ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ಯಾಲೀಯಾರಿಕ್ ದ್ವೀಪಗಳು

ವಿಕಿಸೋರ್ಸ್ದಿಂದ

ಬ್ಯಾಲೀಯಾರಿಕ್ ದ್ವೀಪಗಳು - ಸ್ಪೇನಿನ ಪೂರ್ವ ತೀರದ ಬಳಿ, ಅದಕ್ಕೆ 80 ಕಿಮೀ-204 ಕಿಮೀ ದೂರದಲ್ಲಿ, ಪಶ್ಚಿಮ ಮೆಡಿಟರೇನಿಯನ್ ಸಮುದ್ರದಲ್ಲಿ ಇರುವ ದ್ವೀಪಸ್ತೋಮ. ಈ ದ್ವೀಪಗಳನ್ನು ಒಟ್ಟಾಗಿ ಸ್ಪೇನಿನ ಬ್ಯಾಲೀಯಾರಿಸ್ ಪ್ರಾಂತವಾಗಿ ರಚಿಸಲಾಗಿದೆ. ದ್ವೀಪಗಳ ಒಟ್ಟು ವಿಸ್ತೀರ್ಣ 5.014 ಚಕಿಮೀ. ಜನಸಂಖ್ಯೆ 5,58,287 (1970), ಪ್ರಾಂತ್ಯದ ಆಡಳಿತ ಕೇಂದ್ರ ಪಾಲ್ಮ.

ಬ್ಯಾಲೀಯಾರಿಕ್ ದ್ವೀಪಗಳನ್ನು ಭೌತಿಕವಾಗಿ ಎರಡು ನಿರ್ದಿಷ್ಟ ಗುಂಪುಗಳಾಗಿ ವಿಂಗಡಿಸಬಹುದು. ಪೂರ್ವ ಭಾಗದ ದ್ವೀಪಗಳ ಗುಂಪು ಈ ದ್ವೀಪ ಸ್ತೋಮದ ಪ್ರಧಾನ ವಿಭಾಗ. ಮಜೋರ್ಕ, ಮಿನಾರ್ಕ ಮತ್ತು ಕಬ್ರಿರ ದ್ವೀಪಗಳು ಈ ವಿಭಾಗದಲ್ಲಿವೆ. ಇವುಗಳ ಪೈಕಿ ಕಬೆರ ಚಿಕ್ಕದು. ಪಶ್ಚಿಮ ವಿಭಾಗದ ದ್ವೀಪಗಳಿಗೆ ಹಿಂದೆ ಪೈನ್ ದ್ವೀಪಗಳೆಂದು ಹೆಸರಿತ್ತು. ಈ ವಿಭಾಗದಲ್ಲಿ ಈವೀಜû, ಫಾಮೆಂಟೆರ ಹಾಗೂ ಹಲವು ಕಿರು ದ್ವೀಪಗಳಿವೆ. ಸ್ಪೇನ್ ಒಳ ನಾಡಿನಲ್ಲಿ ಹಬ್ಬಿರುವ ಪರ್ವತ ಶ್ರೇಣಿಗಳ ಸಮುದ್ರಾಂತರ ಚಾಚುಗಳಿಂದ ಹೊಮ್ಮಿರುವ ದ್ವೀಪಗಳು ಇವು. ಸಾಮಾನ್ಯವಾಗಿ ಇಲ್ಲಿ ನೆಲ ಸಮತಲ ಹಾಗೂ ತಗ್ಗಾಗಿದೆ. ಸುತ್ತ ಮತ್ತು ನಡುವೆ ಏರಿಳಿಯುವ ಬೆಟ್ಟಸಾಲುಗಳೂ ಕಣಿವೆಗಳೂ ಇವೆ.

ಬ್ಯಾಲೀಯಾರಿಕ್ ದ್ವೀಪಗಳಲ್ಲಿ ಅನೇಕ ಸಂಸ್ಕøತಿಗಳ ಕುರುಹುಗಳಿವೆ. ಒರಟುಗಲ್ಲುಗಳಿಂದ ಗೋಪುರಗಳ ಮಾದರಿಯ ನಿರ್ಮಾಣಗಳ ಪ್ರಾಗೈತಿಹಾಸಿಕ ಜನರ ಟಾಲಾಯೋಟ್ ಸಂಸ್ಕøತಿ ಹೆಚ್ಚು ಬದಲಾವಣೆಗಳಿಲ್ಲದೆ ಸಾಗಿಬಂದಿದ್ದರೂ ಮೆಡಿಟರೇನಿಯನ್ ಸಮುದ್ರದಲ್ಲಿ ಈ ದ್ವೀಪಗಳಿರುವ ಭಾಗ ಪರಕೀಯರ ಗಮನವನ್ನು ಸೆಳೆದು, ಇವು ಪೌರಸ್ತ್ಯ ಜನರ ನಾಗರಿಕತೆಗಳ ಪ್ರಭಾವಕ್ಕೆ ಒಳಪಟ್ಟವು. ಪ್ರಾಚೀನ ಜನರ ಕಂಚಿನ ಖಡ್ಗ, ಒಂದು ಮೊನೆಯ ಹಾಗೂ ಎರಡು ಮೊನೆಗಳ ಕೊಡಲಿಗಳು, ಪ್ರಾಣಿಗಳ ವಿಗ್ರಹ ಮೊದಲಾದ ಅವಶೇಷಗಳು ಪುರಾವಸ್ತು ಶೋಧನೆಗಳಲ್ಲಿ ದೊರಕಿವೆ. ಈ ದ್ವೀಪಗಳು ಕಾರ್ತೇಜಿನಿಯನರು. ರೋಮನರು, ವ್ಯಾಂಡಲರು, ತುರ್ಕರು ಹಾಗೂ ಸ್ಪೆನಿನವರ ಪ್ರಭುತ್ವಕ್ಕೆ ಒಳಪಟ್ಟಿದುವು. ರೋಮ್ ಚಕ್ರಾಧಿಪತ್ಯದ 5 ಶತಮಾನಗಳ ಆಡಳಿತದಲ್ಲಿ ಬ್ಯಾಲೀಯಾರಿಕ್ ದ್ವೀಪಗಳಲ್ಲಿ ಶಾಂತಿ ನೆಲಸಿದ್ದು ಇವು ಪ್ರಗತಿ ಹೊಂದಿದುವು. ಇವನ್ನು 465ರಲ್ಲಿ ವ್ಯಾಂಡಲರೂ 534ರಲ್ಲಿ ಬಿeóÁಂಟಿಯನರೂ ಆಕ್ರಮಿಸಿಕೊಂಡರು. 9ನೆಯ ಶತಮಾನದಲ್ಲಿ ತುರ್ಕರು (ಮೂರ್ಸ್) ಮತ್ತು ನಾರ್ಮನರು ಪದೇ ಪದೇ ದಾಳಿ ನಡೆಸುತ್ತಿದ್ದರು. 903ರಲ್ಲಿ ಈ ದ್ವೀಪಗಳು ಕಾರ್ಡೋಬದ ಕಲೀಫರ ವಶವಾದುವು. ತುರ್ಕರಿಂದ ಇಲ್ಲಿ ವ್ಯವಸಾಯ. ನೀರಾವರಿ ಪ್ರಗತಿ ಹೊಂದಿದುವು. ಅವರು ರೂಢಿಗೆ ತಂದ ಏತದ ನೀರಾವರಿ ವ್ಯವಸ್ಥೆ ಇಂದಿಗೂ ಇದೆ. ಈಶಾನ್ಯ ಸ್ಪೇನ್ ಭಾಗದ ಆರಗಾನಿನ 1ನೆಯ ಜೇಮ್ಸ್ ದೊರೆ 1229-35ರಲ್ಲಿ ಮಜೋರ್ಕ್ ಮತ್ತು ಈ ಜೀಜ ದ್ವೀಪಗಳನ್ನು ಗೆದ್ದುಕೊಂಡ. ಅವನ ವಂಶದ 3ನೆಯ ಅಲಾನ್ಸೊ 1286ರಲ್ಲಿ ಮಿನಾರ್ಕವನ್ನು ವಶಪಡಿಸಿಕೊಂಡ. ಈ ದ್ವೀಪಗಳು 1349ರ ತನಕ ಭಾಗಶಃ ಸ್ವತಂತ್ರವಾಗಿದ್ದು, ಮಧ್ಯಯುಗದ ಭೂಪಟರೇಖನ ಮತ್ತು ನೌಕಾಯಾನ ವಿಜ್ಞಾನ ಕೇಂದ್ರಗಳಾಗಿದ್ದುವು. 16ನೆಯ ಶತಮಾನದಲ್ಲಿ ಕಡಲ್ಗಳ್ಳರ ಹಾವಳಿಯಿದ್ದರೂ ದ್ವೀಪಗಳಲ್ಲಿ ಜನವಸತಿ ಇತ್ತು. 1708 ರಲ್ಲಿ ಬ್ರಿಟಿಷರು ಮಿನಾರ್ಕ ದ್ವೀಪವನ್ನು ಆಕ್ರಮಿಸಿಕೊಂಡರು. ಅದು 1708-56, 1763-82 ಹಾಗೂ 1798-1802ರಲ್ಲಿ ಅವರ ವಶದಲ್ಲಿತ್ತು; ಮುಂದೆ ಆಮಿಯೆನ್ಸ್ ಕೌಲಿನ ಪ್ರಕಾರ (1802) ಸ್ಪೇನಿಗೆ ಸೇರಿತು.

ವ್ಯವಸಾಯ ಮತ್ತು ಜಾನುವಾರು ಸಾಕಣೆ ಇಲ್ಲಿಯ ನಿವಾಸಿಗಳ ಕಸಬು. ಆಹಾರ ಧಾನ್ಯ ಹಾಗೂ ಹಣ್ಣುಗಳು ಬೆಳೆಯುತ್ತವೆ. ವೈನ್ ತಯಾರಿಕೆ, ಮೀನುಗಾರಿಕೆ ಮತ್ತು ಕುಶಲ ಕೆಲಸ ಇತರ ಕಸಬುಗಳು. ಇಲ್ಲಿ ಲೇಸ್ ಪಟ್ಟಿ ಮತ್ತು ಕಸೂತಿ ವಸ್ತು ತಯಾರಾಗುತ್ತವೆ. ಬ್ಯಾಲೀಯಾರಿಕ್ ದ್ವೀಪಗಳು ಪ್ರವಾಸಿಗಳನ್ನು ಆಕರ್ಷಸುತ್ತವೆ. ಪಶ್ಚಿಮ ಯೂರೋಪಿನ ಜನರು ಈ ದ್ವೀಪಗಳಿಗೆ ಬರುತ್ತಾರೆ. (ವಿ.ಜಿ.ಕೆ.)