ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋರಕರ್, ಬಾಲಕೃಷ್ಣ ಭಗವಂತ

ವಿಕಿಸೋರ್ಸ್ದಿಂದ

ಬೋರಕರ್, ಬಾಲಕೃಷ್ಣ ಭಗವಂತ 1910-84. ಮರಾಠೀ ಹಾಗೂ ಕೊಂಕಣಿ ಕವಿ. ಮರಾಠೀ ಸಾರತ್ವತ ಲೋಕಕ್ಕೆ ಈ ಕವಿ ಬಾ. ಭ. ಬೋರಕರ್ ಎಂದು ಪರಿಚಿತರಾದರೆ ಕೊಂಕಣಿ ಸಾರಸ್ವತ ವೃಂದಕ್ಕೆ ಬಾಕಿಬಾಬ ಎಂದು ಪರಿಚಿತರಾಗಿದ್ದಾರೆ. ಹುಟ್ಟಿದ್ದು ಗೋವೆಯ ಕುಡಚಡೆ ಗ್ರಾಮದಲ್ಲಿ. ತಾಯಿ ಮುಕ್ತಾಬಾಯಿ. ಮೂಲತಃ ಇವರದು ಬೋರಿ ಗ್ರಾಮ. ಆದ್ದರಿಂದ ಬೋರಕರ್ ಎಂದು ಹೆಸರು. ಪೋರ್ಚುಗೀಸ್ ಶಾಲೆಯಲ್ಲಿ ನಾಲ್ಕನೆಯ ತರಗತಿವರೆಗೂ ಓದಿದ ಇವರು ಮುಂದೆ ಧಾರವಾಡದಲ್ಲಿ ನಿಂತು ಇಂಗ್ಲಿಷಿನಲ್ಲಿ ಮ್ಯಾಟ್ರಿಕ್ ಮುಗಿಸಿದರು. ಅನಂತರ ಶಿಕ್ಷಕರ ತರಬೇತಿ ಮುಗಿಸಿ 1930ರಲ್ಲಿ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕರಾಗಿ ಕೆಲಸಕ್ಕೆ ಸೇರಿ ಹಣಜೂಣ, ಮಡಗಾಂವ್, ಕೆಪೆಗಳಲ್ಲಿ ಕೆಲಸಮಾಡಿದರು. 1966ರಲ್ಲಿ ರಾಮಮನೋಹರ್ ಲೋಹಿಯಾ ಗೋವೆಗೆ ಬಂದು ಗೋವಾ ಸ್ವಾತಂತ್ರ್ಯದ ಕಹಳೆ ಊದಿದಾಗ ಇವರು ವೃತ್ತಿಗೆ ರಾಜೀನಾಮೆ ನೀಡಿ ರಾಷ್ಟ್ರೀಯ ಆಂದೋಲನದಲ್ಲಿ ಪಾಲ್ಗೊಂಡರು. ಪುಣೆ-ಮುಂಬಯಿಗಳಲ್ಲಿ ನಿಂತು ರಾಷ್ಟ್ರೀಯ ಜಾಗೃತಿ ಕಾರ್ಯ ಆರಂಭಿಸಿದರು. ಅಲ್ಲಿಂದಲೇ ಇವರು ಅಮಚಾ ಗೋಮಂತಕ (ಮರಾಠೀ), ಪುಜೆಚೋ ಅವಾಜ (ಕೊಂಕಣಿ) ಎಂಬ ಪತ್ರಿಕೆಗಳನ್ನು ಸಂಪಾದಿಸಿದರು. ಆ ಕಾಲದಲ್ಲಿ ಇವರು ಬರೆದ ಗೀತೆಗಳು ಮತ್ತು ಲೇಖನಗಳು ಅನೇಕ ತರುಣರನ್ನು ಗೋವಾ ವಿಮೋಚನಾ ಸಂಗ್ರಾಮಕ್ಕೆ ಎಳೆದು ತಂದುವು. 1955ರಿಂದ 60ರ ತನಕ ಪುಣೆ, 1960ರಿಂದ 70ರ ತನಕ ಪಣಜಿಯಲ್ಲಿ ಆಕಾಶವಾಣಿಯ ಸ್ಪೋಕನ್‍ವರ್ಡ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿ ನಿವೃತ್ತರಾದರು.

ಇವರ ಮೊದಲ ಕಾವ್ಯ ಸಂಗ್ರಹ ಪ್ರತಿಭಾ 1930ರಲ್ಲಿ ಪ್ರಕಟವಾಗಿ ತುಂಬ ಜನಪ್ರಿಯತೆ ಪಡೆಯಿತು. ಅನಂತರ ಜೀವನ ಸಂಗೀತ (1937), ದೂಧಸಾಗರ (1947), ಆನಂದ ಭೈರವಿ (1950), ಚಿತ್ರವೀಣಾ (1960), ಬೋರಕರಾಂಚಿ ಕವಿತಾ (1960), ಗೀತಾರ್ (1966) ಚೈತ್ರಪುನವ (1970) ಕವನ ಸಂಗ್ರಹಗಳು ಮರಾಠಿ ಭಾಷೆಯಲ್ಲಿ ಪ್ರಕಟಗೊಂಡವು.

ಮಾವಳತಾ ಚಂದ್ರ (1938), ಅಂಧಾರಾಂತಲಿ ವಾಟ (1943), ಭಾವೀಣ (1950) ಇವು ಕಾದಂಬರಿಗಳು. ಕಾಗದಿ ಹೋಡ್ಯಾ (1938-ಪ್ರಬಂಧ), ಪ್ರಿಯದರ್ಶಿನಿ (ಕಥಾಸಂಗ್ರಹ-1960), ಆನಂದ ಯಾತ್ರಿ ರವೀಂದ್ರನಾಥ್ (ಜೀವನ ಪರಿಚಯ 1963), 'ಪಾಂಯಜಣಾ (1960) 'ಸಾಸಾಯ್ ಇವು ಎರಡೂ ಕೊಂಕಣಿ ಕವನ ಸಂಗ್ರಹಗಳು. ಇವರ ಕಾವ್ಯಕ್ಕೆ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಲನದ ಸುಮರ್ಣಪದಕ (1934), 'ಭಾವೀಣ' ಕಾದಂಬರಿಗೆ ಹೋಮಂತಕ ಮರಾಠಿ ಸಾಹಿತ್ಯ ಸಮ್ಮೇಳನದ ಸುವರ್ಣಪದಕ (1950), ಆನಂದ ಭೈರವ, 'ಚಿತ್ರ ವೀಣಾ 'ಗೀತಾರ್ ಕವನ ಸಂಗ್ರಹಗಳಿಗೂ 'ಆನಂದಯಾತ್ರಿ ರವೀಂದ್ರನಾಥ್ ಗ್ರಂಥಕ್ಕೂ ಮಹಾರಾಷ್ಟ್ರ ರಾಜ್ಯ ಸರಕಾರದ ಬಹುಮಾನ ಬಂದಿದೆ. ಸಸಾಯ್ ಎಂಬ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ (1981) ಲಭಿಸಿದೆ. ಕೊಂಕಣಿ-ಮರಾಠಿ ಕವನ ಸಂಕಲನಗಳಿಗೆ ಗೋವಾ ಕಲಾ ಅಕಾಡೆಮಿಯ ಪುರಸ್ಕಾರ ದೊರೆತಿದೆ. 1967ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರವೂ ಸಿಕ್ಕಿದೆ.

ಕೊಂಕಣಿ ಸಾಹಿತ್ಯ ಸಮ್ಮೇಲನದ ಅಧ್ಯಕ್ಷ (1950), ಮರಾಠಿ ಕವಿ ಸಮ್ಮೇಲನದ ಅಧ್ಯಕ್ಷ (1948), ಸಾಹಿತ್ಯಕಾರ ಸಂಸದ ಅಲಹಾಬಾದದ ಅಧ್ಯಕ್ಷ (1963), ಅಖಿಲಭಾರತ ಕೊಂಕಣಿ ಸಮ್ಮೇಲನದ ಅಧ್ಯಕ್ಷ (1967) ಮೊದಲಾದ ಗೌರವ ಸ್ಥಾನಗಳು ಇವರಿಗೆ ದೊರೆತಿವೆ. ಕಾವ್ಯ ರಚನೆಯ ಜೊತೆಗೆ ಚಿತ್ರಕಲೆಯ ಅಭಿರುಚಿಯೂ ಇವರಿಗಿತ್ತು. ಇವರ ಒಂದು ಕಾದಂಬರಿ ಕನ್ನಡದಲ್ಲಿ ದೇವದಾಸಿ ಎಂಬ ಹೆಸರಿನಿಂದ ಅನುವಾದಗೊಂಡಿದೆ. ಇದಲ್ಲದೆ ಅನೇಕ ಸ್ವತಂತ್ರ ಲೇಖನಗಳನ್ನು ಗ್ರಂಥಗಳ ಭಾಷಾಂತರವನ್ನು ಮಾಡಿದ್ದಾರೆ. ಮಹಾತ್ಮ ಗಾಂಧಿಯವರನ್ನು ಕುರಿತು ಮಹಾತ್ಮಯನ ಎಂಬ ಮಹಾಕಾವ್ಯ ಈಚೆಗೆ ಬರೆಯ ತೊಡಗಿದ್ದರು. 1984 ಜುಲೈ 8ರಂದು ಪುಣೆಯಲ್ಲಿ ನಿಧನರಾದರು. (ಎಸ್.ಎಂ.ಕೆ.)