ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ಯಾಲಂಟೈನ್, ರಾಬರ್ಟ್ ಮೈಕೇಲ್
ಬ್ಯಾಲಂಟೈನ್, ರಾಬರ್ಟ್ ಮೈಕೇಲ್ 1825-94. ಸ್ಕಾಟಿಷ್ ಕಥೆಗಾರ. ಹದಿವಯಸ್ಸಿನ ಮಕ್ಕಳಿಗೆ ಪ್ರಿಯವಾದ ರೋಮಾಂಚಕಾರಿ, ಅದ್ಭುತ, ಸಾಹಸ ಕಥೆಗಳನ್ನು ಬರೆದಿದ್ದಾನೆ. ಹುಟ್ಟಿದ್ದು ಎಡಿನ್ ಬರ್ಗ್‍ನಲ್ಲಿ. ಈತನ ಸೋದರ ರಾಬರ್ಟ್ ಪ್ರಾಚ್ಯಶಾಸ್ತ್ರ ಪಂಡಿತ.
ಹದಿನಾರನೆಯ ವಯಸ್ಸಿನಲ್ಲೇ ಕೆನಡಾದ ಹಡ್ಸನ್ ಬೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಆರುವರ್ಷಗಳ ಬಳಿಕ ಎಡಿನ್‍ಬರ್ಗ್‍ಗೆ ಹಿಂತಿರುಗಿ ಕಾನ್ಸ್‍ಟಬಲ್ ಅಂಡ್ ಕಂಪನಿ ಎಂಬ ಪ್ರಕಾಶನ ಸಂಸ್ಥೆಯಲ್ಲಿ ಏಳು ವರ್ಷ ಕೆಲಸಮಾಡಿದ. 1848ರಲ್ಲಿ ಲೈಫ್ ಇನ್ ದಿ ವೈಲ್ಡ್ಸ್ ಆಫ್ ನಾರ್ತ್ ಅಮೆರಿಕಾ ಎಂಬ ಮೊದಲ ಪುಸ್ತಕ ಪ್ರಕಟಿಸಿದ. ಹದಿ ಪ್ರಾಯದ ಮಕ್ಕಳಿಗೆ ಹಿಡಿಸುವ ಹಲವಾರು ಸಾಹಸ ಕೌತುಕಮಯ ಕಥೆಗಳನ್ನು 1856ರ ಅನಂತರ ಬರೆದ. ಇವು ಹಲವಾರು ಸಂಪುಟಗಳಲ್ಲಿ ಸಂಕಲಿತವಾಗಿವೆ. ಒಟ್ಟು 80 ಪುಸ್ತಕಗಳನ್ನು ಬರೆದಿದ್ದಾನೆ. ಮೊದಮೊದಲ ಕೃತಿಗಳಲ್ಲಿ ಕೆನಡಾದ ಜೀವನ ಪ್ರತಿಬಿಂಬಿತವಾಗಿದೆ. ಅನಂತರದ ಪುಸ್ತಕಗಳಲ್ಲಿ ಬ್ರಿಟನ್ ಮತ್ತು ಆಫ್ರಿಕಾ ಮುಂತಾದ ಇತರ ಪ್ರದೇಶಗಳ ಸನ್ನಿವೇಶ. ಜೀವನ ಚಿತ್ರ ಮತ್ತು ಸಾಹಸಪೂರ್ಣಪ್ರಸಂಗಗಳು ಪಡಿಮಾಡಿವೆ.
ಈತನ ಕೃತಿಗಳಲ್ಲಿ ದಿ ಯಂಗ್ ಫರ್ ಟ್ರೇಡರ್ಸ್ (1856) ಉಂಗಾವ: ಎ ಟೇಲ್ ಆಫ್ ಎಸ್ಕಿಮೊ ಲ್ಯಾಂಡ್ (1857). ದಿ ಕಾರಲ್ ಐಲ್ಯಾಂಡ್ (1857), ದಿ ಡಾಗ್ ಕ್ರೂಸೋ (1860)-ಇವು ಜನಪ್ರಿಯವಾಗಿವೆ. ಪರ್ಸನಲ್ ರೆಮಿನಿಸೆನ್ಸಸ್ ಆಫ್ ಬಂಕ್ ಮೇಕಿಂಗ್ (1893) ಎಂಬುದು ಈತನ ಆತ್ಮ ವೃತ್ತಾಂತ. ರೋಮ್ ನಗರದಲ್ಲಿ ಮರಣ. (ಕೆ.ಬಿ.ಪಿ.)