ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋರ್ಡೆ, ಚಂದೂ

ವಿಕಿಸೋರ್ಸ್ದಿಂದ

ಬೋರ್ಡೆ, ಚಂದೂ 1934, ಭಾರತದ ಹೆಸರಾಂತ ಕ್ರಿಕೆಟ್ ಆಟಗಾರರು. ಚಂದ್ರಕಾಂತ ಗುಲಾಬ್‍ರಾವ್ ಬೋರ್ಡೆ ಇವರ ಪೂರ್ಣ ಹೆಸರು. ವಿದ್ಯಾರ್ಥಿ ಜೀವನದುದ್ದಕ್ಕೂ ಕ್ರಿಕೆಟ್ ಆಟದಲ್ಲಿ ಆಸಕ್ತಿ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಮೊದಲು ಮಹಾರಾಷ್ಟ್ರ ಅನಂತರ ಬರೋಡ ಪಂಗಡಗಳಲ್ಲಿ ಆಡಿದುದಲ್ಲದೆ ಅನೇಕ ವರ್ಷಗಳ ಕಾಲ ಮಹಾರಾಷ್ಟ್ರ ತಂಡದ ನಾಯಕರಾಗಿದ್ದರು ಕೂಡ.

1953-54ರಲ್ಲಿ ಸಿಲ್ವರ್ ಜ್ಯೂಬಿಲಿ ಓವರ್‍ಸೀಸ್ ಕ್ರಿಕೆಟ್ ತಂಡ ಭಾರತಕ್ಕೆ ಬಂದಾಗ ಅದರ ವಿರುದ್ಧ ಬೋರ್ಡೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಪರವಾಗಿ ಆಡಿ ಔಟ್ ಆಗದೆ 62 ರನ್ನುಗಳನ್ನು ಮಾಡಿದರು. ಅದೇ ವರ್ಷದಲ್ಲಿ ರಣಜಿ ಪಂದ್ಯದಲ್ಲಿ ಗುಜರಾತಿನ ವಿರುದ್ಧ ಆಡಿ 134ರನ್ನು ಮಾಡಿ 6 ವಿಕೆಟ್ ಗಳಿಸಿದರು. ಇದು ಬೋರ್ಡೆಯವರ ಮೊದಲ ಶತಕ. 1969ರಲ್ಲಿ ಮಹಾರಾಷ್ಟ್ರದ ಪರವಾಗಿ ಬರೋಡ ವಿರುದ್ದ 202ರನ್ನು ಗಳಿಸಿದರು. 1970-71ರಲ್ಲಿ ಮಹಾರಾಷ್ಟ್ರ ರಣಜಿ ಟ್ರೋಫಿ ಪಂದ್ಯದಲ್ಲಿ ಫೈನಲ್ ಮುಟ್ಟಲು ಚಂದೂ ಬೋರ್ಡ ಅವರೇ ಕಾರಣ ಎನ್ನಲಾಗಿದೆ. ರಣಜಿ ಪಂದ್ಯಗಳಲ್ಲಿ 1070-71ರ ತನಕ ಆಡಿದ ಒಟ್ಟು 81 ಇನ್ನಿಂಗ್ಸ್‍ಗಳಲ್ಲಿ 102 ವಿಕೆಟ್ ಪಡೆದು 12 ಶತಕಗಳೂ ಸೇರಿದಂತೆ 2,865ರನ್ನು ಮಾಡಿದ್ದಾರೆ. (ಎಸ್.ಎಚ್.)

ಬೋರ್ಡೆ ತಮ್ಮ ಪ್ರಥಮ ಟೆಸ್ಟ್ ಪಂದ್ಯವಾಡಿದ್ದು ವೆಸ್ಟ್ ಇಂಡೀಸ್ ವಿರುದ್ಧ (1958-59). ಮದ್ರಾಸಿನಲ್ಲಿ ನಡೆದ ಟೆಸ್ಟ್‍ಪಂದ್ಯದಲ್ಲಿ 114ರನ್ ಮಾಡಿ ಟೆಸ್ಟ್‍ಪಂದ್ಯದ ಮೊದಲ ಶತಕ ಪಡೆದರು. ಅನಂತರ ದಿಲ್ಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 109 ರನ್ನು ಗಳಿಸಿದರು. ಎರಡನೆಯ ಇನ್ನಿಂಗ್ಸ್‍ನಲ್ಲಿ ದಶಕ ಮುಟ್ಟಲು 4 ರನ್ನು ಮಾತ್ರ ಕಡಮೆಯಿತ್ತು. 1959ರಲ್ಲಿ ದತ್ತೂಗಾಯಕವಾಡ್ ತಂಡದೊಂದಿಗೆ ಇಂಗ್ಕೆಂಡಿಗೆ ಹೋದರು. ಅಲ್ಲಿ ಆಡಿದ ಒಟ್ಟು 25 ಪಂದ್ಯಗಳಲ್ಲಿ ಬೋರ್ಡೆ 46 ಇನ್ನಿಂಗ್ಸ್‍ಗಳಿಂದ 72 ವಿಕೆಟ್ ಪಡೆದು 1,000 ರನ್ನು ಮಾಡಿದರು ಇಂಗ್ಲೆಡಿನಿಂದ ಹಿಂದಿರುಗಿದ ಅನಂತರ ಭಾರತಕ್ಕೆ ಬಂದ ಆಸ್ಟ್ರೇಲಿಯಾ ತಂಡದ ವಿರುದ್ದ ಆಡಿ ಒಟ್ಟು 10 ಇನ್ನಿಂಗ್ಸ್‍ಗಳಿಂದ 7 ವಿಕೆಟ್‍ಗಳಿಸಿ 244ರನ್ನು ಮಾಡಿದರು.

ಬೋರ್ಡೆ ಆಡಿದ 55 ಟೆಸ್ಟ್‍ಪಂದ್ಯಗಳಲ್ಲಿ 97 ಇನ್ನಿಂಗ್ಸ್‍ಗಳಿದ್ದು 5 ಶತಕಗಳು ಮತ್ತು 17 ಅರ್ಧ ಶತಕಗಳೂ ಸೇರಿದಂತೆ 2,062ರನ್ನುಗಳನ್ನು ಗಳಿಸಿದ್ದಾರೆ. ಬೌಲರಾಗಿ 43 ವಿಕೆಟ್ ಪಡೆದು 38 ಕ್ಯಾಚುಗಳನ್ನು ಹಿಡಿದಿದ್ದಾರೆ.

1966ರಲ್ಲಿ ಭಾರತ ಸರ್ಕಾರ ಇವರಿಗೆ ಅರ್ಜುನ ಪಶಸ್ತಿಯನ್ನು ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.