ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋವಾಸ್, ಫ್ರಾನ್ಜ್‌

ವಿಕಿಸೋರ್ಸ್ದಿಂದ

ಬೋವಾಸ್, ಫ್ರಾನ್ಜ್ 1858-1942. ಮಾನವಶಾಸ್ತ್ರಜ್ಞ ಮತ್ತು ಭಾಷಾವಿಜ್ಞಾನಿ. ಹುಟ್ಟಿದ್ದು ಜರ್ಮನಿಯ ಮಿಂಡೆನ್‍ನಲ್ಲಿ. ಹೈಡಲ್‍ಬರ್ಗ್, ಬಾನ್ ಮತ್ತು ಕೀಲ್ ವಿಶ್ವವಿದ್ಯಾಲಯಗಳಲ್ಲಿ ಓದಿದ ಈತ ಭಾಷೆ, ವಿಜ್ಞಾನ ಮತ್ತು ಸಾಮಾನ್ಯ ಅಧ್ಯಯನ ಮಾಡಿ 1881ರಲ್ಲಿ ಡಾಕ್ಟರೇಟ್ ಪದವಿ ಪಡೆದ. ಅನಂತರ ಮಾನವ ಶಾಸ್ತ್ರ, ಇತಿಹಾಸ, ಭಾಷಾವಿಜ್ಞಾನ ಮತ್ತು ಜಾನಪದಗಳ ಕಡೆಗೆ ಈತನ ಒಲವು ಹರಿಯಿತು. ಜರ್ಮನಿಯ ರಾಜಕೀಯ ಈತನನ್ನು ಅಲ್ಲಿ ಉಳಿಯಗೊಡಲಿಲ್ಲ. 1887ರಲ್ಲಿ ಅಮೆರಿಕೆಗೆ ಬಂದು ನೆಲಸಿದ.

ಈತನದು ಬಹುಮುಖ ಪ್ರತಿಭೆ, ಅನ್ವೇಷಣಾಶೀಲ ಚಿಂತನೆ. ಇದಕ್ಕೆ ಸಾಕ್ಷಿ ಈತ ನಡೆಸಿದ ಅಮೆರಿಕದ ಅನೇಕ ಬುಡಕಟ್ಟು ಜನರ ಸಾಂಸ್ಕøತಿಕ ಅಧ್ಯಯನ. ಸ್ವಾತಂತ್ರ್ಯಪ್ರಿಯತೆ ಮತ್ತು ಸತ್ಯಾನ್ವೇಷಣೆ ಈತನ ಬದುಕಿನ ಆದರ್ಶವಾಗಿತ್ತು. 11896ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರದ ಅಧ್ಯಾಪಕನಾಗಿ ಸೇರಿದ ಈತ 1899ರಲ್ಲಿ ಪ್ರಾಧ್ಯಾಪಕನಾಗಿ 1936ರ ತನಕ ಸೇವೆ ಸಲ್ಲಿಸಿದ. ಈತನೇ ಕೊಲಂಬಿಯ ವಿಶ್ವವಿದ್ಯಾಲಯ ಮಾನವಶಾಸ್ತ್ರದ ಮೊದಲ ಪ್ರಾಧ್ಯಾಪಕ. ಆಗ ಶೈಶವಾಸ್ಥೆಯಲ್ಲಿದ್ದ ಮಾನವಶಾಸ್ತ್ರದ ಅಧ್ಯಯನವನ್ನು ಬೆಳೆಸಿ ಅದರಲ್ಲಿ ಅನೇಕ ಶಾಖೆಗಳನ್ನು ವಿಂಗಡಿಸಿ ಪ್ರತ್ಯೇಕ ಅಸ್ತಿತ್ವ ತಂದುಕೊಟ್ಟ.

1911ರಲ್ಲಿ ಹೊರಬಂದ ದಿ ಮೈಂಡ್ ಆಫ್ ಪ್ರಿಮಿಟಿವ್ ಮ್ಯಾನ್ ಎಂಬ ಕೃತಿಯ ಮೂಲಕ ಈತ ಅಮೆರಿಕದ ಮಾನವಶಾಸ್ತ್ರ ಅಧ್ಯಯನದಲ್ಲಿ ಇಂದು ಹೊಸಯುಗವನ್ನೇ ಆರಂಭಿಸಿದ. ಮಾನವಶಾಸ್ತ್ರಜ್ಞರಲ್ಲಿ ಜನರ ಸಂಸ್ಕøತಿ ಭಾಷೆ ಮತ್ತು ಜನಾಂಗಗಳ ಸ್ಥಾನಮಾನಗಳ ನಿರೂಪಣೆ ಕೊಡಲು ಯತ್ನಿಸಿದ. ಮೊತ್ತಮೊದಲಿಗೆ ಮಾನವ ಹಾಗೂ ಮಾನವ ಸಮೂಹದ ಸ್ವಭಾವಗಳ ಅಭಿವ್ಯಕ್ತಿ ನಿರೂಪಣೆಗೊಂಡದ್ದು ಈತನಿಂದ. ಮೂಲತಃ ತನ್ನ ಶಕ್ತಿ ಸಾಮಥ್ರ್ಯಗಳಲ್ಲಿ ಜನಾಂಗಗಳು ಒಂದಕ್ಕಿಂತ ಒಂದು ಉತ್ತಮವೆಂದು ಹೇಳಿಕೊಳ್ಳಲಾಗದು ಎಂದು ಸಾರಿ, ಉದಾಹರಣೆಗಳ ಮೂಲಕ ತೋರಿಸಿದ. ಭಾಷೆ, ಸಂಸ್ಕøತಿ ಮತ್ತು ಸಂಸ್ಕøತಿಯ ಅಧ್ಯಯನದಲ್ಲಿ ಭೌಗೋಳಿಕತೆಯ ಔಚಿತ್ಯ ಪ್ರಶ್ನಿಸಿದ. ಸಂಸ್ಕøತಿ ಕೇವಲ ಪರಿಸರದ ಹೊಂದಾಣಿಕೆ ಅಲ್ಲ ಚಾರಿತ್ರಿಕ ಪರಿಣಾಮಗಳು ಅದರ ಮೇಲೆ ಗಣನೀಯ ಪ್ರಭಾವ ಬೀರುತ್ತದೆ ಎಂದ.

ಭಾಷಾವಿಜ್ಞಾನಕ್ಕೆ ಈತನ ಕೊಡುಗೆ ಅಪಾರವಾದುದು, ಮಾನವ ಸಂಸ್ಕøತಿಯ ಅಧ್ಯಯನದಲ್ಲಿ ಭಾಷೆಯ ಮಹತ್ವ ಗುರುತಿಸಿದ ಬೋವಾಸನ ದೃಷ್ಟಿಯಲ್ಲಿ ಭಾಷೆಯೆಂಬುದು, ಉಚ್ಚಾರಣಾಂಗಗಳಿಂದ ಉತ್ಪತ್ತಿಯಾಗುವ ಧ್ವನಿಸಮೂಹದ ಮೂಲಕ ನಡೆಸುವ ವ್ಯವಹಾರ. 1897-1908ರ ತನಕ ಅಮೆರಿಕನ್ ಇಂಡಿಯನ್ ಲ್ಯಾಂಗ್ವೇಜಸ್ ಎಂಬ ಕೃತಿಯನ್ನು ಪ್ರಕಟಿಸಿದ. ಈತ ಹಾಕಿಕೊಟ್ಟ ರೂಪರೇಷೆಗೆಳನ್ನು ಅನುಸರಿಸಿ ಈತನ ಅಧ್ಯಯನದ ಮಾದರಿ ಮುಂದುವರಿಸಿ, ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಪಡೆದವರೆಂದರೆ ಸಪೀರ್ ಮತ್ತು ಬ್ಲೂವ ಫೀಲ್ಡ್.

ಈತ ಮಾನವಶಾಸ್ತ್ರದಲ್ಲಿ ಹೊಸಶಾಖೆಗಳನ್ನು ಆರಂಭಿಸಿ ಬೆಳೆಸಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ವಿದ್ವಾಂಸರನ್ನೂ ಬೆಳೆಸಿದ. 1883ರಲ್ಲಿ ಜಾನಪದ ಸಂಘ ಸಂಸ್ಥೆಯೊಂದನ್ನು ಸ್ಥಾಪಿಸಿದ. ಅಮೆರಿಕೆಯ ಜಾನಪದ ಸಂಸ್ಥೆ ಎಂಬ ಹೆಸರಿನ ಈ ಸಂಸ್ಥೆಯಿಂದ ಒಂದು ಜಾನಪದ ನಿಯತಕಾಲಿಕೆ ಹೊರಡಿಸಿದ. ಇದರಿಂದ ಜಾನಪದ ತನ್ನದೇ ಆದ ಪ್ರತ್ಯೇಕ ಕ್ಷೇತ್ರ ಮತ್ತು ಅಧ್ಯಯನ ವಿಧಾನಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಜಾನಪದ ಕ್ಷೇತ್ರಕಾರ್ಯವನ್ನು ಬೆಳೆಸಿದವರಲ್ಲಿ ಈತನೂ ಒಬ್ಬ. (ಎಂ.ಬಿ.ಇ.; ಎಚ್.ಆರ್.ಜಿ.)