ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋರಬದೂರ್

ವಿಕಿಸೋರ್ಸ್ದಿಂದ

ಬೋರಬದೂರ್ ಮಧ್ಯ ಜಾವಾದ್ವೀಪದಲ್ಲಿರುವ ಒಂದು ಪ್ರಸಿದ್ಧ ಬೌದ್ಧ ಸ್ಮಾರಕ ಕ್ಷೇತ್ರ. ಮಾಗಲಾಂಗಿನ ದಕ್ಷಿಣಕ್ಕೆ ಸುಮಾರು 16 ಕಿಮೀ ದೂರದಲ್ಲೂ ಚಾಕ್‍ಯಕಾರ್ತದ ವಾಯುವ್ಯಕ್ಕೆ ಸುಮಾರು 28 ಕಿಮೀ ದೂರದಲ್ಲೂ ಇದೆ. ಬೋರಬದೂರಿನ (ಬಹುಬುದ್ಧರ) ಈ ಬೌದ್ಧಸ್ತೂಪ ಕ್ರಿ.ಶ. ಸುಮಾರು 800-850ರ ಮಧ್ಯದಲ್ಲಿ ಸುಮಾತ್ರದ ಶೈಲೇಂದ್ರ ರಾಜಮನೆತನದವರು ನಿರ್ಮಿಸಿದ್ದೆಂದು ಹೇಳುವರು. ಹಾಗೆಯೇ ಈ ಸ್ತೂಪವನ್ನು ಸುಮಾರು 825ರಲ್ಲಿ ಪ್ರಾರಂಭಿಸಿ ಮೂವತ್ತು ವರ್ಷಗಳ ಕಾಲ ಕಟ್ಟಿ ಮುಗಿಸಿದರೆನ್ನುವರು. ಭಾರತದ ಸಾಂಚಿ ಸಾರನಾಥ, ಭಟ್ಟಿಪ್ರೋಲು ಮತ್ತು ನಾಗಾರ್ಜುನಕೊಂಡ ಹಾಗೂ ಸನ್ನತಿಗಳ ಸ್ತೂಪಕ್ಕೂ ಬೋರಬದೂರಿನ ಈ ಬೃಹತ್‍ಸ್ತೂಪಕ್ಕೂ ಅನೇಕ ಬಗೆಯಲ್ಲಿ ವ್ಯತ್ಯಾಸ ಇರುವುದನ್ನು ತಜ್ಞರು ಗುರುತಿಸುತ್ತಾರೆ. ಬೋರಬದೂರಿನ ಸ್ತೂಪ ಮೂಲತಃ ಬುದ್ಧನ ಅವಶೇಷಗಳ ರಕ್ಷಣೆಗೆಂದು ಕಟ್ಟಲ್ಪಟ್ಟ ವೃತ್ತಾಕಾರದ ಮತ್ತು ಎತ್ತರದಲ್ಲಿ ಅಂಡಾಕಾರದ ಸಮಾಧಿ ಮತ್ತು ಗುಹಾಂತರ ದೇವಾಲಯ ಹಾಗೂ ವಾಸ್ತು ಪುರುಷ ಮಂಡಲ ಎಂಬ ಮೂರು ವಿಧಾನಗಳನ್ನೂ ಸಮೀಕರಿಸಿ ಕಟ್ಟಿದ ಕಟ್ಟಡ. ಗುಪ್ತರ ಕಾಲದ ಹಾಗೂ ಅನಂತರದ ಭಾರತೀಯ ವಾಸ್ತುಶಿಲ್ಪದ ಪ್ರಭಾವ ಅಲ್ಲಿ ಕಂಡುಬರುತ್ತದೆ. ಸುಮಾರು ಸಾವಿರ ವರ್ಷಕ್ಕೂ ಹೆಚ್ಚಾಗಿ ಇವುಗಳ ಮೇಲೆ ಬೆಳೆದುಕೊಂಡಿದ್ದ ಗಿಡಗಂಟೆ ಕಿತ್ತು 1907-11ರಲ್ಲಿ ಡಚ್ ಪುರಾಶಾಸ್ತ್ರಜ್ಞರು ಹಾಳಾಗಿದ್ದ ಈ ಸ್ತೂಪವನ್ನು ದುರಸ್ತಿ ಮಾಡಿಸಿ ಮತ್ತೆ ಬೆಳಕಿಗೆ ತಂದರು.

ಬೋರಬದೂರಿನ ಸ್ತೂಪದ ಕಟ್ಟಡ ಬೆಟ್ಟದ ತಪ್ಪಲಲ್ಲಿ ನಿರ್ಮಿಸಿರುವುದರಿಂದ ಅದಕ್ಕೆ ನೈಸರ್ಗಿಕ ಸೌಂದರ್ಯ ತಂತಾನೆ ಒಡಗೂಡಿದೆ. ಸ್ತೂಪದ ಅಕ್ಕಪಕ್ಕದಲ್ಲಿ ಹಸಿರು ಗದ್ದೆಗಳೂ ಜೀವಚಿತ ಜ್ವಾಲಾಮುಖಿಗಳೂ ಇವೆ. ಜ್ವಾಲಾಮುಖಿಗಳು ಉಗುಳಿದ ಲಾವಾರಸ ಶಿಲೆಗಳನ್ನೇ ಈ ಸ್ತೂಪವನ್ನು ಕಟ್ಟಲು ಉಪಯೋಗಿಸಿದ್ದಾರೆ. ಒಂಬತ್ತು ಹಂತಗಳಿರುವ ಇವರ ಮೊದಲ ಆರು ಹಂತಗಳು ಚೌಕಾಕಾರವಾಗಿಯೂ ಮೇಲಿನ ಮೂರು ಹಂತಗಳಲ್ಲಿ ವೃತ್ತಾಕಾರವಾಗಿಯೂ ಇವೆ. ಮೇಲ್ಗಡೆ ಮಧ್ಯದಲ್ಲಿ ಘಂಟಾಕೃತಿಯ ಸ್ತೂಪವಿದೆ. ಮೇಲಕ್ಕೆ ಏರಲು ನಾಲ್ಕು ಪಕ್ಕಗಳಲ್ಲೂ ಮೆಟ್ಟಲುಗಳನ್ನು ಮಧ್ಯದಲ್ಲಿ ಕಟ್ಟಿದ್ದಾರೆ. ಪ್ರತಿಯೊಂದು ಚೌಕಾಕಾರದ ಮಾಳಿಗೆಯ ಗೋಡೆಗಳಲ್ಲಿಯ ಗೂಡುಗಳಲ್ಲಿ ಬುದ್ಧನ ಪಂಚರೀತಿಯ ಆರಾದನಾ ಮೂರ್ತಿಗಳನ್ನು ನಿಲ್ಲಿಸಿದ್ದಾರೆ. ವೃತ್ತಾಕಾರದ ಮಾಳಿಗೆಗಳು ಎಪ್ಪತ್ತೆರಡು ಘಂಟಾಕಾರದ ಕಿರುಸ್ತೂಪಗಳನ್ನು ಹೊಂದಿವೆ. ಗೋಡೆಗಳ ಮೇಲಿರುವ ಚಿತ್ರಗಳಲ್ಲಿ ನಿರ್ವಾಣ ಸ್ಥಿತಿಗೇರುವ ಹಂತಗಳು, ಜೀವನದಲ್ಲಿಯ ಸುಕೃತ ದುಷ್ಕøತಿಗಳು, ಬುದ್ಧನ ಜೀವನದಲ್ಲಿಯ ಚಿತ್ರಗಳು ಮತ್ತು ಜಾತಕಕಥೆಗಳು ಇವನ್ನು ಬಿಡಿಸಲಾಗಿದೆ. ಇವು ವಿಶೇಷತಃ ಮಹಾಯನ ಬೌದ್ಧಪಂಥದ ಧಾರ್ಮಿಕ ಕೃತಿಗಳಿಗೆ ಸಂಬಂಧಿಸಿವೆ. ಸುಮಾರು 500 ಬುದ್ಧಶಿಲ್ಪಗಳೂ 1,300ಕ್ಕೂ ಹೆಚ್ಚಿನ ಶಿಲ್ಪಫಲಕಗಳೂ ಇರುವ ಬೋರಬದೂರಿನ ಸ್ತೂಪದ ಬೃಹದಾಕಾರ ಭವ್ಯತೆಯ ಅನುಭವವನ್ನು ನೀಡುತ್ತದೆ. (ಎಸ್.ಎಸ್.ಜೆ.ಎ.)