ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಯೋಫೈಟ

ವಿಕಿಸೋರ್ಸ್ದಿಂದ

ಬ್ರಯೋಫೈಟ ಸಸ್ಯಸಾಮ್ರಾಜ್ಯದ ಶೈವಲಗಳಿಗೂ (ಆಲ್ಜೀ) ಜರೀಗಿಡಗಳಿಗೂ (ಫರ್ನ್) ನಡುವಣ ವಿಭಾಗ ಅಥವಾ ಎಂಬ್ರಿಯೋಫೈಟ ವಿಭಾಗದ ಮೊದಲನೆಯ ವರ್ಗ. ಇದರಲ್ಲಿ ವೈವಿಧ್ಯಮಯ ಲಕ್ಷಣಗಳುಳ್ಳ ಸಾವಿರಾರು ಸಸ್ಯಪ್ರಭೇದಗಳಿವೆ. ಇದು ಮುಖ್ಯವಾಗಿ ಯಕೃತ್ತಿನಾಕಾರದ ಸಸ್ಯಗಳನ್ನು ಮತ್ತು ಹಾವಸೆಗಳನ್ನು ಒಳಗೊಂಡ ಸುಸ್ಪಷ್ಟ ವಿಭಾಗ. ಜರೀಗಿಡಗಳಂತೆ ಇವು ಕೂಡ ಉಭಯ ಜೀವಿಗಳು.

ಈ ವರ್ಗದ ಸಸ್ಯಗಳು ಜೌಗುಭೂಮಿ, ನದೀಗಿಡ, ಹಳ್ಳಗಳ ದಂಡೆ ಇತ್ಯಾದಿ ತೇವ ಹೆಚ್ಚಾಗಿರುವಂಥ ನೆಲಗಳಲ್ಲಿ ಬೆಳೆಯುತ್ತವೆ. ಇವುಗಳ ಪೈಕಿ ಕೆಲವು ಬಗೆಗಳು ಶುಷ್ಕ ವಾತಾವರಣವನ್ನು ಬಲುಮಟ್ಟಿಗೆ ತಡೆದುಕೊಳ್ಳಬಲ್ಲವು. ಆದರೂ ಅವುಗಳ ಹುಲುಸು ಬೆಳೆವಣಿಗೆಗೆ ತೇವ ಹೆಚ್ಚಾಗಿರುವ ಪರಿಸ್ಥಿತಿಯೇ ಬೇಕು. ಇನ್ನು ಕೆಲವು ಬಗೆಗಳು ನೀರಿನಲ್ಲೇ ಬೆಳೆಯುತ್ತವೆ. ಬ್ರಯೋಪೈಟ್‍ಗಳು ಪ್ರಪಂಚದ ಎಲ್ಲೆಡೆಗಳಲ್ಲೂ ಕಾಣಬರುತ್ತವೆ.

ಬ್ರಯೋಪೈಟ್‍ಗಳು ಕಲ್ಲುಬಂಡೆಗಳ ಮೇಲ್ಮೈಯನ್ನು ಸಸ್ಯಗಳಿಗೆ ವಾಸಯೋಗ್ಯವಾಗಿಸುವಿಕೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ ಮತ್ತು ಕಲ್ಲುಬಂಡೆಗಳ ಶಿಥಿಲೀಕರಣದಲ್ಲೂ ಸಹಾಯಮಾಡುತ್ತವೆ. ಅಂತೆಯೇ ಕೊಚ್ಚಿಹೋದ ಮಣ್ಣಿನಲ್ಲಿ ಬೆಳೆದು ಭೂ ಸವೆತವನ್ನು ಗಮನಾರ್ಹವಾಗಿ ತಡೆಯುತ್ತವೆ. ಜೌಗುಹಾವಸೆಗಳಿಂದ ದೊರೆಯುವ ಸಸ್ಯಾಂಗಾರ ಒಂದು ಅಮೂಲ್ಯ ಉರುವಲು. ಅಲ್ಲದೆ ಇದನ್ನು ಹುಲ್ಲುಹಾಸಿನಂತೆ ಬಳಸಿ ಕುದುರೆ ಲಾಯಗಳಲ್ಲಿ ನಾತ ಹೊರಡುವುದನ್ನು ತಡೆಯಬಹುದು. ಜೀವಂತ ಗಿಡಗಳನ್ನು ದೂರದೇಶಗಳಿಗೆ ಸಾಗಿಸುವಾಗ, ಕೆಡದಂತೆ ಪಿಂಡಿಕಟ್ಟಲು ಸಸ್ಯಾಂಗಾರ ತುಂಬ ಉಪಯುಕ್ತವಸ್ತು. ಕೆಲಹಾವಸೆಗಳನ್ನು ಯೂರೊಪಿನಲ್ಲಿ ಪೊರಕೆಗಳು, ದೂಳ್ತೊಡಪಗಳು (ಬ್ರಷ್‍ಗಳು) ಮತ್ತು ಮತ್ತೆಗಳನ್ನು ತಯಾರಿಸಲು ಉಪಯೋಗಿಸುವುದಿದೆ.

ಅನೇಕ ಬ್ರಯೋಫೈಟ್‍ಗಳ ಸಸ್ಯದೇಹಕ್ಕೆ ಥ್ಯಾಲಸ್ [ಎಲೆಯಂತಾಗಲಿ ಅಥವಾ ಕಾಂಡದಂತಾಗಲಿ ಇಲ್ಲದ್ದು] ಎಂದು ಹೆಸರು. ಇದು ಪಟ್ಟಿಯಂತಿದ್ದು ಆಧಾರಸ್ಥಳಕ್ಕೆ ಒತ್ತಿಕೊಂಡಿರುತ್ತದೆ. ಮತ್ತೆ ಕೆಲವು ಬ್ರಯೋಪೈಟ್‍ಗಳಲ್ಲಿ ಮುಖ್ಯವಾಗಿ-ಹಾವಸೆಗಳಲ್ಲಿ-ದೇಹ ಒಂದು ಪರ್ಣಾವೃತಕಾಂಡದಂತಿದೆ. ದೇಹ ಥ್ಯಾಲಸ್ ಆಗಿರಲಿ ಪರ್ಣಾವೃತವಾಗಿರಲಿ, ಅದು ಮೃದುವಾಗಿಯೂ ಹಸಿರಾಗಿಯೂ ಇರುವುದರಿಂದ ಸ್ವತಂತ್ರ ಜೀವಿ. ಬುಡದಲ್ಲಿ ಬೇರುರೋಮಗಳಂತಿರುವ ರೈeóÁಯಿಡ್‍ಗಳಿವೆ. ಸಸ್ಯವನ್ನು ಮಣ್ಣಿನಲ್ಲಿ ನೆಲೆಗೊಳಿಸುವುದಕ್ಕೂ ನೆಲದಿಂದ ನೀರು ಖನಿಜಗಳನ್ನು ಹೀರುವುದಕ್ಕೂ ಇದು ಸಹಾಯಕವಾಗಿದೆ. ದೇಹದ ಹೊರ ಆಕಾರ ಹಾಗೂ ಒಳರಚನೆ ಸರಳರೀತಿಯದು. ಇಡೀ ದೇಹದ ತುಂಬ ಒಂದೇ ರೀತಿಯ ಕೋಶಗಳಿವೆ. ಆದರೆ ಹಲವು ಪ್ರಭೇದಗಳಲ್ಲಿ ಸರಳ ಹೊರ ಆಕಾರವಿದ್ದು ಜಟಿಲ ಎನ್ನಬಹುದಾದ ಒಳರಚನೆಯಿದೆ. ತಳಭಾಗದಲ್ಲಿ ಆಹಾರ ಶೇಖರಣೆಯೇ ಮುಖ್ಯಕಾರ್ಯವಾಗಿರುವ ಮತ್ತು ಮೇಲ್ಭಾಗದಲ್ಲಿ ದ್ಯುತಿಸಂಶ್ಲೇಷಣೆಯೇ ಮುಖ್ಯ ಕಾರ್ಯವಾಗಿರುವ ಕೋಶಗಳುಂಟು. ಪರ್ಣಾವೃತ್ತ ಬ್ರಯೋಫೈಟ್‍ಗಳಲ್ಲಿ ಕಾಂಡದಂತಿರುವ ಅಕ್ಷದ ಮೇಲೆ ಎಲೆಗಳಂತಿರುವ ಭಾಗಗಳು ಸುರುಳಿಯಾಕಾರದಲ್ಲಿ ಹರಡಿರುತ್ತವೆ. ಯಾವ ಬ್ರಯೋಫೈಟ್‍ಗಳಲ್ಲಿ ಸಸ್ಯದಲ್ಲೂ ವಾಹಕ ಅಂಗಾಂಶಗಳಿಲ್ಲ.

ಬ್ರಯೋಫೈಟ್‍ಗಳಲ್ಲಿ ಲೈಂಗಿಕ ಸಂತಾನೋತ್ತಿಯೂ ನಡೆಯುತ್ತದೆ. ಗಂಡು ಜನನಾಂಗ ಆಂಥೆರಿಡಿಯಮ್. ಇದು ದೃಢವಾಗಿದ್ದು ಉದ್ದವಾದ ಗದೆಯಂತೆಯೋ ಗೋಳದಂತಯೋ ಇದೆ. ಇದರೊಳಗೆ ಸಾವಿರಾರು ಪುರುಷಾಣುಗಳು ಉತ್ಪತ್ತಿಯಾಗುವುವು. ಇವು ಆಂಥೆರಿಡಿಯಮ್ಮಿನ ತುದಿಯಲ್ಲಿರುವ ಸೂಕ್ಷ್ಮ ರಂಧ್ರದ ಮೂಲಕ ಹೊರಬಂದು ನೀರಿನಲ್ಲಿ ಸ್ವೇಚ್ಛೆಯಾಗಿ ಈಜುತ್ತ ಹೆಣ್ಣು ಜನನಾಂಗವನ್ನರಸುತ್ತ ಚಲಿಸುವುವು. ಹೆಣ್ಣು ಜನನಾಂಗಕ್ಕೆ ಆರ್ಕಿಗೋನಿಯಮ್ ಎಂದು ಹೆಸರು. ಇದರ ಆಕಾರ ಬುದ್ದಲಿಯಂತೆ, ಇದರಲ್ಲಿರುವ ದುಂಡನೆಯ ತಳಭಾಗವನ್ನು ವೆಂಟರ್ ಎಂದೂ ಕೊಳವೆಯಂತಿರುವ ಮೇಲ್ಭಾಗವನ್ನು ಕಂಠ ಎಂದೂ ಕರೆಯುತ್ತಾರೆ. ವೆಂಟರ್‍ನಲ್ಲಿ ಒಂದೇ ಒಂದು ಅಂಡಾಣು ಉಂಟು. ಕಂಠದಲ್ಲಿ ಕಂಠನಾಳ ಕೋಶಗಳೂ ಕಂಠದ ತುದಿಯಲ್ಲಿ ನಾಲ್ಕು ಕೋಶಗಳಿಂದಾದ ಮುಚ್ಚಳವೂ ಇವೆ. ಪ್ರಬುದ್ಧಾವಸ್ಥೆಗೆ ಬಂದ ಆರ್ಕಿಗೋನಿಯಮ್ಮಿನ ವೆಂಟ್ರಲ್ ನಾಳಕೋಶ ಮತ್ತು ಕಂಠನಾಳ ಕೋಶಗಳು ಛಿದ್ರವಾಗಿ ಲೋಳೆಯಂಥ ವಸ್ತು ಉಂಟಾಗುತ್ತದೆ. ಈ ಲೋಳೆವಸ್ತು ನೀರನ್ನು ಹೀರಿಕೊಂಡು ಉಬ್ಬಿ, ಕಂಠ ಅಗಲವಾಗಿ ತೆರೆದುಕೊಳ್ಳುವಂತೆ ಮಾಡುತ್ತದೆ. ಪುರುಷಾಣು ಹಾಗೂ ಅಂಡಾಣುಗಳ ಮಿಲನ, ಸಸ್ಯಗಳು ನೀರಿನಲ್ಲಿ ಮುಳುಗಿರುವಾಗ ಅಥವಾ ಸಾಕಷ್ಟು ನೀರಿರುವಾಗ ಮಾತ್ರ ಸಾಧ್ಯ. ಪುರುಷಾಣು ಆರ್ಕಿಗೋನಿಯಮ್‍ನ ಕಂಠನಾಳದಲ್ಲಿರುವ ಲೋಳೆಯ ಮೂಲಕ ಅಂಡಾಣುವಿನ ಬಳಿಗೆ ಹೋಗಿ ಅದರೊಡನೆ ಕೂಡುತ್ತದೆ. ಆರ್ಕಿಗೋನಿಯಮ್ ಮ್ಯಾಲಿಕ್ ಆಮ್ಲ ಎಂಬ ರಾಸಾಯನಿಕ ಚೋದಕವನ್ನು ಉತ್ಪಾದಿಸಿ ಪುರುಷಾಣುಗಳನ್ನು ಆಕರ್ಷಿಸುತ್ತದೆ.

ನಿಷೆ ಚಿತ ಅಂಡಾಣು ಸ್ಪೋರೊಫೈಟ್ ಎಂಬ ಪೀಳಿಗೆಯ ಮೊದಲನೆಯ ಕೋಶ. ಈ ಕೋಶ ಅನೇಕ ವಿಭಜನೆಗಳ ಮೂಲಕ ಅನೇಕ ಕೋಶಗಳಿಂದ ಕೂಡಿದ ಭ್ರೂಣವಾಗುತ್ತದೆ.

ಭ್ರೂಣ ಬೆಳೆದು ಸ್ಪೋರೊಫೈಟ್ ಆಗುತ್ತದೆ. ಬಹುಪಾಲು ಬ್ರಯೋಫೈಟ್‍ಗಳ ಸ್ಪೋರೊಫೈಟ್‍ಗಳಲ್ಲಿ ಮೂರುಭಾಗಗಳುಂಟು. ಮೊದಲನೆಯದು ಪಾದದಂತಿರುವ ಬುಡ. ಇದರ ಕೆಲಸ ಗ್ಯಾಮಿಟೊಫೈಟ್‍ನಿಂದ ಆಹಾರ ಹೀರುವಿಕೆ. ಎರಡನೆಯದು ತೊಟ್ಟಿನಂತಿರುವ ಮಧ್ಯಭಾಗ. ಆಹಾರವನ್ನು ಬುಡದಿಂದ ತುದಿಯಲ್ಲಿರುವ ಬೀಜಕೋಶಕ್ಕೆ ಸಾಗಿಸುವುದು ಮತ್ತು ಬೀಜಕೋಶವನ್ನು ಸುತ್ತಲಿನ ರಕ್ಷಕ ಕವಚಗಳಿಂದ ಹೊರತಳ್ಳುವುದು ಇದರ ಕಾರ್ಯ. ಮೂರನೆಯ ಹಾಗೂ ಮೇಲ್ತುದಿಯ ಭಾಗ ಪೊರೆಚೀಲ ಅಥವಾ ಬೀಜಕೋಶ. ಕೆಲವು ಬ್ರಯೊಪೈಟ್‍ಗಳ ಇಡೀ ಸ್ಪೋರೋ ಕೇವಲ ಬೀಜಕೋಶದಿಂದಾಗಿರುತ್ತದೆ. ಬೀಜಕೋಶದ ಕೆಲವು ಕೋಶಗಳು ಮಯೋಸಿಸ್ ರೀತಿಯ ವಿಭಜನೆ ಹೊಂದಿ ಬೀಜಕಣ ಅಥವಾ ಬೀಜಾಣುಗಳಾಗುತ್ತವೆ. ಸ್ಪೋರೊಫೈಟ್ ತನ್ನ ಆಹಾರಕ್ಕೋಸ್ಕರ ಗ್ಯಾಮಿಟೊಫೈಟನ್ನು ಪೂರ್ಣವಾಗಿ ಅಥವಾ ಸ್ವಲ್ಪಮಟ್ಟಿಗೆ ಅವಲಂಬಿಸುತ್ತದೆ. ಬೀಜಾಣು ಗ್ಯಾಮಿಟೋಫೈಟ್ ಎಂಬ ತಲೆಮಾರಿನ ಮೊದಲ ಕೋಶ. ಇದು ಬಹುಪಾಲು ಬ್ರಯೋಪೈಟ್‍ಗಳಲ್ಲಿ ನೇರವಾಗಿ ಗ್ಯಾಮಿಟೊಫೈಟ್ ಆಗುತ್ತದೆ. ಕೆಲವು ಬ್ರಯೋಫೈಟ್‍ಗಳಲ್ಲಿ ಸರಳಾಕೃತಿಯ ಪ್ರೋಟೊನೀಮ ಎಂಬ ಘಟ್ಟದ ಮೂಲಕ ಗ್ಯಾಮಿಟೊಫೈಟ್ ಆಗುತ್ತದೆ.

ಸಸ್ಯವಿಕಾಸ ದೃಷ್ಟಿಯಿಂದ ನೋಡಿದರೆ, ಬ್ರಯೋಫೈಟ್ ಶೈವಲಗಳು ಮತ್ತು ಜರೀಗಿಡಗಳ ಮಧ್ಯೆ ಬರುವ ವಿಭಾಗ ಎನ್ನಬಹುದು. ಆದರೆ ಬ್ರಯೋಫೈಟ ವಿಭಾಗದ ಯಾವ ಪ್ರಭೇದವೂ ಶೈವಲಗಳಲ್ಲಿ ಯಾವ ನಿರ್ದಿಷ್ಟ ಸಸ್ಯದೊಂದಿಗೂ ನೇರಸಂಪರ್ಕ ಪಡೆದಿಲ್ಲ. ಹಾಗೆಯೇ ಬ್ರಯೋಫೈಟ ಮತ್ತು ಜರೀಗಿಡಗಳ ಮಧ್ಯದ ಸಂಪರ್ಕವೂ ಬಹು ಕಷ್ಟಸಾಧ್ಯ. ಏಕೆಂದರೆ ಈ ವಿಭಾಗಗಳ ನಡುವೆ ಮಧ್ಯವರ್ತಿಗಳಾಗಬಲ್ಲ ಸಸ್ಯಗಳಾಗಲೀ ಅವುಗಳ ಪಳೆಯುಳಿಕೆಗಳಾಗಲೀ ಸಿಕ್ಕಿಲ್ಲ. ಬ್ರಯೋಫೈಟ್‍ಗಳ ಮೂಲ ಚರ್ಚಾಸ್ಪದ ವಿಷಯ. ಒಂದು ವಾದದ ಪ್ರಕಾರ ಜರೀಗಿಡಗಳ ಗುಂಪಿನ ಸಸ್ಯಗಳು ಕ್ಷೀಣಿಸಿ, ಇಳಿಮುಖ ವಿಕಾಸದ ಮೂಲಕ ಬ್ರಯೋಫೈಟ್‍ಗಳಾಗಿವೆ. ಮತ್ತೊಂದು ವಾದದ ಪ್ರಕಾರ ಕೆಲ ಶೈವಲಗಳು ವೃದ್ಧಿಸಿ ಏರುಮುಖ ವಿಕಾಸದ ಮೂಲಕ ಬ್ರಯೋಫೈಟ್‍ಗಳಾಗಿವೆ.

ಬ್ರಯೋಫೈಟ್ ವಿಭಾಗವನ್ನು ಮೂರು ವರ್ಗಗಳನ್ನಾಗಿ ವರ್ಗೀಕರಿಸಲಾಗಿದೆ.

1 ಹೆಪ್ಯಾಟಿಕಾಪ್ಸಿಡ ಅಥವಾ ಹೆಪ್ಯಾಟಿಕ ಉದಾಹರಣೆಗೆ ರಿಕ್ಸಿಯ, ಮಾರ್ಕಾಂಷಿಯ ಇತ್ಯಾದಿ.

2 ಆಂಥೋಸಿರೋಟಾಪ್ಸಿಡ ಅಥವಾ ಆಂಥೋಸಿರೋಟೀ ಉದಾಹರಣೆಗೆ ಆಂಥೋಸಿರಾಸ್.

3 ಬ್ರಯಾಪಿಡ ಅಥವಾ ಮಸ್ಸೈ ಉದಾಹರಣೆಗೆ ಜೌಗುಹಾವಸೆ, ಹಾವಸೆ ಮುಂತಾದವು.

(ಟಿ.ಎಸ್.ಸಿ.ಎಸ್.)