಲಿ ಪ್ರಕಟಿಸಿದ. ಒಂದು ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಿದ್ದರೂ ಎಲ್ಲವೂ ಶೀಘ್ರವಾಗಿ ಅಮೆರಿಕದಲ್ಲಿ ಮಾತ್ರವಲ್ಲದೆ ಯೂರೊಪ್, ಇಂಗ್ಲೆಂಡ್ ಮುಂತಾದ ಕಡೆಗಳಲ್ಲೆಲ್ಲ ಮಾರಾಟವಾಗಿಹೋದುವು. ಗ್ರಂಥದಲ್ಲಿಯ ವಿಚಾರ ಎಲ್ಲೆಲ್ಲೂ ಪ್ರಶಂಸಿಸಲ್ಪಟ್ಟು ಬೋಮಾಂಟ್ ಜಠರಕ್ರಿಯಾವಿಜ್ಞಾನದ ಜನಕನೆಂದು ಲೋಕವಿಖ್ಯಾತನಾದ.

1833ರ ತರುವಾಯವೂ ಬೋಮಾಂಟ್ ಅಲೆಕ್ಸಿಸನ ಮೇಲೆ ಆಗಿಂದಾಗ ಪ್ರಯೋಗಗಳನ್ನು ಮಾಡುತ್ತಿದ್ದುದುಂಟು. ಅದಕ್ಕಿಂತ ಹೆಚ್ಚಾಗಿ ಪಟ್ಟಣದಿಂದ ಪಟ್ಟಣಕ್ಕೆ ಅಲೆಕ್ಸಿಸನೊಡನೆ ಪ್ರಯಾಣ ಮಾಡುವ ನಾಗರಿಕರಿಗೂ ವಿಜ್ಞಾನಿಗಳಿಗೂ ಅವನ ಜಠರದ ಒಳಗನ್ನು ಪ್ರದರ್ಶಿಸುತ್ತಿದ್ದ. ಇದು ಅಲೆಕ್ಸಿಸನಿಗೆ ಒಗ್ಗದ ವಿಧಿಯಾಗಿದ್ದರೂ ಆತ ಬೋಮಾಂಟನೊಡನೆ ಮಾಡಿಕೊಂಡಿದ್ದ ಕರಾರಿಗೆ ಅನುಗುಣವಾಗಿ ಇದಕ್ಕೆ ಒಪ್ಪಲೇಬೇಕಾಗಿತ್ತು. ಕೊನೆಗೆ ಅಲೆಕ್ಸಿಸನ ಮನಸ್ಸು ತುಂಬ ಕೆಟ್ಟು ಹೋದದ್ದರಿಂದ ಬೋಮಾಂಟ್ ಕನಿಕರಿಸಿ ಅವನಿಗೆ ಎರಡು ತಿಂಗಳು ರಜ ಕೊಟ್ಟು ಹೆಂಡತಿ ಮಕ್ಕಳೊಡನೆ ಇದ್ದು ಬರಲು ಹಣ ಸಹಾಯ ಮಾಡಿ ಕಳುಹಿಸಿದ. ಆದರೆ ಅಲೆಕ್ಸಿಸ್ ವಾಪಸಾಗಲೇ ಇಲ್ಲ. ಬದಲಾಗಿ ಏನೋ ನೆಪಹಾಕಿ ಕಾಗದ ಬರೆಯಿಸಿದ. ಕೆಲವು ತಿಂಗಳುಗಳ ಅನಂತರ ಪುನಃ ಅಲೆಕ್ಸಿಸನನ್ನು ಕರೆಯಿಸಿಕೊಳ್ಳಲು ಬೋಮಾಂಟ್ ಪ್ರಯತ್ನಿಸಿದ್ದೂ ವಿಫಲವಾಯಿತು. ಮುಂದೆ ಇನ್ನೂ ಹಲವು ಸಾರಿ ಹೀಗೆಯೇ ಪ್ರಯತ್ನಪಟ್ಟರೂ ಅಲೆಕ್ಸಿಸ್ ಬರಲೇ ಇಲ್ಲ. ಇಷ್ಟು ಹೊತ್ತಿಗೆ ಬೋಮಾಂಟನಿಗೆ ಅಮೆರಿಕದ ಸಹವಿಜ್ಞಾನಿಗಳಲ್ಲಿ ಮನಸ್ತಾಪ ಪ್ರಾರಂಭವಾಗಿತ್ತು. ಇವನ ಸ್ನೇಹಿತನೇ ಆಗಿದ್ದ ಸರ್ಜನ್ ಜನರಲ್ ಲೊವೆಲ್ ಎಂಬಾತ ವಿಶ್ರಾಂತನಾದ ಬಳಿಕ ಸೈನ್ಯಾಧಿಕಾರದಲ್ಲೂ ಅನೇಕ ತೊಂದರೆಗಳು ಉದ್ಭವಿಸಿದುವು. ಸೇಂಟ್ ಲ್ಯೂಯಿಯಲ್ಲಿದ್ದಾಗ 1839 ಡಿಸೆಂಬರಿನಲ್ಲಿ ಬೋಮಾಂಟ್ ಸೇನಾವೈದ್ಯನ ಹುದ್ದೆಗೆ ರಾಜಿನಾಮೆ ಕೊಟ್ಟು ಅದೇ ನಗರದಲ್ಲಿ ಖಾಸಗಿ ವೈದ್ಯವೃತ್ತಿಯನ್ನು ಪ್ರಾರಂಭಿಸಿದ. ತಕ್ಕಮಟ್ಟಿಗೆ ಹೆಸರು ಮತ್ತು ಹಣಗಳಿಸಿದರೂ ಇನ್ನೂ ಅಲೆಕ್ಸಿಸನನ್ನು ಬರಮಾಡಿಕೊಂಡು ಪ್ರಯೋಗಗಳನ್ನು ಮುಂದುವರಿಸಬೇಕೆಂಬುದೇ ಇವನ ಆಸೆ. ವರ್ಷ ವರ್ಷ ಪ್ರಯತ್ನಿಸಿದರೂ ಆತನನ್ನು ಕರೆತರಲು ಸ್ವಂತ ಮಗನನ್ನೇ ಕಳುಹಿಸಿದರೂ ಅಲೆಕ್ಸಿಸ್ ಬರಲೇ ಇಲ್ಲ. ಕೊನೆಗೆ ಬೇಸರಗೊಂಡು ಇವನು ಅಲೆಕ್ಸಿಸನ ಆಸೆ ಬಿಟ್ಟು ವೃತ್ತಿ ಜೀವನವನ್ನು ನಡೆಸಲು ಪ್ರಾರಂಭಿಸಿದ. ಇಷ್ಟು ಹೊತ್ತಿಗೆ ಇವನ ಕವಿ ಪೂರ್ಣವಾಗಿ ಕಿವುಡಾಗಿತ್ತು. ಬಾಲ್ಯದಲ್ಲಿ ಜೊತೆ ಹುಡುಗರೊಡನೆ ಪಂದ್ಯ ಕಟ್ಟಿ ಜುಲೈ 4ರಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವರ್ಷವರ್ಷವೂ ಹಾರಿಸುತ್ತಿದ್ದ ಫಿರಂಗಿಗೆ ಬಲು ಹತ್ತಿರದಲ್ಲಿ ನಿಂತಿದ್ದು ಅದರ ಶಬ್ದ ಬಾಹುಳ್ಯದಿಂದ ಕಿವುಡು ಪ್ರಾಂರಂಭವಾದುದಾಗಿತ್ತು. ವರ್ಷೆ ವರ್ಷೆ ಅದು ತೀವ್ರವಾಗುತ್ತ ಕೊನೆಗೆ ಪೂರ್ಣ ಕಿವುಡಾಗಿ ಪರಿಣಮಿಸಿತ್ತು. ಹೀಗಾದ ಮೇಲೆ ಬೋಮಾಂಟ್ ಪೂರ್ಣ ವಿಶ್ರಾಂತನಾಗಿ ಹೆಂಡತಿ ಮಕ್ಕಳೊಡನೆ ಸುಖ ಸಂಸಾರ ಮಾಡುತ್ತಿದ್ದ. ಒಮ್ಮೆ 1853ರಲ್ಲಿ ಸ್ನೇಹಿತನ ಮನೆಯಿಂದ ವಾಪಸಾಗುತ್ತಿದ್ದಾಗ ಇವನು ಮಂಜು ಗೆಡ್ಡೆಯ ಮೇಲೆ ಜಾರಿ ಬಿದ್ದುದರಿಂದ ತಲೆಗೆ ತೀವ್ರ ಗಾಯವಾಯಿತು. ತನ್ನ ಕೊನೆಗಾಲ ಸಮೀಪಿಸಿತೇನೋ ಎಂಬ ಭೀತಿ ಬೋಮಾಂಟನನ್ನು ಆವರಿಸಿತು. ಅದಕ್ಕೆ ತಕ್ಕಂತೆ ಕೆಲವು ವಾರಗಳ ಬಳಿಕ ಅವನ ಕತ್ತಿನ ಮೇಲೆ ಬೆನ್ನುಫಣಿಯನ್ನು ಹೋಲುವ ವ್ರಣ ಕಂಡುಬಂತು. ಇದೇ ಮೂಲವಾಗಿ ಕೆಲವು ದಿವಸಗಳ ತರುವಾಯ ಏಪ್ರಿಲ್ 25ರಂದು ಬೋಮಾಂಟ್ ನಿಧನನಾದ. (ಬೋಮಾಂಟನ ಪ್ರಯೋಗಪಶುವಾಗಿದ್ದ ಅಲೆಕ್ಸಿಸ್ ಮುಂದೆ 28 ವರ್ಷ ಬದುಕಿದ್ದು ತೀರರಿಕ್ತಾ ವಸ್ಥೆಯಲ್ಲಿ 81ನೆಯ ವಯಸ್ಸಿನಲ್ಲಿ ಮೃತನಾದ.) (ಎಸ್.ಆರ್.ಆರ್.)