ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಗಿರಿ 2

ವಿಕಿಸೋರ್ಸ್ದಿಂದ

ಬ್ರಹ್ಮಗಿರಿ 2

ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಇರುವ ಒಂದು ಬೆಟ್ಟ. ಇದರ ಸುತ್ತಲೂ ಹರಡಿರುವ ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ ಅವಶೇಷಗಳಿಂದ ಪ್ರಸಿದ್ಧ. ಇಲ್ಲೇ ಅಶೋಕನ ಒಂದು ಶಾಸನ ದೊರಕಿದೆ. ಇದರ ಸಮೀಪದಲ್ಲಿ ಇರುವ ಪ್ರಾಚೀನ ನೆಲೆಯನ್ನು ಶಾಸನದಲ್ಲಿ ಉಕ್ತವಾಗಿರುವ ಇಸಿಲ ಪಟ್ಟಣವೆಂದು ಗುರುತಿಸಲಾಗಿದೆ. ಅಶೋಕನ ಶಾಸನ ಬೆಟ್ಟದ ಉತ್ತರದಂಚಿನಲ್ಲಿ ಎತ್ತರದ ಬಂಡೆಯಮೇಲೆ ಇದೆ. ಈ ಶಾಸನದ ಬಂಡೆಯದಲ್ಲಿ ಹಾಗೂ ಬೆಟ್ಟದ ಪೂರ್ವದ ಪಾದದಲ್ಲಿ ಉದ್ದಕ್ಕೂ ಬೃಹತ್ ಶಿಲಾಸಮಾಧಿ ಮತ್ತು ಆದಿಚಾರಿತ್ರಿಕ ಕಾಲದ ನೆಲೆಗಳ ಅವಶೇಷಗಳು ಹರಡಿವೆ.

ಅಶೋಕನ ಶಾಸನ 1874ರಲ್ಲಿ ಬೆಳಕಿಗೆ ಬಂತು. ಈ ಶಾಸನ ಬ್ರಾಹ್ಮೀ ಲಿಪಿಯಲ್ಲಿದೆ. ಇದನ್ನು ಕೊರೆದವ ಚಪಡನೆಂದು ಶಾಸನದ ಕೊನೆಯಲ್ಲಿ ಖರೋಷ್ಠೀ ಲಿಪಿಯಲ್ಲಿ ಬರೆದಿದೆ. ಶಾಸನ ಎರಡು ಭಾಗವುಳ್ಳದ್ದಾಗಿದೆ.

ಕರ್ನಾಟಕ ಪುರಾತತ್ವ ಇಲಾಖೆ 1940ರಲ್ಲಿ ಇಸಿಲ ಪಟ್ಟಣದ ಅವಶೇಷಗಳ ಪತ್ತೆಗೆ ಬ್ರಹ್ಮಗಿರಿಯ ಸುತ್ತಮುತ್ತಲೂ ನಡೆಸಿದ ಶೋಧನೆಯಲ್ಲಿ ಇಲ್ಲಿ ಇತಿಹಾಸ ಪ್ರಾರಂಭ ಕಾಲದ ಜನವಸತಿ ಅವಶೇಷಗಳು ದೊರಕಿದುದಲ್ಲದೆ ಅದಕ್ಕೂ ಪೂರ್ವಕಾಲದ ಕಬ್ಬಿಣಯುಗ ಮತ್ತು ಅದರ ಹಿಂದಿನ ನೂತನ ಶಿಲಾಯುಗದ ಜನವರ್ಗಗಳ ವಸತಿ ಅವಶೇಷಗಳು ದೊರೆತು ಕರ್ನಾಟಕದ ಪ್ರಾಗಿತಿಹಾಸದ ಬಗ್ಗೆ ಹೆಚ್ಚಿನ ವಿಷಯಗಳು ತಿಳಿದುಬಂದಿವೆ.

ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣ ಇಲಾಖೆಯವರೂ 1947ರಲ್ಲಿ ಇಲ್ಲಿ ಉತ್ಖನನ ನಡೆಸಿದ್ದಾರೆ. ದಕ್ಷಿಣ ಭಾರತದ ಪ್ರಾಗೈತಿಹಾಸಿಕ ಸಂಸ್ಕøತಿಗಳ ಕಾಲ ಮತ್ತು ಅನುಕ್ರಮದ ಬಗ್ಗೆ ಸ್ಪಷ್ಟ ಚಿತ್ರ ಮೊದಲು ದೊರೆತದ್ದು ಇಲ್ಲಿಯ ಉತ್ಖನನದಿಂದಲೇ. ಆದ್ದರಿಂದ ಈ ಉತ್ಖನನ ಭಾರತೀಯ ಪುರಾತತ್ವ ಇತಿಹಾಸದಲ್ಲಿ ಮಹತ್ತರವಾದದ್ದೆನಿಸಿದೆ.