ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಯಿ, ಭೀಮನ್ನ

ವಿಕಿಸೋರ್ಸ್ದಿಂದ

ಬೋಯಿ, ಭೀಮನ್ನ 1911. ತೆಲುಗಿನ ಪ್ರಸಿದ್ಧ ಸಾಹಿತಿ ಹಾಗೂ ನಾಟಕಕಾರರು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಮಾಮಿಡಿ ಕುದುರು ಗ್ರಾಮದಲ್ಲಿ ಜನನ, 19-11-11. ಸರ್ಕಾರದ ವಿವಿಧ ಹುದ್ದೆಗಳಲ್ಲಿದ್ದು ಮುಂದೆ ಆಂಧ್ರಪ್ರಭ ಪತ್ರಿಕೆ ಸಂಪಾದಕವರ್ಗದಲ್ಲಿ ಕೆಲಸಮಾಡಿದರು. ಭಾರತ ಸರ್ಕಾರ ಇವರಿಗೆ ಪದ್ಮಶ್ರೀ (1973) ಬಿರುದನ್ನು ನೀಡಿದೆ. 1978ರಲ್ಲಿ ಆಂಧ್ರಪ್ರದೇಶ ವಿಧಾನಪರಿಷತ್ತಿನ ಸದಸ್ಯರಾಗಿ ನೇಮಕಗೊಂಡರು. ಇವರ ಗುಡಿಸಲು ಕಾಲಿಪೋತುನ್ನಾಯಿ (ಗುಡಿಸಲುಗಳ ಸುಟ್ಟು ಹೋಗುತ್ತಿವೆ) ಎಂಬ ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ (1976). ಆಂಧ್ರ ವಿಶ್ವವಿದ್ಯಾಲಯ ಮತ್ತು ಕಾಶೀ ವಿದ್ಯಾಪೀಠ ಇವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿವೆ.

ಭೀಮನ್ನ ಅವರ ಕಾವ್ಯದಲ್ಲಿ ರಮ್ಯಕಾವ್ಯದ ಲಕ್ಷಣಗಳೊಂದಿಗೆ ಪ್ರಗತಿಶೀಲ ಲಕ್ಷಣಗಳನ್ನೂ ನೋಡಬಹುದು. ಯಾವುದೇ ವರ್ಗಕ್ಕೆ ಕಟ್ಟುಬೀಳದೆ ತಮ್ಮದೇ ಆದ ರೀತಿಯಲ್ಲಿ ಇವರು ಕಾವ್ಯ ರಚಿಸಿದರು. ಇವರ ಕಾವ್ಯಕುಸುಮಾಲು ಅಶೋಕ ವನಿಲೋ ರಾಮುಡು ಮುಂತಾದ ಕಾವ್ಯಗಳಲ್ಲಿ ಸಾಂಪ್ರದಾಯಿಕ ಧೋರಣೆ ಕಂಡುಬರುತ್ತದೆ. ಪೈರುಪಾಟ, ಕೇದಾರೇಶ್ವರಿ, ಬೊಮ್ಮ ಮುಂತಾದವು ರಮ್ಯಕಾವ್ಯ ರೀತಿಯಲ್ಲಿ ರೂಪುಗೊಂಡಂಥವು. ನವೋದಯ ಸಾಹಿತ್ಯದ ಲಕ್ಷಣಗಳಾದ ದೇಶಭಕ್ತಿ, ಪ್ರಕೃತಿಪ್ರೇಮ, ಪ್ರಣಯವರ್ಣನೆ ಮುಂತಾದವು ಇವರ ಕಾವ್ಯದಲ್ಲಿ ಕಂಡುಬರುತ್ತವೆ. ತಮ್ಮ ಕಾವ್ಯ ರಸಾದ್ವೈತ ಎಂದು ಕವಿ ಹೇಳಿಕೊಂಡಿದ್ದಾರೆ. ಇವರ ಪಾಲೇರು ಮತ್ತು ಕೂಲಿರಾಜು ಎಂಬ ನಾಟಕಗಳು ಹಳ್ಳಿಹಳ್ಳಿಗಳಲ್ಲೂ ಪ್ರದರ್ಶನಗೊಂಡು ಜನಪ್ರಿಯವಾಗಿವೆ. ಗೇಯನಾಟಕ ನೃತ್ಯನಾಟಕ ಮುಂತಾದ ವೈವಿಧ್ಯಮಯ ರೂಪಗಳನ್ನು ರಚಿಸಿದ್ದಾರೆ.

ಭೀಮನ್ನ ಅವರ ಪ್ರಗತಿಶೀಲ ಭಾವಗಳಿಗೆ ಗುಡಿಸಲು ಕಾಲಿಪೋತುನ್ನೈ ಒಳ್ಳೆಯ ಉದಾಹರಣೆ ಬಡತನದ ಕಷ್ಟಗಳನ್ನು ನಿರೂಪಿಸುವಲ್ಲಿ ಕವಿ ತಮ್ಮ ಜೀವನಾನುಭವವನ್ನು ಕಾವ್ಯರೂಪಕ್ಕೆ ಇಳಿಸಿದ್ದಾರೆ. ಇವರ ಏಕಪದ್ಯೋಪಾಖ್ಯಾನಮು ಒಂದು ವಿಶಿಷ್ಟ ರಚನೆ. ಒಂದೇ ಪದ್ಯ ಬರೆದು ಅದಕ್ಕೆ ವ್ಯಂಗ್ಯಾತ್ಮಕವಾದ ಸುಮಾರು ತೊಂಬತ್ತು ಪುಟಗಳ ವ್ಯಾಖ್ಯಾನ ಬರೆದಿದ್ದಾರೆ. ಧರ್ಮಂಕೋಸಂ ಪೋರಾಟಂ (ಧರ್ಮಕ್ಕಾಗಿ ಹೋರಾಟ) ಎಂಬ ಇವರ ಪುಸ್ತಕ ಒಂದು ದಲಿತ ಕೈಪಿಡಿ ಸೆವೆಂತ್ ಸೀಸನ್ ಎಂಬ ಹೆಸರಿನ ಒಂದು ಇಂಗ್ಲಿಷ್ ಕವನ ಸಂಕಲನವನ್ನೂ ಪ್ರಕಟಿಸಿದ್ದಾರೆ. ಇವರ ಸಾಹಿತ್ಯರಚನೆಯಲ್ಲಿ ಸಂಗೀತನೃತ್ಯರೂಪಕ, ನಾಟಕ ಪತ್ರಸಾಹಿತ್ಯ, ಜೀವನಚರಿತ್ರೆ ಮುಂತಾದ ರಚನೆಗಳನ್ನೂ ನೋಡಬಹುದು. (ಆರ್.ವಿ.ಎಸ್.ಎಸ್.)