ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೌದ್ಧ ಸಂಸ್ಕೃತ ಕಾವ್ಯಗಳು
ಬೌದ್ಧ ಸಂಸ್ಕøತ ಕಾವ್ಯಗಳು
ಪ್ರಾಚೀನ ಬೌದ್ಧವಾಙ್ಮಯ ಮಟ್ಟಿಗೆ ಪಾಳಿಯಲ್ಲಿದ್ದಿತು. ಧರ್ಮದಲ್ಲಿ ಶಾಖೆಗಳು ಕವಲೊಡೆದಾಗ ಸರ್ವಾಸ್ತಿವಾದಿಗಳು ಸಂಸ್ಕøತವನ್ನೂ ಮಹಾಸಾಂಘಿಕರು ಪ್ರಾಕೃತವನ್ನೂ ಸಮ್ಮಿತೀಯರು ಅಪಭ್ರಂಶವನ್ನೂ ಸ್ಥವಿರವಾದಿಗಳು ಪೈಶಾಚಿಯನ್ನೂ ಬಳಸಲಾರಂಭಿಸಿದರು. ಕ್ರಿಸ್ತಾಬ್ದ ಎರಡನೆಯ ಶತಮಾನದ ಸುಮಾರಿಗೆ ಸರ್ವಾಸ್ತಿವಾದಿಗಳ ತ್ರಿಪಿಟಕಸಾಹಿತ್ಯ ಸಂಸ್ಕøತದಲ್ಲಿ ರಚನೆಯಾಗಿದ್ದಿತು. ಪಾಳಿಯ ನಿಕಾಯಗಳು ಸಂಸ್ಕøತದ ಆಗಮಗಳಾಗಿ ರೂಪ ತಳೆದುವು : ದೀರ್ಘಾಗಮ (ದೀಘೆನಿಕಾಯ), ಮಧ್ಯಮಾಗಮ (ಮಜಿಮ್ಝನಿಕಾಯ), ಏಕೋತ್ತರಾಗಮ (ಅಂಗುತ್ತರನಿಕಾಯ) ಇತ್ಯಾದಿ. ಇದಲ್ಲದೆ ಹೀನಯಾನದವರೇ ಮಹಾವಸ್ತುವನ್ನೂ ಲಲಿತವಿಸ್ತರವನ್ನೂ ರಚಿಸಿದರು. ಕ್ರಿಸ್ತಾಬ್ದ ಎರಡನೆಯ ಶತಮಾನದಲ್ಲಿ ಕನಿಷ್ಕನ ಸಮಸಾಮಯಿಕನಾಗಿದ್ದ ಅಶ್ವಘೋಷ ಬರೆದ ಬುದ್ಧಚರಿತವೆಂಬ ಸಂಸ್ಕøತ ಕಾವ್ಯದ ವಸ್ತು ಲಲಿತವಿಸ್ತರದ ವಸ್ತುವಿನಂತೆಯೇ ಇದೆ. ಇದು ಒಮ್ಮೆ ಭಾರತದಲ್ಲಿ ಮಾತ್ರವಲ್ಲ ನೆರೆನಾಡುಗಳಲ್ಲೆಲ್ಲ ಪ್ರಸಿದ್ಧವಾಗಿದ್ದಿತೆಂದು ಇತ್ಸಿಂಗ್ ಬರೆಯುತ್ತಾನೆ. ದೊರೆತಿರುವ ಪಾಠದಲ್ಲಿ ಹದಿನೇಳು ಸರ್ಗಗಳಿದ್ದು ಬುದ್ಧನ ಜನ್ಮದಿಂದ ಧರ್ಮಚಕ್ರ ಪ್ರವರ್ತನದಲ್ಲಿ ಕಾವ್ಯ ಮುಗಿಯುತ್ತದೆ. ಎರಡರಲ್ಲೂ ಹೀನಯಾನದ ದೀಕ್ಷೆಯೇ ಕಾಣಿಸುತ್ತದೆ. ವಜ್ರಸೂಚೀ ಮತ್ತು ಗಂಡೀಸ್ತೋತ್ರ ಎಂಬವೂ ಅಶ್ವಘೋಷನವೇ ಎಂದು ಸಂಪ್ರದಾಯ. ಅವನ ಶಾರಿಪುತ್ರ ಪ್ರಕರಣವೆಂಬ ಸಂಸ್ಕøತನಾಟಕದ ತುಣುಕುಗಳು ಉಪಲಬ್ಧವಾಗಿವೆ.
ಅಶ್ವಘೋಷನಿಗೆ ಸಮಕಾಲೀನನಾಗಿದ್ದ ಕಿರಿಯ ಕುಮಾರಲಾತ ರಚಿಸಿದ ಕಲ್ಪನಾ ಮಂಡಿತಿಕಾ ಎಂಬ ಅವದಾನಗಳ ಸಂಗ್ರಹವೂ ಕಾವ್ಯಗ್ರಂಥವೇ. ತಕ್ಷಶಿಲೆಯ ಕುಮಾರಲಾತನಿಂದಲೇ ಸೌತ್ರಾಂತಿಕಪಂಥ ಪ್ರವರ್ತಿತವಾಯಿತು. ಅದೇ ಕಾಲದ ಇನ್ನೊಂದು ಪ್ರಭಾವಾಶಾಲಿಯಾದ ಕಾವ್ಯವೆಂದರೆ ಮೈತ್ರೇಯ ವ್ಯಾಕರಣ; ಇದನ್ನು ಬರೆದ ಆರ್ಯಚಂದ್ರ ವೈಭಾಷಿಕದೀಕ್ಷೆಯವ. ಆರ್ಯಶೂರನ ಜಾತಕ ಮಾಲಾ (ಬೋಧಿಸತ್ತ್ವಾವದಾನಮಾಲಾ) ನಾಲ್ಕನೆಯ ಶತಮಾನದಲ್ಲಿ ತುಂಬ ಜನಪ್ರಿಯವಾಗಿದ್ದ ಸಂಸ್ಕøತ ಗ್ರಂಥ. ಇದರಿಂದಾಗಿ ಅವದಾನಸಾಹಿತ್ಯ ಹುಲುಸಾಗಿ ಬೆಳೆಯಿತು. ಅವದಾನ ಕಥೆಗಳು ವಿನಯಪಿಟಕದಲ್ಲೂ ಸೂತ್ರಪಿಟಕದಲ್ಲೂ ಇವೆಯಾದರೂ ಪ್ರಮುಖವಾಗಿ ಅವು ತ್ರಿಪಿಟಬಾಹ್ಯವಾದ ಬೌದ್ಧ ಸಂಸ್ಕøತ ವಾಙ್ಮಯಕ್ಕೆ ಸೇರಿದುವು. ಅವದಾನಶತಕ, ಕರ್ಮಶತಕ, ದಿವ್ಯಾವದಾನ, ದ್ವಾವಿಶಂತ್ಯವದಾನ ಭದ್ರಕಲ್ಪಾವದಾನ ಮುಂತಾದವು ಈ ವಾಙ್ಮಯದಲ್ಲಿ ಪ್ರಸಿದ್ಧವಾಗಿವೆ. ಇಲ್ಲಿ ಬುದ್ಧ ಮನುಷ್ಯನೆಂಬ ನಿಲುವು ಮರೆಯಾಗಿ ಅವತಾರವಿಶೇಷ ಎಂಬ ಕಲ್ಪನೆ ಮೂಡಿಬಂದಿದೆ. ಅವಲೋಕಿತೇಶ್ವರಗುಣ ಕಾರಂಡ-ವ್ಯೂಹಸೂತ್ರದಲ್ಲಂತೂ ಸ್ವಯಂಭುವಾದ ಆದಿಬುದ್ಧನ ಕಲ್ಪನೆ ಸ್ಪಷ್ಟವಾಗಿದೆ. ಸುಖಾವತೀವ್ಯೂಹ, ಪ್ರಜ್ಞಾಪಾರಮಿತಾ ಇವು ಶ್ಲೋಕರೂಪದ ಸಂಸ್ಕøತ ಕಾವ್ಯಗಳು. ದಶಭೂಮಿಕಾಸೂತ್ರವೆಂಬುದು ಗದ್ಯ_ಗಾಥೆಗಳ ಮಣಿ ಪ್ರಾವಾಳ. ಸಮಾಧಿರಾಜ, ಲಂಕಾವತಾರ, ಸುವರ್ಣಪ್ರಭಾವ ಇವೂ ಮಹಾಯಾನ ಪಂಥಕ್ಕೆ ಸೇರಿದ ಗ್ರಂಥಗಳು. (ಎಸ್.ಕೆ.ಆರ್)