ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಳಾರ ಬಾಬುರಾವ್

ವಿಕಿಸೋರ್ಸ್ದಿಂದ

ಬೋಳಾರ ಬಾಬುರಾವ್ 1848-1919. ಕನ್ನಡದ ಪ್ರಾರಂಭದ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ವಾಗ್ದೇವಿಯ ಕರ್ತೃ. ಆಡಳಿತಗಾರರು. ಸಮಾಜ ಸೇವಕರೂ ಆಗಿದ್ದ ಇವರು ಮಂಗಳೂರಿನ ಬೋಳಾರದಲ್ಲಿ ಜನಿಸಿದ್ದರು. ತಂದೆ ನರಸಪ್ಪಯ್ಯ, ಬಾಬುರಾಯರು ಆರಂಭದ ವ್ಯಾಸಂಗವನ್ನು ಮಂಗಳೂರಿನ ವಿಷನ್ ಹೈಸ್ಕೂಲಿನಲ್ಲಿ ಪಡೆದು ಅನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಲಿತು ಎಫ್, ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮಂಗಳೂರಿಗೆ ಮರಳಿದ ಇವರ ಅಲ್ಲಿಯ ಜಿಲ್ಲಾ ಕಲೆಕ್ಟರರ ಕಚೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಅನಂತರ ಅದೇ ಕಚೇರಿಯಲ್ಲಿ ಮುಖ್ಯ ಗುಮಾಸ್ತರಾಗಿ, ಆಮೇಲೆ ತಹಶೀಲ್ದಾರರ ಹುದ್ದೆಗೆ ಬಡ್ತಿ ಪಡೆದು ಕಾರ್ಕಳ, ಹೊಸದುರ್ಗ, ಉಡುಪಿ, ಪುತ್ತೂರುಗಳಲ್ಲಿ ಸೇವೆ ಸಲ್ಲಿಸಿದರು. ಮಂಗಳೂರು ಟೌನ್ ಮ್ಯಾಜಿಸ್ಟ್ರೇಟರಾಗಿ ಕೆಲಸಮಾಡಿದರು. ನಿವೃತ್ತರಾದ ಮೇಲೂ ಮಂಗಳೂರಿನ ಎರಡನೆಯ ವರ್ಗದ ಬೆಂಚ್ ಮಾಜಿಸ್ಟ್ರೇಟ್ ಕೋರ್ಟಿನ ಅಧ್ಯಕ್ಷರಾಗಿಯೂ ಪುರಸಭಾ ಸದಸ್ಯರಾಗಿಯೂ ಕೆನರಾ ಪಬ್ಲಿಕ್ ಕನ್ವೆಯನ್ಸ್ ಕಂಪನಿಯ ನಿರ್ದೇಶಕರಲ್ಲೊಬ್ಬರಾಗಿಯೂ ಸೇವೆ ಸಲ್ಲಿಸಿದರು.

ಕನ್ನಡದಲ್ಲಿಯೂ ಇಂಗ್ಲೀಷಿನಲ್ಲಿಯೂ ಪ್ರಭುತ್ವ ಸಂಪಾದಿಸಿಕೊಂಡಿದ್ದ ಬಾಬುರಾಯರು ಕನ್ನಡಲ್ಲಿ ವಾಗ್ದೇವಿ (1905), ಶಿವಲೀಲಾಮೃತ (1910), ಭಕ್ತಿಮಹಿಮೆ (1919) ಎಂಬ ಪುಸ್ತಕಗಳನ್ನೂ ಕೆಲವು ಲೇಖನಗಳನ್ನೂ ಬರೆದಿದ್ದಾರೆ. ವಾಗ್ದೇವಿ ಸಾಮಾಜಿಕ ಕಾದಂಬರಿಯಾಗಿದ್ದು ಇದರಲ್ಲಿ ಸಮಕಾಲೀನ ಜೀವನ ಪ್ರಭಾವಿ ಚಿತ್ರಣ ಕಂಡುಬರುತ್ತದೆ.

ಬಾಬುರಾಯರು 25-6-1919 71ನೆಯ ವಯಸ್ಸಿನಲ್ಲಿ ಬೋಳಾರದ ತಮ್ಮ ಮನೆಯಲ್ಲಿ ತೀರಿಕೊಂಡರು. ಪಾಪ್ಯುಲರ್, ಇನ್ಸೂರೆನ್ಸ್ ಕಂಪನಿಯ ಸ್ಥಾಪಕರು ಕನ್ನಡದ ಸುಪ್ರಸಿದ್ಧ ಮಾಸಪತ್ರಿಕೆ `ಸುವಾಸಿನಿಯನ್ನು ಆರಂಭಿಸಿದವರೂ ಆದ ಬೋಳಾರ ವಿಠಲರಾಯರು ಇವರ ಮಗ.