ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಲ್ಷೆವಿಕ್ ವಾದ

ವಿಕಿಸೋರ್ಸ್ದಿಂದ

ಬೋಲ್ಷೆವಿಕ್ ವಾದ - ಪ್ರಚಲಿತ ಮಾಕ್ರ್ಸ್‍ವಾದಿ ಕ್ರಾಂತಿಕಾರಿ ರಾಜಕೀಯ (ಬೋಲ್ಷೆವಿಸಮ್) ಚಿಂತನೆ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ವಿ.ಐ. ಲೆನಿನ್ನರಿಂದ ಸ್ಥಾಪಿತವಾದ ಬೋಲ್ಷೆವಿಕ್ ಪಕ್ಷದ ವಿಚಾರ ಪ್ರಣಾಲಿಕೆಯಾಗಿ, ಅಂತಾರಾಷ್ಟ್ರೀಯ ಕಾರ್ಮಿಕರ ಚಳವಳಿಯಾಗಿ ಈ ವಾದ ರಷ್ಯದಲ್ಲಿ ವಿಕಾಸಹೊಂದಿತ್ತು. ಪ್ರಪಂಚದ ಕ್ರಾಂತಿಕಾರಿ ಚಳವಳಿಯ ಕೇಂದ್ರವಾಗಿ ರಷ್ಯ ಪರಿಣಮಿಸಿದಾಗ ಬೋಲ್ಷೆವಿಕ್‍ವಾದ ರೂಪುಗೊಳ್ಳತೊಡಗಿತು. ರಷ್ಯನ್ ಸಮಾಜವಾದಿ ಜನತಂತ್ರಾತ್ಮಕ ಕಾರ್ಮಿಕ ಪಕ್ಷದ (ರಷ್ಯನ್ ಸೋಷಿಯಲ್ ಡೆಮೊಕ್ರಾಟಿಕ್ ಲೇಬರ್ ಪಾರ್ಟಿ) ನಿಯಂತ್ರಕ ಅಂಗಗಳನ್ನು ಚಲಾಯಿಸುವ ಸಲುವಾಗಿ ಆ ಪಕ್ಷದ ದ್ವಿತೀಯ ಕಾಂಗ್ರೆಸ್ ಸಭೆಯಲ್ಲಿ (1903) ಚಲಾಯಿಸಲಾದ ಮತಗಳ ಮೇಲೆ ಈ ಪರಿಕಲ್ಪನೆ ಉಗಮಿಸಿತು. ಆಗ ಲೆನಿನ್ನರ ಬೆಂಬಲಿಗರು ಬಹುಮತ ಗಳಿಸಿದರು. ಬೋಲ್‍ಷಿನ್ವ್‍ಟ್ವೊ ಎಂದರೆ ಬಹುಮತ. ಆದ್ದರಿಂದ ಬಹುಮತದ ಬೆಂಬಲಿಗರು ಬೋಲ್‍ಷೆವಿಕ್ ಅಥವಾ ಬಹುಮತದ ಬೆಂಬಲಿಗರು ಎನಿಸಿಕೊಂಡರು. ಮೆನ್‍ಷಿನ್ಸ್‍ಟ್ವೊ ಎಂದರೆ ಅಲ್ಪಮತ. ಆದ್ದರಿಂದ ಅಲ್ಪಮತ ಪಡೆದ ಇವರು ಮೆನ್‍ಷೆವಿಕಿ ಅಥವಾ ಅಲ್ಪಮತೀಯರು ಎನಿಸಿದರು.

ಮಾಕ್ರ್ಸ್‍ವಾದ_ಲೆನಿನ್‍ವಾದವೇ ಬೋಲ್ಷೆವಿಸ್‍ಮ್‍ನ ಸೈದ್ಧಾಂತಿಕ ಅಸ್ತಿಭಾರ. ಸಮಕಾಲೀನ ಯುಗದ ನಿರ್ದಿಷ್ಟ ಪರಿಸ್ಥಿತಿಗೆ ಮಾರ್ಕ್‍ವಾದದ ಅಳವಡಿಕೆಯೇ ಬೋಲ್ಷೆವಿಸಮ್ ಎಂದು ಲೆನಿನ್ ಇದನ್ನು ವ್ಯಾಖ್ಯಿಸಿದ್ದಾರೆ. ಕ್ರಾಂತಿಕಾರಿ ಲೆನಿನ್ ರೂಪಿಸಿದ ಆದರ್ಶವಾದಿಯ ಸಂಘಟನಾತ್ಮಕ ಹಾಗೂ ತಂತ್ರವ್ಯೂಹಾತ್ಮಕ ತತ್ತ್ವಗಳು ಇದರಲ್ಲಿ ಏಕೀಭವಿಸಿವೆ. ರಷ್ಯದ, ಇಡೀ ಪ್ರಪಂಚದ ಕ್ರಾಂತಿಕಾರಿ ಚಳವಳಿಯ ಅನುಭವದ ಸಾರ್ವತ್ರೀಕರಣವಿದು. ಅಂತಾರಾಷ್ಟ್ರೀಯ ಕಮ್ಯುನಿಸ್ಟ್ ಚಳವಳಿಗೆ. ಕೆಲಸಗಾರರ ಚಳವಳಿಗೆ ರಷ್ಯನ್ ದುಡಿಮೆಗಾರ ವರ್ಗದ ಅತ್ಯಂತ ಮಹತ್ವದ ಕೊಡುಗೆಯಿದು ಎಂದು ಪರಿಗಣಿತವಾಗಿದೆ.

ಬೋಲ್ಷೆವಿಸಮ್ ಅನ್ನು ಪ್ರತಿಪಾದಿಸುವ ಪಕ್ಷ ಬೋಲ್ಷವಿಕ್ ಪಕ್ಷವೆಂದು ಹೆಸರಾಗಿದೆ. ಇದು ಸಮಾಜವಾದಿ ಕ್ರಾಂತಿಯ, ದುಡಿಮೆಗಾರ ವರ್ಗದ ಸರ್ವಾಧಿಕಾರದ, ಕಮ್ಯೂನಿಸ್‍ಮ್‍ನ (ಸಾಮ್ಯವಾದ) ಪಕ್ಷ. ಇದು ಅನೇಕ ಪ್ರತಿಗಾಮಿ ಹಾಗೂ ಸುಧಾರಣಾವಾದಿ ಪ್ರವೃತ್ತಿಗಳಿಗೆ ಎದುರಾಗಿ ರೂಪುಗೊಂಡಿತು. ಕ್ರಾಂತಿಕಾರಿ ವಿಮೋಚನಾ ಚಳವಳಿಯ ಸ್ಥಾನದಲ್ಲಿ ತಲೆಯೆತ್ತಿದ್ದ ಸಣ್ಣ ಬೂಜ್ರ್ವಾ ಸುಧಾರಣಾವಾದದ ವಿರುದ್ಧ ಈ ಚಳವಳಿ ರೂಪುಗೊಂಡಿತು. ಮಾಕ್ರ್ಸ್‍ವಾದದ ಧ್ವಜವನ್ನೇ ಎತ್ತಿಹಿಡಿಯುತ್ತ ದುಡಿಮೆಗಾರರ ಚಳುವಳಿಯನ್ನು ಬೂಜ್ರ್ವಾ ಜನರ ಹಿತಕ್ಕೆ ಅಧೀನಗೊಳಿಸುವ ಪ್ರವೃತ್ತಿಯ ಎದುರು ಇದರ ಸೆಣಸಾಟ. ಹಲವಾರು ವಿರೋಧಿ ರಾಜಕೀಯ ಪಕ್ಷಗಳು ಹಾಗೂ ಪ್ರವೃತ್ತಿಗಳಿಗೆ ಸವಾಲಾಗಿ ಬೋಲ್ಷೆವಿಸಮ್ ಸದೃಢವಾಗಿ ಬೆಳೆಯಿತು. ಕೇಡೆಟರು. ಬೂಜ್ರ್ವಾ ರಾಪ್ಟ್ರೀಯರು, ಸಮಾಜವಾದಿ ಕ್ರಾಂತಿವಾದಿಗಳು, ಅರಾಜಕತಾವಾದಿಗಳು, ಎನ್ಹೆವಿಕರು_ಇವರನ್ನೆಲ್ಲ ಬೋಲ್ಷಿವಿಸ್‍ಮ್ ಯಶಸ್ವಿಯಾಗಿ ಎದುರಿಸಿತು. ನಿರಂಕುಶವಾದದ ಹಾಗೂ ಬಂಡವಾಳಶಾಹಿಯ ವಿರುದ್ದ ಹೊಸಬಗೆಯ ಕಾರ್ಮಿಕ ಪಕ್ಷವನ್ನು ಕಟ್ಟುವ ಉದ್ದೇಶದಿಂದ ರೂಪಿಸಲಾದ ವಿಚಾರಧಾರೆಯಿದು. ಬೋಲ್ಷಿವಿಕ್ ಪಕ್ಷದಲ್ಲೇ ಅನೇಕ ಸಮಯಸಾಧಕ ಪ್ರವೃತ್ತಿಗಳು ತಲೆದೋರುತ್ತಲೇ ಇದ್ದುವು. ಓಟ್ಟೊವಿಟ್ಟರು, ಎಡ ಕಮ್ಯುನಿಸ್ಟರು, ಟ್ರಾಟ್ಸ್‍ಕಿವಾದಿಗಳು, ವಿರೋಧಿ ಕಾರ್ಮಿಕರು ಮುಂತಾದವರನ್ನೆಲ್ಲ ಹತ್ತಿಕ್ಕಿ ಬೋಲ್ಷೆವಿಸಮ್ ಬೆಳೆಯಿತು.

ಕಾರ್ಮಿಕ ಅಂತಾರಾಷ್ಟ್ರೀಯತ್ವವನ್ನು ಬೋಲ್ಷಿವಿಸ್‍ಮ್ ಸದಾ ಎತ್ತಿಹಿಡಿದಿದೆ. ಅಂತಾರಾಷ್ಟ್ರೀಯ ದುಡಿಮೆಗಾರರ ಚಳವಳಿಯಲ್ಲಿ ಮಾಕ್ರ್ಸ್‍ವಾದಿ-ಲೆನಿನ್‍ವಾದಿ ಸಿದ್ಧಾಂತದ ಪರಿಶುದ್ಧತೆಯನ್ನು ರಕ್ಷಿಸಲು ಅದು ಹೆಣಗಿದೆ. ಕೆಲಸಗಾರರ ಚಳವಳಿಯನ್ನು ವೈಜ್ಞಾನಿಕ ಸಮಾಜವಾದದ ಹಾದಿಯಲ್ಲಿ ನಡೆಸಲು ಯತ್ನಿಸಿದೆ. ಎಲ್ಲ ಬಗೆಯ ಸಮಯಸಾಧಕರನ್ನು, ಸುಧಾರಣಾವಾದಿಗಳನ್ನು ಮತೀಯ ದೃಷ್ಟಿಯುಳ್ಳವರನ್ನು, ಒಣಸಿದ್ಧಾಂತಿಗಳನ್ನು ಎತ್ತಿತೋರಿಸಿದೆ. ಮಧ್ಯಗಾಮಿಗಳನ್ನೂ ಸಮಾಜವಾದಿಗಳ ಹೆಸರಿನ ಉಗ್ರರಾಷ್ಟ್ರಾಭಿಮಾನಿಗಳನ್ನೂ ಬಯಲಿಗೆಳೆದಿದೆ. ಪಶ್ಚಿಮ ಯೂರೊಪಿನ ಸಮಾಜವಾದಿ ಜನತಂತ್ರಾತ್ಮಕ ಪಕ್ಷಗಳನ್ನು ಸಂಘಟಿಸಿ ದುಡಿಮೆಗಾರರ ಅಂತಾರಾಷ್ಟ್ರೀಯತ್ವದ ಭಾವನೆಗಳಿಗೆ ಅನುಗುಣವಾಗಿ ಅವನ್ನು ನಡೆಸಲು ಯತ್ನಿಸಿದೆ. ವಾಮಸಮಾಜವಾದಿಗಳು ಮಾಕ್ರ್ಸ್‍ವಾದದಿಂದ ದೂರ ಸರಿಯುವ ಪ್ರವೃತ್ತಿ ತೋರಿದಾಗ ಅವರನ್ನು ಎಚ್ಚರಿಸಿದೆ. ಹೀಗೆ ಎಲ್ಲ ಮಾಕ್ರ್ಸ್‍ವಾದಿಗಳನ್ನೂ ಸಂಘಟಿಸುವ ಯತ್ನ ಮಾಡಿದೆ. ರಷ್ಯದ ಅಕ್ಟೋಬರ್ ಕ್ರಾಂತಿಯ ಅನಂತರ ಕಮ್ಯೂನಿಸ್ಟ್ ಪಕ್ಷಗಳಲ್ಲಿ ಈ ಕ್ರಾಂತಿಕಾರಿ ಪ್ರವೃತ್ತಿ ಸಂಘಟನೆಯ ರೂಪ ತಳೆಯಿತು. ಮೂರನೆಯ ಅಂತಾರಾಷ್ಟ್ರೀಯದ (ಕಾಮಿನ್‍ಟರ್ನ್) ಅಡಿಯಲ್ಲಿ ಅವು ಒಗ್ಗೂಡಿದುವು. ಎಲ್ಲ ಕಮ್ಯೂನಿಸ್ಟ್ ಪಕ್ಷಗಳಿಗೂ ರಷ್ಯದ ಬೋಲ್ಷೆವಿಕರು ಆದರ್ಶವಾದರು. ಆದರೆ ರಷ್ಯದ ಬೋಲ್ಷೆವಿಕರ ಎಲ್ಲ ಅನುಭವವನ್ನೂ ಯಾಂತ್ರಿಕವಾಗಿ ಸಾರಾಸಗಟಾಗಿ ಇತರ ಕಮ್ಯೂನಿಸ್ಟ್ ಪಕ್ಷಗಳು ಅನುಸರಿಸತಕ್ಕದ್ದಲ್ಲವೆಂಬುದನ್ನು 1924ರ ಕಾಮಿನ್‍ಟರ್ನ್ ಅಧಿವೇಶನದಲ್ಲಿ ಒತ್ತಿ ಹೇಳಲಾಯಿತು. ಬೋಲ್ಷೆವಿಕ್ ಪಕ್ಷವೊಂದರ ಮೂಲ ಲಕ್ಷಣಗಳೇನೆಂಬುದನ್ನು ಆ ಅಧಿವೇಶನದಲ್ಲಿ ಖಚಿತ ಪಡಿಸಲಾಯಿತು. ಪಕ್ಷದ ತಂತ್ರವ್ಯೂಹ ಕೇವಲ ಒಳಸಿದ್ಧಾಂತವನ್ನಾಧರಿಸಬಾರದು. ದುಡಿಮೆಗಾರರ ಸಮೂಹದೊಂದಿಗೆ ಅವಿನಾಭಾವ ಸಂಬಂಧವನ್ನು ಹೇಗೆ ಇಟ್ಟು ಕೊಂಡಿರಬೇಕು, ಅವರ ಅಗತ್ಯಗಳನ್ನು ಹಾಗೂ ಆಶೋತ್ತರಗಳನ್ನು ಅರಿಯುವುದು ಹೇಗೆ-ಎಂಬುದನ್ನು ಪಕ್ಷ ಸಹಾ ನೆನಪಿನಲ್ಲಿಟ್ಟುಕೊಂಡಿರತಕ್ಕದ್ದೆಂಬುದನ್ನು ಸ್ಪಷ್ಟಪಡಿಸಲಾಯಿತು. ಕ್ರಾಂತಿಕಾರಿ ಹೋರಾಟದ ವಿಧಾನಗಳನ್ನು ರೂಪಿಸುವಾಗ ಮಾಕ್ರ್ಸ್‍ವಾದಿ ತತ್ತ್ವಗಳನ್ನು ಮಾತ್ರ ಎಂದಿಗೂ ಮರೆಯತಕ್ಕದ್ದಲ್ಲವೆಂಬುದನ್ನೂ ಸ್ಪಷ್ಟಪಡಿಸಲಾಯಿತು. ದುಡಿಮೆಗಾರ ವರ್ಗದ ವಿಜಯವನ್ನು ಬೇಗ ಸಾಧಿಸುವುದು ಮುಖ್ಯ ಗುರಿ. ಬೋಲ್ಷೆವಿಕ್ ಪಕ್ಷ ಕೇಂದ್ರೀಯ ಸಂಘಟನೆಯಾಗಿರಬೇಕು. ಇದರಲ್ಲಿ ಗುಂಪುಗಳಿಗಾಗಲಿ, ಭಿನ್ನ ಪ್ರವೃತ್ತಿಗಳಿಗಾಗಲಿ ಭಿನ್ನಮತಗಳಿಗಾಗಲಿ ಎಡೆಯಿರಬಾರದು. ಇದು ಒಂದು ಅಚ್ಚಿನಲ್ಲಿ ಎರಕಹೊಯ್ದಂತಿರಬೇಕು, ಎಂದು ಸಾರಲಾಯಿತು. ರಷ್ಯದಲ್ಲಿ 1905-07, 1917ರ ಫೆಬ್ರುವರಿ ಮತ್ತು ಅಕ್ಟೋಬರ್-ಹೀಗೆ ಮೂರು ಕ್ರಾಂತಿಗಳ ಮೂಲಕ ಬೋಲ್ಷೆವಿಕ್ ಪಕ್ಷ ಚಳವಳಿ ಹೂಡಿ ವಿಜಯ ಸಾಧಿಸಿತು.

ಸಮಾಜವಾದಿ ಕ್ರಾಂತಿಯ ವಿಜಯದ ಅನಂತರ ಸೋವಿಯೆತ್ ಶಕ್ತಿಯ ವರ್ಧನೆಗಾಗಿ, ಬೋಲ್ಷೆವಿಕ್ ಪಕ್ಷ ಶ್ರಮಿಸಿತು. 1918-20ರ ಅಂತರ್ಯುದ್ಧದಲ್ಲಿ ಸೋವಿಯೆತ್ ಗಣರಾಜ್ಯದ ರಕ್ಷಣೆಯನ್ನು ಸಂಘಟಿಸಿತು. 1919ರಲ್ಲಿ ಲೆನಿನ್ನರ ನೇತೃತ್ವದಲ್ಲಿ ಇದು ಎರಡನೆಯ ಕಾರ್ಯಕ್ರಮ ಹಾಕಿಕೊಂಡಿತು. ಸಮಾಜವಾದಿ ಸಮಾಜದ ನಿರ್ಮಾಣದ ಕಾರ್ಯಕ್ರಮವಿದು. ರಾಷ್ಟ್ರೀಯ ಅರ್ಥವ್ಯವಸ್ಥೆಯ ಪುನರುತ್ಥಾನ, ಸಮಾಜವಾದಿ ಕೈಗಾರಿಕಾಕರಣ, ಕೃಷಿಯ ಸಮಷ್ಟೀಕರಣ, ಸಾಂಸ್ಕøತಿಕ ಕ್ರಾಂತಿಯ ಸಾಧನೆ-ಇವೆಲ್ಲ ಯಶಸ್ವಿಯಾದುವು. ಎರಡನೆಯ ಮಹಾಯುದ್ಧದಲ್ಲಿ ನಾಟ್ಸಿ ಶಕ್ತಿಯನ್ನು ಮುರಿಯಲು ಸಾಧ್ಯವಾಯಿತು.

ನಿಜಜೀವನದೊಂದಿಗೆ ಅವಿಭಾಜ್ಯ ಸಂಬಂಧ ಹೊಂದಿರುವಂತೆ ಕ್ರಾಂತಿಕಾರಿ ಸಿದ್ಧಾಂತದ ವಿಕಾಸವೇ ಬೋಲ್ಷೆವಿಸ್‍ಮ್‍ನ ತಿರುಳು. ಸಮಾಜವಾದಿ ಕ್ರಾಂತಿಯ ಮೂಲ ನಿಯಮಗಳನ್ನು ಆವಿಷ್ಕರಿಸಿ, ಆ ಕ್ರಾಂತಿಯನ್ನು ಸಾಧಿಸಲು ಅಗತ್ಯವಾದ ಮಾರ್ಗವನ್ನು, ಬೋಲ್ಷೆವಿಸ್‍ಮ್ ತಿಳಿಸುತ್ತದೆ. ಸಮಾಜವಾದವನ್ನು ಸಾಮ್ಯವಾದವನ್ನು ಹೇಗೆ ಸಾಧಿಸಬೇಕೆಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪ್ರಪಂಚ ಸಮಾಜವಾದಿ ಬಂಧುತ್ವ ಸ್ಥಾಪನೆ ಇದರ ಅಂತಿಮ ಗುರಿ.


ಕಮ್ಯೂನಿಸ್ಟ್ ಎಂದು ಕರೆದುಕೊಂಡೂ ಬೋಲ್ಷೆವಿಸ್‍ಮ್‍ನ ಮೂಲತತ್ತ್ವಗಳನ್ನು ಅನುಸರಿಸಿದರೆ ಹೋಗಿರುವ ಪಕ್ಷಗಳು ವಾಮ ಅಥವಾ ದಕ್ಷಿಣ ಮಾರ್ಗ ಘಾಮಿ ಸಮಯ ಸಾಧಕ ಪಕ್ಷಗಳಾಗಿ ದಿಕ್ಕೆಟ್ಟಿವೆ ಎಂದು ಬೋಲ್ಷಿವಿಕರು ಹೇಳುತ್ತಾರೆ. ಪ್ರಪಂಚದ ಎಲ್ಲ ಕಮ್ಯೂನಿಸ್ಟ್ ಹಾಗೂ ದುಡಿಮೆಗಾರ ಪಕ್ಷಗಳೂ ಬೋಲ್ಷೆವಿಕರ ಅನುಭವದಿಂದ ಪಾಠಕಲಿಯಬೇಕೆಂದು ಅವರು ಹೇಳುತ್ತಾರೆ. ಶಾಂತಿ, ಪ್ರಜಾಪ್ರಭುತ್ವ ಹಾಗೂ ಸಮಾಜವಾದದ ವಿಜಯಕ್ಕಾಗಿ ಈ ಎಲ್ಲ ಪಕ್ಷಗಳಿಗೂ ಬೋಲ್ಷೆವಿಸಮ್ ದಾರಿದೀವಿಗೆ ಎಂದು ಅವರು ದೃಢವಾಗಿ ನಂಬಿದ್ದಾರೆ. (ಎಚ್.ಎಸ್.ಕೆ.)