ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಮ್ ಫಾನ್ ಬಾವರ್ಕ್, ಯೂಜಿನ್

ವಿಕಿಸೋರ್ಸ್ದಿಂದ

ಬೋಮ್ ಫಾನ್ ಬಾವರ್ಕ್, ಯೂಜಿನ್ 1851-1914. ಆಸ್ಟ್ರಿಯದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಮುತ್ಸದ್ದಿ. ಚೆಕೊಸ್ಲೊವಾಕಿಯಾದ ಬರ್ನೊ ಎಂಬಲ್ಲಿ 12 ಫೆಬ್ರುವರಿ 1851ರಂದು ಜನನ. 1881ರಿಂದ 1889ರ ಮತ್ತು 1905-1914ರ ಅವಧಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ. 1895ರಿಂದ 1897-98 ಮತ್ತು 1900-1904ರ ಅವಧಿಯಲ್ಲಿ ಆಸ್ಟ್ರಿಯಾದ ಅರ್ಥಮಂತ್ರಿಯಾಗಿದ್ದು ಯೂರೋಪಿನ ಆರ್ಥಿಕ ಅವ್ಯವಸ್ಥೆ ಸರಿಪಡಿಸುವ ಆರ್ಥಿಕಧೋರಣೆ ನಿರೂಪಿಸುವಲ್ಲಿ ಸಹಾಯಕನಾದ. ಆ ಬಳಿಕ ವಿಯನ್ನದ ವಿಜ್ಞಾನ ಅಕಾಡೆಮಿಯ ಅಧ್ಯಕ್ಷನಾಗಿ ಕೆಲಸ ಮಾಡಿದ. ಬಡ್ಡಿಗೆ ಸಂಬಂಧಿಸಿದ ತನ್ನ ಏಜಿಯೊ ಥಿಯರಿ ಆಫ್ ಇಂಟರೆಸ್ಟ್ (1884-89), ಪಾಸಿಟಿವ್ ಥಿಯರಿ ಆಫ್ ಕ್ಯಾಪಿಟಲ್ (1801), ಕಾರ್ಲ್‍ಮಾಕ್ರ್ಸ್ ಅಂಡ್ ದಿ ಕ್ಲೊಸ್ ಆಫ್ ಹಿಸ್ ಸಿಸ್ಟಮ್ (1896). ಕಂಟ್ರೊಲ್ ಆಫ್ ಎಕನಾಮಿಕ್ ಲಾ? (1914) ಪ್ರಸಿದ್ದ ಗ್ರಂಥಗಳಾಗಿವೆ. ಈತನ ಮೊದಲೆರಡು ಗ್ರಂಥಗಳು ಬಂಡವಾಳ, ಬಡ್ಡಿ ಕುರಿತಾದದ್ದು. ಬಡ್ಡಿಯ ಇರವು ಮತ್ತು ದರ ಏಕೆ ಇವೆ? ಈ ಪ್ರಶ್ನೆಗಳು ಸಮಾಜದಲ್ಲಿ ರೂಢಿಯಾಗಿರುವ ಬಂಡವಾಳ ಆರ್ಥಿಕ ಪದ್ಧತಿ ಕುರಿತ ಪ್ರಶ್ನೆಗಳೇ ಆದುವು. ಇಳಿಮುಖ ಜನಸಂಖ್ಯೆ ಬಡ್ಡಿಯ ದರವನ್ನು ಕುಗ್ಗಿಸುವುದು ಒಂದು ಕಾರಣವಾದರೆ ಬಡ್ಡಿಯ ದರದ ವೈಚಿತ್ರ್ಯವೇನು ಎಂಬುದನ್ನು ತಿಳಿಯುವ ಮೊದಲು ಅದಿಲ್ಲದೆ ಆರ್ಥಿಕ ಪ್ರಪಂಚ ಹೇಗಿರುತ್ತದೆ ಎಂಬುದರ ಕಡೆ ಯೋಚಿಸಬೇಕು ಎಂದ ಬಾವರ್ಕ್ ವ್ಯಕ್ತಿಗಳೂ ಅವರ ಆಸ್ತಿಯ ಸಾಮಾಜಿಕ ವ್ಯವಸ್ಥೆಯೂ ಇದ್ದು, ಆಸ್ತಿಯಂಥ ಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿ ಅನಿವಾರ್ಯವಾದ ಅಂಗವಾಗಿದೆ ಎಂದರು. ಆಗ ಪ್ರಚಲಿತವಿದ್ದ ಅರ್ಥಶಾಸ್ತ್ರದ ವಿಧಾನಗಳನ್ನೇ ಅವರು ತಮ್ಮ ಅಧ್ಯಯನಕ್ಕೆ ಉಪಯೋಗಿಸಿಕೊಂಡಿದ್ದರು. ಆತನಕ ಐತಿಹಾಸಿಕ ತಳಹದಿಯ ನಿಯಮಗಳನ್ನಾಧರಿಸಿ ಅರ್ಥಶಾಸ್ತ್ರ ಸಮಾಜಶಾಸ್ತ್ರದ ಅಂಗವೇ ಆಗಿತ್ತು. ಶುದ್ಧ ಸಿದ್ಧಾಂತಗಳ ವಿವರಣೆಗಳು ಆ ಗ್ರಂಥಗಳಲ್ಲಿರಲಿಲ್ಲ. ಬಾವರ್ಕ್ ಈ ದಿಸೆಯಲ್ಲಿ ಹೊಸದಾರಿ ತುಳಿದು ಅರ್ಥಶಾಸ್ತ್ರ ವಿಧಾನದ ಹೊಸ ಪ್ರವರ್ತಕನಾದ.

ಆಸ್ಟ್ರಿಯನ್ ಅರ್ಥಶಾಸ್ತ್ರ ಪಂಥದ ಮುಖಂಡರಾದ ಮೆಂಜರ್ ಕಾರ್ಲ್ (1840-1921) ಅವರ ಸಿದ್ಧಾಂತದಲ್ಲಿ ಕಂಡ ನ್ಯೂನತೆಯೇ ಬಾವರ್ಕ್‍ನನ್ನು ಅದರ ಮೂಲ ಅರ್ಥವನ್ನೂ ತಿಳಿಯಲು ಬಡ್ಡಿ ಮತ್ತು ಲಾಭಗಳ ಉದ್ದೇಶ ಹಾಗೂ ಅರ್ಥ ತಿಳಿಯುವುದು ಅಗತ್ಯವೆನಿಸಿತು. ಅವನ್ನು ತಿಳಿಯದೆ ಪ್ರಕೃತ ಸಮಾಜದ ಆರ್ಥಿಕ ಪದ್ಧತಿಯನ್ನು ಅರ್ಥಮಾಡುವುದು ಅಸಾಧ್ಯವೆನಿಸಿತು. ಅರ್ಥಶಾಸ್ತ್ರ ಸಿದ್ಧಾಂತಗಳ ಅಧ್ಯಯನದಲ್ಲಿ ತೊಡಗಿದ್ದ ಬಾವರ್ಕ್ ಈ ಸಮಸ್ಯೆಗಳಿಗೆ ತಕ್ಕ ಪರಿಹಾರ ಸೂಚಿಸಿದ.

ಬಾವರ್ಕ್‍ನ ಬಡ್ಡಿಯ ಮೀಮಾಂಸೆ ಏಜಿಯೊ ಮೀಮಾಂಸೆ ಎಂದು ಹೆಸರಾಗಿದೆ. ಅದರಂತೆ ವ್ಯಕ್ತಿಯೊಬ್ಬ ಸಹಜವಾಗಿ ವರ್ತಮಾನದ ಸುಖವನ್ನು ಭವಿಷ್ಯತ್ತಿನ ಸುಖಕ್ಕಿಂತ ಹೆಚ್ಚೆಂದು ಭಾವಿಸುತ್ತಾನೆ ಮತ್ತು ಮೆಚ್ಚುತ್ತಾನೆ. ಈ ಬಗೆಯ ವರ್ತಮಾನದ ಸುಖ ತ್ಯಾಗಕ್ಕಾಗಿ ಒಬ್ಬ ಪಡೆಯುವ ಪ್ರತಿಫಲವೇ ಬಡ್ಡಿ ಸುಖಾನುಭೋಗವನ್ನು ಮುಂದೂಡುವಿಕೆಯ ಪರಿಸ್ಥಿತಿಯೇ ಬಡ್ಡಿಗೆ ಕಾರಣವಾಯಿತು. ಇಂದಿನ ನೂರು ರೂಪಾಯಿಗಳ ಸುಖದ ಅನುಭೋಗವನ್ನು ಒಬ್ಬ ಒಂದು ವರ್ಷ ಮುಂದುವರಿಸಿದುದಕ್ಕೆ ನಾವು ಅವನಿಗೆ ಸೂರರ ಬದಲು ನೂರಾನಾಲ್ಕು ರೂಪಾಯಿಕೊಡಲು ಸಿದ್ಧರಿದ್ದೇವೆ ಎನ್ನುತ್ತೇನೆ. ನಾಲ್ಕು ರೂಪಾಯಿ ಅವನ ಸುಖಿ ತ್ಯಾಗಕ್ಕಾಗಿ ಬರುವ ಹಣವಾಯಿತು. ಅದುವೇ ಬಡ್ಡಿ. ಭವಿಷ್ಯತ್ತಿನಲ್ಲಿ ದೊರಕುವ ವಸ್ತುಗಳಿಗಿಂತ ಪ್ರಕೃತದ ವಸ್ತುಗಳಿಗೆ ಹೆಚ್ಚು ಮೌಲ್ಯವಿದೆ ಎಂಬ ತತ್ತ್ವದ ತಳಹದಿಯ ಮೇಲೆ ಈ ಮೀಮಾಂಸೆ ರೂಪುಗೊಂಡಿತು. ಸಂಪ್ರದಾಯವಾದಿಗಳೂ ಪ್ರಗತಿಶೀಲರೂ ಬಾವರ್ಕ್ ಸಿದ್ಧಾಂತಗಳನ್ನು ಟೀಕಿಸಿದರು. ಬಡ್ಡಿಯ ದರ ಚಾರಿತ್ರಿಕವಾದ ಅಥವಾ ನ್ಯಾಯಶಾಸ್ತ್ರದ ಕಲ್ಪನೆಯಲ್ಲವೆಂದೂ ಅದು ಶುದ್ಧವಾಗಿ ಆರ್ಥಿಕ ಕಲ್ಪನೆಯಾಗಿದೆಯೆಂದೂ ಬಾವರ್ಕ್ ಸ್ಪಷ್ಟಪಡಿಸಿದ. ಬಡ್ಡಿ ಶೋಷಣೆಯ ಸಾಧನ ಎಂಬ ವಾದಕ್ಕೂ ಭಾವರ್ಕ್ ಸಮಂಜಸ ಉತ್ತರವಿತ್ತ. ಲಾಭದ ಕಾರಣದಿಂದಾಗಿ ಶೋಷಣೆಯಾಗುತ್ತದೆ ಎಂದು ಹೇಳಬಹುದು. ಆದರೆ ಅಂಥ ಶೋಷಣೆ ಸಮಾಜವಾದಿ ಸಮಾಜದಲ್ಲಿಯೂ ಉಂಟಾಗುವುದು. ಎರಡನೆಯದಾಗಿ ಕೂಲಿಗಾರರ ಶೋಷಣೆಯಾಗುವುದೇ ಮಾತ್ರವಲ್ಲ ಭೂಮಿಯ ಶೋಷಣೆಯೂ ಆಗುವುದು. ಅರ್ಥಶಾಸ್ತ್ರದ ಬಗ್ಗೆ ಇಂಥ ನೈತಿಕ ಹಾಗೂ ರಾಜಕೀಯ ತೀರ್ಮಾನಗಳು ಅಪ್ರಾಸಂಗಿಕವೆಂದು ಬಾವರ್ಕ್ ಸಾರಿದರು. (ಆರ್.ಎ.ಎನ್.)