ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಳಮಟೆ

ವಿಕಿಸೋರ್ಸ್ದಿಂದ

ಬೋಳಮಟೆ - ಬರ್ಸರೇಸೀ ಕುಟುಂಬಕ್ಕೆ ಸೇರಿದ ಕಾಡುಮರ. ಹಾಲ ಬಲಗೆ, ಗೊದ್ದನಮರ ಪರ್ಯಾಯನಾಮಗಳು. ಇದರ ವೈಜ್ಞಾನಿಕ ಹೆಸರು ಗರುಗ ಪಿನ್ನೇಟ.

ಸುಮಾರು 16 ಮೀ ಎತ್ತರಕ್ಕೆ ಬೆಳೆಯುವ ಮಧ್ಯಮಗಾತ್ರದ ಮರ ಇದು. ದಕ್ಷಿಣ ಭಾರತ ಹಾಗೂ ಪೂರ್ವ ಭಾರತದ ಪರ್ಣಪಾತಿ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಮರದ ಪ್ರಧಾನ ಕಾಂಡದ ಉದ್ದ ಸುಮಾರು 7 ಮೀ. ಪರಿಧಿ ಸುಮಾರು 2 ಮೀ. ತೊಗಟೆಯ ಬಣ್ಣ ಬೂದಿ ಮಿಶ್ರಿತ ಕಂದು; ಅನಿಯತ ಆಕಾರದ ಪದರುಗಳಾಗಿ ನುಲಿದುಕೊಳ್ಳುತ್ತದೆ. ಎಲೆಗಳು ಏಕಪಿಚ್ಛಕ ಸಂಯುಕ್ತ ರೀತಿಯವು. ಪರ್ಯಾಯ ಮಾದರಿಯಲ್ಲಿ ಕಾಂಡಗಳ ತುದಿಗಳಲ್ಲಿ ಜೋಡಣೆ ಹಾಗಳು ಚಿಕ್ಕವು. ಹಳದಿ ಇಲ್ಲವೆ ಹಸಿರು ಮಿಶ್ರಿತ ಬಿಳಿ ಬಣ್ಣದವಾದ ಇವು ಅಂತ್ಯಾರಂಭಿ ನಾದರಿಯ ಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ಮಿಶ್ರತೆರನಾದವು. ಕೆಲವು ಏಕಲಿಂಗಿಗಳಾಗಿದ್ದರೆ ಮತ್ತೆ ಕೆಲವು ದ್ವಿಲಿಂಗಿಗಳು. ಏಕ ಲಿಂಗಿಗಳು ಗಂಡಾಗಿರಬಹುದು, ಹೆಣ್ಣಾಗಿರಬಹುದು. ಹಣ್ಣು ಅಷ್ಟಿಫಲ ಮಾದರಿಯದು. ಹಸಿರು ಇಲ್ಲವೆ ಕಪ್ಪು ಬಣ್ಣದ್ದು. ರಸಭರಿತ ಹಾಗಾ ಗುಂಡನೆಯ ಆಕಾರದ್ದು. ಇದನ್ನು ತಿನ್ನಬಹುದು. ಬೋಳಮಟೆ ಬಿಸಿಲಿನಾಸೆಯ ಮರ. ಕಡುಚಳಿಯನ್ನಾಗಲಿ ಶುಷ್ಕತೆಯನ್ನಾಗಲಿ ತಡೆದುಕೊಳ್ಳಲಾರದು. ಕಡಿದರೆ ಬಲುಬೇಗ ಹುಲುಸಾಗಿ ಚಿಗು ತೊಡೆಯುವುದು. ಅಂತೆಹೇ ಸಮೃದ್ದವಾಗಿ ಬೇರು ಸಸಿಗಳನ್ನು ಉತ್ಪಾದಿಸುವುದು. ಇದನ್ನು ಬೀಜಗಳ ಮೂಲಕ ಅಥವಾ ಕಾಂಡತುಂಡುಗಳ ಮೂಲಕ ವೃದ್ಧಿಸಬಹುದು. ಇದರ ಚೌಬೀನೆಯನ್ನು ಯುಕ್ತವಾಗಿ ಸಂಸ್ಕರಿಸಿ ಪೀಠೋಪಕರಣ, ಹಲಗೆ, ದೋಣಿ, ಪೆಟ್ಟಿಗೆ ಮುಂತಾದ ಸಾಮಗ್ರಿಗಳ ತಯಾರಿಕೆಗೆ ಬಳಸುವುದಿದೆ. ಉರುವಲಾಗಿ ಕೂಡ ಇದು ಉಪಯುಕ್ತ. ಅಲ್ಲದೆ ಇದರಿಂದ ರಟ್ಟುಕಾಗದವನ್ನೂ ತಯಾರಿಸಬಹುದು.

ಬೋಳಮಟೆಯ ಕಾಯಿಗಳನ್ನು ಹಸಿಯಾಗಿ, ಬೇಯಿಸಿ ಇಲ್ಲವೆ ಉಪ್ಪಿನಕಾಯಿ ಹಾಕಿ ತಿನ್ನಬಹುದು. ಎಲೆ, ತೊಪ್ಪಲು ದನಗಳಿಗೆ, ಮೇವು. ಎಲೆಗಂಟುಗಳನ್ನೂ ತೊಗಟೆಯನನ್ನೂ ಧರ್ಮ ಹದ ಮಾಡುವಲ್ಲಿ ಬಳಸುವುದಿದೆ.

ಬೋಳಮಟೆ ಶೀಘ್ರಗತಿಯಲ್ಲಿ ಬೆಳೆಯುವುದರಿಂದ ಅರಣ್ಯವೃದ್ಧಿ ಉದ್ದೇಶಗಳಿಗೆ ಚೆನ್ನಾಗಿ ಒದಗುತ್ತದೆ. (ಎ.ಎನ್‍ಕೆ.ಜಿ)