ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಸಾನ್ಕೆಟ್, ಬರ್ನಾರ್ಡ್

ವಿಕಿಸೋರ್ಸ್ದಿಂದ

ಬೋಸಾನ್‍ಕೆಟ್, ಬರ್ನಾರ್ಡ್ 1848-1923. ಬ್ರಿಟನ್ನಿನ ಆಧುನಿಕ ತತ್ತ್ವಶಾಸ್ತ್ರಜ್ಞ. ಹುಟ್ಟಿದ್ದ ನಾರ್ದಂಬರ್‍ಲ್ಯಾಂಡಿನ ರಾಕ್‍ಹಾಲ್‍ನಲ್ಲಿ. ತಂದೆ ಆರ್. ಡಬ್ಲ್ಯು. ಬೋಸಾನ್‍ಕೆಟ್. ಈತ ಹಾರೊ ಮತ್ತು ಬೆಲ್ಲಿಯಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಜೊಯೆಟ್, ಗ್ರೀನ್, ನ್ಯೂಮನ್‍ರವರ ಪ್ರಭಾವದಿಂದ ಮುಂದೆ ಬಂದ. 1871ರಿಂದ ನಾಲ್ಕು ವರ್ಷಗಳ ಕಾಲ ವಿಶ್ವವಿದ್ಯಾಲಯದ ಫೆಲೋ ಆಗಿ ಸೇವೆ ಸಲ್ಲಿಸಿದ. ಅನಂತರ ಸೇಂಟ್ ಅಂಡ್ರೂಸ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ. 1911-12ರಲ್ಲಿ ಈತ ಎಡಿನ್‍ಬರೊ ವಿಶ್ವವಿದ್ಯಾಲಯದಲ್ಲಿ ನೀಡಿದ ವಿಶೇಷೋಪನ್ಯಾಸಗಳು ವಿದ್ವತ್ ಪೂರ್ಣವಾಗಿದ್ದು ಎಲ್ಲರ ಮೆಚ್ಚುಗೆ ಪಡೆದುವು.

ಈತ ಹೆಗಲ್ ತತ್ತ್ವಶಾಸ್ತ್ರಜ್ಞನಿಗೆ ಋಣಿ. ಹೆಗಲ್ ತತ್ತ್ವಶಾಸ್ತ್ರಜ್ಞನ ವಿಚಾರಸರಣಿಗಳನ್ನು ಭಾಷಾಂತರ ಮಾಡಿರುವುದಲ್ಲದೆ ತನ್ನ ಸ್ವಂತ ಕೃತಿಗಳಿಂದ ಈತ ತತ್ತ್ವಶಾಸ್ತ್ರ ಪ್ರಪಂಚಕ್ಕೆ ಹೊಸ ಕಳೆ ಬೀರಿದ. ಈತನ ಮೊದಲ ಬರಹಗಳಲ್ಲಿ ಲೋಟ್ಸೆಯ ಪ್ರಭಾವ ಕಾಣಬಹುದು. ಲೋಟ್ಸೆಯ ಕೃತಿಗಳನ್ನು ಈತ ಭಾಷಾಂತರ, ಸಂಪಾದನೆ ಮಾಡಿರುವುದುಂಟು. ಧರ್ಮಶಾಸ್ತ್ರ ಮತ್ತು ಸೌಂದರ್ಯಮೀಮಾಂಸೆಗಳ ಬಗ್ಗೆ ಈತನಿಗೆ ಹೆಚ್ಚು ಒಲವು. ವೈಯಕ್ತಿಕವಾಗಿ ಅಮರತ್ವ ಪಡೆಯುವುದೆಂಬುದು ಸುಳ್ಳು. ಏಕೆಂದರೆ ನಾವು ಹೆಚ್ಚು ಮಾನ್ಯತೆ ಕೊಡುವ ಚೈತನ್ಯ ಪರವಸ್ತುವಿನಲ್ಲಿ ಸುರಕ್ಷಿತವಾಗಿದೆ ಎಂಬುದು ಈತನ ವಾದ. ಪರಸ್ಪರ ಸಹಕಾರದಿಂದ ಸಮಷ್ಟಿ ಮನಸ್ಸು ಬೆಳೆಯುತ್ತದೆ. ಅದರ ಫಲ ಅನುಭವಿಸುವಂತೆ ಅದು ವ್ಯಕ್ತಿಯನ್ನು ಪೋಷಿಸುತ್ತದೆ ಎಂಬುದು ಈತನ ಸಿದ್ಧಾಂತ.

ಇಳಿ ವಯಸ್ಸಿನಲ್ಲಿ ಈತ ದರ್ಶನಶಾಸ್ತ್ರದ ಬಗ್ಗೆ ಬಹು ಆಳವಾದ ಪರಿಶ್ರಮ. ಆಸಕ್ತಿ ತೋರಿದ. ಎ ಹಿಸ್ಟರಿ ಆಫ್ ಈಸ್ತೆಟಿಕ್ (ಸೌಂದರ್ಯಮೀಮಾಂಸೆಯ ಇತಿಹಾಸ-1892), ದಿ ಫಿಲಸಾಫಿಕಲ್ ತಿಯರಿ ಆಫ್ ದಿ ಸ್ಟೇಟ್ (1899) ದಿ ವ್ಯಾಲ್ಯೂ ಅಂಡ್ ದಿ ಡೆಸ್ಟಿನಿ ಆಫ್ ದಿ ಇನ್‍ಡಿವಿಜುಯಲ್ (1913) ಇವು ಈತನ ಉದಗ್ರಂಥಗಳಲ್ಲಿ ಕೆಲವು. (ಎಂ.ಎಲ್.ಆರ್.)