ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋರ್, ನೀಲ್ಸ್‌ ಹೆನ್ರಿಕ್ ಡೇವಿಡ್

ವಿಕಿಸೋರ್ಸ್ದಿಂದ

ಬೋರ್, ನೀಲ್ಸ್ ಹೆನ್ರಿಕ್ ಡೇವಿಡ್ 1885-1962. ಡೆನ್ಮಾರ್ಕ್ ದೇಶದ ಭೌತವಿಜ್ಞಾನಿ. ಇಪ್ಪತ್ತನೆಯ ಶತಮಾನದ ಭೌತವಿಜ್ಞಾನ ಪ್ರವಾಹಕ್ಕೆ ಸ್ವತಂತ್ರ ಕೊಡುಗೆ ನೀಡಿ ಅದರ ದಿಕ್ಕನ್ನೇ ಬದಲಾಯಿಸಿದ ಮಹಾವಿಜ್ಞಾನಿಗಳ ಪೈಕಿ ಒಬ್ಬ. ಪರಮಾಣು ವಿಜ್ಞಾನದಲ್ಲಿ ಈತ ಮಾಡಿದ ಆವಿಷ್ಕಾರಗಳು ನ್ಯೂಕ್ಲಿಯರ್ ಶಕ್ತಿ ಬಸಿಯುವಲ್ಲಿ ಯುಗ ಪ್ರವರ್ತಕ ಎನ್ನಿಸಿದುವು. ಆದರೆ ಇವು ಪರಮಾಣು ಬಾಂಬ್ ರೂಪ ತಳೆದು ಮನುಕುಲದ ಪುರೋಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದಾಗ ಬೋರ್ ಕಟ್ಟಾ ಶಾಂತಿವಾದಿಯಾಗಿ ಅತ್ಯಂತ ನಿಷ್ಠೆಯಿಂದ ದುಡಿದು ವಿಜ್ಞಾನಿಗಳಲ್ಲಿ ಸಾಮಾಜಿಕ ಕಳಕಳಿಯೂ ಎಷ್ಟು ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ.

ಕೊಪನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರವಿಜ್ಞಾನ ಪ್ರಾಧ್ಯಾಪಕನಾಗಿದ್ದ ಕ್ರಿಶ್ಚಿಯನ್ ಬೋರ್ ಹಾಗೂ ಈತನ ಪತ್ನಿ ಎಲೆನ್ ಆಡ್ಲರ್ ಇವರ ಪ್ರಥಮ ಪುತ್ರನಾಗಿ ನೀಲ್ಸ್ ಬೋರ್ 1885 ಅಕ್ಟೋಬರ್ 7ರಂದು ಜನಿಸಿದ. ಈತನ ಶಿಕ್ಷಣ ಅದೇ ಊರಿನ ಪಬ್ಲಿಕ್ ಶಾಲೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ನಡೆಯಿತು. ರೂಪನ್‍ಹೇಗನ್ ವಿಶ್ವವಿದ್ಯಾಲಯದ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯೆಂಬ ಖ್ಯಾತಿ ಈತನದು (1907). ದ್ರಾವಕಗಳು ಹಾಗೂ ನೀರಿನ ಮೇಲ್ಮೈ ಎಳೆತಗಳಿಗೆ ಸಂಬಂಧಿಸಿದಂತೆ ಬೋರ್ ಮಾಡಿದ ಮೂಲ ಸಂಶೋಧನೆಗಳು ಇವನಿಗೆ ಡೇನಿಶ್ ಅಕ್ಯಾಡೆಮಿ ಆಫ್ ಸೈನ್ಸಿನ ಬಂಗಾರದ ಪದಕ ದೊರಕಿಸಿಕೊಟ್ಟವು. ಇದೇ ವೇಳೆಗೆ ಎಕ್ಸ್‍ಕಿರಣಗಳು, ಎಲೆಕ್ಟ್ರಾನುಗಳು, ಅಲ್ಫಾಕಿರಣಗಳು ಮುಂತಾದವು ತ್ವರಿತ ಗತಿಯಲ್ಲಿ ಸಂಶೋಧಿಸಲ್ಪಟ್ಟು ಈತನ ವಿಚಾರಶಕ್ತಿಗೆ ಪ್ರೇರಕಗಳಾಗಿ ಪರಿಣಮಿಸಿದುವು. ಲೋಹಗಳಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿದ್ಧಾಂತವನ್ನು ಪ್ರಚುರಪಡಿಸಿ ಬೋರ್ 1911ರಲ್ಲಿ ಡಾಕ್ಟರೇಟ್ ಪದವಿ ಪಡೆದ.

ಆ ವೇಳೆಗೆ ಎಲೆಕ್ಟ್ರಾನ್ ಜನಕ ಎಂಬುದಾಗಿ ಖ್ಯಾತನಾಗಿದ್ದ ಜೆ.ಜೆ. ತಾಮ್ಸನ್ನನ ನೇತೃತ್ವದಲ್ಲಿ ಅಭ್ಯಾಸ ಮುಂದುವರಿದಲು ಬೋರ್ ಇಂಗ್ಲೆಂಡಿನ ಪ್ರಸಿದ್ಧ ಕ್ಯಾವೆಂಡಿಶ್ ಪ್ರಯೋಗಶಾಲೆ ಸೇರಿ ಮುಂದೆ ಹೆಚ್ಚಿನ ಅಧ್ಯಯನ ನಡೆಸಲು ಅರ್ನೆಸ್ಟ್ ರುದರ್ಫರ್ಡನ ವಿದ್ಯಾರ್ಥಿಯಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಸೇರಿದ. ಆಗ ಪರಮಾಣು ಬೀಜದ ಭೌತ ಪ್ರತಿರೂಪದ ರಚನೆಯಲ್ಲಿ ತೊಡಗಿದ ರುದರ್ಫರ್ಡ್ ಈ ತರುಣ ವಿದ್ಯಾರ್ಥಿಯಲ್ಲಿದ್ದ ಅಸಾಮಾನ್ಯ ಪ್ರತಿಭೆಯನ್ನು ಒಡನೆ ಗುರುತಿಸಿದ. ಮುಂದೆ 1937ರಲ್ಲಿ ರುದರ್ಫರ್ಡ್ ಅಕಾಲಿಕ ಮರಣಹೊಂದುವತನಕ ಇವರೀರ್ವರೂ ಆತ್ಮೀಯ ಗೆಳೆಯರಂತೆ ವೈಜ್ಞಾನಿಕ ಸಹಯೋಗ ನಿರತರಾಗಿದ್ದರು.

1916ರಲ್ಲಿ ಬೋರ್ ಕೊಪನ್‍ಹೇಗನ್ನಿಗೆ ಹಿಂತಿರುಗಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ. ಎಲೆಕ್ಟ್ರಾನುಗಳು ತಮ್ಮ ಕಕ್ಷೆಗಳಲ್ಲಿ ಯಾವರೀತಿಯಲ್ಲಿ ಚಲಿಸುವುವು ಎಂಬುದನ್ನು ಯಥಾಯೋಗ್ಯವಾಗಿ ವರ್ಣಿಸಲು ಭೌತವಿಜ್ಞಾನದ ಅಭಿಜಾತ ತತ್ತ್ವಗಳಿಗೆ ಸಾಧ್ಯವಾಗದು, ಎಂಬ ಸಂಗತಿ ಅವನಿಗೆ ಈ ವೇಳೆಗೆ ಮನವರಿಕೆ ಆಗಿತ್ತು. ಅತ್ಯುಚ್ಚ ಉಷ್ಣತೆಗೆ ಏರಿಸಿದಾಗ ಆಗಲಿ ಅವೇ ಪರಮಣುಗಳಲ್ಲಿ ವಿದ್ಯುದ್ವಿಸರ್ಜನೆ ಆಗುವಂತೆ ಮಾಡಿದಾಗ ಆಗಲಿ ವಿಶೇಷ ಲಕ್ಷಣದ ರೋಹಿತವರ್ಣಗಳ ಶ್ರೇಣಿಗಳು ಏಕೆ ಕಂಡು ಬರುವುವು ಎಂಬುದರೆಡೆಗೆ ತನ್ನ ಲಕ್ಷ್ಯ ಹೊರಳಿಸಿದ. ಇಂಥ ವಿಶ್ವೇಷಣೆ ಸೂರ್ಯನಲ್ಲಿರುವ ಭಿನ್ನಧಾತುಗಳನ್ನು ಗುರುತಿಸಲು ಸಹಕಾರಿಯಾಗಿದೆ. ರುದರ್ಫರ್ಡ್ ಪ್ರತಿಪಾದಿಸಿದ ಬೈಜಿಕ (ನ್ಯೂಕ್ಲಿಯರ್) ವಿಚಾರಧಾರೆಗೆ ಮ್ಯಾಕ್ಸ್ ಪ್ಲ್ಯಾಂಕ್ ರೂಪಿಸಿದ್ದ ಕ್ರಾಂತಿಕಾರಿ ಕ್ವಾಂಟಮ್ ಸಿದ್ಧಾಂತವನ್ನು ಅಳವಡಿಸುವ ಕಾರ್ಯವನ್ನು ಬೋರ್ ಮಾಡಿದುದಲ್ಲದೆ ಪರಮಾಣು ರಚನೆಗೆ ಸಂಬಂಧಿಸಿದ ಯಥಾರ್ಥ ಪ್ರಪ್ರಥಮ ಚಿತ್ರಣ ಕೂಡ ನೀಡಿದ. ಈತನ ಸಿದ್ಧಾಂತದ ಪ್ರಕಾರ ಪ್ರತಿಯೊಂದು ಎಲೆಕ್ಟ್ರಾನ್ ತನ್ನ ಬೀಜದ ಸುತ್ತ ನಿರ್ದಿಷ್ಟ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವುದು. ಇಂಥ ಕಕ್ಷೆಗಳು ಬೀಜದಿಂದ ವಿವಿಧ ದೂರಗಳಲ್ಲಿರುವುವು. ದೂರದ ಕಕ್ಷೆಗಳಲ್ಲಿ ಸುತ್ತುತ್ತಿರುವ ಎಲೆಕ್ಟ್ರಾನುಗಳು ಅಧಿಕಶಕ್ತಿಯುತವಾಗಿದ್ದರೆ ಸಮೀಪದ ಕಕ್ಷೆಗಳಲ್ಲಿ ಸುತ್ತುತ್ತಿರುವುವು ನಿಮ್ನ ಶಕ್ತಿಯುತವಾದವಾಗಿರುವುವು. ಆದರೆ ಎಲೆಕ್ಟ್ರಾನ್ ಹೆಚ್ಚು ಶಕ್ತಿಯುತವಾದ ದೂರದ ಒಂದು ಕಕ್ಷೆಯಿಂದ ಕಡಿಮೆ ಶಕ್ತಿಯುತವಾದ ಸಮೀಪದ ಒಂದು ಕಕ್ಷೆಗೆ ಜಿಗಿದಾಗ ಮಾತ್ರ ಶಕ್ತಿ ಹೊರ ಚೆಲ್ಲುವುದು. ವಿಲೋಮವಾಗಿ ಎಲೆಕ್ಟ್ರಾನ್ ಸಮೀಪದ ಒಂದು ಕಕ್ಷೆಯಿಂದ ದೂರದ ಕಕ್ಷೆಗೆ ಜಿಗಿದಾಗ ಶಕ್ತಿಯನ್ನು ಹೀರಿಕೊಳ್ಳುವುದು. ಈ ಶಕ್ತಿಯ ಹೊರೆಚೆಲ್ಲುವಿಕೆ, ಹೀರಿಕೆಗಳು ಕ್ವಾಂಟಮ್ ಸಿದ್ಧಾಂತ ವಿವರಿಸುವ ಪ್ರಕಾರ ಜರಗುತ್ತವೆ. ದೂರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ (ಅಧಿಕ ಶಕ್ತಿ) ಎಲೆಕ್ಟ್ರಾನ್ ಸಮೀಪದ (ನಿಮ್ನಶಕ್ತಿ) ಕಕ್ಷೆಗೆ ಜಿಗಿದಾಗ ಕ್ವಾಂಟಮ್ ಸಿದ್ಧಾಂತದ ಪ್ರಕಾರ ಶಕ್ತಿ ಹೊರಚೆಲ್ಲುವುದು ಮತ್ತು ಈ ಶಕ್ತಿ ಆ ವಿಶಿಷ್ಟ ಪರಮಾಣುವಿಗೆ ಅನುಗುಣವಾದ ರೋಹಿತ ರೇಖೆಗಳ ರೂಪದಲ್ಲಿ ಶಕ್ತಿಯನ್ನು ಪ್ರಸರಿಸುವುದು. ಈ ವಿಚಾರ ಧಾರೆಯಿಂದಾಗಿ ಹೈಡ್ರೊಜನ್ ಪರಮಾಣುಗಳ ರೋಹಿತದ ಅತಿನೇರಿಳೆ ಹಾಗೂ ಅತಿರಕ್ತ ಭಾಗಗಳಲ್ಲಿಯ ವಿಕಿರಣಗಳಿಗೆ ಸಂಬಂಧಿಸಿದ ವಿವರಗಳನ್ನು ನಿಷ್ಕøಷ್ಟವಾಗಿ ಪೂರ್ವಭಾವಿಯಾಗಿಯೇ ಹೇಳಲು ಸಾಧ್ಯವಾಯಿತು. ಬೋರನ ಸಂಶೋಧನೆಯ ಪ್ರಕಟಿತ ಫಲವಿದು.

1916ರಲ್ಲಿ ಬೋರ್‍ನನ್ನು ಕೊಪನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತವಿಜ್ಞಾನದ ಪ್ರಾಧ್ಯಾಪಕನಾಗಿಯೂ ಇದಾದ ನಾಲ್ಕು ವರ್ಷಗಳ ಬಳಿಕ ಅಲ್ಲಿಯೇ ಹೊಸದಾಗಿ ಸ್ಥಾಪಿಸಲ್ಪಟ್ಟ ಸೈದ್ಧಾಂತಿಕ ಭೌತವಿಜ್ಞಾನ ಸಂಸ್ಥೆಯ ಡೈರೆಕ್ಟರ್ ಆಗಿಯೂ ನೇಮಿಸಲಾಯಿತು. ಮುಂದೆ ಕೆಲವೇ ವರ್ಷಗಳಲ್ಲಿ ಈ ಸಂಸ್ಥೆ ಪ್ರಪಂಚದ ಅತ್ಯಂತ ಪ್ರಭಾವಶಾಲೀ ಕ್ವಾಂಟಮ್ ಸಿದ್ಧಾಂತದ ಸಂಶೋಧನಾಲಯವೆಂದು ಪರಿಗಣಿಸಲ್ಪಟ್ಟಿತು. ವಿಖ್ಯಾತ ಭೌತವಿಜ್ಞಾನಿಗಳಾದ ಹೈಸನ್‍ಬರ್ಗ್, ಡಿರಾಕ್, ಮೈಟ್ನರ್, ಬಾರ್ನ್, ಗ್ಯಾಮೊ ಮೊದಲಾದವರು ತಮ್ಮ ವ್ಯಾಸಂಗಕ್ಕೆಂದು ಇಲ್ಲಿಗೆ ಬಂದರು. ಪರಮಾಣುರಚನೆಗೆ ಸಂಬಂಧಿಸಿದ ಜ್ಞಾನಕ್ಕೆ ಬೋರ್ ನೀಡಿದ್ದ ಅಮೋಘ ಕೊಡುಗೆಯನ್ನು ಪರಿಗಣಿಸಿ ಅವನಿಗೆ 37ನೆಯ ವಯಸ್ಸಿನಲ್ಲಿ ನೊಬೆಲ್ ಬಹುಮಾನವನ್ನು ಪ್ರದಾನಿಸಲಾಯಿತು (1922). ವಾಸ್ತವವಾಗಿ ಇನ್ನೂ 9 ವರ್ಷ ಮೊದಲೇ ಈ ಬಹುಮಾನ ಅವನಿಗೆ ಸಲ್ಲಬೇಕಾಗಿತ್ತು.

ಆಸ್ಟ್ರಿಯಾ ದೇಶದ ಯಹೂದಿ ಜನಾಂಗಕ್ಕೆ ಸೇರಿದ ಲೈಸ್‍ಮೈಟ್ನರ್ ಹಾಗೂ ಆಕೆಯ ಆಪ್ತ ಆಟೊಫ್ರಿಶ್ಚ್ ಇವರೀರ್ವರೂ 1939ರ ಆದಿಭಾಗದಲ್ಲಿ ಬೋರ್ ಸಂಸ್ಥೆಯಲ್ಲಿಯೇ ಕೆಲಸಮಾಡುತ್ತಿದ್ದರು. ಜರ್ಮನ್ ವಿಜ್ಞಾನಿಗಳ ಸಂಶೋಧನೆಗಳನ್ನು ಪರಿಶೀಲಿಸುತ್ತಿದ್ದ ಇವರು ಯುರೇನಿಯಮ್ ಪರಮಾಣುವಿನ ವಿದಳನದ ಯತ್ನ ನಡೆಯುತ್ತಿದ್ದುದರ ಬಗ್ಗೆ ತಿಳಿದಿದ್ದರಲ್ಲದೆ ಇಂಥ ವಿದಳನದ ಫಲವಾಗಿ ಪ್ರಚಂಡ ಶಕ್ತಿಯ ಬಿಡುಗಡೆಯಾಗುವುದೆಂದೂ ತಿಳಿದಿದ್ದು ಈ ಸಂಗತಿಯನ್ನು ಬೋರನಿಗೆ ತಿಳಿಸಿದರು. ಪರಮಾಣು ಬಾಂಬಿನ ಮೊದಲ ದಿನ ಹೀಗೆ ಆರಂಭವಾಯಿತು. ಐನ್‍ಸ್ಟೈನ್ ಆವಿಷ್ಕರಿಸಿದ ರಾಶಿ-ಶಕ್ತಿಸಮಾನತಾ ಸೂತ್ರ ಇ=mಛಿ2 ಮತ್ತು ಬೋರ್ ನೀಡಿದ ಪರಮಾಣು ಪ್ರತಿರೂಪ ಇವು ಮಾನವ ಹಿತಕ್ಕೆ ಮಾರಕವಾದ ಪರಮಾಣುಬಾಂಬ್ ನಿರ್ಮಾಣಕ್ಕೆ ನೇರವಾಗಿ ಕಾರಣವಾದದ್ದು ಇತಿಹಾಸದ ವಿಪರ್ಯಾಸ.

1940ರಲ್ಲಿ ಜರ್ಮನಿ ಡೆನ್ಮಾರ್ಕನ್ನು ವಶಪಡಿಸಿಕೊಂಡಿತು. ಆದರೆ ಬೋರ್ ಎಂದೂ ಹಿಟ್ಲರನ ದುರಾಕ್ರಮಣಗಳಿಗೆ ಮಣಿಯಲಿಲ್ಲ. 1943ರ ತನಕ ಈತ ಅಲ್ಲಿಯೇ ಇದ್ದು, ತನ್ನನ್ನು ನಾಟ್ಸಿಗಳು ಕೈದು ಮಾಡುವರೆಂಬ ಸುಳಿವು ಸಿಕ್ಕೊಡನೆ ರಾತ್ರಿ ವೇಳೆ ದೋಣಿಯಲ್ಲಿ ಕುಳಿತು ಡೆನ್ಮಾರ್ಕಿನಿಂದ ಪಾರಾದ. ಬಳಿಕ ಸ್ವೀಡನ್ ಮಾರ್ಗವಾಗಿ ಅಮೆರಿಕ ತಲುಪಿ ಅಲ್ಲಿ ಪರಮಾಣು ಬಾಂಬ್ ಪ್ರಯೋಗಾಲಯದಲ್ಲಿ ಸಲಹಗಾರನೆಂದು ನೇಮಕ ಹೊಂದಿದ. ಇಲ್ಲಿ ಆತ ನಡೆಸಿದ ಕಾರ್ಯ ಎರಡನೆಯ ಮಹಾಯುದ್ಧವನ್ನು ತೀವ್ರವಾಗಿ ಕೊನೆಗೊಳಿಸುವಲ್ಲಿ ಸಹಕಾರಿಯಾಯಿತು.

ಯುದ್ಧ ಮುಗಿದೊಡನೆ ಬೋರ್ ಕೊಪನ್ ಹೇಗನ್ನಿಗೆ ಮರಳಿ ತಾನು ಮಾಡುತ್ತಿದ್ದ ಕಾರ್ಯವನ್ನು ಮುಂದುವರಿದಿದ್ದಲ್ಲದೆ ಸ್ಥಿರಶಾಂತಿ ನೆಲಸುವ ದಿಶೆಯಲ್ಲಿ ಸಹಾಯ ಕೂಡ ಸಲ್ಲಿಸಿದ. 1947ರಲ್ಲಿ ಡೆನ್ಮಾರ್ಕಿನ ರಾಜ ಈತನಿಗೆ ನೈಟ್ ಪದವಿ ನೀಡಿ ಗೌರವಿಸಿದ.

1955ರಲ್ಲಿ ಜಿನೀವದಲ್ಲಿ ಜರಗಿದ ಶಾಂತಿಗಾಗಿ ಪರಮಾಣು ಸಮ್ಮೇಳನದಲ್ಲಿ ಡೇನಿಶ್ ಅಟಾಮಿಕ್ ಎನರ್ಜಿ ಕಮಿಷನ್ ಕಾರ್ಯಾಧ್ಯಕ್ಷನಾಗಿ ಉಪಸ್ಥಿತನಿದ್ದ ಬೋರ್‍ನನ್ನು ಈ ಸಮ್ಮೇಳನದ ಕಾರ್ಯಾಧ್ಯಕ್ಷನೆಂದು ಆರಿಸಲಾಯಿತು. ಮುಂದೆ 1957ರಲ್ಲಿ ಶಾಂತಿಗಾಗಿ ಪರಮಾಣು ಪ್ರಶಸ್ತಿಯನ್ನು ಪ್ರಪ್ರಥಮವಾಗಿ ಇವನಿಗೇ ನೀಡಲಾಯಿತು. 1962 ನವೆಂಬರ್ 18ರಂದು ನಿಧನನಾದ. (ಕೆ.ಎಸ್.ಎಸ್.ಎ.)