ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋರ್ನಿಯೋ

ವಿಕಿಸೋರ್ಸ್ದಿಂದ

ಬೋರ್ನಿಯೋ - ಇಂಡೊನೇಷ್ಯದ ಒಂದು ದ್ವೀಪ. ಮಲಯ ಪರ್ಯಾಯ ದ್ವೀಪದ ಆಗ್ನೇಯದಲ್ಲಿ ಸಿಂಗಪುರದ ಪೂರ್ವಕ್ಕೆ 640 ಕಿಮೀ ದೂರದಲ್ಲಿದೆ. ಪ್ರಪಂಚದ ಮೂರನೆಯ ದೊಡ್ಡದ್ವೀಪ ಫೆಸಿಪಿಕ್ ಸಾಗರದ ಹಿರಿಯ ಸುಂಡ ದ್ವೀಪಸ್ತೋಮಕ್ಕೆ ಸೇರಿದೆ. ಈ ದ್ವೀಪದ ವಾಯುವ್ಯ ಹಾಗೂ ಪಶ್ಚಿಮದಲ್ಲಿ ದಕ್ಷಿಣ ಚೀನಾಸಮುದ್ರ ಹಾಗೂ ಮಕಾಸರ್ ಜಲಸಂಧಿ ಮತ್ತು ದಕ್ಷಿಣದಲ್ಲಿ ಜಾವಾ ಸಮುದ್ರ ಇವೆ. ದ್ವೀಪ ದಕ್ಷಿಣದಲ್ಲಿ ವಿಶಾಲವಾಗಿದ್ದು ಉತ್ತರದಲ್ಲಿ ಸಂಕುಚಿತಗೊಂಡಿದೆ. ಮುಕ್ಕಾಲುಭಾಗ ಇಂಡೊನೆ ಷ್ಯಾ ಗಣರಾಜ್ಯಕ್ಕೆ ಸೇರಿದ್ದು. ಜ£ಸಂಖ್ಯೆ 4,555,000 (1975) ಉಳಿದ ಕಾಲುಭಾಗದಲ್ಲಿ ಹೆಚ್ಚು ಪ್ರದೇಶ ಮಲೇಷ್ಯಕ್ಕೆ ಸೇರಿದ್ದು_ಜನಸಂಖ್ಯೆ 1,902,000 (1975).5,765 ಚಕಿಮೀ ವಿಸ್ತೀರ್ಣ ಪ್ರದೇಶ ಬ್ರೂನೈ (ನೋಡಿ- ಬ್ರೂನೈ) ಸ್ವತಂತ್ರ ರಾಜ್ಯಕ್ಕೆ ಸೇರಿದ್ದು. ಜನಸಂಖ್ಯೆ 215,000 (1980). ನೈರುತ್ಯದಿಂದ ಈಶಾನ್ಯಕ್ಕೆ ಇದರ ಉದ್ದ 1,336 ಕಿಮೀ ದ್ವೀಪಕ್ಕೆ ಸೇರಿದ ಇತರ ಸಣ್ಣ ದ್ವೀಪಗಳೂ ಸೇರಿ ಇದರ ವಿಸ್ತೀರ್ಣ 743,386 ಚಕಿಮೀ. ದ್ವೀಪ ಉ.ಆ. 7( ಯಿಂದ ದ.ಅ.4( 20( ವರೆಗೂ ಪೂ.ರೇ. 108( 23( ದಿಂದ ಪೂ. ರೇ. 119( 22( ವರೆಗೆ ವ್ಯಾಪಿಸಿದ್ದು ಸಮಭಾಜಕವೃತ್ತ ಈ ದ್ವೀಪದ ಮಧ್ಯೆ ಹಾದುಹೋಗಿದೆ.

ಒಳನಾಡು ಫಲವತ್ತಾದ ಬಯಲುಗಳಿಂದಲೂ ಸಮುದ್ರದ ಅಂಚು ಜೌಗು ಭೂಮಿಯಿಂದಲೂ ಕೂಡಿದೆ. ಪರ್ವತ ಹಾಗೂ ದಟ್ಟಡವಿಗಳಿಂದ ಕೂಡಿರುವ ಈ ದ್ವೀಪದಲ್ಲಿ ಮಳೆ ಹೆಚ್ಚು. ವಾರ್ಷಿಕ ಸರಾಸರಿ 3800 ಮಿಮೀ. ನಿತ್ಯಹಸಿರಿನ ಅರಣ್ಯಗಳಿವೆ. ಅತ್ಯಂತ ಎತ್ತರದ ಪರ್ವತ ಈ ದ್ವೀಪದ ಉತ್ತರ ತುದಿಯ ಸಬಾ ರಾಜ್ಯದಲ್ಲಿರುವ ಕಿನಬಲೂ (4,101 ಮೀ).

ಇಲ್ಲಿ ಅನೇಕ ನದಿಗಳಿವೆ. ಇವುಗಳಲ್ಲಿ ಸಾರವಾಕಿನ ರಾಜಾನ್, ಪಶ್ಚಿಮ ಬೋರ್ನಿಯೋದ ಕಾಪೊವಾಸ್, ದಕ್ಷಿಣದ ಬಾರಿಟೊ ಪೂರ್ವದ ಮಹಾಕಮ್ ಮುಖ್ಯವಾದವು. ಇವುಗಳ ಮೂಲಕ ದ್ವೀಪದ ಬಳಕೆಯಾಗುತ್ತಿದೆ. ದ್ವೀಪದಲ್ಲಿ ಕೆಲವು ಬಂದರುಗಳಿವೆ. ಇವುಗಳ ಪೈಕಿ ಬಹೂಪಯೋಗದ ಮತ್ತು ಉತ್ತಮ ಬಂದರೆಂದರೆ ಬ್ರೂನೈಕೊಲ್ಲಿಯ ಬಂದರು ಒಂದೇ. ಎರಡನೆಯ ಮಹಾ ಯುದ್ಧದಲ್ಲಿ ಈ ಬಂದರು ಜಪಾನಿನ ನೌಕಾ ಸೇನೆಯ ನೆಲೆಯಾಗಿತ್ತು.

ಅಡವಿಗಳಲ್ಲಿ ಚೌಬೀನೆ ಗಟ್ಟಿ ಮರಗಳೂ ಸಾಂಬ್ರಾಣಿ ಮರ ಮತ್ತು ಬೆತ್ತದ ಗಿಡಗಳೂ ಚರ್ಮಹದಮಾಡಲು ಬರುವ ತೊಗಟೆಯ ಗುಲ್ಮ ವೃಕ್ಷಗಳೂ ಬೆಳೆಯುತ್ತವೆ. ಕಡಲಂಚುಗಳಲ್ಲಿ ತೆಂಗು ಸಮೃದ್ಧ ಪ್ರಪಂಚದಲ್ಲೆಲ್ಲ ಅತ್ಯಂತ ದೊಡ್ಡದಾದ ರಪ್ಲೇಸಿಯ ಹೂವಿನ ಗಿಡಗಳು ಇಲ್ಲಿವೆ. ಅರಣ್ಯಗಳಲ್ಲಿ ಒರಾಂಗುಟಾನ್ ಮತ್ತು ಗಿಬ್ಬನ್ ಕೋಡಗಗಳು, ಚಿರತೆ, ಆನೆ, ಖಡ್ಗಮೃಗ, ವಿವಿಧ ಪಕ್ಷಿಗಳು, ಉರಗೆ ಮೊಸಳೆ ಮುಂತಾದ ಪಶು ಪಕ್ಷಿ ಪ್ರಾಣಿಗಳಿವೆ.

ಈ ದ್ವೀಪದಲ್ಲಿ ದೊರಕುವ ಚಿನ್ನ, ವಜ್ರ, ಆಂಟಿಮೊನಿ, ಪಾದರಸ, ಜಿಪ್ಸಮ್, ಕಬ್ಬಿಣ ಮೊದಲಾದ ಖನಿಜಗಳನ್ನು 19ನೆಯ ಶತಮಾನದ ಪ್ರಾರಂಭದಲ್ಲೆ ಖಾಸಗಿ ಕಂಪನಿಗಳು ಉತ್ಖನನಮಾಡಿದುವು. ದ್ವೀಪದ ದಕ್ಷಿಣದಲ್ಲಿ ಈಗಲೂ ಸ್ವಲ್ಪ ಚಿನ್ನ ದೊರಕುತ್ತದೆ. ತಾರಕಾನ್ ದ್ವೀಪ ಹಾಗೂ ಬ್ರೂನೈ ಪ್ರದೇಶದ ಸೆರೀಯ ಎಂಬಲ್ಲಿ ಪೆಟ್ರೋಲ್ ಗಣಿಗಳಿವೆ. ನೈಔತ್ಯದ ದಾತೂ ಭೂಶಿರದ ಬಳಿ ಬಾಕ್ಸೈಟ್ ಜೇಡಿ ಮಣ್ಣು ಸಿಗುತ್ತದೆ. ಇಲ್ಲಿ ದೊರಕುವ ವಜ್ರಗಳಿಂದಲೇ ಇಂಡೊನೇಷ್ಯನ್ನರು ಈ ದ್ವೀಪವನ್ನು ಕಾಲಿಮಾಂಟನ್ ಎಂದರೆ ವಜ್ರದ ನದಿ ಎಂದು ಕರೆದರು.

ಬೋರ್ನಿಯೋದಲ್ಲಿ ಅಗ್ನಿಪರ್ವತಗಳಿಂದಾದ ಫಲವತ್ತಾದ ಪ್ರದೇಶಗಳಿವೆ. ಮುಖ್ಯ ಬೆಳೆಗಳು ಬತ್ತ, ಮುಸುಕಿನ ಜೋಳ, ಗೆಣಸು ಮತ್ತು ಸೌತೆ ಹಾಗೂ ಕುಂಬಳಕಾಯಿ. ಪ್ಲಾಂಟೇಷನ್ನುಗಳಲ್ಲಿ ರಬ್ಬರ್ ಮರಗಳನ್ನು ಬೆಳೆಸಲಾಗಿದೆ. ಇಲ್ಲಿಯ ಚೀನೀಯರು ಬಹುಪ್ರಮಾಣದಲ್ಲಿ ಮೆಣಸು ಬೆಳೆಸುತ್ತಾರೆ. ದ್ವೀಪದಿಂದ ರಫ್ತಾಗುವ ವಸ್ತುಗಳು ಸೀಮೆ ಅಕ್ಕಿ (ಸಬ್ಬಕ್ಕಿ), ಕೊಬ್ಬರಿ, ಕಚ್ (ಗುಲ್ಮವೃಕ್ಷದ ಬಣ್ಣ ಗಟ್ಟುವ ರಸ) ಹಾಗೂ ಮೀನು. ದ್ವೀಪದ ಮಲೆನಾಡ ಭಾಗಗಳಲ್ಲಿ ಹೊಗೆಸೊಪ್ಪು, ಸೆಣಬು, ಕಾಫಿ, ಮತ್ತು ಕೋಕೊ ಬೆಳೆಸುತ್ತಾರೆ.

ಇಲ್ಲಿ ಜನಸಾಂದ್ರತೆ ಹೆಚ್ಚಿಲ್ಲ ಜನರಲ್ಲಿ ಬಹುಮಂದಿ ದ್ವೀಪದ ಇಂಡೋನೇಷ್ಯಾ ಭಾಗದಲ್ಲಿ ವಾಸಿಸುತ್ತಾರೆ. ದ್ವೀಪದ ಪ್ರಧಾನ ಜನ ಡೈಕ್ ಬುಡಕಟ್ಟಿನವರು ಅವರದು ಸರ್ವಚೇತನ ಧರ್ಮ, ಪ್ರಾಣಿಪ್ರಜೆ, ಪಿತೃಪ್ರಜೆ, ಸಾಮಾನ್ಯ, ಹಿಂದೆ ಅವರು ಶತ್ರುಗಳ ಶಿರಬೆಟಿಯಲ್ಲಿ ಬಿರತರಾಗಿದ್ದ ಕಾಡುಜನ. ಮಲಯಾದ ಮುಸಲ್ಮಾನರು ಹಾಗೂ ಚೀನಿಯರು ಬಹು ಬಹುಸಂಖ್ಯೆಯಲ್ಲಿದ್ದಾರೆ. ಯೂರೊಪಿನ ಜನ ಇಲ್ಲಿ ಅಲ್ಪ ಸಂಖ್ಯಾತರು.

ರಾಜಕೀಯವಾಗಿ ಈ ದ್ವೀಪವನ್ನು ಇಂಡೊನೇಷ್ಯಾ ಬೋರ್ನಿಯೋ, ಸಾರವಾಕ್ ರಾಜ್ಯ, ಸಭಾ ಅಥವಾ ಉತ್ತರ ಬೋರ್ನಿಯೋ-ಹಾಗೂ ಬ್ರೂನೈ ಸಂಸ್ಥಾನ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇಂಡೊನೇಷ್ಯಾ ಬೋರ್ನಿಯೋ ದ್ವೀಪದ ಮಧ್ಯ ಹಾಗೂ ದಕ್ಷಿಣ ಭಾಗಗಳನ್ನು ಹೊಂದಿ 1949ರ ತನಕ ಡಚ್ಚರ ವಶದಲ್ಲಿದ್ದು ಆ ತರುವಾಯ ಇಂಡೋನೇಷ್ಯಾಕ್ಕೆ ಸೇರಿತು. ಆ ಭಾಗಕ್ಕೆ ಕಾಲಿಮಾಂಟನ್ ಎಂದು ಹೆಸರು. ದ್ವೀಪದ ಪಶ್ಚಿಮ ತೀರ ಹಾಗೂ ಉತ್ತರ ತುದಿಯ ಪ್ರದೇಶದಲ್ಲಿ ಸಾರವಾಕ್ ಹಾಗೂ ಸಬಾ ರಾಜ್ಯಗಳಿವೆ. ಟಾಲೆಮೀ ವಿರಚಿತ ಭೂಗೋಳ ಶಾಸ್ತ್ರ ಕೈಪಿಡಿಯಲ್ಲಿ (ಕ್ರಿ.ಶ. 150) ಬೋರ್ನಿಯೋ ದ್ವೀಪದ ಬಗ್ಗೆ ಮಾಹಿತಿಗಳಿವೆ. 14ನೆಯ ಶತಮಾನದಲ್ಲಿ ಆಗ್ನೇಯ ಏಷ್ಯದಲ್ಲಿ ಸಂಚರಿಸಿದ ಯೂರೊಪಿನ ಪ್ರವಾಸಿಗರು ಈ ದ್ವೀಪವನ್ನು ಕಂಡಿದ್ದಾರೆ. ಈ ದ್ವೀಪಕ್ಕೆ ಬಂದ ಮೊದಲ ಯೂರೊಪಿನ ಚೀನಾದಿಂದ ಹಿಂದಿರುಗುತ್ತಿದ್ದ ಫ್ರಾನ್ ಸಿಸ್ಕನ್ ಪಾದ್ರಿ ಒಡೋರಿಕ್ ಎಂಬಾತ (ಕ್ರಿ.ಶ. 1330) 16ನೆಯ ಶತಮಾನದ ಪ್ರಾರಂಭದಲ್ಲಿ ಫೋರ್ಚುಗೀಸರು ಹಾಗೂ ಸ್ಪೇನಿನವರು ಈ ದ್ವೀಪದೊಂದಿಗೆ ವಾಣಿಜ್ಯ ಸಂಪರ್ಕ ಹೊಂದಿದ್ದರು. 17ನೆಯ ಶತಮಾನದಲ್ಲಿ ಅವರ ವ್ಯಾಪಾರ ಡಚ್ ಮತ್ತು ಬ್ರಿಟಿಷ್ ಈಸ್ಪ್ ಇಂಡಿಯಾ ಕಂಪೆನಿಗಳ ಪ್ರಭಾವದಿಂದ ಕುಗ್ಗಿತು. ಎರಡನೆಯ ಮಹಾಯುದ್ಧದಲ್ಲಿ (1939-45) ಜಪಾನ್ ಸೈನ್ಯ ಈ ದ್ವೀಪವನ್ನು ಆಕ್ರಮಿಸಿತ್ತು (1941-42). 1946 ಜುಲೈನಲ್ಲಿ ಸಾರವಾಕ್ ಮತ್ತು ಉತ್ತರ ಬೋರ್ನಿಯೋ (ಸಬಾ) ಬ್ರಿಟಿಷ್ ವಸಾಹತುಗಳಾಗಿದ್ದವು. ಡಚ್ಚರ ವಶದಲ್ಲಿದ್ದ ದಕ್ಷಿಣ ಬೋರ್ನಿಯೋ (ಕಾಲಿಮಾಂಟನ್) ಭಾಗದಲ್ಲಿ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಗಿ ಇಂಡೋನೇಷ್ಯ ಮತ್ತು ಡಚ್ ಸೈನ್ಯಗಳ ನಡುವೆ ಕದನ ನಡೆಯಿತು. 1949ರಲ್ಲಿ ದ್ವೀಪದ ಈ ಭಾಗ ಇಂಡೊನೇಷ್ಯಕ್ಕೆ ಸೇರಿ 1950ರ ಸಂವಿಧಾನದ ಪ್ರಕಾರ ಆ ಗಣರಾಜ್ಯದ ಸಂಘಟಿತ ಭಾಗವಾಯಿತು. 1963ರಲ್ಲಿ ಬ್ರಿಟಿಷ್ ಸರ್ಕಾರ ಸಬಾ ಮತ್ತು ಸಾರವಾಕ್ ವಸಾಹತುಗಳ ಮೇಲಣ ತಮ್ಮ ಪ್ರಭುತ್ವವನ್ನು ಬಿಟ್ಟುಕೊಡಲು ಅದೇ ವರ್ಷ ಅವು ಮಲೇಷ್ಯ ಒಕ್ಕೂಟಕ್ಕೆ ಸೇರಿದುವು. ಅದರ ಪರಿಣಾಮವಾಗಿ ಇಂಡೊನೇಷ್ಯ ರಾಷ್ಟ್ರ ಅವನ್ನು ಆಕ್ರಮಿಸಿಕೊಳ್ಳಲು ಗೆರಿಲ್ಲಾ ದಾಳಿಗಳನ್ನು ಪ್ರಾರಂಭಿಸಿತು. 1966ರ ಒಪ್ಪಂದದ ಪ್ರಕಾರ ಈ ದಾಳಿಗಳ ಮುಕ್ತಾಯವಾಯಿತು. ಸಾರವಾಕ್ ಮತ್ತು ಸಬಾ ರಾಜ್ಯಗಳ ನಡುವೆ ಇರುವ ಬ್ರೂನೈ ಒಂದು ಸ್ವತಂತ್ರದೇಶ. (ವಿ.ಜಿ.ಕೆ.)