ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಲ್ಟ್‌್ಸಮನ್, ಲುಡ್ವಿಗ್

ವಿಕಿಸೋರ್ಸ್ದಿಂದ

ಬೋಲ್ಟ್ಸ್‍ಮನ್, ಲುಡ್‍ವಿಗ್ 1844-1906. ಆಸ್ಟ್ರಿಯದ ಭೌತ ವಿಜ್ಞಾನಿ. ವಿಯೆನ್ನದಲ್ಲಿ ಜನನ (20 ಫೆಬ್ರವರಿ 1844). ವಿದ್ಯಾಭ್ಯಾಸ ಲಿಂಟ್ಸ್ ಮತ್ತು ವಿಯೆನ್ನಗಳಲ್ಲಿ ನಡೆಯಿತು. ವಿಯೆನ್ನ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪದವಿ ಪಡೆದ (1867). ಆಸ್ಟ್ರಿಯದ ಮತ್ತೊಬ್ಬ ಭೌತವಿಜ್ಞಾನಿ ಜೋಸೆಫ್ó ಸ್ಟೀಫನ್ (1835-93) ಈತನ ಸಹಪಾಠಿಯಾಗಿದ್ದ ವಿಯೆನ್ನದಲ್ಲಿ ಗಣಿತ ವಿಜ್ಞಾನದ ಪ್ರಾಧ್ಯಾಪಕನಾಗಿಯೂ ಗ್ರಾಟ್ಸ್‍ನಲ್ಲಿ ಪ್ರಾಯೋಗಿಕ ಭೌತವಿಜ್ಞಾನದ ಪ್ರಾಧ್ಯಾಪಕನಾಗಿಯೂ ಗ್ರಾಟ್ಸ್, ಮ್ಯೂನಿಕ್, ವಿಯೆನ್ನ ಲೈಪ್‍ಸಿಗ್ ವಿಶ್ವವಿದ್ಯಾಲಯಗಳಲ್ಲಿ ಸೈದ್ಧಾಂತಿಕ ಭೌತವಿಜ್ಞಾನದ ಪ್ರಾಧ್ಯಾಪಕನಾಗಿಯೂ ಕೆಲಸ ಮಾಡಿದ.

ಬೋಲ್ಟ್ಸ್‍ಮನ್ ತನ್ನ ಸಂಶೋಧನೆಯನ್ನು ಆರಂಭಮಾಡಿದ್ದು ಉಷ್ಣಗತಿ ವಿಜ್ಞಾನದ ಎರಡನೆಯ ನಿಯಮಕ್ಕೆ ವಿವರಣೆ ನೀಡುವುದರಿಂದ. ಅಲ್ಲಿಯ ತನಕ ಈ ನಿಯಮವನ್ನು ಪದಾರ್ಥದ ಪರಮಾಣು ಸಿದ್ಧಾಂತದ ಆಧಾರದ ಮೇಲೆಯೇ ವಿವರಿಸಲಾಗುತ್ತಿತ್ತು. ಪರಮಾಣುಗಳ ಚಲನೆಗಳಿಗೆ ಅನ್ವಯಿಸಿದ ಬಲವಿಜ್ಞಾನ ನಿಯಮಗಳನ್ನು ಸಂಭಾವಿತ ಸಿದ್ಧಾಂತದ ಜೊತೆಗೆ ಸೇರಿಸುವುದರಿಂದ ಎರಡನೆಯ ನಿಯಮವನ್ನು ವಿವರಿಸುವುದು ಸಾಧ್ಯ ಎಂದು ಬೋಲ್ಟ್ಸ್‍ಮನ್ ಪ್ರಕಟಿಸಿದ (ಸು. 1870). ಎರಡನೆಯ ನಿಯಮ ಎಂಬುದು ವಾಸ್ತವವಾಗಿ ಸಂಖ್ಯಾಕಲನೀಯ ನಿಯಮವೆಂದು ಸಮಸ್ಥಿತಿಯೇ ಅತ್ಯಂತ ಸಂಭಾವ್ಯಸ್ಥಿತಿಯಾಗಿರುವುದರಿಂದ ಯಾವುದೇ ವ್ಯವಸ್ಥೆಯಾಗಲೀ ಉಷ್ಣಗತಿ ವಿಜ್ಞಾನದ ರೀತ್ಯ ಸಮಸ್ಥಿತಿಯನ್ನು ಪಡೆಯುತ್ತೆಂದು ಸ್ಥಿರಪಡಿಸಿದ. ಉಷ್ಣಗತಿ ವಿಜ್ಞಾನದ ಅಲಭ್ಯತೆಯ (ಎನ್‍ಟ್ರೋಪಿ) ವರ್ತನೆ ಸಮಸ್ಥಿತಿ ಎಷ್ಟು ದೂರದಲ್ಲಿದೆ ಎಂಬುದನ್ನೂ ಅದರ ಗರಿಷ್ಠ ಮೌಲ್ಯ ಸಮಸ್ಥಿತಿಯನ್ನೂ ತಿಳಿಸುತ್ತವೆ. ಅಷ್ಟಲ್ಲದೆ ಅಲಭ್ಯತೆಯ ಫಲನ ಸ್ಥೂಲಸ್ಥಿತಿಯ (ಮ್ಯಾಕ್ರೊಸ್ಕೋಪಿಕ್ ಸ್ಟೇಟ್) ಸಂಭಾವ್ಯತೆಯನ್ನು ನೀಡುತ್ತವೆ. ವಿಯೆನ್ನದಲ್ಲಿರುವ ಬೋಲ್ಟ್ಸ್‍ಮನ್ನನ ಸಮಾಧಿ ಸ್ಮಾರಕದ ಮೇಲೆ ಅಲಭ್ಯತೆ ಮತ್ತು ಸಂಭಾವ್ಯತೆಗಳಿಗೆ ಸಂಬಂಧಿಸಿದ ಸಮೀಕರಣವನ್ನು ಕೆತ್ತಲಾಗಿದೆ.

ನಿರ್ದಿಷ್ಟ ಉಷúತೆಯಲ್ಲಿ ವ್ಯವಸ್ಥೆಯೊಂದಿಗೆ ವಿವಿಧ ಘಟಕಗಳ ನಡುವೆ ಶಕ್ತಿಯ ವಿತರಣೆಗೆ ಸಂಬಂಧಿಸಿದ ಸಾಮಾನ್ಯ ನಿಯಮ, ಶಕ್ತಿಯ ಸಮವಿಭಾಗದ ನಿಯಮ ಘರ್ಷಣೆಗಳ ಕಾರಣದಿಂದ ಪರಮಾಣುಗಳ ವಿತರಣೆಯಲ್ಲಿ ಆಗುವ ವ್ಯತ್ಯಾಸ ಕುರಿತ ಪೂರ್ಣಾಂಕ_ಅವಕಲ (ಇಂಟೆಗ್ರೊಡಿಫರೆಂಷಿಯಲ್) ಸಮೀಕರಣ-ಇವನ್ನು ಕುರಿತಂತೆ ಬೋಲ್ಟ್ಸ್‍ಮನ್ ಕೆಲಸ ಮಾಡಿದ. ಇದರಿಂದ ಸಂಖ್ಯಾಕಲನೀಯ ಬಲವಿಜ್ಞಾನದ ಅಡಿಪಾಯ ಬಲಗೊಂಡಿತು. ಹೀಗಾಗಿ ಸಂಖ್ಯಾಕಲನ ವಿಜ್ಞಾನದ ಈ ಪ್ರಕಾರವನ್ನು ಬೋಲ್ಟ್ಸ್‍ಮನ್ ಸ್ಟ್ಯಾಟಿಸ್ಟಿಕ್ಸ್ ಎಂಬ ಹೆಸರಿನಿಂದಲೇ ಕರೆಯಲಾಗಿದೆ. ಅಮೆರಿಕದ ಗಣಿತ ಹಾಗೂ ಭೌತವಿಜ್ಞಾನಿ ಜೆ.ಡಬ್ಲ್ಯು. ಗಿಬ್ಸ್ (1839-1903) ಈ ವಿಭಾಗವನ್ನು ಅಭಿವೃದ್ಧಿಪಡಿಸಿದ.

ಬೋಲ್ಟ್ಸ್‍ಮನ್ ಅನಿಲಗಳ ಚಲನಸಿದ್ಧಾಂತ ಕುರಿತ ಅನೇಕ ಪ್ರಬಂಧಗಳನ್ನು ಪ್ರಕಟಿಸಿದ. ಅನಿಲಗಳ ಮತ್ತು ವಿಕಿರಣಗಳ ಬಗ್ಗೆ ಪ್ರಯೋಗಗಳನ್ನೂ ನಡೆಸಿದ. ಕೃಷ್ಣಕಾಯ ವಿಕಿರಣ ಕುರಿತಂತೆ ಇದ್ದ ಸ್ಟೀಫನ್ನನ ನಿಯಮವನ್ನು ಬೋಲ್ಟ್ಸ್‍ಮನ್ ಸಾಧಿಸಿ ತೋರಿಸಿದ್ದರಿಂದ ಈ ನಿಯಮಕ್ಕೆ ಸ್ಟೀಫನ್-ಬೋಲ್ಟ್ಸ್‍ಮನ್ ನಿಯಮ ಎಂಬ ಹೆಸರಿದೆ. ಸ್ಲಾಟ್ಲೆಂಡಿನ ಭೌತ ವಿಜ್ಞಾನಿ ಜೆ.ಸಿ. ಮ್ಯಾಕ್ಸ್‍ವೆಲ್ಲನ (1831-79) ವಿದ್ಯುತ್ಕಾಂತತ್ವ ಸಿದ್ಧಾಂತದ ಮಹತ್ವ ಗುರುತಿಸಿದ ಯೂರೋಪಿಯನ್ನರ ಪೈಕಿ ಬೋಲ್ಟ್ಸ್‍ಮನ್ನು ಒಬ್ಬ ಈ ನಿಯಮ ಕುರಿತು ಈತ ಎರಡು ಸಂಪುಟಗಳ ಗ್ರಂಥ ಬರೆದ.

ಬೋಲ್ಟ್ಸ್‍ಮನ್ ಸೈದ್ಧಾಂತಿಕ ಭೌತವಿಜ್ಞಾನಿಯೆಂದು ಹೆಸರು ಗಳಿಸಿದ್ದರೂ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿಯೂ ಸಂಶೋಧನೆ ಮಾಡಿದ್ದಾನೆ. ಈತನನ್ನು ರಾಯಲ್ ಸೊಸೈಟಿಕೆ ಹೊರನಾಡಿನ ಸದಸ್ಯನಾಗಿ ಚುನಾಯಿಸಲಾಯಿತು (1899).

ಸಂಖ್ಯಾಕಲನೀಯ ಬಲವಿಜ್ಞಾನದಲ್ಲಿ ಬೋಲ್ಟ್ಸ್‍ಮನ್ ಮಾಡಿದ ಕೆಲಸವನ್ನು ಜರ್ಮನಿಯ ಭೌತವಿಜ್ಞಾನಿ ಡಬ್ಲ್ಯು ಆಸ್ಟ್‍ವಾಲ್ಟ್ (1835-1932) ಪ್ರಬಲವಾಗಿ ವಿರೋಧಿಸಿದ ಶಕ್ತಿಯೇ ಸಮಸ್ತ ಭೌತವಿಜ್ಞಾನಿಗಳ ಆಧಾರ ಎಂದು ನಂಬುತ್ತಿದ್ದವರ ಪಂಥಕ್ಕೆ ಸೇರಿದ ವಿಜ್ಞಾನಿಗಳು (ಎನರ್ಜಿಟಿಸಿಸ್ಟ್) ಪರಮಾಣುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದಕಾರಣ ಸಿದ್ಧಾಂತ ಅಪಾರ್ಥಗಳಿಗೂ ಅನಗತ್ಯ ವಾಗ್ವಾದಗಳಿಗೂ ಕಾರಣವಾಯಿತು. ಇದರಿಂದ ಬೋಲ್ಟ್ಸ್‍ಮನ್ ಬಲು ನೊಂದಿದ್ದ. ಲೈಫ್‍ಸಿಗ್ಗಿನಲ್ಲಿದ್ದ (1900-02) ಈತ ಪದೇ ಪದೇ ಮಾನಸಿಕ ಕುಸಿತಗಳಿಗೆ ಒಳಗಾಗುತ್ತಿದ್ದ. ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡಿ ಭಾಷಣಗಳನ್ನು ನೀಡಿ ವಿಜ್ಞಾನಿಗಳೊಡನೆ ಚರ್ಚೆ ಮಾಡಿದ. 25ನೆ ಶತಮಾನದ ಪ್ರಾರಂಭದ ಆ ದಿವಸದಲ್ಲಿ ವಿಕಿರಣ ಹಾಗೂ ಪರಮಾಣು ಭೌತವಿಜ್ಞಾನಗಳಲ್ಲಿ ಆಗುತ್ತಿದ್ದ ಸಂಶೋಧನೆಗಳು ಈತನ ಸಿದ್ಧಾಂತಗಳನ್ನು ಸ್ವಲ್ಪ ಬದಲಾಯಿಸಿದ. ರೂಪಗಳಲ್ಲಿ ಎತ್ತಿ ಹಿಡಿಯುತ್ತಿದ್ದುದ್ದನ್ನು ಈತ ಅರಿಯಲಾಗಲಿಲ್ಲ. ಆಣವಿಕ ಚಲನೆಯ ಚಲನಾತ್ಮಕ ಸಂಖ್ಯಾಕಲನೀಯ ಸಿದ್ಧಾಂತದ (ಕೈನೆಟಿಕ್ ಸ್ಟ್ಯಾಟಿಸ್ಟಿಕಲ್ ಥಿಯರಿ ಆಫ್ ಮಾಲಿಕ್ಯೂಲರ್ ಮೋಷನ್) ಆಧಾರದ ಮೇಲೆ ರಾಬರ್ಟ್ ಬ್ರೌನ್ ನಿರೂಪಿಸಿದ ಚಲನೆ ಕುರಿತು ಮಾಡಿದ ಪ್ರಯೋಗಗಳಿಂದ ಪರಮಾಣುಗಳ ಅಸ್ತಿತ್ವದ ಸ್ಥಾಪನೆ ಆಗುವುದಕ್ಕೆ ಸ್ವಲ್ಪವೇ ಮುಂಚೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದ. ಈತ ಆತ್ಮಹತ್ಯೆ ಮಾಡಿಕೊಂಡ (5-9-1906). (ಜಿ.ಎಸ್.ಡಿ.ಇ.)