ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಗಿರಿ 1

ವಿಕಿಸೋರ್ಸ್ದಿಂದ

ಬ್ರಹ್ಮಗಿರಿ 1

ಕರ್ನಾಟಕ ರಾಜ್ಯದ, ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿರುವ ಒಂದು ಗಿರಿಶಿಖರ. ಕೊಡಗು ಜಿಲ್ಲೆಯನ್ನು ನಾಲ್ಕು ದಿಕ್ಕುಗಳಿಂದ ಆವರಿಸಿರುವ ಪಶ್ಚಿಮ ಘಟ್ಟದ ಪರ್ವತಾವಳಿಯ ಶಾಖೆಗಳಲ್ಲಿ ಇದು ತುಂಬ ಮಹತ್ವದ್ದಾಗಿದೆ. ಬೇಂಗುನಾಡ್ ಪರ್ವತಶ್ರೇಣಿ ಮಡಿಕೇರಿ ಸಮೀಪ ಆರಂಭವಾಗಿ, ಪಶ್ಚಿಮಾಭಿಮುಖವಾಗಿ ಸಾಗಿ, ಮಡಿಕೇರಿ ತಾಲ್ಲೂಕಿನ ತಾವುನಾಡ್ ಸಮೀಪ ಪಶ್ಚಿಮ ಘಟ್ಟವನ್ನು ಸೇರುತ್ತದೆ. ಈ ಸ್ಥಳದಲ್ಲಿ ಬ್ರಹ್ಮಗಿರಿ ಇದೆ. ಇದರ ಎತ್ತರ ಸುಮಾರು 1745 ಮೀ. ಅಧಿಕ ಮಳೆ ಹಾಗೂ ಖನಿಜಮಿಶ್ರಿತ ಜಂಬುಮಣ್ಣಿನಿಂದಾಗಿ ಇಲ್ಲಿ ದಟ್ಟ ಕಾಡಿದೆ. ನಿತ್ಯ ಹರಿದ್ವರ್ಣ ಅರಣ್ಯದ ಮುಖ್ಯ ಸಸ್ಯವರ್ಗಗಳಲ್ಲೊಂದಾದ ಬಿದಿರು ಈ ಬೆಟ್ಟದಲ್ಲಿ ವಿಫುಲವಾಗಿ ಬೆಳೆಯುತ್ತದೆ.

ಬ್ರಹ್ಮಗಿರಿ ಕಾವೇರಿ ಮತ್ತು ಕನ್ನಿಕಾ ನದಿಗಳ ಉಗಮಸ್ಥಾನ. ಈ ಗಿರಿಯ ನೆತ್ತಿಮೇಲೆ ನಿಂತು ಸುತ್ತಲೂ ಕಣ್ಣಾಡಿಸಿದರೆ ಕುದುರೆಮುಖ, ಬೆಟ್ಟಪುರ, ಹಾಗೂ ನೀಲಗಿರಿ ಬೆಟ್ಟಗಳ ಸೊಬಗನ್ನು ಕಾಣಬಹುದು.

ಈ ಗಿರಿ ಪೂರ್ವದಿಂದ ಪಶ್ಚಿಮದೆಡೆಗೆ ಇಳಿಜಾರಾಗಿದ್ದು ಕಿಗ್ಗಟ್ಟುನಾಡಿನಲ್ಲಿ ಅನೇಕ ಕವಲುಗಳಾಗಿ ಒಡೆದಿದೆ. ಇವುಗಳ ಪೈಕಿ ವೀರಾಜಪೇಟೆಯ ಅಂಬಟಿಬೆಟ್ಟ, ಬೆಟ್ಟಂಗಾಲದ ಬೆಟ್ಟ, ಹಾತೂರಿನ ಕುಂದದ ಬೆಟ್ಟ, ಸಿದ್ದೇಶ್ವರಬೆಟ್ಟ ಹಾಗೂ ಮಾಕಲ್ ಬೆಟ್ಟಗಳು ಮುಖ್ಯವಾದವು.