ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋರಿಸ್ ಸ್ಪಾಸ್ಕಿ

ವಿಕಿಸೋರ್ಸ್ದಿಂದ

ಬೋರಿಸ್ ಸ್ಪಾಸ್ಕಿ 1937.-ಪ್ರಮುಖ ಚದುರಂಗ ಆಟಗಾರ. ಹತ್ತು ಸಲ ವೈಯಕ್ತಿಕ ಚಾಂಪಿಯನ್‍ಷಿಪ್ ಗಳಿಸಿದ್ದಾನೆ. ಹುಟ್ಟಿದ್ದು ರಷ್ಯದಲ್ಲಿ. ಐದನೆಯ ವಯಸ್ಸಿನಲ್ಲಿಯೆ ಆಟ ಕಲಿಯಲು ಪ್ರಾರಂಭ. ಹತ್ತು ವರ್ಷ ವಯಸ್ಸಿನ ಕಿರಿಯನಾಗಿರುವಾಗಲೇ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಈತ ಹದಿನೆಂಟನೆಯ ವಯಸ್ಸಿಗಾಗಲೆ ಅಂತಾರಾಷ್ಟ್ರೀಯ ಗ್ರಾಂಡ್‍ಮಾಸ್ಟರ್ ಎಂಬ ಹೆಸರು ಸಂಪಾದಿಸಿದ್ದ. ಇಷ್ಟು ಕಿರಿಯ ವಯಸ್ಸಿನವರಾರು ಆವರೆಗೆ ಗ್ರಾಂಡ್‍ಮಾಸ್ಟರ್ ಆಗಿರಲಿಲ್ಲ. 1969ರಲ್ಲಿ ಪ್ರಪಂಚ ಚಾಂಪಿಯನ್ ಆದ. ಆದರೆ 1972ರಲ್ಲಿ ನಡೆದ ಆಟದಲ್ಲಿ ಅಮೆರಿಕದ ಬಾಬಿ ಫಿಷರ್ ಜೊತೆ ಆಡಿದ 21 ಆಟಗಳಲ್ಲಿ ಮೂರನ್ನು ಗೆದ್ದು ಹನ್ನೊಂದನ್ನು ಡ್ರಾ ಮಾಡಿಕೊಂಡು ಉಳಿದ ಏಳು ಆಟಗಳಲ್ಲಿ ಸೋತುಹೋದ. ಪ್ರಪಂಚ ಪ್ರಶಸ್ತಿ ಅಮೆರಿಕದ ಪಾಲಾಯಿತು. ಮಾನವೀಯತೆ ವಿನಯ ಸೌಜನ್ಯಗಳ ಸಾಕಾರ ಮೂರ್ತಿಯಾಗಿದ್ದ ಸ್ಪಾಸ್ಕಿ ನಿರಹಂಕಾರಿಯೂ ಹೌದು. ತಾನು ಚದುರಂಗ ಆಡುವುದು ಸಂತೋಷಕ್ಕಾಗಿಯೇ ವಿನಾ ಕೀರ್ತಿಗಲ್ಲ ಎಂದು ಭಾವಿಸಿದ್ದಾನೆ. 'ನಾನು ಆಡಿದ ಆಟಗಾರರಲ್ಲಿ ಸ್ಪಾಸ್ಕಿ ಉತ್ತಮ ಆಟಗಾರ. ನನಗೆ ನಿಜವಾದ ಸ್ಪರ್ಧೆ ಎಂದರೆ ಸ್ಪಸ್ಕಿಯ ಆಟವೇ. ಮಿಕ್ಕೆಲ್ಲ ಆಟಗಾರರು ಒಂದಲ್ಲ ಒಂದು ಹಂತದಲ್ಲಿ ತಪ್ಪು ಮಾಡುತ್ತಿದ್ದರು, ಆದರೆ ಸ್ಪಾಸ್ಕಿ ಹಾಗಲ್ಲ ಎಂದಿದ್ದಾನೆ ಬಾಬಿಫಿಷರ್. (ಎಚ್.ಜಿ.ಎ.)