ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ಯೂರಿ, ಜಾನ್ ಬ್ಯಾಗ್ನೆಲ್
ಗೋಚರ
ಬ್ಯೂರಿ, ಜಾನ್ ಬ್ಯಾಗ್ನೆಲ್ 1861-1927. ಐರಿಷ್ ಇತಿಹಾಸಕಾರ. ಮೋನಗನ್ ಕೌಂಟಿಯಲ್ಲಿ 1861 ಅಕ್ಟೋಬರ್ 16ರಂದು ಜನನ. ತಂದೆ ಒಬ್ಬ ಪಾದ್ರಿ. ಇವನು ಡಬ್ಲಿನ್ನಿನ ಟ್ರಿನಿಟಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಉನ್ನತ ಶ್ರೇಣಿಯ ಪದವಿ ಪಡೆದ (1882). 1885ರಲ್ಲಿ ಅದರ ಫೆಲೋ ಆಗಿ ಆಯ್ಕೆಯಾದ. ಎಂಟು ವರ್ಷಗಳ ಅನಂತರ ಅಲ್ಲಿ ಆಧುನಿಕ ಇತಿಹಾಸದ ಪ್ರಾಧ್ಯಾಪಕನಾದ. ಕೇಂಬ್ರಿಜ್ ನಲ್ಲಿ ಆಧುನಿಕ ಇತಿಹಾಸದ ರೀಜಿಅಸ್ ಪ್ರಾಧ್ಯಾಪಕನಾಗಿ 1902ರಲ್ಲಿ ನೇಮಕಗೊಂಡು ಬಾಳಿನ ಕೊನೆಯ ತನಕವೂ ಆ ಹುದ್ದೆಯಲ್ಲಿದ್ದ. ಪೂರ್ವ ರೋಮನ್ ಸಾಮ್ರಾಜ್ಯದ ಬಗ್ಗೆ ಇವನದು ಅಧಿಕಾರ ವಾಣಿ. ಗ್ರೀಕ್ ಪಾಶ್ಚಾತ್ಯ ರೋಮನ್ ಮತ್ತು ಬಿಜಾಂಟೀನ್ ಇತಿಹಾಸ ಕುರಿತಂತೆ ಕೃತಿಗಳನ್ನು ರಚಿಸಿದ. ಗಿಬ್ಸನ್ನನ ಡಿಕ್ಲೈನ್ ಅಂಡ್ ಫಾಲ್ ಕೃತಿಯನ್ನು ಕೂಡ ಸಂಪಾದಿಸಿದ. 1927 ಜೂನ್ 1 ರಂದು ರೋಮಿನಲ್ಲಿ ತೀರಿಕೊಂಡ. (ಎಚ್.ಜಿ.ಬಿ.)