ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಸ್, ಜಗದೀಶಚಂದ್ರ

ವಿಕಿಸೋರ್ಸ್ದಿಂದ

ಬೋಸ್, ಜಗದೀಶಚಂದ್ರ 1858-1937. ಭೌತ ಮತ್ತು ಸಸ್ಯವಿಜ್ಞಾನ ಎರಡರಲ್ಲಿಯೂ ಮೂಲಭೂತ ಸಂಶೋಧನೆ ಮಾಡಿ ಅಂತಾರಾಷ್ಟ್ರೀಯ ಮನ್ನಣೆಗಳಿಸಿದ ಮಹಾ ವಿಜ್ಞಾನಿ. ಬ್ರಿಟಿಷರ ಆಡಳಿತದಲ್ಲಿದ್ದ ಆಗಿನ ಭಾರತದ ಪ್ರತಿನಿಧಿಯಾಗಿ ಅಸಂಖ್ಯ ಅಂತಾರಾಷ್ಟ್ರೀಯ ವಿಜ್ಞಾನಸಭೆ ಸಮ್ಮೇಳನಗಳಲ್ಲಿ ಭಾಗವಹಿಸಿದ್ದು ಇವರ ಹಿರಿಮೆಯ ದ್ಯೋತಕ. ಅಂದಿನ ಲೀಗ್ ಆಫ್ ನೇಷನ್ಸ್ ಸಂಸ್ಥೆಯ ಭೌದ್ದಿಕ ಸಹಕಾರ ಸಮಿತಿಯ ಸದಸ್ಯರಾಗಿದ್ದರು. ಜೀವಿ ಅಜೀವಿಗಳಲ್ಲಿಯೂ ಸಸ್ಯ ಪ್ರಾಣಿಗಳಲ್ಲಿಯೂ ಒಂದು ತೆರನಾದ ಭೌತ ಏಕತೆ ಇರುವುದನ್ನು ಗುರುತಿಸಿ ಇವರು ಮಾಡಿದ ಪ್ರಯೋಗಗಳು ಹಾಗೂ ಮೂಲಭೂತ ಸಂಶೋಧನೆಗಳು ಪ್ರಪಂಚದ ಗಮನವನ್ನು ಭಾರತದತ್ತ ಸೆಳೆದುವು. ತಮ್ಮ ಸಿದ್ಧಾಂತ ನಿರ್ಣಯಾದಿಗಳಿಗೆ ಪೋಷಕವಾಗಿ ಪ್ರದರ್ಶಿಸಲು ನೂತನ ಉಪಕರಣಗಳನ್ನು ಉಪಜ್ಞಿಸಿದರು. ಕಳೆದ ಶತಮಾನದ ಕೊನೆಗೆ ಜೀವಭೌತವಿಜ್ಞಾನದಲ್ಲಿ ಸಂಗೃಹೀತವಾಗಿದ್ದ ಜ್ಞಾನವನ್ನೇ ಪ್ರಶ್ನಿಸಿ ಆ ಕ್ಷೇತ್ರಕ್ಕೆ ಹೊಸ ತಿರುವುಕೊಟ್ಟರು. ಬೋಸ್ ಸಂಶೋಧನ ಸಂಸ್ಥೆ ಸ್ಥಾಪಿಸಿ ಭಾರತದಲ್ಲಿ ಉನ್ನತ ಸಂಶೋಧನೆಗಾಗಿ ಅನುವುಮಾಡಿಕೊಟ್ಟರು. ಸಕಾಲದಲ್ಲಿ ಮನಸ್ಸು ಮಾಡಿದ್ದರೆ ಬಾನುಲಿ ಪ್ರಸಾರ ಮತ್ತು ಅಭಿಗ್ರಹಣ ತಂತ್ರವನ್ನು ಶೋಧಿಸಿದ ಸಂಪೂರ್ಣ ಕೀರ್ತಿಗೆ ಮಾರ್ಕೊನಿಯ ಬದಲು ಇವರೇ ಪಾತ್ರರಾಗಬಹುದಿತ್ತು. ಶುದ್ಧ ವಿಜ್ಞಾನ ಮನೋವೃತ್ತಿಯವರಾದ ಬೋಸ್‍ರಿಗೆ ವಿಜ್ಞಾನದ ವ್ಯಾವಹಾರಿಕ ಅನ್ವಯಗಳತ್ತ ದಿವ್ಯ ನಿರ್ಲಕ್ಷ್ಯ! ಜಗದೀಶಚಂದ್ರರು ಸದ್ಗೃಹಸ್ಥರು, ಸ್ಫೂರ್ತಿದಾಯಕ ಪ್ರಾಧ್ಯಾಪಕರು, ಸಮರ್ಥ ಸಂಶೋಧನ ನಿರ್ದೇಶಕರು, ಉತ್ತಮ ಉಪಕರಣಗಳ ಉಪಜ್ಞೆಕಾರರು, ಸಾಹಿತ್ಯ ಪ್ರೇಮಿ, ಸರಸವಾಗ್ಮಿ, ಪ್ರೌಢ ಪ್ರಬಂಧ ಪುಸ್ತಕಾದಿಗಳ ಲೇಖಕರು, ಭಾರತೀಯ ಸನಾತನ ಸಂಸ್ಕøತಿಯ ಅಭಿಮಾನಿಗಳು. ಎಲ್ಲಕ್ಕೂ ಮಿಗಿಲಾಗಿ ಉಜ್ಜ್ವಲ ರಾಷ್ಟ್ರ ಪ್ರೇಮಿ.

1858 ನವೆಂಬರ್ 30ರಂದು ಇವರು ಬಂಗಾಲದ ಮೈಮೇನ್‍ಸಿಂಗ್ (ಈಗಿನ ಬಾಂಗ್ಲಾ ದೇಶ) ಎಂಬಲ್ಲಿ ಜನಿಸಿದರು. ತÀಂದೆ ಭಗವಾನಚಂದ್ರÀರು ಫರೀದಪುರದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದರು. ತಾಯಿ ಸಂಪ್ರದಾಯಿಕ ಗೃಹಿಣಿ, ವಿಶಾಲಮನೋಭಾವದ ಮಹಿಳೆ. ಜಗದೀಶಚಂದ್ರರೇ ಮುಂದೆ ಬರೆದಂತೆ ತಾವು ಶಾಲಾ ಬಾಲಕರಾಗಿದ್ದಾಗ ಅಸ್ಪøಶ್ಯಕುಲದ ತಮ್ಮ ಗೆಳೆಯರನ್ನು ಮನೆಗೆ ಕರೆದುಕೊಂಡು ಹೋದಾಗ ಅವರ ತಾಯಿ ಯಾವ ಭೇದವನ್ನು ಮಾಡದೆ ಮಾತೆಯ ಮಮತೆ ತೋರುತ್ತಿದ್ದರಂತೆ. ಜಗದೀಶಚಂದ್ರರಿಗೆ ಒಬ್ಬ ಅಕ್ಕ ಮತ್ತು ನಾಲ್ಕು ತಂಗಿಯರು. ತಂದೆ ಭಗವಾನಚಂದ್ರರಿಗೆ ಭಾರತೀಯ ಸಂಪ್ರದಾಯ ಸಂಸ್ಕøತಿಗಳಲ್ಲಿ ಅಪಾರ ಗೌರವ ಮತ್ತು ವಿಶ್ವಾಸ. ಆಗಿನ ವಾತಾವರಣದಲ್ಲಿ ಶ್ರೀಮಂತರು ಮತ್ತು ಅಧಿಕಾರಿಗಳು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವುದು ಪ್ರತಿಷ್ಠೆಯ ಕುರುಹಾಗಿತ್ತು. ಆದರೆ ಭಗವಾನ ಚಂದ್ರರು ಹೀಗಲ್ಲ. ಸ್ವತಃ ಶಿಕ್ಷಣತಜ್ಞರೂ ಆಗಿದ್ದು ಔದ್ಯಮಿಕ ಮತ್ತು ತಾಂತ್ರಿಕ ಶಾಲೆಗಳನ್ನು ಸ್ಥಾಪಿಸಿದ್ದ ಇವರು ತಮ್ಮ ಮಗ ಮಾತೃಭೂಮಿಯ ನಿಜವಾದ ಪರಿಚಯ ಮಾಡಿ ಕೊಳ್ಳಲೆಂಬ ಘನ ಉದ್ದೇಶದಿಂದ ಈತನನ್ನು ಸನಾತನ ಮಾದರಿಯ ಒಂದು ಪಾಠಶಾಲೆಗೆ ಸೇರಿಸಿದರು. ತಂದೆಯವರ ಈ ನಿರ್ಣಯ ಮುಂದೆ ತಮ್ಮಲ್ಲಿ ರಾಷ್ಟ್ರೀಯ ಭಾವನೆ ಬೆಳೆಯಲು ಕಾರಣವಾಯಿತೆಂದು ಜಗದೀಶಚಂದ್ರರು ಉದ್ದರಿಸಿದ್ದಾರೆ. ಆ ಶಾಲೆಯಲ್ಲಿಯೇ ಅವರಿಗೆ ನಿಸರ್ಗದ ಆಕರ್ಷಣೆ ಹುಟ್ಟಿತು. ಜೀವ ಅಜೀವಿಗಳ ವ್ಯವಹಾರಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಹೇಗೆ ಬಾಲ್ಯದಲ್ಲಿಯೇ ಬೆಳೆಯಿತು. ಆಗ ಅವರ ಮೇಲೆ ವಿಶೇಷ ಬೀರಿದ ವ್ಯಕ್ತಿಯೆಂದರೆ ಅವರ ತಂದೆಯೇ. ಸೆರೆಮನೆಯಿಂದ ಬಿಡುಗಡೆಯಾಗಿ ಬಂದಿದ್ದ ಒಬ್ಬ ಭಾರೀ ಡಕಾಯಿತನನ್ನು ಮಗು ಜಗದೀಶನ ಯೋಗಕ್ಷೇಮ ನೋಡಿಕೊಳ್ಳಲು ನಿಯಮಿಸಿ ಆ ಡಕಾಯಿತನನ್ನು ಸುಧಾರಿಸಿದ ಅಸಾಧಾರಣ ವ್ಯಕ್ತಿ ಭಗವಾನಚಂದ್ರರು.

ಜಗದೀಶಚಂದ್ರ ಬೋಸರು ಕಲಕತ್ತೆಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಓದಿ ಪದವೀಧರರಾದರು. ಆಗಿನ ಇತರ ಪ್ರತಿಭಾಶಾಲಿ ತರುಣರಂತೆ ಇವರು ಕೂಡ ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್ ಪರೀಕ್ಷೆಗೆ ಕಟ್ಟಬೇಕೆಂದು ಯೋಚಿಸಿದರು. ತÀಂದೆ ಭಗವಾನಚಂದ್ರರಿಗೆ ಮಗ ತಮ್ಮ್ಮಂತೆ ಸರಕಾರದ ಗುಲಾಮನಾಗುವುದು ಇಚ್ಛೆಯಿರಲಿಲ್ಲ. ಆತನಿಗೆ ವೈದ್ಯಕೀಯ ಅಥವಾ ಇನ್ನಾವುದೋ ವಿಜ್ಞಾನ ವೃತ್ತಿ ಆಯಲು ಸೂಚಿಸಿದರು. ಆ ಪ್ರಕಾರ ಜಗದೀಶಚಂದ್ರರು 1880ರಲ್ಲಿ ಇಂಗ್ಲೆಂಡಿಗೆ ತೆರಳಿ ಲಂಡನ್ನಿನ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿದರು. ಅಲ್ಲಿ ಮೊದಲನೆಯ ವರ್ಷವೇನೋ ಸುಗಮವಾಗಿ ಕಳೆಯಿತು. ಆದರೆ ಬಾಲಕವಾಗಿದ್ದಾಗ ಇವರಿಗೆ ಅಂಟಿಕೊಂಡಿದ್ದ ಕಾಲಾ ಅಜಾರ್ ಎಂಬ ಜ್ವರ ಇಂಗ್ಲೆಂಡಿನಲ್ಲಿ ಮತ್ತೆ ಮರುಕಳಿಸಿ ಇವರನ್ನು ಹಣ್ಣು ಮಾಡಿತು. ಇವರ ಗುರುಗಳು ಮತ್ತು ವೈದ್ಯರು ಇವರು ವೈದ್ಯಕೀಯ ಶಿಕ್ಷಣವನ್ನೇ ಬಿಡಬೇಕೆಂದು ಸಲಹೆ ಮಾಡಿದರು. ಹೀಗೆ ಇವರು ಅನಿವಾರ್ಯವಾಗಿ ಲಂಡನ್ ಬಿಟ್ಟು ಕೇಂಬ್ರಿಜಿಗೆ ಹೋಗಿ ವಿಜ್ಞಾನದ ವಿದ್ಯಾರ್ಥಿಯಾದರು. 1884ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಮರುವರ್ಷ ಲಂಡನ್ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ. ಪದವಿ ಪಡೆದರು.

ತಾಯಿನಾಡಿಗೆ ಮರಳಿದ ಬೋಸ್ ಕಲಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತವಿಜ್ಞಾನದ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಆ ವರ್ಷಗಳಲ್ಲಿ ಬ್ರಿಟಿಷರ ವರ್ಣಭೇದದ ಅಸಹ್ಯ ನೀತಿ ಅವರನ್ನು ಕಾಡಿತು. ಸರಿಸಮಾನ ಸ್ಥಾನಗಳಲ್ಲಿದ್ದ ಬಿಳಿಯ ಪ್ರಾಧ್ಯಾಪಕರ ಮೂರನೆಯ ಎರಡರಷ್ಟು (2/3) ಪಗಾರ ಮಾತ್ರ ಭಾರತೀಯ ಪ್ರಾಧ್ಯಾಪಕರಿಗೆ ಕೊಡಬೇಕೆಂಬ ದುರ್ನಿಯಮ ಜಾರಿಗೆ ಬಂದಿತ್ತು. ಜಗದೀಶಚಂದ್ರರು ಇದನ್ನು ಪ್ರತಿಭಟಿಸಿ ಸಂಬಳ ತೆಗೆದುಕೊಳ್ಳದೇ ಮೂರು ವರ್ಷ ಪರ್ಯಂತ ದುಡಿದರು. ಇದೇ ಅವಧಿಯಲ್ಲಿ ವಿಕ್ರಮಪುರದ ದುರ್ಗಾಮೋಹನದಾಸರ ಮಗಳಾದ ಅಬಲಾರವರೊಡನೆ ಬೋಸರ ವಿವಾಹವಾಯಿತು (1887). ಈಕೆ ವಿದ್ಯಾರ್ಹತೆಯಲ್ಲಿ ಗಂಡನಿಗೆ ಸರಿಜೋಡಿ. ಈಗ್ಗೆ ಒಂದು ಶತಮಾನದಷ್ಟು ಹಿಂದೆಯೇ ಅಬಲಾದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರೆಂಬ ಸಂಗತಿ ಇಂದು ಅಚ್ಚರಿ ಮೂಡಿಸುವಂತಿದೆ. ಪತಿಯ ಸ್ವಾಭಿಮಾನಕ್ಕೆ ಮೆಚ್ಚಿ ಈಕೆ ಅವರಿಗೆ ಯೋಗ್ಯ ಸಹಧರ್ಮಿಣಿ ಆದರು. ಬೋಸರ ವೈವಾಹಿಕ ಜೀವನ ಸುಖಮಯವಾಗಿ ಆದರ್ಶವಾಗಿತ್ತು. ಮೂರು ವರ್ಷಗಳ ಕಾಲ ಪ್ರೆಸಿಡೆನ್ಸಿ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ವಿದ್ಯಾ ಇಲಾಖೆಯ ನಿರ್ದೇಶಕ ಆಗಿದ್ದ ಬ್ರಿಟಿಷ್ ಅಧಿಕಾರಿ ಬೋಸರ ಪ್ರತಿಭೆ ಮತ್ತು ವ್ಯಕ್ತಿತ್ವ ಗಮನಿಸಿ ಅವರ ಆತ್ಮೀಯ ಮಿತ್ರನಾದ. ಹೀಗೆ ಬ್ರಿಟಿಷರಿಂದ ಭಾರತೀಯರಿಗೆ ಆಗುತ್ತಿದ್ದ ಅವಮಾನದ ವಿರುದ್ಧ ಗಳಿಸಿದ ನೈತಿಕ ಜಯದ ಕುರುಹಾಗಿ ಜಗದೀಶಚಂದ್ರ ಬೋಸರಿಗೆ ಹಿಂದಿನ ಮೂರು ವರ್ಷಗಳ ಸಂಪೂರ್ಣ ಪಗಾರ ಪಾವತಿಯಾಯಿತು.

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮೊದಲಿಗೆ ಪ್ರಯೋಗಾಲಯದ ಸೌಕರ್ಯವಿರಲಿಲ್ಲ. ಹಲವು ವರ್ಷಗಳ ಪ್ರಯತ್ನಾನಂತರ ಒಂದು ಸಣ್ಣ ಪ್ರಯೋಗಾಲಯ ಮಂಜೂರಾಯಿತು. ಅಲ್ಲಿಯೇ ಜಗದೀಶಚಂದ್ರರು ಭೌತವಿಜ್ಞಾನದಲ್ಲಿ ಸಂಶೋಧನೆಗಳನ್ನು ಪ್ರಾರಂಭಿಸಿದರು. ಆವರ ಮೆಚ್ಚಿನ ಕ್ಷೇತ್ರ ವಿದ್ಯುತ್ ತರಂಗಗಳದಾಗಿತ್ತು. ಮ್ಯಾಕ್‍ಸ್ವಲ್ಲನ ವಿದ್ಯುತ್‍ಕಾಂತ ಕ್ಷೇತ್ರದ ತತ್ತ್ವಪ್ರಕಟವಾಗಿ ಆಗ ಕೇವಲ ಎರಡು ದಶಕಗಳು ಸಂದಿದ್ದುವು. ಹಟ್ರ್ಸ್ ಮೊದಲಾಗಿ ಅನೇಕ ಪ್ರಥಮ ದರ್ಜೆಯ ಭೌತವಿಜ್ಞಾನಿಗಳು ವಿದ್ಯುತ್‍ಕ್ರಾಂತೀಯ ಅಲೆಗಳ ಮೇಲೆ ಸಂಶೋಧನೆ ನಡೆಸಿದ ಕಾಲವದು. ಸ್ಫಟಿಕಗಳಿಂದ ವಿದ್ಯುತ್ ತರಂಗಗಳ ಧ್ರುವೀಕರಣ ಎಂಬ ಇವರ ಪ್ರಥಮ ಸಂಶೋಧನಪ್ರಬಂಧÀ 1895ರಲ್ಲಿ ಜರ್ನಲ್ ಆಫ್ ದಿ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಪ್ರತಿಕೆಯಲ್ಲಿ ಪ್ರಕಟವಾಯಿತು. ಅದೇ ವರ್ಷ ವಿದ್ಯುತ್ ವಕ್ರೀಭವನ ಸೂಚ್ಯಂಕಗಳ ನಿರ್ಣಯ ಎಂಬ ಎರಡನೆಯ ಸಂಶೋಧನಪ್ರಬಂಧ ಎಲೆಕ್ಟ್ರಿಶಿಯನ್ ಎಂಬ ಪ್ರತಿಕೆಯಲ್ಲಿ ಪ್ರಕಟವಾದಾಗ ಬೋಸರ ಸಂಶೋಧನೆಗೆ ಮಹತ್ತ್ವದ ತಿರುವು ದೊರೆಯಿತು. ಏಕೆಂದರೆ ಲಂಡಿನ್ನಿನ ರಾಯಲ್ ಸೊಸೈಟಿ ಇವರ ಸಂಶೋಧನೆಗೆ ಮನ್ನಣೆಕೊಟ್ಟು ಆ ಲೇಖನವನ್ನು ಪ್ರಕಟಿಸಿತಲ್ಲದೇ ಬೋಸರಿಗೆ ಸಂಶೋಧನೆ ಮುಂದುವರಿಸಲು ಸಹಾಯಧನವನ್ನು ಕೂಡ ಕೊಡಮಾಡಿತು. ಎರಡು ವರ್ಷಗಳ ತರುವಾಯ ಆಗಿನ ಬಂಗಾಲ ಸರಕಾರ ಸಹ ಬೋಸರಿಗೆ ಸಂಶೋಧನೆಗೆಂದು ಎಲ್ಲ ಅನುಕೂಲತೆಗಳನ್ನು ಒದಗಿಸಿಕೊಟ್ಟಿತು.

ಇಟಲಿಯ ಮರ್ಕೊನಿಯೂ ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ಟೆಲಿಗ್ರಾಫ್ ಸಂದೇಶಗಳನ್ನು ತಂತಿಯ ಸಹಾಯವಿಲ್ಲದೇ ಕಳಿಸುವ ವಿಧಾನಗಳ ಕುರಿತು ಸಂಶೋಧನೆ ನಡೆಸಿದ್ದರು. ಇದನ್ನು ಪ್ರಪ್ರಥಮವಾಗಿ ಮಾಡಿದ ಕೀರ್ತಿ ಭಾರತೀಯ ವಿಜ್ಞಾನಿ ಬೋಸರಿಗೆ ಸಲ್ಲಬೇಕು. 1895ರಲ್ಲಿಯೇ ಅವರು ತಾವು ಸಂಶೋಧಿಸಿ ನಿರ್ಮಿಸಿದ್ದ ನಿಸ್ತಂತು ಪ್ರೇಷಕವನ್ನು ಕಲಕತ್ತೆಯ ಪುರಭವನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದರು. ಯಾವ ತಂತಿಯ ಸಂಪರ್ಕವೂ ಇಲ್ಲದೇ ದೂರದಲ್ಲಿಟ್ಟಿದ್ದ ತಮ್ಮ ಉಪಕರಣದಿಂದ ವಿದ್ಯುತ್ ತರಂಗಗಳನ್ನು ಉತ್ಪಾದಿಸಿ ಒಂದು ಕೋಣೆಯಲ್ಲಿಟ್ಟಿದ್ದ ಭಾರವಾದ ವಸ್ತುವನ್ನು ಚಲಿಸುವಂತೆ ಮಾಡಲು ಮತ್ತು ಒಂದು ವಿಶೇಷ ವಿದ್ಯುತ್ ಗಂಟೆ ಬಾರಿಸುವಂತೆ ಮಾಡಲು ಅವನ್ನು ಉಪಯೋಗಿಸಿದರು. ಅವರ ಆ ಉಪಕರಣಕ್ಕೆ ಕೊಹಿಯರರ್ ಎಂದು ಹೆಸರು. ಇಂದಿನ ಬಾನುಲಿ ವ್ಯವಸ್ಥೆಯ ಆದಿಮರೂಪ ಇದಾಗಿದ್ದಿತೆಂದು ಗಮನಿಸಿದರೆ ಅವರ ಸಂಶೋಧನೆಯ ಮಹತ್ತ್ವ ಗೊತ್ತಾಗುತ್ತದೆ. ಈ ಶೋಧನೆಯ ವಿವರವನ್ನು 1896ರಲ್ಲಿ ಲಂಡನ್ನಿನ ರಾಯಲ್ ಸೊಸ್ಶೆಟಿಗೆ ತಿಳಿಸಿದಾಗ ಅದು ಆಶ್ಚರ್ಯಚಕಿತವಾಯಿತು. ರಾಯಲ್ ಸೊಸೈಟಿ ಮುಂದೆ ಅವರನ್ನು ಉಪನ್ಯಾಸಗಳಿಗಾಗಿ ಮೂರು ಬಾರಿ ಆಹ್ವಾನಿಸಿ ಗೌರವಿಸುವುದಕ್ಕೆ ಇದು ನಾಂದಿಯಾಯಿತು. ಅದೇ ವರ್ಷ ಲಂಡನ್ ವಿಶ್ವವಿದ್ಯಾಲಯ ಬೋಸರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಕೊಟ್ಟು ಪುರಸ್ಕರಿಸಿತು. ಈ ಪದವಿ ಅವರಿಗೆ ಸಂದದ್ದು ಭೌತವಿಜ್ಞಾನದಲ್ಲಿಯ ಸಂಶೋಧನೆಗಳಿಗಾಗಿಯೇ ಎಂಬುದನ್ನು ಗಮನಿಸಬೇಕು.

ಬೋಸರು ನವನವೀನ ಉಪಕರಣಗಳನ್ನು ಸಂಶೋಧಿಸಿ ಬಳಸುವುದರಲ್ಲಿ ಸಿದ್ಧಹಸ್ತರೆಂದು ಮೇಲೆ ಹೇಳಿದೆ. ಭೌತವಿಜ್ಞಾನದಲ್ಲಿಯ ಪ್ರಾರಂಭಿಕ ಪ್ರಯೋಗಗಳಿಗೆ ಅವರಿಗೆ ಬೇಕಾಗಿದ್ದ ವಿದ್ಯುತ್ ತರಂಗಗಳನ್ನು ಉತ್ಪಾದಿಸಲು ಎಲೆಕ್ಟ್ರಿಕ್ ರೇಡಿಯೇಟಿವ್ ಎಂಬ ಉಪಕರಣ ನಿರ್ಮಿಸಿದರು. ಅದು 25ರಿಂದ 5 ಮಿಲಿ ಮೀಟಿರುಗಳಷ್ಟು ಹ್ರಸ್ವತರಂಗಗಳನ್ನು ವಿಕಿರಣಗೊಳಿಸುತ್ತಿತ್ತು. ಈ ತರಂಗಗಳ ಪ್ರಕಾಶಸದೃಶ ಭೌತಗುಣಧರ್ಮಗಳನ್ನೆಲ್ಲ ಅವರು ಸಂಪೂರ್ಣವಾಗಿ ಅಭ್ಯಸಿಸಿದರು. ಲಂಡನ್ನಿನ ರಾಯಲ್ ಸೊಸ್ಶೆಟಿಯಲ್ಲಿ ಉಪನ್ಯಾಸಮಾಡಲು ಮೊದಲನೆಯ ಸಲ ಅಹ್ವಾನಿತರಾದಾಗ (1897) ತಾವು ಕಲಕತ್ತೆಯಲ್ಲಿ ನಿರ್ಮಿಸಿದ್ದ ಪ್ರೇಷಕ ಅಭಿಗ್ರಾಹಕಗಳೆರಡೂ ಇದ್ದ ಒಂದು ಉಪಕರಣವನ್ನು ಅಲ್ಲಿ ಪ್ರದರ್ಶಿಸಿದರು. ಅವರ ವಿದ್ಯುತ್ ತರಂಗಗಳ ಉಪಕರಣಗಳು ಹ್ರಸ್ವತರಂಗಗಳ ರೋಹಿತ ಮಾಪಕಗಳನ್ನು ಒಳಗೊಂಡಿದ್ದುವು. ಆದೇ ಕಾಲಕ್ಕೆ ಅವರು ಯಾಂತ್ರಿಕ ಅಥವಾ ಸೂಕ್ಷ್ಮ ಪ್ರಚೋದನೆಗಳು ವಿದ್ಯುತ್ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಬಲ್ಲ ತಂತ್ರವನ್ನು ಶೋಧಿಸಿದರು. ಬಹುಶಃ ಅವುಗಳ ಸೂಕ್ಷ್ಮ ಸಂವೇದಿತ್ವವೇ ಬೋಸರನ್ನು ಜೀವಜಗತ್ತಿನಲ್ಲಿಯ ಸೂಕ್ಷ್ಮ ಪ್ರತಿಕ್ರಿಯೆಗಳನ್ನು ನಿಖರವಾಗಿ ಅಳೆಯುವಂತ ಪ್ರೇರಿಸಿರಬೇಕು. ಅವರು ರಚಿಸಿದ್ದ ಕ್ರಿಸ್ಕೊಗ್ರಾಫ್ ಎಂಬ ಉಪಕರಣ ಇದಕ್ಕೆ ಉದಾಹರಣೆ ಸಸ್ಯಗಳಲ್ಲಿ ನಡೆಯುವ ಸಂಕೋಚನ ವಿಕಸನಗಳನ್ನು ಅಳೆಯುವ ಸ್ಪೈಗ್ಮೊಗ್ರಾಫ್ ಯಂತ್ರವನ್ನು ಕೂಡ ಇಲ್ಲಿ ಉದಾಹರಿಸಬಹುದು.

ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷ ಬೋಸರ ಸಂಶೋಧನ ಕ್ಷೇತ್ರವನ್ನು ಭೌತವಿಜ್ಞಾನದಿಂದ ಜೀವವಿಜ್ಞಾನಕ್ಕೆ ಬದಲಿಸಿತು. ಇವರಾಗ ವಿಶೇಷತಃ ಸಸ್ಯವಿಜ್ಞಾನದಲ್ಲಿ ಭೌತವೈಜ್ಞಾನಿಕಮಾಪನ ಪದ್ಧತಿಗಳನ್ನು ಪ್ರಯೋಗಿಸಲು ತೊಡಗಿದರು. ಭೌತವಿಜ್ಞಾನಿಯೊಬ್ಬ ಹೀಗೆ ಅನ್ಯಕ್ಷೇತ್ರದಲ್ಲಿ ಕಾಲಿಟ್ಟಾಗ ಅಲ್ಲಿಯ ವಿಜ್ಞಾನಿಗಳು (ಪಟ್ಟಭದ್ರರು ?) ಇವರನ್ನು ಮುಕ್ತ ಹೃದಯದಿಂದ ಸ್ವಾಗತಿಸದೆ ಇದ್ದದ್ದು ಅಸಹಜವಲ್ಲ ಇದನ್ನು ಪರಿಗಣಿಸದೆ ಅವರು ಸಸ್ಯ ಕ್ಷೇತ್ರದಲ್ಲಿಯೇ ದೃಢವಾಗಿ ಬೇರೂರಿ ತಮ್ಮ ಅಪ್ರತಿಮ ಸಂಶೋಧನ ಸಾಮಥ್ರ್ಯವನ್ನು ಅಲ್ಲಿಯೇ ಪ್ರದರ್ಶಿದರು.

ನಿರ್ಜೀವ ವಸ್ತುಗಳೂ ಜೀವಿಗಳೂ ವಿದ್ಯುತ್ ಪ್ರೇರಣೆಗೆ ಒಳಗಾದಾಗ ಒಂದೇ ರೀತೀಯ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತವೆ. ಚಿಂತೆ, ಬಳಲಿಕೆ, ನೆನಪು ಮೊದಲಾದ ವಿಷಯಗಳಲ್ಲಿ ಸತುವು ಕೂಡ ಜೀವವಿದ್ದಂತೆಯೇ ವರ್ತಿಸಿದ್ದನ್ನು ತೋರಿಸಿ ಅವರು ವಿಜ್ಞಾನಿಗಳನ್ನು ಬೆರಗುಗೊಳಿಸಿದರು. ಪ್ರಾಣಿ ಸಸ್ಯಗಳ ಜೈವಿಕ ಚಟುವಟಿಕೆಗಳಲ್ಲಿರುವ ಅಸಮತೆ ನಮಗೆ ಗೊತ್ತು. ಆಘಾತಕ್ಕೆ ಈಡಾದಾಗ ಪ್ರಾಣಿಗಳು ಚಲನೆಯಿಂದ ಪ್ರತಿಕ್ರಿಯೆ ತೋರಿಸುತ್ತವೆ. ಅವುಗಳಲ್ಲಿರುವ ನರಮಂಡಲಗಳು ಈ ಪ್ರತಿಕ್ರಿಯೆಗಳಿಗೆÀ ಕಾರಣ. ಇವನ್ನು ವಿದ್ಯುತ್ ಸ್ಪಂದಗಳಾಗಿ ಪರಿವರ್ತಿಸಿ ಅಳೆಯಬಹುದು. ಸಸ್ಯ ಜಗತ್ತಿನಲ್ಲಿಯೂ ಇದೇ ರೀತಿ ಪ್ರತಿಕ್ರಿಯಾ ವ್ಯವಸ್ಥೆ ಇದೆಯೇ ಹೇಗೆಂದು ಪರೀಕ್ಷಿಸಲು ಬೋಸರು ನೂರಾರು ಪ್ರಯೋಗಗಳನ್ನು ಮಾಡಿದರು. ನಾವು ಪ್ರಾಣಿಗಳಿಗೆ ಮಾತ್ರ ಇರಬಹುದೆಂದು ತಿಳಿದಿರುವ ವಿಶೇಷ ಪ್ರತಿಕ್ರಿಯೆಗಳೆಲ್ಲ ಗಿಡಗಂಟಿಗಳಿಗೂ ಇವೆಯೆಂದು ಅವರು ಪ್ರಥಮ ಬಾರಿಗೆ ಸಾಧಿಸಿದರು. ಉದಾಹರಣೆಗೆ ಒಂದು ಗಿಡಕ್ಕೆ ಹೊಡೆದಾಗ ಅದು ಪ್ರತಿಕ್ರಿಯೆ ತೋರಿಸಲು ಎಷ್ಟು ಅವಧಿ ತೆಗೆದುಕೊಳ್ಳಬಹುದು? ಸಾಮಾನ್ಯ ಸ್ಥಿತಿಯಲ್ಲಿ ಈ ಅವಧಿ 1/600 ಸೆಕೆಂಡಿನಷ್ಟು ಅಲ್ಪವೆಂದು ಅಳೆದರು. ಅದೇ ರೀತಿ ಆ ಸಸ್ಯ ದಣಿದಾಗ ಈ ಕಾಲಾವಧಿ ಹೆಚ್ಚಾಗಬಹುದೆಂದು ಗೊತ್ತಾಯಿತು. ಬಲವಾದ ಆಘಾತ ಬಡಿದರೆ ಗಿಡಗಳು ಕೂಡ ಮಂಕಾದವರೆಂತೆ ವರ್ತಿಸುತ್ತವೆ. ಈ ಪ್ರತಿಕ್ರಿಯಾವಧಿ ಋತುಮಾನವನ್ನು ಅವಲಂಬಿಸಿರುವುದು. ಸಸ್ಯಗಳು ಕೂಡ ವಿಷ ಪದಾರ್ಥಗಳನ್ನು ಊಡಿದಾಗ ಕುಂದುತ್ತವೆ ಮತ್ತು ಅವನ್ನು ನಿವಾರಿಸಿದಾಗ ಚೇತರಿಸಿ ಕೊಳ್ಳುತ್ತವೆ: ಮತ್ತೇರಿಸುವ ಪದಾರ್ಥಗಳನ್ನು ಉಣಿಸಿದಾಗ ಅವು ಪ್ರಾಣಿಗಳಂತೆಯೇ ಅಮಲೇರಿ ವರ್ತಿಸುತ್ತವೆ; ಸಸ್ಯಗಳೂ ರಾತ್ರಿ ನಿದ್ರಿಸಿ ಮುಂಜಾನೆ ಎಚ್ಚರವಾಗುತ್ತದೆ ಎಂದು ಮುಂತಾಗಿ ಬೋಸರು ತೋರಿಸಿದರು.

ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು ಸಸ್ಯದ ಒಂದು ತುದಿ ಮುಟ್ಟಿದರೆ ಅದರ ಎಲ್ಲ ಎಲೆಗಳೂ ಮುದುಡಿಕೊಳ್ಳುವ ಪ್ರತಿಕ್ರಿಯೆ ಎಲ್ಲರಿಗೂ ಗೊತ್ತು. ಇದು ಉಳಿದ ಪ್ರತಿಕ್ರಿಯೆಗಳಿಂದ ಈ ಸಸ್ಯದಲ್ಲಿ ತೀವ್ರವಾಗಿರುವುದರಿಂದ ಯಾವುದೇ ಉಪಕರಣದ ಸಹಾಯವಿಲ್ಲದೇ ಇಂಥ ಪ್ರತಿಕ್ರಿಯೆಯನ್ನು ಗುರುತಿಸಬಲ್ಲವು. ಉಳಿದ ಸಸ್ಯಗಳಲ್ಲಿ ಕೂಡ ಸಂಭವಿಸುವ ಈ ತೆರನಾದ ಪ್ರತಿಕ್ರಿಯೆಗಳನ್ನು ಗುರುತಿಸಲು ಬೋಸರು ನಿರ್ಮಿಸಿರುವ ವಿವಿಧ ಉಪಕರಣಗಳ ಸಹಾಯ ಬೇಕು. ಸಸ್ಯಗಳಲ್ಲಿಯೂ ಪ್ರತಿಕ್ರಿಯೆಗಳನ್ನು ಸಾಗಿಸಲು ವಿಶಿಷ್ಟ ನರಗಳಿವೆ. ಅವು ಕೂಡ ನೋವು ನಲಿವುಗಳನ್ನು ಪ್ರಾಣಿಗಳಂತೆಯೆ ಅನುಭವಿಸುತ್ತವೆ. ಹೀಗೆ ಸಸ್ಯಜಗತ್ತಿಗೂ ಪ್ರಾಣಿ ಜಗತ್ತಿಗೂ ಹೋಲಿಕೆ ಮತ್ತು ಏಕತೆ ಇರುವುದನ್ನು ಬೋಸರು ಸಿದ್ಧಪಡಿಸಿ ಜೀವ ಭೌತವಿಜ್ಞಾನದಲ್ಲಿ ಹೊಸ ಕ್ರಾಂತಿ ಉಂಟುಮಾಡಿದರು.

ಬೋಸರು ಭೌತವಿಜ್ಞಾನ ಕ್ಷೇತ್ರ ಬಿಟ್ಟು ಜೀವವಿಜ್ಞಾನ ಕ್ಷೇತ್ರ ಪ್ರವೇಶಿಸಿದಾಗ ಸಾಕಷ್ಟು ವಿರೋಧ ಎದುರಿಸಬೇಕಾಯಿತೆಂದು ಹಿಂದೆ ಹೇಳಿದೆ. ಅವರ ಪ್ರಾರಂಭಿಕ ಹೋರಾಟ ಕೂಡ ರೋಮಾಂಚಕಾರಿಯಾಗಿದೆ. 1897ರಲ್ಲಿ ಅವರು ರಾಯಲ್ ಸೊಸೈಟಿಯಲ್ಲಿ ನೀಡಿದ ಶುಕ್ರವಾರ ಸಂಜೆ ಉಪನ್ಯಾಸ ಎಲ್ಲರಿಂದಲೂ ಮೆಚ್ಚುಗೆ ಪಡೆಯಿತು. ಆದರೆ ಸಸ್ಯ ಮತ್ತು ಪ್ರಾಣಿಗಳ ಪ್ರತಿಕ್ರಿಯೆಗಳ ಏಕರೂಪಕ್ಕೆ ಸಿದ್ಧಪಡಿಸಿದ ಅವರ ಎರಡನೆಯ ಉಪನ್ಯಾಸ (1901) ಮಿಶ್ರ ಪ್ರತಿಕ್ರಿಯೆಗೆ ಒಳಗಾಯಿತು. ಆಗ ವೈದ್ಯುತಶರೀರ ಕ್ರಿಯಾವಿಜ್ಞಾನದ ಅಧ್ಯಯನದಲ್ಲಿ ಜಾನ್‍ಸ್ಯಾಂಡರ್‍ಸನ್ ಎಂಬ ವಿಜ್ಞಾನಿಯ ನಿರ್ಣಯವೇ ವೇದಾವಾಕ್ಯವೆನಿಸುತ್ತಿತ್ತು. ಬೋಸರ ಉಪನ್ಯಾಸ ಕೇಳಲೆಂದೇ ಈತ ಆಕ್ಸ್‍ಫರ್ಡಿನಿಂದ ಲಂಡನ್ನಿಗೆ ಬಂದಿದ್ದ. ಇವನೂ ಇವನ ಬೆಂಬಲಿಗರೂ ಪೂರ್ವಾಗ್ರಹಪೀಡಿತರಾಗಿ ಬೋಸರ ನಿರ್ಣಯಗಳ ಋಜುತ್ವವನ್ನು ಪ್ರಶ್ನಿಸಿದರು. ಇದರಿಂದಾಗಿ ರಾಯಲ್ ಸೊಸೈಟಿ ಕೂಡ ಬೋಸರ ನಿರ್ಣಯಗಳನ್ನೂ ಪ್ರಬಂಧ ಪ್ರಕಟಣೆಯನ್ನೂ ನಿರಾಕರಿಸಿತು. ಬೋಸÀರಿಗೇನೂ ನಿರಾಶೆಯಾಗಲಿಲ್ಲ. ಅದೊಂದು ವಿಜ್ಞಾನ ವರ್ಣಾಶ್ರಮದ ಹೇಯ ಪ್ರದರ್ಶನವೆಂದು ಅವರಿಗೆ ಗೊತ್ತಿತ್ತು. ರಾಯಲ್ ಸೊಸ್ಶೆಟಿಯಲ್ಲಿ ಈ ವಿವಾದಾತ್ಮಕ ಉಪನ್ಯಾಸ ಕೇಳಿದ್ದ ಕೆಲವು ಪ್ರಮುಖ ಜೀವವಿಜ್ಞಾನಿಗಳು ಆಗ ಬೋಸರಿಗೆ ಬೆಂಬಲವಾಗಿ ನಿಂತರು. ಆಕ್ಸ್‍ಫರ್ಡಿನ ಪ್ರಾಧ್ಯಾಪಕ ವೈನ್ಸ್ ಎಂಬ ಸಸ್ಯವಿಜ್ಞಾನಿ ವಿಶೇಷ ಆಸ್ಥೆ ತೋರಿಸಿ ಈ ಪ್ರಬಂಧವನ್ನು ಪ್ರಕಟಿಸಲು ಮುಂದೆ ಬಂದ. ಇದೇ ಸುಮಾರಿಗೆ ಬೋಸರ ಸಂಶೋಧನೆಯ ಚೌರ್ಯ ಮಾಡಿ ಪ್ರಕಟಿಸುವ ಪ್ರಯತ್ನಗಳೂ ನಡೆದವು. ತಮ್ಮ ಸಂಶೋಧನ ನಿರ್ಣಯಗಳು ಬೇರಾರದೂ ಅಲ್ಲವೆಂದು ಸಿದ್ಧಪಡಿಸಲು ಅವರು ಒಂದು ವಿಚಾರಣಸಮಿತಿಯ ಮುಂದೆ ಬರಬೇಕಾಯಿತು. ಇವರ ಮನಸ್ಸಿಗೆ ಈ ಎಲ್ಲಾ ಘಟನೆಗಳು ನೋವು ಉಂಟುಮಾಡಿದವು. ಕೊನೆಗೆ ವಿಚಾರನ ಸಮಿತಿಯ ಈ ಸಂಶೋಧನೆಗಳ ಮೂಲ ಕರ್ತೃ ಸಾಕ್ಷಾತ್ ಬೋಸರೇ ಎಂದು ನಿರ್ಣಯವಿತ್ತಿತ್ತು. ಅಂದಿನಿಂದ ಇವರಿಗೆ ಏಕಪ್ರಕಾರವಾಗಿ ವಿವಾದಾತೀತ ಮನ್ನಣೆ ದೊರಕಿ ಇವರ ವೈಜ್ಞಾನಿಕ ಪ್ರತಿಷ್ಠೆ ಜೀವವಿಜ್ಞಾನ ಕ್ಷೇತ್ರದಲ್ಲೂ ಭದ್ರವಾಯಿತು. ತಮ್ಮ ಸಂಶೋಧನೆಗಳನ್ನು ಸಾದರಪಡಿಸಿ ಉಪನ್ಯಾಸಗಳನ್ನು ನೀಡಲು ಬೋಸರಿಗೆ ಮೂರು ಬಾರಿ ರಾಯಲ್ ಸೊಸೈಟಿ ಆಹ್ವಾನಿಸಿದ್ದನ್ನು ಗಮನಿಸಿದರೆ ಅವರಿಗೆ ಅಂತಾರಾಷ್ಟ್ರೀಯಯ ಮಟ್ಟದಲ್ಲಿ ಶ್ರೇಷ್ಠತಮ ವಿಜ್ಞಾನಿಗಿರಬೇಕಾದ ಗೌರವ ಸ್ಥಾನವಿದ್ದಿತೆಂಬುದು ಸ್ಪಷ್ಟವಾಗುತ್ತದೆ. ಪ್ರಪಂಚದ ವಿವಿಧ ವಿಶ್ವವಿದ್ಯಾಲಯಗಳೂ ವಿಜ್ಞಾನ ಸಂಸ್ಥೆಗಳೂ ಅವರನ್ನೂ ಆಮಂತ್ರಿಸಿ ಗೌರವಿಸಲು ಪೈಪೋಟಿ ನಡೆಸುವಂಥ ಪರಿಸ್ಥಿತಿ ಏರ್ಪಟ್ಟಿತ್ತು. ಅವರು 1900ರಲ್ಲಿ ಪ್ಯಾರಿಸ್‍ಗೆ ಮತ್ತು 1915ರಲ್ಲಿ ಇಂಗ್ಲೆಂಡಿನ ಪ್ರವಾಸದೊಂದಿಗೆ ಅಮೆರಿಕೆಯನ್ನೂ ಒಳಗೊಂಡಂತೆ ಪ್ರಪಂಚದ ಬೇರೆ ಬೇರೆ ವಿಜ್ಞಾನಸಂಸ್ಥೆಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ಉಪನ್ಯಾಸಗಳನ್ನು ಮಾಡಿದರು. ಆಮೇಲೆ ಕೂಡ ಅವರು ಹಲವಾರು ಪ್ರಪಂಚ ಪರ್ಯಟನೆ ಕೈಗೊಂಡರು.

ಬೋಸರಿಗೆ ಪದವಿ ಪ್ರಶಸ್ತಿಗಳು ವಿಪುಲವಾಗಿ ದೊರೆತುವು. ಕಲಕತ್ತಾ ವಿಶ್ವ ವಿದ್ಯಾಲಯ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿತು. ಆಗಿನ ಭಾರತ ಸರ್ಕಾರ 1903ರಲ್ಲಿ ಸಿ.ಐ.ಇ. ಬಿರುದನ್ನೂ 1911ರಲ್ಲಿ ಸಿ.ಎಸ್.ಐ. ಬಿರುದನ್ನೂ ಪ್ರದಾನಿಸಿತು. 1916ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ ಬಿರುದನ್ನು (ಸರ್) ನೀಡಿ ಗೌರವಿಸಿತು. 1920ರಲ್ಲಿ ಇವರು ರಾಯಲ್ ಸೊಸ್ಶೆಟಿಯ ಸದಸ್ಯರಾಗಿ (ಎಫ್.ಆರ್.ಎಸ್.) ಚುನಾಯಿತರಾದರು.

ಭಾರತದಲ್ಲಿ ಹಿಂದೊಮ್ಮೆ ನಲಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಿದ್ದಂತೆ ಪೂರ್ತಿ ವಿಜ್ಞಾನ ಸಂಶೋಧನೆಗೆ ಮೀಸಲಾದ ಒಂದು ಸಂಸ್ಥೆ ಕಟ್ಟಬೇಕೆಂದು ಬೋಸರು ಕನಸು ಕಾಣುತ್ತಿದ್ದರು. 1917 ನವೆಂಬರ್ 30ರಂದು ಕಲಕತ್ತೆಯಲ್ಲಿ ಬೋಸ್ ಸಂಶೋಧನಸಂಸ್ಥೆ ಪ್ರಾಂಭವಾದಾಗ ಇದು ನನಸಾಯಿತು. ಬೋಸ್ ಇದನ್ನು ದೇಶಕ್ಕೆ ಅರ್ಪಿಸಿ ಜಾತಿ, ಭಾಷೆ, ಲಿಂಗ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಸಂಶೋಧನಕಾರ್ಯ ನಡೆಸಲೆಂದು ಹಾರೈಸಿದರು. ಇವರು ಆಗಾಗ ತಮ್ಮ ಸಂಸ್ಥೆಯಲ್ಲಿ ಪ್ರಬುದ್ಧ ಉಪನ್ಯಾಸÀಗಳನ್ನು ಮಾಡುತ್ತಿದ್ದರು.

ಅವರು ಸಾರ್ವಜನಿಕವಾಗಿ ಮಾಡುತ್ತಿದ್ದ ಉಪನ್ಯಾಸಗಳಲ್ಲಿ ಅವರ ರಾಷ್ಟ್ರ ಪ್ರೇಮ, ಸಾಹಿತ್ಯಾಸಕ್ತಿ ಮತ್ತು ಸಾಂಸ್ಕøತಿಕ ಅಭಿರುಚಿ ಗೋಚರವಾಗುತ್ತವೆ. ಅವರ 70ನೆಯ ವರ್ಧಂತ್ಯುತ್ಸದಲ್ಲಿ ಪ್ರಂಪಂಚದ ಮೂಲೆ ಮೂಲೆಗಳಿಂದ ಅಭಿನಂದನ ಸಂದೇಶಗಳು ಬಂದುವು. ವಿಜ್ಞಾನಿಗಳಷ್ಟೇ ಅಲ್ಲದೆ ರವೀಂದ್ರನಾಥ ಟಾಗೋರರೂ ಜಾರ್ಜ್ ಬರ್ನಾರ್ಡ್ ಷಾ ಮೊದಲಾದ ಜಗತ್ಪ್ರಸಿದ್ಧ ಸಾಹಿತಿಗಳೂ ಅನೇಕ ರಾಜಕಾರಣಿಗಳೂ ಸಂದೇಶಗಳನ್ನು ಕಳಿಸಿದವರಲ್ಲಿ ಸೇರಿದ್ದರು. ಬೋಸರು ಪ್ರಥಮ ದರ್ಜೆಯ ಸಾಹಿತಿಯೂ ಆಗಿದ್ದರು. ಬಂಗಾಲಿ ಭಾಷೆಯಲ್ಲಿ ಲೇಖನಗಳನ್ನೂ ಪತ್ರಗಳನ್ನೂ ಬರೆಯುತ್ತಿದ್ದರು. 1911ರಲ್ಲಿ ವಂಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರದಾಯಿತು. ಅದು ಆ ನಾಡಿನ ಯಾವುದೇ ಸಾಹಿತಿಗೆ ದೊರಕಬಹುದಾದ ಅತ್ಯುಚ್ಚ ಮನ್ನಣೆಯಾಗಿತ್ತು. ಅಧ್ಯಕ್ಷ ಭಾಷಣಕ್ಕೆ ವಿಜ್ಞಾನಿದಲ್ಲಿ ಸಾಹಿತ್ಯ ಎಂಬ ವಿಷಯ ಆಯ್ದುಕೊಂಡು ಎರಡೂ ಕ್ಷೇತ್ರಗಳ ನಡುವಿನ ಸಂಬಂಧ ತಿಳಿಸಿದರು.

ಜಗದೀಶಚಂದ್ರ ಬೋಸರು ಖ್ಯಾತಿ ಶಿಖರದ ತುತ್ತ ತುದಿಗೇರಿದ ಐತಿಹಾಸಿಕ ಸೀಮಾಪುರುಷರಲ್ಲಿ ಒಬ್ಬರಾದರು. ಕೊನೆಯ ದಿನಗಳಲ್ಲಿ ಆರೋಗ್ಯ ಸುಧಾರಣೆಗಾಗಿ ಡಾರ್ಜಿಲಿಂಗಿಗೆ ಹೋಗಿದ್ದರು. 1937 ನವೆಂಬರ್ 30ರಂದು 80ನೆಯ ವರ್ಷದಲ್ಲಿ ಅಲ್ಲಿಯೇ ಅನಾರೋಗ್ಯದಿಂದ ತೀರಿಕೊಂಡರು. (ಆರ್.ಎಸ್.ಬಿ.)